ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿದವರ ಕೈಬಿಡದ ಗುರುರಾಯರು

Last Updated 23 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ರಾಘವೇಂದ್ರ ಸ್ವಾಮಿಗಳು ಕ್ರಿ.ಶ. 1671 ವಿರೋಧಿಕೃತ ನಾಮ ಸಂವತ್ಸರ, ಶ್ರಾವಣ ಕೃಷ್ಣ ಬಿದಿಗೆ ಯಂದು, ಆಂಧ್ರಪ್ರದೇಶದ ಕರ್ನೂಲು ಜಿಲ್ಲೆ, ಆದವಾನಿ ತಾಲ್ಲೂಕು, ಮಂಚಾಲೆ ಗ್ರಾಮದ ‘ಮಂತ್ರಾಲಯ’ದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಶರೀರ ಬೃಂದಾವನಸ್ಥರಾದರು. ಇದೇ 24ರಂದು (ಮಂಗಳವಾರ) ಪ್ಲವನಾಮ ಸಂವತ್ಸರ, ಶ್ರಾವಣ ಕೃಷ್ಣ ಬಿದಿಗೆ ರಾಯರ 350ನೇ ಆರಾಧನೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜನರ ಕಷ್ಟಕಾರ್ಪಣ್ಯಗಳನ್ನು ನೀಗಿಸಲೆಂದೇ ಅವತರಿಸಿದ ಯತಿ ಎಂದೇ ನಂಬಿದ ಭಕ್ತರು ರಾಘವೇಂದ್ರಸ್ವಾಮಿಗಳನ್ನು ಕೃತಯುಗದಲ್ಲಿ ಪ್ರಹ್ಲಾದ, ದ್ವಾಪರದಲ್ಲಿ ಬಾಹ್ಲಿಕ ರಾಜ ನಾಗಿ, ಕಲಿಯುಗದಲ್ಲಿ ವ್ಯಾಸರಾಯರು ಹಾಗೂ ರಾಘವೇಂದ್ರರಾಗಿ ಅವತರಿಸಿದ್ದಾರೆ ಎಂದು ಭಾವಿಸಿದ್ದಾರೆ.

ರಾಘವೇಂದ್ರ ಸ್ವಾಮಿಗಳು ಕ್ರಿ.ಶ.1595 ಮನ್ಮಥನಾಮ ಸಂವತ್ಸರ, ಫಾಲ್ಗುಣ ಶುದ್ಧ ಸಪ್ತಮಿ ಗುರುವಾರ ತಮಿಳುನಾಡಿನ ಭುವನಗಿರಿಯಲ್ಲಿ ಜನ್ಮ ತಾಳಿದರು. ತಂದೆ ತಿಮ್ಮಣ್ಣ ಭಟ್ಟರು, ತಾಯಿ ಗೋಪಮ್ಮ. ಪೂರ್ವಾಶ್ರದ ಹೆಸರು ವೆಂಕಟನಾಥ. ಸನ್ಯಾಸ ಸ್ವೀಕಾರ ನಡೆದದ್ದು ಕ್ರಿ.ಶ. 1621ರಲ್ಲಿ.

ಪ್ರಹ್ಲಾದ ರಾಜರಾಗಿದ್ದಾಗ ‘ಹರಿ ಸರ್ವೋತ್ತಮ, ವಿಶ್ವವ್ಯಾಪಿ, ಆತನಿಲ್ಲದ ಸ್ಥಳಗಳಿಲ್ಲ, ಅವನ ಆಜ್ಞೆ ಇಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಅಲುಗಾಡದು – ‘ತೇನ ವಿನಾ ತೃಣಮಪಿ ನಚಲತಿ’ – ಎನ್ನುವ ನಿಚ್ಚಳ ಸತ್ಯವನ್ನು ಶ್ರೀಹರಿಯನ್ನೇ ಕಂಬದಿಂದ ಬರಮಾಡಿ ಲೋಕಕ್ಕೆ ದೃಢಪಡಿಸಿದ ಮಹಾಮಹಿಮರು ಹಾಗೂ ಹತ್ತು ಸಹಸ್ರ ವರ್ಷ ಹರಿನಾಮಸ್ಮರಣೆ ಮಾಡಿ ಪುಣ್ಯದ ಕಣಜವನ್ನೇ ಸಂಗ್ರಹಿಸಿದವರು ಎಂದು ಪುರಾಣ ಹೇಳುತ್ತದೆ. ಜನರನ್ನು ಸಂಕಷ್ಟದಿಂದ ಪಾರು ಮಾಡಲು, ಮುಕ್ತಿಯನ್ನು ತಿರಸ್ಕರಿಸಿ ಭೂಮಿಯ ಮೇಲೆ ಅವತಾರವೆತ್ತುತ್ತಾ, ಕೊನೆಯಲ್ಲಿ ಶ್ರೀರಾಘವೇಂದ್ರರಾಗಿ ಬಂದು ಮಂತ್ರಾಲಯದಲ್ಲಿ ನೆಲೆಸಿ ಕೋಟಿ ಕೋಟಿ ಭಕ್ತರಿಗೆ ಆಸರೆಯಾಗಿದ್ದಾರೆ.

ರಾಯರು 700 ವರ್ಷಗಳ ಕಾಲ ಬೃಂದಾವ ನದಲ್ಲಿ ನೆಲೆಸಿರುವ ರಹಸ್ಯ ತಿಳಿಯಲು ಭಕ್ತಾದಿ ಗಳು ಕಾತುರರಾಗಿರುವುದು ಸಹಜ. ರಾಯರು ಒಮ್ಮೆ ಕುಂಭಕೋಣದಲ್ಲಿದ್ದಾಗ ಅವರ ಸನ್ನಿಧಿಗೆ ಮೂವರು ಮಲಯಾಳಿ ಜ್ಯೋತಿಷಿಗಳು ಆಗಮಿಸುತ್ತಾರೆ. ಶಿಷ್ಯರ ಒತ್ತಾಯದ ಮೇರೆಗೆ ಗುರುಗಳ ಕುಂಡಲಿಯನ್ನು ಅವರಿಗೆ ತೋರಿಸಲಾಗುತ್ತದೆ. ಮೂವರು ಪ್ರತ್ಯೇಕವಾಗಿ ರಾಯರ ಕುಂಡಲಿಯನ್ನು ಅಧ್ಯಯನ ಮಾಡಿ ಕ್ರಮವಾಗಿ 100, 300 ಹಾಗೂ 700 ವರ್ಷ ರಾಯರ ಆಯುಷ್ಯದ ಪ್ರಮಾಣ ಎಂಬುದಾಗಿ ತಿಳಿಸುತ್ತಾರೆ. ಇದನ್ನು ಕೇಳಿದ ಶಿಷ್ಯರು ನಗುತ್ತಾರೆ. ಆದರೆ ರಾಯರು ಮೂವರ ಭವಿಷ್ಯವಾಣಿಯೂ ನಿಜವೆನ್ನುತ್ತಾರೆ. ತಮ್ಮ ದೇಹದ ಆಯುಷ್ಯ ಪ್ರಮಾಣ 100 ವರ್ಷ, ಗ್ರಂಥಗಳ ಆಯುಷ್ಯ ಪ್ರಮಾಣ 300 ವರ್ಷ, ತಾವು ಬೃಂದಾವನದಲ್ಲಿ ನೆಲಸುವುದು 700 ವರ್ಷ ಎಂದು ಸ್ಪಷ್ಟೀಕರಣ ನೀಡುತ್ತಾರೆ. ಅದೇ ರೀತಿ ಶ್ರೀ ರಾಘವೇಂದ್ರ ಸ್ವಾಮಿಗಳು ಬೃಂದಾವನ ಪ್ರವೇಶಿಸುವ ಮುನ್ನ ತಾವು 700 ವರ್ಷಗಳ ಕಾಲ ಬೃಂದಾವನದಲ್ಲಿ ನೆಲೆಸುವುದಾಗಿ ಭಕ್ತಾದಿಗಳಿಗೆ ಭರವಸೆ ನೀಡುತ್ತಾರೆ.

ರಾಯರು ಹಲವು ಶತಮಾನ ಗಳಿಂದ ಗಾಳಿ ಬೆಳಕು ನೀರು ಆಹಾರ ಸೇವಿಸದೆ ಬೃಂದಾವನದಲ್ಲಿ ನೆಲಸಿ, ಕಾಲಕಾಲಕ್ಕೆ ಸಕಲರ ಸಮಸ್ಯೆಗಳನ್ನು ಅರಿತು, ಎಲ್ಲರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿದ್ದಾರೆ ಎಂದು ಭಕ್ತರು ನಂಬುತ್ತಾರೆ. ಗುರುರಾಘವೇಂದ್ರರು ಬೃಂದಾವನಸ್ಥರಾಗಿ 135 ವರ್ಷಗಳ ನಂತರ (1671-1806) ಬ್ರಿಟಿಷ್ ದೊರೆ ಸರ್ ಥಾಮಸ್ ಮುನ್ರೋರವರಿಗೆ ಬೃಂದಾವನದಿಂದ ಸ್ವತಃ ಹೊರಬಂದು ದರ್ಶನ ನೀಡಿ ಆಂಗ್ಲ ಭಾಷೆಯಲ್ಲಿ ಅವರೊಡನೆ ನಡೆಸಿದ ಸಂಭಾಷಣೆ ಇಲ್ಲಿ ಸ್ಮರಿಸಬಹುದು. ಈ ವಿಚಾರ ಮದ್ರಾಸ್ ಗಜೆಟಿನಲ್ಲಿ ‘Saint thereupon emerged from his tomb and met him: ಎಂಬುದಾಗಿ ಪ್ರಕಟವಾಗಿದೆ.

ಇಂದು ರಾಯರ 350ನೇ ಆರಾಧನೆ. ಅವರು ಬೃಂದಾವನಸ್ಥರಾಗಿ ಈಗ 350 ವರ್ಷ. ಇನ್ನೂ 350 ವರ್ಷ ಅವರು ಬೃಂದಾವನದಲ್ಲಿ ನೆಲೆಸಿ ಭಕ್ತರನ್ನು ಕಾಪಾಡುತ್ತಾರೆ ಎಂಬುದು ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT