ಮಂಗಳವಾರ, ಮಾರ್ಚ್ 9, 2021
18 °C

ಕಂಕಣಕ್ಕೆ ರಕ್ಷೆಯ ಮೆರುಗು ರಕ್ಷಾಬಂಧನ

ದೀಪಾ ಫಡ್ಕೆ Updated:

ಅಕ್ಷರ ಗಾತ್ರ : | |

ಅವನೊಬ್ಬನಿದ್ದ ನೋಡಿ! ತಲೆ ಮೇಲೆ ಸದಾ ನಲಿವ ನೀಲನವಿಲ ಗರಿ, ಕೈಯಲ್ಲಿ ಮುರಲಿ. ಅವನಿಂದ ಸಮ್ಮೋಹನಗೊಳ್ಳದವರೇ ಇಲ್ಲವೆನ್ನುವಂತಿದ್ದ! ಅವನ ಕಥೆಗಳು, ಲೀಲೆಗಳಿಲ್ಲದೇ ಯಾವ ಪುರಾಣಕಥೆಯೂ ಮಹಾಕಾವ್ಯವೂ ಪೂರ್ಣವಾಗದು ಎನ್ನುವಂತೆ ಈ ರಕ್ಷೆಯ ಕಥೆಗೂ ಅವನ ನಂಟಿದೆ. ಎಂಥ ಸೋಜಿಗವಿದು! ಈ ನೆಲದ ಯಾವೊಂದು ಸೂಕ್ತಿಯೂ ಅವನ ಚರಣಗಳಿಗೆ ಹಣೆ ಹಚ್ಚದೇ ಮುಂದೆ ಹೋಗಲು ಅಸಾಧ್ಯ. ಗಿರಿಧಾರಿ ಕೃಷ್ಣ, ಅಂದು ಸುದರ್ಶನ ಹಿಡಿದು ತನ್ನ ಬೆರಳಿಗೆ ಗಾಯ ಮಾಡಿಕೊಂಡಿದ್ದ. ಸನಿಹದಲ್ಲಿದ್ದ ಕೃಷ್ಣೆ – ದ್ರೌಪದಿ ಕ್ಷಣವೂ ಯೋಚಿಸದೇ ತನ್ನ ರೇಷಿಮೆಯ ಸೀರೆಯನ್ನು ಹರಿದು ಕೃಷ್ಣನ ಗಾಯಕ್ಕೆ ಬಟ್ಟೆ ಕಟ್ಟಿ, ಪೂರ್ತಿ ಬದುಕಿಗಾಗುವಷ್ಟು ಪುಣ್ಯ ಕಟ್ಟಿಕೊಂಡಳು. ಅದೇ ಋಣ, ಅವಳನ್ನು ಧೂರ್ತ ಮೈದುನಂದಿರು ಸೆರಗಿಗೆ ಕೈ ಹಾಕಿ ಅವಮಾನಿಸಲು ನೋಡಿದಾಗ ಕಾಪಾಡಿದ್ದು. ರಕ್ಷೆಯ ಬಗೆಗಿನ ಮನಮುಟ್ಟುವ ಕಥೆಯಿದು; ಪುರಾತನ ಕಥೆ. ಅದಕ್ಕೂ ಮೊದಲು ದೇವೆಂದ್ರನಿಗೆ ಪತ್ನಿ ಶಚಿ ರಕ್ಷೆ ಕಟ್ಟಿ ಯುದ್ಧಕ್ಕೆ ಕಳುಹಿಸಿಕೊಟ್ಟ ಕಥೆಯೂ ಇತ್ತೆನ್ನಿ. ಆದರೆ ಕೃಷ್ಣಕಥೆಯ ಮುಂದೆ ಯಾವ ದೇವೆಂದ್ರನ ಕಥೆಯೂ ಮನಕೆ ಆಪ್ತವಾಗದು!

ರಕ್ಷೆ, ರಕ್ಷಾಬಂಧನವೆಂದರೆ ಅಣ್ಣತಂಗಿ, ಅಕ್ಕತಮ್ಮನ ನಡುವಿನ ಭಾತೃತ್ವದ ಬೆಸುಗೆ ಬಲಗೊಳಿಸುವ ಹಬ್ಬವೆಂದು ಈಗ ಜಗತ್ತು ಸಾರುತ್ತಿದೆ. ಅದಕ್ಕೂ ಮೊದಲು ರಜಪೂತಸ್ತ್ರೀಯರು ತಂತಮ್ಮ ಯೋಧಗಂಡಂದಿರನ್ನು ಯುದ್ಧಕ್ಕೆ ಕಳಿಸುವ ಮೊದಲು ಆರತಿ ಎತ್ತಿ ಕೈಗೆ ದುರ್ಗೆಯದೋ ಭವಾನಿಯದೋ ರಕ್ಷೆಯಾಗಿ ಕಂಕಟ ಕಟ್ಟಿ ಕಳಿಸಿಕೊಡುವ ಸಂಪ್ರದಾಯವಿತ್ತು. ಹೀಗೆ ರಕ್ಷಾ ಅಥವಾ ರಾಖಿ ಎಂದು ಕರೆಯಲಾಗುವ ಒಂದಷ್ಟು ಎಳೆಗಳ ದಾರ, ಬದುಕನ್ನು ಕಾಯುವ, ಸಂರಕ್ಷಿಸುವ ವಿಶ್ವಾಸದ ಪ್ರತೀಕವಾಗಿದೆ. ಅಲ್ಲಿ ಒಡನಾಟದ ಹರಕೆಯಿದೆ. ಸುರಕ್ಷಿತವಾಗಿ ಬದುಕು ನಡೆಯಲಿ ಎನ್ನುವ ಹಾರೈಕೆಯಿದೆ.

ಹಬ್ಬಗಳ ಪರಿವಾರವನ್ನೇ ಹೊತ್ತು ಬರುವ ಶ್ರಾವಣದಲ್ಲಿಯೇ ರಕ್ಷಾಬಂಧನದ ಆಚರಣೆಯಿರುವುದು ವಿಶೇಷವಾಗಿದೆ. ಎಲ್ಲ ಪೂಜೆಗಳ ಧಾವಂತದಲ್ಲಿಯೇ ಭ್ರಾತೃತ್ವದ ಪೂಜೆಯೂ ಆಗುತ್ತದೆಯೆನ್ನಬಹುದು. ಹಬ್ಬಗಳು ಮಾನವ ಸಂಬಂಧಗಳನ್ನು ಪರಿಷ್ಕರಿಸಲು ಇರುವ ವಿಶೇಷ ದಿನಗಳು. ರಕ್ಷಾಬಂಧನವೂ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸುವ ಆಚರಣೆಯಾಗಿದೆ. ವ್ಯವಧಾನವಿಲ್ಲದೇ ಬದುಕಿನ ಓಟದಲ್ಲಿ ಓಡುತ್ತಿರುವ ನಮ್ಮಲ್ಲಿ ಮತ್ತೊಮ್ಮೆ ಒಡಹುಟ್ಟಿದವರೊಂದಿಗೆ ಮಮತೆಯಿಂದ ಮಾತಾಡಲು, ಮಾತಾಡಿ ಮನಸ್ಸು ತುಂಬಿಕೊಳ್ಳಲು, ದೂರವಾಗಿದ್ದ ತಂಗಾಳಿಯಂತಹ, ಸ್ನೇಹಪೂರ್ಣ ಒಡನಾಟವನ್ನು ಮತ್ತೆ ಉದ್ದೀಪನಗೊಳಿಸಲು ರಕ್ಷಾಬಂಧನದ ದಿನ ನೆರವಾಗುತ್ತದೆ.

ನಾಲ್ಕೆಳೆಯ ದಾರವೊಂದು ಪೂರ್ತಿ ಬದುಕಿಗಾಗುವಷ್ಟು ಮಮತೆಯನ್ನು ತುಂಬುತ್ತದೆ; ಈ ಹಬ್ಬ, ಸೋದರಸ್ನೇಹದ ಮಜಲನ್ನು ವಿಸ್ತರಿಸುತ್ತದೆ. ಆ ಮೂಲಕ ಬದುಕಿನೆಡೆಗೊಂದು ಭರವಸೆಯನ್ನೂ ಮೂಡಿಸುತ್ತದೆ. ಕೆಲವು ರೂಪಾಯಿಗಳಿಂದ ಹಿಡಿದು ಲಕ್ಷಗಟ್ಟಲೇ ಬೆಲೆಬಾಳುವ ರಾಖಿ ಸಿಗುವ ಈ ಹಬ್ಬದ ನಿಜವಾದ ಯಶಸ್ಸು ಕಾಣುವುದು, ಮನಸ್ಸಿನಿಂದ ಮನಸ್ಸಿಗೆ ಹರಿಯುವ ಅಮೃತದಂತಹ ಸದ್ಭಾವಗಳು ಎಲ್ಲೆಡೆಗೂ ವ್ಯಾಪಿಸಿದಾಗವಷ್ಟೇ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು