ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಮನುವಿನಿಂದ ಮಾನವಸೃಷ್ಟಿ

ಭಾಗ 108
ಅಕ್ಷರ ಗಾತ್ರ

ಸೃಷ್ಟಿಖಂಡದಲ್ಲಿ ಸೃಷ್ಟಿವರ್ಣನ ಎಂಬ ಹದಿನಾರನೆ ಅಧ್ಯಾಯವಿದೆ. ಇದರಲ್ಲಿ ಬ್ರಹ್ಮನು ನಾರದನಿಗೆ ‘ತಾನು ಸೂಕ್ಷ್ಮವಾದ ಶಬ್ದಾದಿ ಪಂಚತನ್ಮಾತ್ರಗಳನ್ನು ಪಂಚೀಕರಿಸಿದೆ. ನಂತರ ಅವುಗಳಿಂದ ಸ್ಥೂಲವಾದ ಆಕಾಶವನ್ನೂ ವಾಯುವನ್ನೂ ತೇಜಸ್ಸನ್ನೂ ಜಲವನ್ನೂ ಪೃಥ್ವಿಯನ್ನೂ ಸೃಷ್ಟಿಸಿದೆ. ಜೊತೆಗೆ ಪರ್ವತಗಳನ್ನೂ ಸಮುದ್ರಗಳನ್ನೂ ಮರಗಿಡಗಳನ್ನೂ ಕಲಾ ಕಾಷ್ಠಾ ಮುಹೂರ್ತಗಳು ಸೇರಿದಂತೆ ಚತುರ್ಯುಗಗಳವರೆಗೆ ಕಾಲಗಳನ್ನೂ ಸೃಷ್ಟಿಸಿದೆ’ ಎಂದು ತಿಳಿಸುತ್ತಾನೆ.

ಹಾಗೇ ಇನ್ನೂ ಕೆಲವನ್ನು ಸೃಷ್ಟಿಸುತ್ತಿದ್ದರೂ ತನಗೆ ಸಂತೋಷವಾಗಲಿಲ್ಲ. ಆಗ ಪಾರ್ವತೀ ಸಮೇತನಾದ ಶಿವನನ್ನು ನೆನೆದು ಈ ಸೃಷ್ಟಿಗೆ ಸಾಧಕರಾದ ಮರೀಚಿ ಮುಂತಾದವರನ್ನು ಸೃಷ್ಟಿಸಿದ ವಿವರವನ್ನು ನಾರದನಿಗೆ ಹೇಳುತ್ತಾನೆ. ‘ನನ್ನ ಕಣ್ಣುಗಳಿಂದ ಮರೀಚಿಯನ್ನೂ, ಹೃದಯದಿಂದ ಭೃಗುವನ್ನೂ, ಶಿರಸ್ಸಿನಿಂದ ಅಂಗೀರಸನನ್ನೂ, ವ್ಯಾನವೆಂಬ ವಾಯುವಿನಿಂದ ಮುನಿಶ್ರೇಷ್ಠನಾದ ಫುಲಹನನ್ನೂ, ಉದಾನ ವಾಯುವಿನಿಂದ ಫುಲಸ್ತ್ಯನನ್ನೂ, ಸಮಾನ ವಾಯುವಿನಿಂದ ವಸಿಷ್ಠನನ್ನೂ, ಅಪಾನ ವಾಯುವಿನಿಂದ ಕ್ರತುವನ್ನೂ ಸೃಷ್ಟಿಸಿದೆ. ಕಿವಿಗಳಿಂದ ಅತ್ರಿಯನ್ನೂ, ಪ್ರಾಣಾಯುವಿನಿಂದ ದಕ್ಷನನ್ನೂ, ತೊಡೆಯಿಂದ ನಿನ್ನನ್ನೂ (ನಾರದ), ನೆರಳಿನಿಂದ ಕರ್ದಮನನ್ನೂ, ಇಚ್ಛಾಮಾತ್ರದಿಂದ ಸರ್ವಸಾಧನಗಳಿಗೂ ಸಾಧನವಾದ ಧರ್ಮಪುರುಷನನ್ನೂ ಸೃಷ್ಟಿಸಿದೆ. ಈ ರೀತಿ ಸೃಷ್ಟಿಗೆ ಸಾಧಕರಾದವರನ್ನು ಸೃಷ್ಟಿಸಿ ಆ ಮಹಾದೇವನ ಅನುಗ್ರಹದಿಂದ ಕೃತಕೃತ್ಯನಾದೆ’ ಅಂತ ಬ್ರಹ್ಮ ಧನ್ಯತಾಭಾವ ಪ್ರಕಟಿಸುತ್ತಾನೆ.

‘ನನ್ನ ಅಪ್ಪಣೆಯಂತೆ ಸೃಷ್ಟಿಸಾಧಕರಾದ ಮರೀಚ್ಯಾದಿಗಳು, ನನ್ನ ಸಂಕಲ್ಪಸಂಭವನಾದ ಮನುಷ್ಯರೂಪ ಧಾರಿಯಾದ ಧರ್ಮಪುರುಷನನ್ನು ಬೆಳೆಸಿಕೊಂಡು ಬಂದರು. ನನ್ನ ವಿವಿಧ ಅಂಗಗಳಿಂದ ಲೆಕ್ಕವಿಲ್ಲದಷ್ಟು ದೇವತೆಗಳನ್ನೂ ರಾಕ್ಷಸರನ್ನೂ ಸೃಷ್ಟಿಸಿದೆ. ಬಳಿಕ ನನ್ನ ಅಂತರಂಗದಲ್ಲಿಯೇ ನೆಲಸಿರುವ ಶಂಕರನಿಂದ ಪ್ರೇರಿತನಾಗಿ ನನ್ನ ದೇಹವನ್ನೇ ಎರಡಾಗಿ ಭಾಗಿಸಿಕೊಂಡು, ಎರಡು ರೂಪವನ್ನು ಧರಿಸಿದೆ. ಇದರಿಂದ ನನ್ನ ದೇಹದ ಅರ್ಧಭಾಗವು ಸ್ತ್ರೀರೂಪವಾಗಿ, ಇನ್ನೊಂದರ್ಧ ಭಾಗವು ಪುರುಷರೂಪವಾಗಿಯೂ ಪರಿಣಮಿಸಿತು. ಆ ಸ್ತ್ರೀಪುರುಷರಿಬ್ಬರೂ ಕಲೆತು ಈ ಸೃಷ್ಟಿಗೆ ಶ್ರೇಷ್ಠ ಕಾರಣವಾದ ಮಿಥುನವೊಂದನ್ನು ಸೃಷ್ಟಿಸಿದರು.

‘ಸ್ತ್ರೀ-ಪುರುಷರಲ್ಲಿ ಮಾನವಸೃಷ್ಟಿಗೆ ಮುಖ್ಯ ಕಾರಣನಾದ ಸ್ವಾಯಂಭುವ ಮನು ಪುರುಷನಾಗಿದ್ದರೆ, ಯೋಗನಿಷ್ಠಳೂ ಮಹಾತಪಸ್ವಿನಿಯೂ ಆದ ಶತರೂಪೆ ಸ್ತ್ರೀಯಾಗಿದ್ದಳು. ಸೊಗಸಾದ ಲಾವಣ್ಯದಿಂದ ಶೋಭಿಸುತ್ತಿರುವ ಶತರೂಪೆಯನ್ನು ಸ್ವಾಯಂಭುವ ಮನುವು ವಿವಾಹವಿಧಿಯಿಂದ ಪರಿಗ್ರಹಿಸಿ, ಸೃಷ್ಟಿಕಾರ್ಯದಲ್ಲಿ ತೊಡಗಿದ. ಅಂದಿನಿಂದ ಸೃಷ್ಟಿಯು ಸ್ತ್ರಿ-ಪುರುಷ ಸಂಯೋಗಕ್ರಮದಿಂದ ಆರಂಭವಾಯಿತು. ಆ ಸ್ವಾಯಂಭುವ ಮನು ಮತ್ತು ಶತರೂಪೆ ದಂಪತಿಗೆ ಪ್ರಿಯವ್ರತ, ಉತ್ತಾನಪಾದರೆಂಬ ಇಬ್ಬರು ಗಂಡುಮಕ್ಕಳು. ಆಕೂತಿ, ದೇವಹೂತಿ, ಪ್ರಸೂತಿ ಎಂದು ಪ್ರಖ್ಯಾತರಾದ ಮೂರು ಹೆಣ್ಣುಮಕ್ಕಳು ಹುಟ್ಟಿದರು. ಅವರಲ್ಲಿ ಆಕೂತಿಯನ್ನು ರುಚಿಯೆಂಬುವನಿಗೂ, ಮಧ್ಯಮಳಾದ ದೇವಹೂತಿಯನ್ನು ಕರ್ದಮಪ್ರಜಾಪತಿಗೂ, ಉತ್ತಾನಪಾದನ ಕೊನೆಯ ತಂಗಿಯಾದ ಪ್ರಸೂತಿಯನ್ನು ದಕ್ಷನಿಗೂ, ಮನುವು ಮದುವೆ ಮಾಡಿಕೊಟ್ಟ. ಅವರಲ್ಲಿ ಪ್ರಸೂತಿಯ ಸಂತಾನದಿಂದಲೇ ಸ್ಥಾವರ-ಜಂಗಮಾತ್ಮಕವಾದ ಈ ಪ್ರಪಂಚವೆಲ್ಲವೂ ಬೆಳೆಯಿತು.

‘ರುಚಿ ಮತ್ತು ಆಕೂತಿ ದಂಪತಿಯಲ್ಲಿ ಯಜ್ಞ ಮತ್ತು ದಕ್ಷಿಣೆ ಎಂಬ ಅವಳಿ-ಜವಳಿ ಮಕ್ಕಳು ಹುಟ್ಟಿದರು. ಆ ಯಜ್ಞನು ದಕ್ಷಿಣೆಯನ್ನು ಕೈಹಿಡಿದು ಹನ್ನೆರಡು ಮಂದಿ ಗಂಡುಮಕ್ಕಳನ್ನು ಪಡೆದ. ದೇವಹೂತಿಯೆಂಬುವಳಲ್ಲಿ ಕರ್ದಮಪ್ರಜಾಪತಿಗೆ ಅನೇಕ ಹೆಣ್ಣುಮಕ್ಕಳಾಯಿತು. ದಕ್ಷನಿಗೂ ಪ್ರಸೂತಿಯಲ್ಲಿ ಇಪ್ಪತ್ತನಾಲ್ಕು ಹೆಣ್ಣುಮಕ್ಕಳು ಹುಟ್ಟಿದರು. ದಕ್ಷಪ್ರಜಾಪತಿಯು ತನ್ನ ಹೆಣ್ಣುಮಕ್ಕಳಾದ ಶ್ರದ್ಧೆ, ಲಕ್ಷ್ಮಿ, ಧೃತಿ, ತುಷ್ಟಿ, ಪುಷ್ಟಿ, ಮೇಧ, ಕ್ರಿಯೆ, ಬುದ್ಧಿ, ಲಜ್ಜೆ, ವಸು, ಶಾಂತಿ, ಸಿದ್ಧಿ, ಕೀರ್ತಿ ಎಂಬ ಹದಿಮೂರು ಹೆಣ್ಣುಮಕ್ಕಳನ್ನು ನನ್ನ ಸಂಕಲ್ಪಮಾತ್ರದಿಂದ ಹುಟ್ಟಿದ ಧರ್ಮನಿಗೆ ಧಾರೆಯೆರೆದು ಕೊಟ್ಟ. ಇವರಿಗಿಂತಲೂ ಚಿಕ್ಕವರಾದ ಮನೋಹರವಾದ ಕಂಗಳಿಂದ ಕಂಗೊಳಿಸುತ್ತಿದ್ದ ಖ್ಯಾತಿ, ಸತ್ಪಥಸಂಭೂತಿ, ಸ್ಮೃತಿ, ಪ್ರೀತಿ, ಕ್ಷಮೆ, ಸನ್ನತಿ, ಅನುರೂಪೆ, ಊರ್ಜೆ, ಸ್ವಾಹೆ, ಸ್ವಧೆ ಎಂಬ ಉಳಿದ ಕನ್ಯೆಯರನ್ನು ಕ್ರಮವಾಗಿ ಭೃಗು, ಭವ, ಮರೀಚಿ, ಅಂಗಿರಸ್ಸು, ಪುಲಸ್ತ್ಯ, ಪುಲಹ, ಋಷಿಶ್ರೇಷ್ಠನಾದ ಕ್ರತು, ಅತ್ರಿ, ವಸಿಷ್ಠ, ಅಗ್ನಿ, ಪಿತೃಗಳು ಎಂಬ ಸೃಷ್ಟಿಯ ಮೂಲಪುರುಷರು ವಿವಾಹವಾದರು. ಇದರಿಂದ ಚರಾಚರವಸ್ತುಗಳಿಂದ ನಿಬಿಡವಾದ ಮೂರು ಲೋಕಗಳೆಲ್ಲವೂ ಇವರ ಸಂತತಿಯವರಿಂದಲೇ ತುಂಬಿಹೋದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT