ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಯಜ್ಞಕ್ಕೆ ಯೋಗ್ಯವಾದ ಸ್ಥಳ-ಕಾಲ

ಭಾಗ 43
Last Updated 11 ಫೆಬ್ರುವರಿ 2022, 20:30 IST
ಅಕ್ಷರ ಗಾತ್ರ

ದೇವಯಜ್ಞಾದಿಗಳಿಗೆ ಯೋಗ್ಯವಾದ ಸ್ಥಳ ಮತ್ತು ಕಾಲದ ವಿವರಗಳನ್ನು ತಿಳಿಸುವಂತೆ ಋಷಿಗಳು ಕೋರುತ್ತಾರೆ. ಆಗ ಸೂತ ಮುನಿಯು ‘ಶುದ್ಧವಾದ ಮನೆಯಲ್ಲಿ ದೇವಯಜ್ಞಾದಿಕರ್ಮಗಳನ್ನು ಮಾಡಿದಾಗ ಸಮಫಲ ಸಿಗುವುದು. ಗೋಶಾಲೆಯಲ್ಲಿ ಮಾಡಿದರೆ ಅದಕ್ಕಿಂತಲೂ ಹತ್ತುಪಟ್ಟು ಫಲ ದೊರಕುವುದು. ಜಲತೀರದಲ್ಲಿ ಮಾಡಿದರೆ ಅದ ಕ್ಕಿಂತಲೂ ಹತ್ತರಷ್ಟು ಫಲ ಹೆಚ್ಚಾಗಿ ಬರುವುದು. ಬಿಲ್ವವೃಕ್ಷದ ಮೂಲ, ತುಳಸೀಮೂಲ, ಅಶ್ವತ್ಥವೃಕ್ಷದ ಮೂಲಗಳಲ್ಲಿ ಜಲತೀರಕ್ಕಿಂತಲೂ ಹತ್ತರಷ್ಟು ಫಲ ಸಿಗುವುದು’ ಎಂದು ಹೇಳುತ್ತಾನೆ.

ಅಶ್ವತ್ಥಮೂಲಾದಿಗಳಿರುವ ದೇವಾಲಯವು ಹತ್ತು ಗುಣವುಳ್ಳದ್ದು. ಅದಕ್ಕಿಂತಲೂ ತೀರ್ಥಕ್ಷೇತ್ರವು ಹತ್ತು ಪಟ್ಟು ಉತ್ತಮವಾದುದು. ನದೀ
ತೀರವು ಅದಕ್ಕಿಂತಲೂ ಹತ್ತರಷ್ಟು ಉತ್ತಮವಾದುದು. ಅದಕ್ಕಿಂತಲೂ ಗಂಗಾ ಮೊದಲಾದ ತೀರ್ಥನದಿಗಳ ತೀರವು ಮತ್ತರಷ್ಟು ಫಲವುಳ್ಳಂತ ಹುದು. ತೀರ್ಥನದೀತೀರಕ್ಕಿಂತಲೂ ಏಳು ಗಂಗಾನದಿಗಳ ತೀರವು ಅದರಹತ್ತರಷ್ಟು ಹೆಚ್ಚಾದ ಫಲವುಳ್ಳದ್ದು. ಏಳು ಗಂಗಾತೀರಗಳು ಯಾವು ದೆಂದರೆ, ಗಂಗಾ, ಗೋದಾವರಿ, ಕಾವೇರಿ, ತಾಮ್ರಪರ್ಣೀ, ಸಿಂಧೂ, ಸರಯೂ ಮತ್ತು ರೇವಾ. ಸಪ್ತಗಂಗೆಗಳ ತೀರಕ್ಕಿಂತಲೂ ಸಮುದ್ರತೀರವು ಹತ್ತುಪಾಲು ಶ್ರೇಷ್ಠ. ಸಮುದ್ರತೀರಕ್ಕಿಂತ ಪರ್ವತದ ಅಗ್ರ ಭಾಗ ಹತ್ತು ಪಾಲು ಉತ್ತಮವಾಗಿರುತ್ತದೆ. ಬಹುಮುಖ್ಯವಾಗಿ ಈ ಎಲ್ಲಾ ಸ್ಥಳಕ್ಕಿಂತಲೂ ನಮ್ಮ ಮನಸ್ಸಿಗೆ ಹಿತವಾಗಿ ತೋರುವಂತಹ ಪ್ರದೇಶವೇ ಅತ್ಯುತ್ತಮವಾದುದು.

ಕೃತಯುಗದಲ್ಲಿ ಮಾಡುತ್ತಿದ್ದ ಯಜ್ಞ, ದಾನ ಮೊದಲಾದ ಧರ್ಮ ಕಾರ್ಯಗಳಿಂದ ಸಂಪೂರ್ಣವಾದ ಫಲ ಲಭಿಸುತ್ತಿತ್ತು. ತ್ರೇತಾಯುಗದಲ್ಲಿ ಮುಕ್ಕಾಲು ಫಲ, ದ್ವಾಪರಯುಗದಲ್ಲಿ ಅರ್ಧಫಲ, ಕಲಿಯುಗದಲ್ಲಿ ನಾಲ್ಕ ನೆಯ ಒಂದು ಭಾಗ ಫಲ ದೊರೆಯುತ್ತಿತ್ತು. ಈಗ ಕಲಿಯುಗವು ಅರ್ಧ ಕಳೆದ ಮೇಲೆ ಆ ನಾಲ್ಕನೆಯ ಒಂದು ಭಾಗದಲ್ಲಿನ ಕಾಲು ಭಾಗ ಮಾತ್ರ ಫಲವೂ ಲಭಿಸುತ್ತಿದೆ. ಪರಿಶುದ್ಧವಾದ ದಿನದಲ್ಲಿ ಪರಿಶುದ್ಧನಾಗಿ ಮಾಡಿದ ಪುಣ್ಯಕ್ಕೆ ಹೆಚ್ಚಾದ ಫಲವು ಲಭಿಸುತ್ತೆ. ಅದಕ್ಕಿಂತಲೂ ಸೂರ್ಯಸಂಕ್ರಮಣ ಕಾಲದಲ್ಲಿ ಮಾಡಿದ ಪುಣ್ಯವು ಹತ್ತು ಪಟ್ಟು ಹೆಚ್ಚಾದ ಫಲ ಕೊಡುವುದು.

ವಿಷುವ ಅಂದರೆ ಸಮವಾದ ರಾತ್ರಿಗಳುಳ್ಳ ಕಾಲದಲ್ಲಿ ಮಾಡುವ ಧರ್ಮಕಾರ್ಯಗಳಿಂದ ಸೂರ್ಯಸಂಕ್ರಮಣಕ್ಕಿಂತಲೂ ಹತ್ತುಪಾಲು ಹೆಚ್ಚು ಪುಣ್ಯ ಲಭಿಸುತ್ತದೆ. ದಕ್ಷಿಣಾಯನ ಮತ್ತು ಉತ್ತರಾಯಣ ಪುಣ್ಯಕಾಲಗಳಲ್ಲಿ ಅದಕ್ಕೆ ಹತ್ತರಷ್ಟು ಪುಣ್ಯ ದೊರೆಯುತ್ತದೆ. ಮಕರಸಂಕ್ರಾಂತಿಕಾಲದಲ್ಲಿ ಇವೆಲ್ಲ ಕಾಲಗಳಿಗಿಂತ ಹತ್ತರಷ್ಟು ಪುಣ್ಯ ಸಿಗುತ್ತೆ. ಇದಕ್ಕಿಂತ ಚಂದ್ರಗ್ರಹಣ ಕಾಲದಲ್ಲಿ ಅದಕ್ಕೆ ಹತ್ತರಷ್ಟು ಪುಣ್ಯಪ್ರಾಪ್ತಿಯಾಗುತ್ತದೆ. ಚಂದ್ರಗ್ರಹಣ ಕಾಲಕ್ಕಿಂತಲೂ ಸೂರ್ಯಗ್ರಹಣಕಾಲವು ಅತ್ಯುತ್ತುಮವಾದುದು. ಆ ಕಾಲದಲ್ಲಿ ಜಗದ್ರೂಪನಾದ ಸೂರ್ಯನಿಗೆ ವಿಷಯೋಗ ಅಂದರೆ, ಅನಿಷ್ಟ ಸಂಭವಿಸುವುದರಿಂದ ಜಗತ್ತಿಗೇ ಆ ಕಾಲವು ರೋಗಪ್ರದವಾದುದು. ಆದುದರಿಂದ ಸೂರ್ಯಗ್ರಹಣ ಕಾಲದಲ್ಲಿ ವಿಷಶಾಂತಿಗಾಗಿ ಸ್ನಾನ, ದಾನ ಮತ್ತು ಜಪಗಳನ್ನು ಆಚರಿಸಬೇಕು. ವಿಷವನ್ನು ಶಾಂತಿಗೊಳಿಸುವ ಕಾಲವಾದುದರಿಂದ ಸೂರ್ಯಗ್ರಹಣ ಕಾಲವು ಪುಣ್ಯಪ್ರದವಾದುದು.

ಜನ್ಮನಕ್ಷತ್ರಕಾಲದಲ್ಲಿ ಮಾಡಿದ ವ್ರತದ ಕಾಲ ಸಹ ಸೂರ್ಯಗ್ರಹಣ ಕಾಲಕ್ಕೆ ಸಮವಾದುದು. ಸತ್ಪುರುಷರೊಡನೆ ಸಹವಾಸ ಬೆಳೆಸಿದ ಕಾಲವು ಕೋಟಿ ಸೂರ್ಯಗ್ರಹಣ ಕಾಲಗಳಂತೆ ಪುಣ್ಯವಾದುದು. ತಪಸ್ವಿಗಳೂ ಜ್ಞಾನಿಗಳೂ, ಯೋಗಿ–ಯತಿಗಳೂ ಪೂಜೆಗೆ ಪಾತ್ರರು. ಯೋಗ್ಯರಾದವರು ಪಾಪವನ್ನು ಹೋಗಲಾಡಿಸುವರು. ಅವರನ್ನು ಶ್ರದ್ಧೆಯಿಂದ ಪೂಜಿಸಬೇಕು. ಇಪ್ಪತ್ತುನಾಲ್ಕು ಲಕ್ಷ ಗಾಯತ್ರೀಜಪಗಳನ್ನು ಮಾಡಿದವನು ಪೂಜೆಗೆ ಪಾತ್ರನು. ಅಂಥ ಯೋಗ್ಯನನ್ನು ಪೂಜಿಸಿದರೆ ಸಂಪೂರ್ಣವಾದ ಫಲವೂ ಭೋಗವೂ ಲಭಿಸುವುದು. ಆದುದರಿಂದ ಪೂಜೆಗೆ ಪಾತ್ರನಾದ ಯೋಗ್ಯ ನಾದವನನ್ನು ಪೂಜಿಸಿ, ಅವರಿಗೆ ದಾನ ನೀಡಿದರೆ ಪಾಪದಿಂದ ರಕ್ಷಣೆ ದೊರೆಯುವುದು. ಪಾಪದಿಂದ ರಕ್ಷಿಸುವ ಮಂತ್ರ ಗಾಯತ್ರೀಮಂತ್ರ.

ಯಾರು ಧನವನ್ನು ಪರರಿಗೆ ದಾನಮಾಡುವುದಿಲ್ಲವೋ, ಅವರು ದರಿದ್ರರಾಗುವರು. ಯಾರು ಧಾರಾಳವಾಗಿ ದಾನಮಾಡುವರೋ ಅವರು ಶ್ರೀಮಂತರಾಗುವರು. ತಾನು ಶುದ್ಧನೂ ಪವಿತ್ರನೂ ಆದಂತಹವನೇ ಮಿಕ್ಕವರನ್ನು ಸಲಹಬಲ್ಲನು. ಆದುದರಿಂದ ದಾನ, ಜಪ, ಹೋಮ, ಪೂಜೆ ಮುಂತಾದ ಎಲ್ಲಾ ಕರ್ಮಗಳಲ್ಲೂ ದಾನಮಾಡಲು ಸಮರ್ಥನಾದವನು ಪೂಜೆಗೆ ಯೋಗ್ಯವ್ಯಕ್ತಿಯಾಗಿರುತ್ತಾನೆ. ಅನ್ನದಾನಕ್ಕೆ ಹಸಿದ ಸ್ತ್ರೀಪುರುಷರು ಸೂಕ್ತರೇ ಹೊರತು ಹೊಟ್ಟೆ ತುಂಬಿದವರಲ್ಲ ಎನ್ನುತ್ತಾನೆ, ಸೂತಮುನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT