ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿತ್ವ ನಿರ್ಮಾಣಕ್ಕಾಗಿ ವಿವೇಕದೀಪಿನೀ

Last Updated 17 ಜನವರಿ 2020, 19:45 IST
ಅಕ್ಷರ ಗಾತ್ರ

ಅದೊಂದು ಅಪೂರ್ವವಾದ ದಿನ. ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಲಕ್ಷಾಂತರ ಮಾತೆಯರು ಏಕಕಂಠದಲ್ಲಿ ಜಗನ್ಮಾತೆಯನ್ನು ಸ್ತುತಿಸಲು ಮಕ್ಕಳು-ಮಹನೀಯರು ಸೇರಿದ್ದರು. ಮೈಸೂರು ಜಿಲ್ಲೆಯ ಕೃ.ರಾ.ನಗರದ ವೇದಾಂತಭಾರತಿಯು ಆ ಮಾಹಾಭಿಯಾನವನ್ನು ಸಂಘಟಿಸಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಸಂರಕ್ಷಕರಾದ ಯಡತೊರೆ ಶ್ರೀಮಠದ ಶಂಕರಭಾರತೀ ಮಹಾಸ್ವಾಮಿಗಳವರ ದರ್ಶನವನ್ನು ಪಡೆದು ಸಭೆಗೆ ಆಗಮಿಸಲು ದೇಶದ ನೆಚ್ಚಿನ ಪ್ರಧಾನಿ ಉದ್ಯುಕ್ತರಾಗಿದ್ದರು. ಅವರ ಕೈಗೆ ಸ್ವಾಮಿಜೀಯವರು ಒಂದು ಚಿಕ್ಕ ಪುಸ್ತಕವನ್ನು ನೀಡಿದರು. ಆ ಪುಸ್ತಕದ ಹೆಸರು ‘ವಿವೇಕದೀಪಿನೀ’. ಅದನ್ನು ಲೋಕಕ್ಕೆ ನೀಡಿದವರು ಆದಿಶಂಕರರು. ಅವರಿಂದ ರಚಿತವಾದ ಪ್ರಶ್ನೋತ್ತರ ರತ್ನಮಾಲಿಕೆಯ ಸಾರರೂಪವಾದ ಕೃತಿ ಇದಾಗಿತ್ತು. ಇದನ್ನು ಕೈಗೆತ್ತಿಕೊಂಡ ಪ್ರಧಾನಿಗಳು ಅದರಿಂದ ಪ್ರಭಾವಿತರಾದರು. ಅದರಲ್ಲಿಯ ಉಪದೇಶವಚನಗಳಿಂದ ಆಕರ್ಷಿತರಾದರು. ಕೇವಲ ಎಂಟು–ಹತ್ತು ತಿಂಗಳ ಅವಧಿಯಲ್ಲಿ ಆ ಪುಸ್ತಕವು ದೇಶದ ಸಂವಿಧಾನದಲ್ಲಿ ಉಲ್ಲೇಖಿತವಾದ 24 ಭಾಷೆಗಳಲ್ಲಿ ಅನುವಾದಗೊಂಡು ಇಂದು ಪ್ರಕಾಶನಗೊಂಡಿದೆ.

‘ಸತ್ಯವನ್ನು ಅರಿಯುವಲ್ಲಿ ಯಾವ ಯಾವ ಪ್ರಯೋಜನಗಳಿವೆಯೋ’ ಆ ಎಲ್ಲ ಪ್ರಯೋಜನಗಳು ವಿವೇಕದೀಪಿನಿಯಿಂದ ಲಭ್ಯ. ಮಾನವನು ಸಹಜವಾಗಿ ಸತ್ಯಾನ್ವೇಷ ಅಸತ್ಯವಸ್ತುಗಳನ್ನು ಬಯಸುವಾಗಲೂ ಅವುಗಳಲ್ಲಿ ಸತ್ಯತ್ವ ಬುದ್ಧಿಯಿಂದಲೇ ವ್ಯವಹಾರ ಬಯಸುತ್ತಾನೆ. ಸತ್ಯದ ಅರಿವು ಮಾನವನಿಗೆ ಪರಮಮಂಗಲವಾದ ಶಾಂತಿ-ಸಮಾಧಾನಗಳನ್ನು ನೀಡುತ್ತದೆ. ಶಾಂತವೂ, ಮಂಗಲಪ್ರದವೂ ಆದ ಉಪನಿಷದುಪದೇಶ ಮಾನವನ ಮನಸ್ಸನ್ನು ನಾನಾಗೊಂದಲಗಳಿಂದ ಮಾತ್ರ ಬಿಡಿಸಬಲ್ಲದು. ಆಶೆ, ಭಯ-ಕೋಪ-ದುಃಖ-ದುಮ್ಮಾನ-ಅಸೂಯೇ, ರಾಗ-ದ್ವೇಷ ನೈಚ್ಛಾನುಸಂಧಾನ, ತರ-ತಮಭಾವ ಮುಂತಾದ ಎಲ್ಲ ರೀತಿಯ ತಲ್ಲಣ-ತಾಪತ್ರಯಗಳಿಂದ ಬಿಡುಗಡೆಯನ್ನು ಪಡೆಯಲು ಇದು ನೆರವಾಗಬಲ್ಲದು.

ರಾಗದ್ವೇಷ ರಹಿತವಾದ ವ್ಯಕ್ತಿಗಳಿಂದ ಕೂಡಿದ ಸಮಾಜದಲ್ಲಿ ಸುಖ-ಶಾಂತಿಗಳು ನೆಲೆಸುತ್ತಿವೆ. ಇಲ್ಲಿಯ ಸೂತ್ರರೂಪದ ಉಪದೇಶಗಳನ್ನು ಆಳವಡಿಸಿಕೊಂಡಲ್ಲಿ ಮನುಷ್ಯ ಪ್ರಪಂಚವನ್ನು ಕಾಣುವ ದೃಷ್ಟಿಯೇ ಬದಲಾಗಬಲ್ಲದು, ಸಮಾಜದಲ್ಲಿ ಸಂಭವಿಸಬಹುದಾದ ಯಾವುದೇ ಘರ್ಷಣೆಗಳಿಗೆ ಅವನು ಕಾರಣನಾಗಲಾರ. ಮನುಷ್ಯ ಸ್ವಾಭಾವಿಕವಾಗಿಯೇ ಸುಖವನ್ನು ಬಯಸುತ್ತಾನೆ. ಅವನ ಈ ಸುಖದ ಬಯಕೆಗೆ ಇತಿ-ಮಿತಿಗಳಿಲ್ಲ. ಈ ವಿಶ್ವವೇ ತನಗೆ ಬೇಕೆಂಬ ಬಯಕೆ, ಇರುವ ಭೂಮಿ ಒಂದು, ಅದನ್ನು ಬಯಸುವವರು ಕೋಟಿ-ಕೋಟಿ ಜನರು. ಅಂದರೆ ಘರ್ಷಣೆ ಅನಿವಾರ್ಯ, ಇಂದ್ರಿಯಗಳ ತೃಪ್ತಿಗಾಗಿ ಮನುಷ್ಯ ಶಬ್ದ, ಸ್ಪರ್ಶ, ರೂಪ ಮುಂತಾದ ವಿಷಯಗಳನ್ನು ಬಯಸುತ್ತಾನೆ. ವಿಶ್ವದಲ್ಲಿ ಈ ವಿಷಯಗಳು ಮಿತವಾಗಿವೆ.

ಬಯಸುವವರು ಅಮಿತ. ಆದ್ದರಿಂದ ನೂಕು ನುಗ್ಗಲು-ಘರ್ಷಣೆ, ಕಲಹ, ಅಶಾಂತಿ. ಇಂಥ ವಾತಾವರಣದಿಂದ ಭೂಮಾತೆಯನ್ನು ಪಾರುಮಾಡಲು, ಪ್ರಕೃತಿಯನ್ನು ರಕ್ಷಿಸಲು ವಿವೇಕಯುಕ್ತ ವ್ಯಕ್ತಿಯಿಂದ ಮಾತ್ರ ಸಾಧ್ಯ. ವಿವೇಕಿಯಾದವನು ಸುಖವನ್ನು, ಶಾಂತಿಯನ್ನು ಹೊರಗಡೆ ಹುಡುಕುವುದಿಲ್ಲ. ತನ್ನೊಳಗೆ ನೋಡುತ್ತಾನೆ. ಅರಸುತ್ತಾನೆ. ಪ್ರಯತ್ನಶೀಲನಾಗಿ ಸಾಧನಾಪರನಾಗಿ ಆನಂದವನ್ನು ಅನುಭವಿಸುತ್ತಾನೆ. ಪರಮಚೇತನ ವಸ್ತುವಾದ ಆತ್ಮನು ಆನಂದ ಸಾಗರ, ಅವನಲ್ಲಿ ಎಲ್ಲರೂ ಒಟ್ಟಿಗೆ ಮೀಯಬಹುದು. ಈ ರೀತಿಯ ವಿವೇಕವನ್ನು ರೂಪಿಸಿಕೊಂಡವನಿಗೆ ಎಲ್ಲರೂ ಬಯಸುವ ಶಾಂತಿ ಸುಲಭವಾಗಿ ಸಿಗುತ್ತದೆ. ಅವನ ಮನಸ್ಸು ಶುದ್ಧವಾಗುತ್ತದೆ. ಈ ರೀತಿಯ ವ್ಯಕ್ತಿತ್ವಶುದ್ಧಿ ಸಮಾಜಶುದ್ಧಿಗೆ ದಾರಿದೀಪ.ಇಂಥ ವಿವೇಕವನ್ನು ‘ವಿವೇಕದೀಪಿನೀ’ ಒದಗಿಸುತ್ತದೆ.

‘ವಿವೇಕದೀಪಿನೀ’ ಕೃತಿಯಿಂದ ಪ್ರಯೋಜನವನ್ನು ಬಾಲವೃದ್ಧರ ಆದಿಯಾಗಿ ದೇಶದ ಸಮಸ್ತ ನಾಗರಿಕರು ಪಡೆಯುವಂತಾಗಬೇಕೆಂಬುದು ವೇದಾಂತಭಾರತಿಯ ಆಶಯ. ಈಗಾಗಲೇ ಪ್ರೌಢಶಾಲೆಯ ಸ್ಥರದ ವಿದ್ಯಾರ್ಥಿಗಳಾಗಿ ಬೆಂಗಳೂರು-ನಗರ-ಗ್ರಾಮಾಂತರ ವ್ಯಾಪ್ತಿಯ ಸಾವಿರಾರು ವಿದ್ಯಾ ಸಂಸ್ಥೆಗಳು ಶಿಕ್ಷಣ ಸಮೂಹ ಸಂಸ್ಥೆಗಳು ಕೈ ಜೋಡಿಸಿವೆ. ಸಾವಿರಾರು ಮಾತೆಯರು ಮಹನೀಯರು ಕಳೆದ ಆರೇಳು ತಿಂಗಳುಗಳಿಂದ ಶ್ರಮವಹಿಸಿ ಶಾಲಾ-ಕಾಲೇಜುಗಳಲ್ಲಿ ಬೋಧಿಸುತ್ತಿದ್ದಾರೆ. ಕರ್ನಾಟಕ ಸರ್ಕಾರವೂ ಸಹ ಇದರ ಬೋಧನೆಗಾಗಿ 2007–08ರಲ್ಲಿ ಅವಕಾಶವನ್ನು ಕಲ್ಪಿಸಿತ್ತು. ಪುನಃ ಈಗಲೂ ಅನುಮತಿಯನ್ನು ನೀಡಿದೆ.

ಶನಿವಾರ ಬೆಂಗಳೂರು ಅರಮನೆ ಮೈದಾನದ ‘ಶ್ರೀಕೃಷ್ಣವಿಹಾರ’ದಲ್ಲಿ ವಿವೇಕದೀಪಿನೀ ಮಹಾಸಮರ್ಪಣೆ ನಡೆಯಲಿದೆ. ಸಮಯ: ಮಧ್ಯಾಹ್ನ 12.30ರಿಂದ 3 ಗಂ. ವರೆಗೆ. ಶಂಕರಭಾರತೀ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಅನುಗ್ರಹವಚನ ನೀಡುತ್ತಾರೆ. ಕೇಂದ್ರ ಗೃಹಖಾತೆ ಸಚಿವ ಅಮಿತ್‌ ಶಾ ಮತ್ತು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಮುಖ್ಯ ಅಭ್ಯಾಗತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT