ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತೃಪಕ್ಷ: ಪೂರ್ವಜರನ್ನು ಸ್ಮರಿಸುವ ದಿನ

ಇಂದು ಮಹಾಲಯ ಅಮಾವಾಸ್ಯೆ
Last Updated 24 ಸೆಪ್ಟೆಂಬರ್ 2022, 18:03 IST
ಅಕ್ಷರ ಗಾತ್ರ

ನಮ್ಮ ಸಂಪ್ರದಾಯದಲ್ಲಿ ದೇವಯಜ್ಞ, ಋಷಿಯಜ್ಞ, ಪಿತೃಯಜ್ಞ, ಭೂತಯಜ್ಞ ಮತ್ತು ನೃಯಜ್ಞ – ಇವು ಒಬ್ಬ ಗೃಹಸ್ಥನು ಆಚರಿಸಬೇಕಾದ ಐದು ಬಗೆಯ ಯಜ್ಞಗಳು. ಇವನ್ನೇ ಪಂಚಮಹಾಯಜ್ಞಗಳೆಂದೂ ಗುರುತಿಸುವುದಿದೆ. ದೇವತೆಗಳನ್ನು, ಋಷಿಗಳನ್ನು, ಪಿತೃಗಳನ್ನು, ನಮ್ಮ ಸುತ್ತಲಿನ ಜೀವಿಗಳನ್ನು ಮತ್ತು ಮನುಷ್ಯರನ್ನು ತೃಪ್ತರನ್ನಾಗಿಸಿ ಇರಿಸಿಕೊಳ್ಳಬೇಕು ಎನ್ನುವುದು ಈ ಯಜ್ಞಗಳ ಹಿಂದಿನ ಸಾಮಾನ್ಯ ಆಶಯ. ನಮ್ಮ ಜೀವನ ನಮ್ಮದು ಮಾತ್ರವೇ ಅಲ್ಲ, ಅದು ಈ ಸೃಷ್ಟಿಯಲ್ಲಿನ ಹಲವಾರು ಸಂಗತಿಗಳಿಗೆ ಆಭಾರಿಯಾಗಿರಬೇಕಾದ್ದಿದೆ. ದೈವಬಲ, ಪಿತೃಗಳ ಆಶೀರ್ವಾದ, ಋಷಿಗಳ ಕಾಣ್ಕೆ, ಸುತ್ತಲಿನ ಮನುಷ್ಯರು ಮತ್ತು ಉಳಿದ ಜೀವಿಗಳೆಂಬ ಹಲವಾರು ಸಂಗತಿಗಳು ನೇರ್ಪುಗೊಂಡು ಸಂಭವಿಸಿದ್ದು ನಮ್ಮ ಬದುಕು. ಅದರಲ್ಲಿಯೂ ನಮ್ಮ ಮನೋದೈಹಿಕ ರೂಪು ಮತ್ತು ಸ್ಥಿತಿಗತಿಗಳು ನಮ್ಮ ಪಿತೃಗಳ ಸಾಕ್ಷಾತ್ ಕೊಡುಗೆ ಎನ್ನುವುದಕ್ಕೆ ಆಧುನಿಕ ತಳಿವಿಜ್ಞಾನವೂ ಸಾಕ್ಷಿ. ಹಾಗಾಗಿ ಇವೆಲ್ಲ ಆಯಾಮಗಳಿಗೂ ಯಥಾಶಕ್ತಿ ಋಣಸಂದಾಯ ಮಾಡುವುದು ಪ್ರತಿಯೊಬ್ಬನ ಕರ್ತವ್ಯವೇ ಹೌದು. ಕರ್ಮ ಅಥವಾ ಕ್ರಿಯಾ ಎನ್ನುವುದನ್ನು ನಮ್ಮಿಂದ ನೆರವೇರಿಸುವುದು ಸ್ಥೂಲಶರೀರದ ಅವಸ್ಥೆಯಲ್ಲಿ ಇರುವಾಗ ಮಾತ್ರವಾದ್ದರಿಂದ ಈ ಶರೀರ ಲಭ್ಯವಿರುವಾಗಲೇ ಶ್ರದ್ಧೆಯಿಂದ ಅವನ್ನೆಲ್ಲ ನಡೆಸಬೇಕು. ಭಾರತದ ಹಬ್ಬಗಳು, ಇಲ್ಲಿನ ಸಂಪ್ರದಾಯ, ಇಲ್ಲಿನ ನಂಬುಗೆಗಳು ಎಲ್ಲವೂ ಒಂದಿಲ್ಲೊಂದು ಬಗೆಯಲ್ಲಿ ಈ ಐದು ಯಜ್ಞಸಂಗತಿಗಳ ಸುತ್ತಲೇ ಹೆಣೆದುಕೊಂಡಿವೆ. ಇವುಗಳಲ್ಲಿ ಪಿತೃಯಜ್ಞ ಎನ್ನುವುದು ನಮ್ಮ ಕುಲದ ಪೂರ್ವಜರನ್ನು ನೆನೆದು ಅವರನ್ನು ಅನ್ನನೀರು
ಗಳಿಂದ ತೃಪ್ತಿಗೊಳಿಸುವ ತರ್ಪಣ ಕ್ರಿಯಾ.

ಸಾಮಾನ್ಯವಾಗಿ ಶ್ರದ್ಧಾವಂತ ಗೃಹಸ್ಥರು ಗತಿಸಿದ ತಮ್ಮ ತಂದೆ ತಾಯಿಯರನ್ನು ವಾರ್ಷಿಕವಾಗಿ ಆಯಾ ಮಾಸದ ಆಯಾ ತಿಥಿಯಂದು ನೆನೆದು, ಪಿಂಡತರ್ಪಣಾದಿಗಳನ್ನು ಅರ್ಪಿಸಿ ಕರ್ತವ್ಯ ಪೂರೈಸುತ್ತಾರೆ. ಇದುವೇ ಶ್ರಾದ್ಧ. ಇದರ ಹೊರತಾಗಿ ತಮ್ಮ ಕುಲದಲ್ಲಿ ಅದಕ್ಕೂ ಮುಂಚೆ ಗತಿಸಿದವರನ್ನು ಮತ್ತು ಅವಿಜ್ಞಾತವಾಗಿ ಕಾಲವಾದವರನ್ನು ಸ್ಮರಿಸಿ ಅವರಿಗೆಲ್ಲ ತರ್ಪಣವನ್ನು (ತರ್ಪಣವೆಂದು ತೃಪ್ತಿಗೊಳಿಸುವ ಕ್ರಿಯೆ ಅಥವಾ ಸಾಧನ) ಅರ್ಪಿಸುವುದಕ್ಕೆ ಭಾದ್ರಪದ ಮಾಸದ ಕೃಷ್ಣಪಕ್ಷದ ಹದಿನೈದು ದಿನಗಳು ಮೀಸಲಾಗಿವೆ. ಪಕ್ಷದ ಕೊನೆಯಲ್ಲಿ ಬರುವ ಅಮಾವಾಸ್ಯೆಗೆ ‘ಮಹಾಲಯ ಅಮಾವಾಸ್ಯೆ’ ಎಂಬ ಹೆಸರು.

ವಸ್ತುತಃ ಅಮಾವಸ್ಯೆ ಅಥವಾ ಅಮಾವಾಸ್ಯೆ ಎಂಬುದು ಆ ದಿನದಲ್ಲಿ ಭೂಮಿಯಿಂದ (ಭಾರತ ಭೂಪ್ರದೇಶದಿಂದ) ತೋರುವಂತೆ ಆಕಾಶದಲ್ಲಿ ಸೂರ್ಯ ಮತ್ತು ಚಂದ್ರರು ಇರುವ ಸ್ಥಿತಿಯನ್ನು ಹೇಳುವ ಪದ. ‘ಅಮಾ’ ಎನ್ನುವ ಶಬ್ದಕ್ಕೆ ‘ಸಮೀಪ, ಒಟ್ಟಿಗೆ’ ಎಂಬ ಅರ್ಥ. ಸೂರ್ಯಚಂದ್ರರು ಒಟ್ಟಿಗೆ (ಅಮಾ) ಇರುವ (ವಾಸ್ಯ/ವಸ್ಯ) ಇರುವ ದಿನವಾದ್ದರಿಂದ ಇದು ಅಮಾವಾಸ್ಯಾ. ಈ ದಿನ ಭೂಮಿಯಿಂದ ತೋರುವ ಹಾಗೆ ಚಂದ್ರಸೂರ್ಯರು ನಿರ್ದಿಷ್ಟ ಕೋನದಲ್ಲಿ ಸಮೀಪ ಬರುವುದರಿಂದ ಅಮಾವಾಸ್ಯೆ ಸಂಭವಿಸುತ್ತದೆ. ಭೂಸಾಪೇಕ್ಷವಾದ ಈ ಬಗೆಯ ಆಕಾಶಕಾಯಗಳ ಚಲನೆಯನ್ನು ಪರಿಗಣಿಸಿ ಪೂರ್ಣಿಮೆ, ಅಮಾವಾಸ್ಯೆ, ಸಂಕ್ರಾಂತಿ ಇವುಗಳನ್ನೆಲ್ಲ ಪರ್ವಕಾಲಗಳೆಂದು ಪರಿಗಣಿಸಲಾಗಿದೆ. ಮಾನವಜೀವದ ಪಂಚಕೋಶಗಳಲ್ಲಿ ಎರಡನೆಯದಾದ ಪ್ರಾಣಮಯ ಕೋಶವನ್ನು ಈ ಪರ್ವಕಾಲವು ಪ್ರಭಾವಿಸುತ್ತದೆ ಎನ್ನುವುದು ಅನುಭಾವಿಗಳ ಮಾತು.

ಒಂದೊಂದು ಪರ್ವದಿನವೂ ಒಂದೊಂದು ಕರ್ಮಕ್ಕೆ ಪ್ರಶಸ್ತವಾದ್ದು. ಅದರಂತೆ ಭಾದ್ರಪದ ಮಾಸದ (ದಕ್ಷಿಣಭಾರತದ ಚಾಂದ್ರಮಾನ ಪಂಚಾಂಗದಂತೆ) ಅಮಾವಸ್ಯೆಯನ್ನು ಪಿತೃ ಅಮಾ ವಾಸ್ಯೆ, ಸರ್ವಪಿತೃ ಅಮಾವಾಸ್ಯೆ ಎಂದೆಲ್ಲ ಕರೆಯುವ ರೂಢಿ ಇದೆ. ಅದೇನೇ ಇದ್ದರೂ ಪಿತೃಗಳಿಗೆ ತರ್ಪಣ ಕೊಡುವುದರ ಮೂಲಕ ಪಿತೃಯಜ್ಞವನ್ನು ಆಚರಿಸು ವುದಕ್ಕೆ ಇರುವ ಪರ್ವಕಾಲವೇ ಮಹಾಲಯ ಅಮಾವಾಸ್ಯೆ. ಈ ಅಮಾವಾಸ್ಯೆಯ ಮರುದಿನವೇ, ಅಂದರೆ ಶರದೃತುವಿನ ಆಶ್ವಯುಜಮಾಸದ ಮೊದಲ ದಿನದಿಂದ ದುರ್ಗೆಯ ಆರಾಧನೆ ಮೊದಲುಗೊಳ್ಳುತ್ತದೆ.
ಮನೆಯಲ್ಲಿ ಅಥವಾ ಪುಣ್ಯಕ್ಷೇತ್ರದ ನದೀತೀರದಲ್ಲಿ ಗತಿಸಿದ ಪಿತೃಗಳಿಗೆ ಈ ಅಮಾವಾಸ್ಯೆಯಂದು ಎಳ್ಳುನೀರಿನ ತರ್ಪಣ ಮತ್ತು ಪಿಂಡದಾನವನ್ನು ಮಾಡಲಾಗುತ್ತದೆ. ಒಂದಿಲ್ಲೊಂದು ಬಗೆಯಲ್ಲಿ ಗತಿಸಿದ ಜೀವಗಳನ್ನು ನೆನೆಯುವ ಪದ್ಧತಿ ಜಗತ್ತಿನ ಬಹುತೇಕ ನಾಗರಿಕತೆಗಳಲ್ಲಿ ಬಹಳ ಮುಂಚಿನಿಂದಲೂ ಆಚರಣೆಯಲ್ಲಿದೆ. ಭಾರತದಲ್ಲಿಯಂತೂ ಬದುಕಿನ ಶ್ರೇಯಸ್ಸಿಗೆ ಪಿತೃಗಳ ಆಶೀರ್ವಾದವು ಬಹಳೇ ಮುಖ್ಯವೆಂದು ಬಗೆಯಲಾಗಿದೆ. ಹಾಗಾಗಿ ಪಿತೃಪಕ್ಷ ಮತ್ತು ಅದರ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆ ಶ್ರೇಯಃ ಪ್ರೇಯಗಳನ್ನು ಸಾಧಿಸುವಲ್ಲಿ ಬಹುಮುಖ್ಯವಾದ ಆಚರಣೆ ಎನಿಸಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT