ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಬ್ರಹ್ಮನನ್ನು ಕ್ಷಮಿಸಿದ ಶಿವ

ಅಕ್ಷರ ಗಾತ್ರ

ಶಿವ-ಸತೀದೇವಿಯರ ಮದುವೆ ಪೌರೋಹಿತ್ಯ ವಹಿಸಿಕೊಂಡಿದ್ದ ಬ್ರಹ್ಮ ಮೊಮ್ಮಗಳಾದ ಸತೀದೇವಿ ಮೇಲೆ ಕಾಮವಿಕಾರ ತೋರಿಸಿದ. ಇದರಿಂದ ರುದ್ರದೇವ ಕೋಪಗೊಂಡು ಬ್ರಹ್ಮನನ್ನು ಕೊಲ್ಲಲು ಬಂದಾಗ ಮಹಾವಿಷ್ಣು ರಕ್ಷಣೆಗೆ ಧಾವಿಸಿ ಪರಿಪರಿಯಾಗಿ ಬೇಡುತ್ತಾನೆ. 'ಓ ಮಹೇಶ್ವರ! ಈ ಚತುರ್ಮುಖಬ್ರಹ್ಮ ಪ್ರಜೆಗಳನ್ನು ಸೃಷ್ಟಿಸುವುದಕ್ಕಾಗಿ ಆವಿರ್ಭವಿಸಿರುವ. ಇವನು ಕೊಲ್ಲಲ್ಪಟ್ಟರೆ ಇನ್ನಾರೂ ಈ ಜಗತ್ತನ್ನು ಸೃಷ್ಟಿಸುವವರಿಲ್ಲ. ಶಿವಸ್ವರೂಪನಾದ ನಿನ್ನ ಆಜ್ಞೆಯಿಂದಲೇ ನಾವು ತ್ರಿಮೂರ್ತಿಗಳು ಪ್ರತ್ಯೇಕವಾಗಿ ಸೃಷ್ಟಿ, ಪಾಲನೆ ನಾಶಗಳನ್ನು ಮಾಡುತ್ತಲಿರುವೆವು. ಹೀಗಿರಲು ಬ್ರಹ್ಮನನ್ನು ನೀನು ಸಂಹರಿಸಿದರೆ ನೀನು ನಿಯಮಿಸಿದ ಸೃಷ್ಟಿಕರ್ಮವನ್ನು ಮಾಡುವವರು ಯಾರು? ಆದುದರಿಂದ ವಿಧಿಯನ್ನು ಸಂಹರಿಸಬೇಡ. ಈ ವಿಧಿಯೇ ದಕ್ಷಪುತ್ರಿಯಾದ ಸತೀದೇವಿಯನ್ನು ಅನೇಕ ಸದುಪಾಯಗಳಿಂದ ನಿನ್ನ ಪತ್ನಿಯಾಗುವಂತೆ ಮಾಡಿದ್ದಾನೆ. ಆಕಾರಣಕ್ಕಾದರೂ ಬ್ರಹ್ಮನನ್ನು ಕ್ಷಮಿಸು' ಎಂದು ಶಿವನ ಮನ ಕರಗುವಂತೆ ಕೋರುತ್ತಾನೆ.

ಆಗ ಮಹಾದೇವ ಹೇಳಿದ: ‘ಎಲೈ ವಿಷ್ಣುವೇ, ಬ್ರಹ್ಮನನ್ನು ಕೊಲ್ಲುವುದನ್ನು ತಡೆಯಬೇಡ. ನೀನು ಹಿಂದೆ ಕೋರಿದ ವಿಜ್ಞಾಪನೆಯನ್ನು ಈಗ ನಾನು ಪೂರೈಸುವೆ. ಮಹಾಪಾಪಿಯೂ ದುಷ್ಟನೂ ಆದಂತಹ ಬ್ರಹ್ಮನನ್ನೂ ಸಂಹರಿಸುವೆ. ಬ್ರಹ್ಮನ ಬದಲು ನಾನೇ ಪ್ರಜೆಗಳನ್ನು ಸೃಷ್ಟಿಸುವೆ. ಅಥವಾ ನನ್ನ ಶಕ್ತಿಯಿಂದ ಇನ್ನೊಬ್ಬ ಸೃಷ್ಟಿಕರ್ತನನ್ನೇ ಸೃಷ್ಟಿಸುವೆ. ನನ್ನ ನಿಯಮದಂತೆ ಬ್ರಹ್ಮನನ್ನು ಮೊದಲು ಸಂಹರಿಸಿ, ಬಳಿಕ ಇನ್ನೋರ್ವ ಬ್ರಹ್ಮನನ್ನು ಸೃಷ್ಟಿಸುವೆ. ನನ್ನನ್ನು ತಡೆಯಬೇಡ’ ಎಂದ.

‘ಓ ಪರಮೇಶ್ವರನೇ ಹಾಗೆ ಮಾಡಬೇಡ. ನಿನ್ನ ಪ್ರತಿಜ್ಞೆಯನ್ನು ಬೇರೆ ಕಾಮುಕಪುರುಷರಲ್ಲಿ ಅನುಷ್ಠಾನಗೊಳಿಸು, ಬ್ರಹ್ಮನಲ್ಲಿ ಬೇಡ. ನಮ್ಮ ಆತ್ಮಸ್ವರೂಪದಲ್ಲಿ ವಧೆಯೇ ಇಲ್ಲ. ಆತ್ಮನನ್ನು ಕೊಲ್ಲಲು ಅಸಾಧ್ಯ. ನಾವು ತ್ರಿಮೂರ್ತಿಗಳೂ ನಿನ್ನ ಸ್ವರೂಪರು, ಭಿನ್ನರಲ್ಲ. ಈ ವಿಷಯವನ್ನು ತತ್ವತ: ವಿಚಾರಮಾಡು’ ಅಂತ ಹರಿ ಹೇಳಿದಾಗ, ಶಂಕರ ‘ಬ್ರಹ್ಮನು ನನ್ನ ಆತ್ಮಸ್ವರೂಪನೆಂದು ಹೇಳಿದೆಯಲ್ಲಾ, ಅದು ಹೇಗೆ? ಪ್ರತ್ಯಕ್ಷವಾಗಿ ಇವನು ಎದುರಿಗೆ ಬೇರೆಯಾಗಿ ನಿಂತಿರುವನಲ್ಲವೇ?’ ಎನ್ನುತ್ತಾನೆ.

‘ಓ ಸದಾಶಿವ! ಬ್ರಹ್ಮನು ನಿನಗಿಂತಲೂ ಬೇರೆಯಲ್ಲ. ನೀನೂ ಬ್ರಹ್ಮನಿಗಿಂತ ಬೇರೆಯಲ್ಲ, ನಾನೂ ನಿನ್ನಿಂದ ಬೇರೆಯಲ್ಲ, ನೀನೂ ನನಗಿಂತ ಬೇರೆಯಲ್ಲ. ಸರ್ವಜ್ಞನಾದ ನೀನು ಇದೆಲ್ಲವನ್ನೂ ತಿಳಿದೇ ಇರುವೆ. ಆದರೂ ನನ್ನಿಂದ ಈ ವಿಷಯವನ್ನು ಹೇಳಿಸುತ್ತಿರುವೆ. ನಿನ್ನ ಆಜ್ಞೆಯಂತೆ ಈ ಶಿವತತ್ತ್ವವನ್ನು ಹೇಳುತ್ತಲಿರುವೆ. ಎಲ್ಲ ದೇವತೆಗಳು ಮತ್ತು ಮುನಿಗಳು ಸಾವಧಾನತೆಯಿಂದ ಕೇಳಿ’ ಎಂದ ಹರಿಯು ತ್ರಿಮೂರ್ತಿ ಸ್ವರೂಪವನ್ನು ಹೀಗೆ ವಿವರಿಸುತ್ತಾನೆ.

‘ಕಾರ್ಯ ಮತ್ತು ಕಾರಣರೂಪನೂ, ಅಂಶ ಮತ್ತು ಅಂಶಿಸ್ವರೂಪನೂ, ಜ್ಞಾನಜ್ಯೋತಿ ಪ್ರಕಾಶಸ್ವರೂಪನೂ ಪರಬ್ರಹ್ಮಸ್ವರೂಪನೂ ಆದ ನಿನ್ನ ಮೂರು ಅಂಶಗಳು ನಾವು ತ್ರಿಮೂರ್ತಿಗಳಾಗಿರುವೆವು. ಆ ಪರಮಾತ್ಮ ಸ್ವರೂಪ ಹೊರತು ಮತ್ತಾವ ವಸ್ತುವೂ ಇಲ್ಲದಿರುವಾಗ ನಾನೆಲ್ಲಿ? ನೀನಾರು? ಬ್ರಹ್ಮನಾರು? ನಾವು ಮೂವರೂ ಆ ಪರಮಾತ್ಮನ ಸ್ವರೂಪರು. ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗಾಗಿ ಬೇರೆ ಬೇರೆ ರೂಪದಿಂದಿರುವೆವು ಅಷ್ಟೇ.

‘ಲೀಲಾರುದ್ರ ರೂಪನಾದ ನೀನು, ನಿನ್ನ ಸ್ವರೂಪವನ್ನು ನೋಡಿಕೋ. ನೀನು ಸಗುಣನಾದ ಮತ್ತು ನಿರ್ಗುಣನೂ ಆದ ಪರಮೇಶ್ವರನ ಸ್ವರೂಪ. ಸಗುಣನಾದ ನಿನ್ನ ಮೂರು ಅಂಶಗಳೇ ನಾವು ತ್ರಿಮೂರ್ತಿಗಳು. ಒಂದು ಶರೀರಕ್ಕೆ ಶಿರಸ್ಸು, ಕತ್ತು, ಕೈ, ಕಾಲುಗಳೆಂಬ ಅಂಗಗಳು ಹೇಗೆ ಇರುವವೋ, ಅದರಂತೆ ನಾವು ಓರ್ವನೇ ಆದ ಪರಮೇಶ್ವರನ ಅಂಶಗಳಾಗಿರುವೆವು. ನೀನು ವ್ಯಾಪಕವೂ ಪ್ರಕಾಶಸ್ವರೂಪವೂ ಅಂತರ್ಯಾಮಿಯೂ ಅನಾದಿಯೂ ವಿಕಾರವಿಲ್ಲದುದೂ ಚರ್ಮಚಕ್ಷುಸ್ಸುಗಳಿಗೆ ಕಾಣಿಸದಿರುವುದೂ ಮಾಯಾಮಯವಾದ ಅನೇಕ ಜೀವರೂಪವುಳ್ಳದುದೂ ನಿತ್ಯವೂ ದೀರ್ಘತೆ, ಸ್ಥೂಲತೆ ಮುಂತಾದ ದ್ರವ್ಯಧರ್ಮವಿಲ್ಲದುದೂ ಆದಂತಹ ಬ್ರಹ್ಮ ವಸ್ತುವಿನ ಸ್ವರೂಪ. ಆ ಬ್ರಹ್ಮವಸ್ತುವಿನಿಂದಲೇ ಈ ಜಗತ್ತೆಲ್ಲವೂ ಜನಿಸುವುದು, ಕೆಲವು ಕಾಲ ಇರುವುದು. ಕೊನೆಯಲ್ಲಿ ಲಯವನ್ನು ಹೊಂದುವುದು’ ಎಂದು ವಿಷ್ಣು ಹೇಳಿದಾಗ ಮಹಾದೇವ ಪ್ರಸನ್ನನಾಗಿ, ಬ್ರಹ್ಮನ ತಪ್ಪನ್ನು ಕ್ಷಮಿಸಿದ. ಇಲ್ಲಿಗೆ ಸತೀಖಂಡದ ಹತ್ತೊಂಬತ್ತನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT