ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯಸಂದೇಶ| ವಸಿಷ್ಠ-ಅರುಂಧತಿ ವಿವಾಹ

ಅಕ್ಷರ ಗಾತ್ರ

ಶಂಕರನ ಮಾರ್ಗದರ್ಶನದಂತೆ ಯಜ್ಞಶಾಲೆಗೆ ಯಾರಿಗೂ ಕಾಣಿಸದಂತೆ ಹೋದ ಸಂಧ್ಯೆ, ಶಂಕರನ ಅನುಗ್ರಹದಿಂದ ಹವಿಸ್ಸಿನ ರೂಪ ಪಡೆದಳು. ಹವಿಸ್ಸಿನ ರೂಪದಲ್ಲಿ ಯಾಗಾಗ್ನಿಗೆ ಬೀಳುವ ಮುನ್ನ ಆಕೆ ತನಗೆ ತಪೋವಿಧಿಯನ್ನು ಉಪದೇಶಿಸಿದ ಬ್ರಹ್ಮಚಾರಿ ವೇಷಧಾರಿಯಾದ ವಸಿಷ್ಠಮುನಿಯನ್ನು ಸ್ಮರಿಸಿದಳು. ಏಕೆಂದರೆ, ಬ್ರಹ್ಮನ ಆದೇಶದಂತೆ ಸಂಧ್ಯೆಗೆ ತಪಸ್ಸನ್ನಾಚರಿಸುವ ವಿಧಾನವನ್ನು ವಸಿಷ್ಠ ತಿಳಿಸಿದ್ದ. ಅದು ಸಂಧ್ಯೆ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಮೂಡಿಸಿತ್ತು. ತನಗೆ ತಪೋವಿಧಾನ ತಿಳಿಸಿದ ಮುನಿಯೇ ಮುಂದಿನ ಜನ್ಮದಲ್ಲಿ ತನ್ನ ಪತಿಯಾಗಬೇಕೆಂದು ಬಯಸಿದಳು. ಪುರೋಡಾಶರೂಪದಲ್ಲಿದ್ದ ಅವಳ ಶರೀರವು ಯಾಗಾಗ್ನಿಗೆ ಬಿದ್ದ ಕ್ಷಣದಲ್ಲಿಯೇ ಭಸ್ಮವಾಗಿ, ಆ ಪುರೋಡಾಶದ ಸುವಾಸನೆ ಅಲ್ಲೆಲ್ಲಾ ಹರಡಿತು. ಅಗ್ನಿಯು ಸಂಧ್ಯೆಯ ಶರೀರವನ್ನು ಸುಟ್ಟ ನಂತರ, ಶಂಕರನ ಅಪ್ಪಣೆಯಂತೆ ಪವಿತ್ರವಾದ ಅವಳ ದಿವ್ಯಶರೀರ ಸೂರ್ಯಮಂಡಲ ಪ್ರವೇಶಿಸುವಂತೆ ಮಾಡಿದ.

ಸಂಧ್ಯೆಯ ಶರೀರವನ್ನು ಸ್ವೀಕರಿಸಿದ ಸೂರ್ಯ, ಎರಡು ಭಾಗವಾಗಿ ವಿಭಜಿಸಿದ. ಅದನ್ನು ಪಿತೃ ಮತ್ತು ದೇವತೆಗಳ ಪ್ರೀತಿಗಾಗಿ ಹಂಚಿದ. ಇದರಿಂದ ಸಂಧ್ಯೆಯ ಶರೀರದ ಮೇಲುಭಾಗವು ರಾತ್ರಿ ಮತ್ತು ಹಗಲಿನ ಮಧ್ಯದಲ್ಲಿರುವ ಪ್ರಾತಸ್ಸಂಧ್ಯೆಯೆನಿಸಿ ದೇವತೆಗಳಿಗೆ ಪ್ರಿಯವೆನಿಸಿದರೆ, ಕೆಳಭಾಗದ ಶರೀರವು ಹಗಲು ರಾತ್ರಿಗಳ ಮಧ್ಯಭಾಗದಲ್ಲಿ ಬರುವ ಸಾಯಂಸಂಧ್ಯೆಯಾಗಿ ಪಿತೃಗಳಿಗೆ ತುಂಬಾ ಪ್ರಿಯವಾದುದಾಯಿತು. ಸಾಯಂಸಂಧ್ಯೆಯು ಪಿತೃಗಳಿಗೆ ಜನನಿಯಾಗಿಯೂ ಪ್ರಸಿದ್ಧಳಾದಳು. ಸೂರ್ಯೋದಯಕ್ಕಿಂತ ಮೊದಲು ಅರುಣನು ಉದಯಿಸುವ ಕಾಲದಲ್ಲಿ ಪ್ರಾತಸ್ಸಂಧ್ಯೆಯು ಹುಟ್ಟುವುದು. ಅದು ದೇವತೆಗಳಿಗೆ ಪ್ರಿಯವಾದುದು. ಬಳಿಕ ಸೂರ್ಯನು ರಕ್ತಕಮಲದಂತೆ ಕೆಂಬಣ್ಣವಾಗಿ ಅಸ್ತನಾಗುವಾಗ ಹುಟ್ಟುವ ಸಾಯಂಸಂಧ್ಯೆ ಪಿತೃಗಳಿಗೆ ಪ್ರಿಯವಾದುದು.

ಸಂಧ್ಯೆಯ ಪ್ರಾಣವನ್ನು ಮತ್ತು ಮನಸ್ಸನ್ನು ಶಂಕರ ದಿವ್ಯವಾದ ಶರೀರವುಳ್ಳ ವುಗಳನ್ನಾಗಿ ಮಾಡಿದ. ಮೇಧಾತಿಥಿಮುನಿಯ ಯಜ್ಞವು ಮುಗಿಯುವ ಹೊತ್ತಿಗೆ ಅಗ್ನಿಕುಂಡದಿಂದ ಪುಟಕ್ಕೆ ಹಾಕಿದ ಚಿನ್ನದಂತಿರುವ ಕನ್ಯೆಯಾಗಿ ಎದ್ದು ಬಂದಳು. ಅಗ್ನಿಯಿಂದ ಬಂದ ಕನ್ಯೆಯನ್ನು ಮೇಧಾತಿಥಿಮುನಿಯು ಎರಡು ಕೈಗಳಿಂದ ಎತ್ತಿಕೊಂಡ. ಆ ಮಗುವಿಗೆ ಅವಭೃಥಸ್ನಾನವನ್ನು ಮಾಡಿಸಿದ. ಅಧರ್ಮವನ್ನು ತಡೆಯುವ ಸಾಮರ್ಥ್ಯವುಳ್ಳವಳಾದುದರಿಂದ ಆಕೆಗೆ ‘ಅರುಂಧತೀ’ ಎಂದು ಹೆಸರನ್ನಿಟ್ಟ. ನಂತರ ಯಾಗವನ್ನು ಮುಗಿಸಿದ ಮೇಧಾತಿಥಿಯು ಕೃತಕೃತ್ಯನಾದವನಂತೆ ಸಂತೋಷಗೊಂಡ. ಅವನಿಗೆ ಅರುಂಧತಿ ಸಿಕ್ಕಿದ್ದು ಮಹಾಪುಣ್ಯ ಬಂದಂತಾಗಿತ್ತು. ತನ್ನ ಆಶ್ರಮದಲ್ಲಿ ಬಾಲಕಿಯನ್ನು ತುಂಬಾ ವಾತ್ಸಲ್ಯದಿಂದ ನೋಡಿಕೊಳ್ಳುತ್ತಾ, ಶಿಷ್ಯರೊಡನೆ ವಾಸಿಸುತ್ತಿದ್ದ. ಅರುಂಧತಿಯು ಚಂದ್ರಭಾಗಾ ನದಿತೀರದಲ್ಲಿರುವ ಮೇಧಾತಿಥಿಯ ತಾಪಸಾರಣ್ಯ ಎಂಬ ಆಶ್ರಮದಲ್ಲಿ ಬೆಳೆಯತೊಡಗಿದಳು. ಐದನೆಯ ವರ್ಷವು ಪ್ರಾಪ್ತವಾದಾಗ ಸಾಧ್ವಿಯಾದ ಆ ಅರುಂಧತಿಯು ತನ್ನ ಒಳ್ಳೆ ಗುಣಗಳಿಂದ ಚಂದ್ರಭಾಗಾನದಿ ಮತ್ತು ತಾಪಸ ಅರಣ್ಯವನ್ನು ಪವಿತ್ರವಾಗಿ ಮಾಡಿದಳು. ಮುಂದೆ ಅವಳು ಮದುವೆಯಾಗುವ ಪ್ರಾಪ್ತ ವಯಸ್ಸು ಬಂದಾಗ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಮೇಧಾತಿಥಿಯ ಆಶ್ರಮಕ್ಕೆ ಬಂದು ಅರುಂಧತಿಗೆ ಬ್ರಹ್ಮಪುತ್ರನಾದ ವಸಿಷ್ಠ ಮುನಿಯೊಡನೆ ವಿವಾಹ ಮಾಡಿಸಿದರು. ಆನಂದಪ್ರದವಾದ ಮದುವೆಯಲ್ಲಿ ಭಾಗವಹಿಸಿದ ಎಲ್ಲಾ ದೇವತೆಗಳು ಮತ್ತು ಮುನಿಗಳು ತುಂಬಾ ಹರ್ಷದಿಂದ ತೃಪ್ತಿಪಟ್ಟರು.

ಈ ಸಂದರ್ಭದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ನವದಂಪತಿಗಳಾದ ಅರುಂಧತಿ ಮತ್ತು ವಸಿಷ್ಠರ ಶಿರಸ್ಸಿನಲ್ಲಿ ಪ್ರೋಕ್ಷಿಸಿದ ಆಶೀರ್ವಾದಜಲದಿಂದ ಶಿಪ್ರಾನದಿ ಸೇರಿದಂತೆ ಏಳು ಪವಿತ್ರವಾದ ನದಿಗಳು ಹುಟ್ಟಿದವು. ಪತಿವ್ರತೆಯ ರಲ್ಲಿ ಶ್ರೇಷ್ಠಳಾದ ಅರುಂಧತಿಯು ಸುಂದರನಾದ ವಸಿಷ್ಠಮುನಿಯನ್ನು ಪತಿಯಾಗಿ ಪಡೆದು ರಾರಾಜಿಸಿದಳು. ನವದಂಪತಿಗಳಿಗೆ ಶಕ್ತಿಮುನಿ ಮುಂತಾದ ಶ್ರೇಷ್ಠ ಪುತ್ರರು ಜನಿಸಿದರು.

ಹೀಗೆ ಬ್ರಹ್ಮ ನಾರದನಿಗೆ ಸಂಧ್ಯೆಯ ಕಥೆ ಹೇಳಿದ ನಂತರ ‘ನಿನಗೆ ಸಂಧ್ಯಾದೇವಿಯ ಪವಿತ್ರವೂ ಶ್ರೇಷ್ಠವೂ ಸಕಲ ಇಷ್ಟಾರ್ಥಗಳನ್ನುಂಟು ಮಾಡುವಂತಹ ದಿವ್ಯಚರಿತ್ರೆಯನ್ನು ಹೇಳಿರುವೆ. ಈ ಕಥೆಯನ್ನು ಶ್ರದ್ಧೆಯಿಂದ ಕೇಳಿದ ಸ್ತ್ರೀಯರಾಗಲೀ ಪುರುಷರಾಗಲೀ ಅವರು ಬಯಸಿದ ಸಕಲ ಇಷ್ಟಾರ್ಥಗಳನ್ನೂ ಪಡೆಯುವರು. ಇದರಲ್ಲಿ ಸಂಶಯವಿಲ್ಲ’ ಎಂದು ಹೇಳುತ್ತಾನೆ.

ಇಲ್ಲಿಗೆ ಶಿವಪುರಾಣದ ರುದ್ರಸಂಹಿತೆಯಲ್ಲಿನ ಸತೀಖಂಡದ ಏಳನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT