ಗುರುವಾರ , ಆಗಸ್ಟ್ 18, 2022
23 °C

ಸಂಸ್ಕೃತಿ ಸಂಭ್ರಮ | ಅದ್ವೈತದ ಮಹಾಕೈಪಿಡಿ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಅದ್ವೈತದರ್ಶನವನ್ನು ಎತ್ತಿಹಿಡಿದು, ಅದಕ್ಕೊಂದು ಗಟ್ಟಿಯಾದ ಶಾಸ್ತ್ರೀಯ ನೆಲೆಯನ್ನು ಒದಗಿಸಿದವರು ಶಂಕರಾಚಾರ್ಯರು. ಈ ದರ್ಶನದ ಪ್ರಮೇಯಗಳನ್ನು ಸಿದ್ಧಗೊಳಿಸಲು ಅವರು ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರಗಳನ್ನು ಆರಿಸಿಕೊಂಡು, ಅವುಗಳಿಗೆ ಭಾಷ್ಯವನ್ನು ರಚಿಸಿದರು. ಎಲ್ಲರಿಗೂ ಸುಲಭವಾಗಿ ವೇದಾಂತದರ್ಶನ (ಶಂಕರಾಚಾರ್ಯರು ಅವರ ಸಿದ್ಧಾಂತವನ್ನು ‘ವೇದಾಂತದರ್ಶನ’, ‘ಔಪನಿಷದದರ್ಶನ’ಎಂದೇ ಒಕ್ಕಣಿಸಿದ್ದಾರೆ) ತಲಪಬೇಕು ಎಂಬ ಉದ್ದೇಶದಿಂದ ಅವರು ಪ್ರಕರಣಗ್ರಂಥಗಳ ಜೊತೆಗೆ ಹಲವು ಸ್ತೋತ್ರಗಳನ್ನೂ ರಚಿಸಿದರು ಎನ್ನುವುದು ಹಲವರು ಶ್ರದ್ಧಾಳುಗಳ ನಂಬಿಕೆ. ಹೀಗೆ ಶಂಕರಾಚಾರ್ಯರ ಹೆಸರಿನೊಂದಿಗೆ ನಂಟನ್ನು ಹೊಂದಿರುವ ಸ್ತೋತ್ರಗಳಲ್ಲಿ ಪ್ರಮುಖವಾದುದು ’ಶ್ರೀದಕ್ಷಿಣಾಮೂರ್ತಿಸ್ತೋತ್ರಮ್‌.’

ಹತ್ತು ಪದ್ಯಗಳನ್ನುಳ್ಳ ಸ್ತೋತ್ರವೇ ದಕ್ಷಿಣಾಮೂರ್ತಿಸ್ತೋತ್ರಮ್‌; ಸಂಸ್ಕೃತಭಾಷೆಯಲ್ಲಿದೆ; ಅದ್ವೈತದರ್ಶನದ ಹಲವು ಪ್ರಮೇಯಗಳನ್ನು ಈ ಸ್ತೋತ್ರದಲ್ಲಿ ಕಾಣಬಹುದು. ಇದಕ್ಕೆ ಪ್ರಸಿದ್ಧವಾದ ಎರಡು ವ್ಯಾಖ್ಯಾನಗಳೂ ಇವೆ: ಶಂಕರಾಚಾರ್ಯರ ನೇರಶಿಷ್ಯರಾದ ಸುರೇಶ್ವರಾಚಾರ್ಯರ ’ಮಾನಸೋಲ್ಲಾಸ‘ ಮತ್ತು ಸ್ವಯಂಪ್ರಕಾಶತೀರ್ಥಯತೀಂದ್ರರ ’ತತ್ತ್ವಸುಧಾ‘.

ದಕ್ಷಿಣಾಮೂರ್ತಿ ವಿವರಣೆಗಳ ಬೆಂಬಲವಿಲ್ಲದೆ ಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗದು. ಪ್ರಾಚೀನ ವ್ಯಾಖ್ಯಾನಗಳು ಇವೆ, ದಿಟ. ಆದರೆ ನಮ್ಮ ಕಾಲ ವ್ಯಾಖ್ಯಾನಗಳಿಗೂ ವ್ಯಾಖ್ಯಾನವನ್ನು ಬಯಸುವ ಕಾಲ. ಈ ಪರಿಸ್ಥಿತಿಯನ್ನು ಅರಿತು ದಕ್ಷಿಣಾಮೂರ್ತಿಸ್ತೋತ್ರಕ್ಕೆ ವಿಸ್ತಾರವಾದ ವಿವರಣೆಯನ್ನು ಇಂಗ್ಲಿಷಿನಲ್ಲಿ ಬರೆದವರು ಡಿ. ಎಸ್‌. ಸುಬ್ಬರಾಮಯ್ಯ. ಅವರು ವಿಜ್ಞಾನಿಗಳು; ನೊಬೆಲ್‌ ವಿಜ್ಞಾನಿ, ಸರ್‌ ಸಿ. ವಿ. ರಾಮನ್‌ ಅವರ ಮಾರ್ಗದರ್ಶನದಲ್ಲಿ ಭೌತವಿಜ್ಞಾನದಲ್ಲಿ ಸಂಶೋಧನೆಯನ್ನು ನಡೆಸಿದವರು. ಜೊತೆಗೆ ವೇದಾಂತಶಾಸ್ತ್ರದಲ್ಲಿಯೂ ಆಳವಾದ ಪಾಂಡಿತ್ಯವನ್ನು ದಕ್ಕಿಸಿಕೊಂಡಿದ್ದವರು. ದಕ್ಷಿಣಾಮೂರ್ತಿಸ್ತೋತ್ರದ ಹತ್ತು ಪದ್ಯಗಳಿಗೆ ಸಾವಿರದ ಮುನ್ನೂರಕ್ಕೂ ಹೆಚ್ಚು ಪುಟಗಳಲ್ಲಿ ವ್ಯಾಖ್ಯಾನವನ್ನು ಒದಗಿಸಿದರು ಎಂಬುದು ಅವರ ವೈದುಷ್ಯದ ವಿಸ್ತಾರಕ್ಕೂ ಎತ್ತರಕ್ಕೂ ಸಾಕ್ಷ್ಯವಾಗಿದೆ; ಎರಡು ಸಂಪುಟಗಳಲ್ಲಿ ಇದು ಶ್ರೀ ಶೃಂಗೇರಿಮಠದಿಂದ 1988ರಲ್ಲಿ ಪ್ರಕಟಗೊಂಡಿತು. ಯಾವ ಒಂದು ಗ್ರಂಥದ ಅಧ್ಯಯನದಿಂದ ವೇದಾಂತದರ್ಶನದ ಪ್ರಮುಖ ಸಿದ್ಧಾಂತಗಳು ಪರಿಚಯವಾಗುತ್ತವೆ – ಎಂಬ ಪ್ರಶ್ನೆಗೆ ಉತ್ತರವಾಗಿ ಸುಬ್ಬರಾಮಯ್ಯನವರ ದಕ್ಷಿಣಾಮೂರ್ತಿಸ್ತೋತ್ರವ್ಯಾಖ್ಯಾನವನ್ನು ಹೇಳಬಹುದು; ಯಾವ ಗ್ರಂಥವನ್ನು ಓದಿದರೆ ಅದ್ವೈತದರ್ಶನದ ಸಮಗ್ರತೆ ಅರಿವಾಗುತ್ತದೆಯೋ ಅದೇ ಈ ಕೃತಿ ಎಂದರೆ ಅದೇನೂ ಅತ್ಯುಕ್ತಿಯಾಗದು. ಈ ಸಣ್ಣ ಸ್ತೋತ್ರಸಂಕಲನದಲ್ಲಿ ತೋರಿಕೊಂಡಿರುವ ವಿವರಗಳ ವಿಶದೀಕರಣಕ್ಕೆ ಹತ್ತಾರು ಉದ್ಗ್ರಂಥಗಳನ್ನು ಉಲ್ಲೇಖಿಸಿದ್ದಾರೆ; ಜೊತೆಗೆ ಸಾಧಕನ ದೃಷ್ಟಿಯಿಂದ ವಿಚಾರಮಂಡನೆಯೂ ನಡೆದಿದೆ. 

ಇದೀಗ ಈ ಗ್ರಂಥವು ಕನ್ನಡಕ್ಕೂಅನುವಾದಗೊಂಡು ಇಲ್ಲಿಯ ಆಸಕ್ತರಿಗೆ ದೊಡ್ಡದಾದ ಆಸರೆಯೊಂದು ಸಿಕ್ಕಂತಾಗಿದೆ. ಕನ್ನಡಸಾಹಿತ್ಯವಿಮರ್ಶಾಲೋಕದ ಖ್ಯಾತನಾಮರಾದ ಜಿ. ಎಸ್‌. ಆಮೂರ ಅವರು ಈ ಕೃತಿಯನ್ನು ತುಂಬ ಶ್ರದ್ಧೆಯಿಂದಲೂ ಪರಿಶ್ರಮದಿಂದಲೂ ಅನುವಾದಿಸಿದ್ದಾರೆ. ಇಂಗ್ಲಿಷ್‌ಭಾಷೆಯಲ್ಲಿರುವ ವೇದಾಂತಶಾಸ್ತ್ರದ ಕೃತಿಗಳನ್ನು ಕನ್ನಡಕ್ಕೆ ತರುವಾಗ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಅವರು ಅವುಗಳನ್ನು ಸಮರ್ಥವಾಗಿ ದಾಟಿ ಸಫಲರಾಗಿದ್ದಾರೆ. ಕನ್ನಡವಾಕ್ಯರಚನೆಯ ಜಾಡಿಗೆ ಇಂಗ್ಲಿಷ್‌ವಾಕ್ಯಗಳನ್ನು ಒಗ್ಗಿಸಿರುವುದರ ಹಿಂದೆ ಅವರ ಕನ್ನಡ ಮತ್ತು ಇಂಗ್ಲಿಷ್‌ಗಳ ಪರಿಣತಿ ನೆರವಾಗಿದೆ; ಜೊತೆಗೆ ಅನುವಾದಕ್ಕೆಂದೇ ಅಧ್ಯಯನಮಾಡಿದ ಹಲವು ವೇದಾಂತಗ್ರಂಥಗಳ ನೆರವು ವಿಷಯಗಳ ನಿಖರ ಪ್ರತಿಪಾದನೆಯಲ್ಲಿ ಕೈಹಿಡಿದಿವೆ. ತಾನೊಬ್ಬ ಸಾಧಕ – ಎಂಬ ಅವರ ಶ್ರದ್ಧೆ–ಮನೋಧರ್ಮಗಳು ಅನುವಾದಕಾರ್ಯದುದ್ದಕ್ಕೂ ಅವರನ್ನು ಕಾಪಾಡಿವೆ. ಹೀಗಿದ್ದರೂ ಅನುವಾದ ಕೆಲವೊಮ್ಮೆ ಪೆಡಸು ಎನಿಸುತ್ತದೆ; ಆದರೆ ಇದು ಅನುವಾದಕನ ದೋಷವಲ್ಲ; ವಿಷಯದ ವ್ಯಾಪ್ತಿಯೇ ಹಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.

ಈ ಅನುವಾದಕೃತಿಯ ದೊಡ್ಡ ಮಿತಿ ಎಂದರೆ ಅಲ್ಲಿಯ ಸಂಸ್ಕೃತಮೂಲವಾಕ್ಯಗಳು. ಗ್ರಂಥದ ಪ್ರತಿಪುಟದಲ್ಲಿಯೂ ಸಂಸ್ಕೃತದ ಮಾತುಗಳು ಕಾಣಿಸಿಕೊಳ್ಳುತ್ತವೆ. ಈ ವಾಕ್ಯಗಳನ್ನು ಇಲ್ಲಿ ದೇವನಾಗರಿ ಲಿಪಿಯಲ್ಲಿ ಕೊಡಲಾಗಿದೆ. ಅವನ್ನು ಕನ್ನಡಲಿಪಿಯಲ್ಲಿಯೇ ಕೊಟ್ಟಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ಮುಂದಿನ ಮುದ್ರಣದಲ್ಲಿಯಾದರೂ ಇದು ಸರಿಹೋದೀತೆಂದು ಆಶಿಸೋಣ. ಈಗ ಪ್ರಕಟಗೊಂಡಿರುವುದು ಮೊದಲನೆಯ ಸಂಪುಟ; ಎರಡನೆಯ ಸಂಪುಟ ಪೂರ್ಣ ಕನ್ನಡಮಯವಾಗಿರುತ್ತದೆ ಎಂದೂ ನಿರೀಕ್ಷಿಸೋಣ. ವಿಷಯಸೂಚಿ, ಗ್ರಂಥಸೂಚಿಗಳ ಅನಿವಾರ್ಯ ಇಂಥ ಗ್ರಂಥಗಳಿಗೆ ಹೆಚ್ಚು; ಎರಡನೆಯ ಸಂಪುಟದಲ್ಲಿ ಸೂಚಿಗಳನ್ನು ನಿರೀಕ್ಷಿಸಬಹುದೆ? ಜೊತೆಗೆ ಕೆಲವೊಂದು ಪಾರಿಭಾಷಿಕ ಪದಗಳ ಸಂಕ್ಷಿಪ್ತ ವಿವರಣೆಯೂ ಗ್ರಂಥದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಒಟ್ಟಿನಲ್ಲಿ ಕನ್ನಡಸಾರಸ್ವತಲೋಕಕ್ಕೆ ಇಂಥದೊಂದು ಅಪೂರ್ವ ಗ್ರಂಥವನ್ನು ನೀಡಿರುವ ಆಮೂರ ಅವರ ಕೊಡುಗೆ ಸ್ತುತ್ಯರ್ಹವಾದುದು; ಪ್ರಕಾಶಕರಾದ ‘ವೇದಾಂತಭಾರತಿ’ಗೆ ಎರಡನೆಯ ಸಂಪುಟ ಬೇಗ ಪ್ರಕಟವಾಗಲಿ ಎಂಬ ಆಶಾಪೂರ್ವಕ ಕೃತಜ್ಞತೆಗಳೂ ಸಲ್ಲುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.