ಮಂಗಳವಾರ, ನವೆಂಬರ್ 29, 2022
21 °C

ವಾರ ಭವಿಷ್ಯ 25-9-2022ರಿಂದ 01-10-2022ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಮೇಷ ರಾಶಿ(ಅಶ್ವಿನಿ ಭರಣಿ ಕೃತಿಕ 1)

ಕಾರ್ಯಕ್ಷೇತ್ರದಲ್ಲಿನ ಸನ್ನಿವೇಶಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವಿರಿ. ಕೆಲವು ವಿಚಾರಗಳನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿ ಅಪಾರ್ಥ ಕಲ್ಪಿಸುವಿರಿ. ದೈನಂದಿನ ರೀತಿ ರಿವಾಜುಗಳನ್ನು ಉಳಿಸಿಕೊಳ್ಳಲು ಬಹಳ ಹರಸಾಹಸಪಡುವಿರಿ. ಹೊಸ ಅವಕಾಶಗಳು ಒದಗಿ ಬರುವುದರಿಂದ ನಿಯೋಜಿತ  ಕೆಲಸವನ್ನು ಆಸಕ್ತಿಯಿಂದ ಒಪ್ಪಿಕೊಳ್ಳುವಿರಿ. ಹಣದ ಒಳಹರಿವು ನಿಮ್ಮ ಎಣಿಕೆಯಷ್ಟು ಇರುತ್ತದೆ. ಉದ್ದಿಮೆಯನ್ನು ಸ್ಥಾಪಿಸಲು ಬಹಳ ಯತ್ನ ಪಡುವಿರಿ. ಇದಕ್ಕೆ ನಿಮ್ಮ ಸ್ನೇಹಿತರ ಸಹಕಾರ ಖಂಡಿತ ದೊರೆಯುತ್ತದೆ. ಪ್ರಿಯ ವ್ಯಕ್ತಿಗಳ ಆಗಮನದಿಂದಾಗಿ ಮನೆಯಲ್ಲಿ ಬಹಳ ಸಂತೋಷವಿರುತ್ತದೆ. ಹೆಚ್ಚು ಹಣಗಳಿಕೆಯ ಆಸೆಯಿಂದ ಧನಮೂಲವನ್ನು ಕಳೆದುಕೊಳ್ಳಬೇಡಿರಿ. ಸರಿಯಾಗಿ ವಿಚಾರ ಮಾಡಿ ಹಣ ಹೂಡಿಕೆ ಮಾಡಿರಿ.

ವೃಷಭ ರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ವಾಹನಗಳ ಬಿಡಿಭಾಗಗಳನ್ನು ತಯಾರು ಮಾಡುವ ಕಂಪನಿಗಳಿಗೆ ವ್ಯವಹಾರ ಹೆಚ್ಚುತ್ತದೆ ಮತ್ತು ಲಾಭವೂ ಬರುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನಕ್ಕಾಗಿ ಉತ್ತಮ ಅವಕಾಶಗಳು ದೊರೆಯುತ್ತವೆ. ಸ್ವತ್ತುಗಳ ವಿವಾದಗಳಲ್ಲಿ  ಬಂಧುಗಳೊಡನೆ ಸೌಹಾರ್ದ ರೀತಿಯ ಮಾತುಕತೆಯಿಂದ ಲಾಭಕರ ನಿರ್ಣಯಗಳು ಮತ್ತು ನಿರ್ಧಾರಗಳು ಹೊರಬರುತ್ತವೆ. ಆರ್ಥಿಕ ಸ್ಥಿತಿಯು ಸದೃಢವಾಗಿರುತ್ತದೆ. ಆರ್ಥಿಕ ಪ್ರಗತಿಗಾಗಿ ಹೊಸ ಹೊಸ ಮಾರ್ಗಗಳ ಬಗ್ಗೆ ಆಲೋಚನೆಗಳನ್ನು ಮಾಡುವಿರಿ. ತಾಯಿಯೊಡನೆ ಮುಸುಕಿನ ಗುದ್ದಾಟ ನಡೆಯಬಹುದು. ಸರ್ಕಾರಿ ವ್ಯವಹಾರಗಳಲ್ಲಿ ಹಣ ತೊಡಗಿಸಿರುವವರಿಗೆ ಹೆಚ್ಚಿನ ಲಾಭ ಸಿಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಮೇಲಧಿಕಾರಿಗಳ ಸಹಾಯದಿಂದ ಇದ್ದ ಬಿಕ್ಕಟ್ಟುಗಳು ನಿವಾರಣೆಯಾಗುತ್ತವೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಅನವಶ್ಯಕ ಮಾತುಗಳಿಂದ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಮಾತು ಕಡಿಮೆ ಮಾಡಿರಿ. ಖರ್ಚು ಹೆಚ್ಚಾದರೂ ಆದಾಯವು ಅಷ್ಟೇ ಇರುತ್ತದೆ. ಸಿನಿಮಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಹೋಟೆಲ್ ಉದ್ಯಮದವರಿಗೆ ಸ್ವಲ್ಪಮಟ್ಟಿನ ಚೇತರಿಕೆಯನ್ನು ಕಾಣಬಹುದು. ಕರಕುಶಲ ವಸ್ತುಗಳನ್ನು ತಯಾರಿಸುವವರ ಮಾರುಕಟ್ಟೆ ವಿಸ್ತರಿಸುತ್ತದೆ. ರಂಗ ಕರ್ಮಿಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ಬೇಕಾದ ವ್ಯವಸ್ಥೆಯೊಂದು ದೊರೆಯುತ್ತದೆ. ಆರಂಭಿಸಿದ ಕೆಲವು ಕೆಲಸಗಳು ನಿಧಾನವಾದರೂ ನಿಲ್ಲುವುದಿಲ್ಲ. ಹೊಟ್ಟೆಗೆ ಸಂಬಂಧಪಟ್ಟಂತೆ ಅನಾರೋಗ್ಯ ಇದ್ದವರು ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಕಾರ್ಯನಿಮಿತ್ತ ಕೈಗೊಂಡಿದ್ದ ದೂರ ಪ್ರಯಾಣದಿಂದ ಲಾಭ ಗಳಿಸುವಿರಿ. ವೆಚ್ಚದ ಮೇಲಿನ ಕಡಿತದಿಂದ ಉಳಿತಾಯವನ್ನು ಸಾಧಿಸುವಿರಿ. ಕಾರ್ಯಕ್ಷೇತ್ರಗಳಲ್ಲಿ ಕೆಲಸ ಕಾರ್ಯಗಳು ಸುಸೂತ್ರವಾಗಿ ಸಾಗುತ್ತವೆ. ಸಾಮಾಜಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಸಹೋದ್ಯೋಗಿಗಳೊಡನೆ ಉತ್ತಮ ಹೊಂದಾಣಿಕೆಯನ್ನು ಸಾಧಿಸುವಿರಿ. ಕೆಲಸದ ಒತ್ತಡ ಕಡಿಮೆಯಾಗಿ ಸ್ವಲ್ಪ ನೆಮ್ಮದಿ ಅನುಭವಿಸುವಿರಿ. ನಿಮ್ಮ ಸಾತ್ವಿಕ ನಡವಳಿಕೆಯಿಂದ ಜನಪ್ರಿಯತೆಯನ್ನು ಗಳಿಸುವಿರಿ. ವಕೀಲರಿಗೆ ಉತ್ತಮ ದಾವೆಗಳು ದೊರೆತು ಕೈತುಂಬಾ ಹಣ ದೊರೆಯುತ್ತದೆ. ಸಂಸಾರದಲ್ಲಿ ಕಾವೇರಿದ ಮಾತುಗಳು ಬಂದರೂ ಸಂಗಾತಿಯೇ ಅದನ್ನು ಸಮಾಧಾನಪಡಿಸುವರು.

ಸಿಂಹ ರಾಶಿ(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಕೆಲವು ಅರೆಕಾಲಿಕ ನೌಕರರಿಗೆ ಅವರ ಸ್ಥಾನ ಭದ್ರವಾಗುವ ಸಾಧ್ಯತೆ ಇದೆ. ಮೇಲ್ವರ್ಗದ ಗುತ್ತಿಗೆದಾರರಿಗೆ ಟೆಂಡರ್‌ ಮೂಲಕ ಗುತ್ತಿಗೆ ಪಡೆಯುವ ಎಲ್ಲಾ ಅವಕಾಶ ಸಿಗುತ್ತದೆ. ಕೃಷಿಕರ ವ್ಯವಹಾರದಲ್ಲಿ ಲಾಭ ಕಾಣಬಹುದು. ಭೂ ವ್ಯವಹಾರಗಳಲ್ಲಿ ನಿಮ್ಮ ಕರಾರಿಗೆ ಹೆಚ್ಚಿನ ಬೆಂಬಲ ದೊರೆತು ಹೆಚ್ಚು ಲಾಭವಾಗುತ್ತದೆ. ರಾಜಕಾರಣಿಗಳು ವಿವಾದಾತ್ಮಕ ವಿಷಯಗಳ ಬಗ್ಗೆ ಅಭಿಪ್ರಾಯ ನೀಡದಿರುವುದು ಬಹಳ ಉತ್ತಮ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಆಸ್ತಿ ಕೊಳ್ಳುವ ವಿಚಾರಗಳು ನನೆಗುದಿಗೆ ಬೀಳಬಹುದು. ತಂದೆಯ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವನ್ನು ಕಾಣಬಹುದು. ಸಂಗಾತಿ ಕಡೆಯವರಿಂದ ಸಾಕಷ್ಟು ಸಹಾಯ ಒದಗಿಬರುತ್ತದೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಅಪೂರ್ವ ವಸ್ತುಗಳನ್ನು ಸಂಗ್ರಹ ಮಾಡಲು ಅಲ್ಪರ ಸಹವಾಸ ಮಾಡಬೇಡಿರಿ. ಮನೆಯ ಅಲಂಕಾರಕ್ಕಾಗಿ ಸ್ವಲ್ಪ ಹಣವನ್ನು ಖರ್ಚು ಮಾಡುವಿರಿ. ವಾಹನ ವ್ಯಾಪಾರ ಮಾಡುವವರಿಗೆ ಸ್ವಲ್ಪಮಟ್ಟಿನ ಅಭಿವೃದ್ಧಿ ಇರುತ್ತದೆ. ಈ ಹಿಂದೆ  ಹೂಡಿಕೆ ಮಾಡಿದ್ದ ಹಣ ಈಗ ಇಡಿ ಗಂಟಾಗಿ ಒದಗಿ ಬರುತ್ತದೆ. ಇದನ್ನು ಬಳಸಿ ಹಳೆಯ ಸಾಲಗಳನ್ನು ತೀರಿಸಿಕೊಳ್ಳಬಹುದು. ಆಸ್ತಿಯ ವಿಚಾರದಲ್ಲಿ ಹಣ ಮೋಸಹೋಗುವ ಸಾಧ್ಯತೆಗಳು ಕಾಣುತ್ತಿವೆ, ಎಚ್ಚರ. ಸಂಗಾತಿಯ ದುಂದುವೆಚ್ಚ ನಿಮಗೆ ಬಿಸಿತುಪ್ಪವಾಗಿ ಪರಿಣಮಿಸುತ್ತದೆ. ವಿದೇಶದಲ್ಲಿರುವ ಮಕ್ಕಳಿಂದ ಧನಸಹಾಯ ಸಿಗುವ ಸಾಧ್ಯತೆಯಿದೆ. ವೈಯಕ್ತಿಕ ಜೀವನದಲ್ಲಿನ ವಿಚಾರಗಳನ್ನು ಸ್ಪಷ್ಟಪಡಿಸಿಕೊಳ್ಳುವ ದಿಕ್ಕಿನಲ್ಲಿ ಗಣ್ಯರೊಂದಿಗೆ ಸಂಭಾಷಣೆಯನ್ನು ಮಾಡಬೇಕಾದೀತು.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಕ್ರೀಡಾಪಟುಗಳಿಗೆ ತಮ್ಮ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವುದಕ್ಕಾಗಿ ಹೆಚ್ಚಿನ ಹಣ ದೊರೆಯುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಕ್ರೋಡೀಕರಣ ಮಾಡುವಿರಿ. ಕಣ್ಣಿನ ತೊಂದರೆ ಅಥವಾ ರಕ್ತದಲ್ಲಿನ ತೊಂದರೆಗಳನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ವಿದೇಶಿ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಅನಿರೀಕ್ಷಿತ ಅವಕಾಶ ಒದಗಿ ವ್ಯವಹಾರ ವಿಸ್ತರಿಸುತ್ತದೆ. ತಂದೆಯ ವ್ಯವಹಾರದಲ್ಲಿ ನಿಮಗೆ ಪಾಲು ದೊರೆಯುವ ಸಾಧ್ಯತೆಗಳಿವೆ. ಸಂಗಾತಿಗೆ ವೃತ್ತಿಯಲ್ಲಿ ಆದಾಯ ಹೆಚ್ಚಳವಾಗುವ ಸಾಧ್ಯತೆಗಳಿವೆ. ವೃತ್ತಿ ನೈಪುಣ್ಯತೆ ಇರುವ ನೌಕರರಿಗೆ ವಿಶೇಷ ಸ್ಥಾನಮಾನ ದೊರೆಯಬಹುದು. ಯಾವುದೋ ವಿಚಾರದಲ್ಲಿ ವಿರೋಧಿಗಳ ಬಾಯಿಗೆ ಸಿಕ್ಕಿ ಬೀಳುವ ಸಾಧ್ಯತೆ ಇದೆ, ಎಚ್ಚರ ವಹಿಸಿರಿ.

ವೃಶ್ಚಿಕ ರಾಶಿ( ವಿಶಾಖಾ 4  ಅನುರಾಧ ಜೇಷ್ಠ)  

ರೇಷ್ಮೆ ಬೆಳೆಗಾರರಿಗೆ ಉತ್ತಮ ಆದಾಯ ಬರುವ ಸಾಧ್ಯತೆ ಇದೆ. ರೇಷ್ಮೆ ಬಟ್ಟೆಯನ್ನು ನೇಯುವ ಕೆಲಸವನ್ನು ಮಾಡುವವರಿಗೆ ಬೇಡಿಕೆ ಹೆಚ್ಚಬಹುದು. ವಿದ್ಯಾರ್ಥಿಗಳಿಗೆ ವಿಶೇಷ ರೀತಿಯ ಸೌಲಭ್ಯ ಒದಗಿ ಬರುವ ಸಾಧ್ಯತೆ ದಟ್ಟವಾಗಿದೆ. ಜವಳಿ ವ್ಯಾಪಾರಸ್ಥರಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. ಪಾಲುದಾರಿಕೆಯಿಂದ ಹೊರಗಡೆ ಇದ್ದ ವ್ಯಾಪಾರದಿಂದ ಹೆಚ್ಚು ಲಾಭ ಬರಬಹುದು. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗಬೇಕಾಗಿದ್ದ ಸವಲತ್ತುಗಳು ಈಗ ಸಿಗುವ ಸಾಧ್ಯತೆಗಳಿವೆ. ಆಸ್ತಿ ಅಭಿವೃದ್ಧಿಗಾಗಿ ಸಾಕಷ್ಟು ಹಣ ಖರ್ಚು ಮಾಡುವಿರಿ. ಮನೆಯ ಜವಾಬ್ದಾರಿಯನ್ನು  ಯೋಗ್ಯ ರೀತಿಯಲ್ಲಿ ನಿಭಾಯಿಸಿ ಹಿರಿಯರ ಹೊಗಳಿಕೆಗೆ ಪಾತ್ರರಾಗುವಿರಿ. ವಿದೇಶದಲ್ಲಿ ಆಸ್ತಿಯನ್ನು ಮಾಡುವ ಉದ್ದೇಶವಿದ್ದವರಿಗೆ ಈಗ ಮಾಡುವ ಅನುಕೂಲಗಳು ದೊರೆಯುತ್ತವೆ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1  )

ಮಕ್ಕಳಿಗೆ ಓದಿನಲ್ಲಿ ಆಸಕ್ತಿಯನ್ನು ಪೋಷಿಸುವ ಸಲುವಾಗಿ ಹೆಚ್ಚಿನ ಧನವ್ಯಯ ಮಾಡುವಿರಿ. ಹೆಚ್ಚು ಜನಾನುರಾಗಿಯಾಗಿರಲು ಪ್ರಯತ್ನ ಪಡುವಿರಿ. ಮಾತೃ ವರ್ಗದವರಿಂದ ನಿಮ್ಮ ಕೆಲಸಗಳಿಗೆ ಸಾಕಷ್ಟು ಸಹಾಯ ದೊರೆಯುತ್ತದೆ. ವೈಜ್ಞಾನಿಕ ಸಂಶೋಧನೆಗಳನ್ನು ಮಾಡುತ್ತಿರುವವರಿಗೆ ಬೇಕಾದ ಸೂಕ್ತ ಸವಲತ್ತುಗಳು ದೊರೆಯುತ್ತವೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಮಹಿಳೆಯರ ಪ್ರಗತಿಯು ಉತ್ತಮವಾಗಿರುತ್ತದೆ. ಒಟ್ಟು ಕುಟುಂಬದವರ ಶ್ರಮದಿಂದ ಕುಟುಂಬದ ಏಳಿಗೆ ಉನ್ನತಕ್ಕೆ ಏರುವ ಸಾಧ್ಯತೆ ಇದೆ. ವಂಶಪಾರಂಪರಿಕ ವ್ಯವಹಾರಗಳನ್ನು ಮುಂದುವರಿಸುವುದರಿಂದ ಸ್ವಲ್ಪಮಟ್ಟಿನ ಲಾಭ ಕಾಣಬಹುದು. ಸರ್ಕಾರಿ ವೃತ್ತಿಯಲ್ಲಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ    ಧನಿಷ್ಠ 1.2)  

ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತವೆ. ಮಕ್ಕಳ ಸಂತೋಷಕ್ಕಾಗಿ ಕರಕುಶಲ ವಸ್ತುಗಳನ್ನು ಖರೀದಿ ಮಾಡುವಿರಿ. ಪ್ರಯಾಣದಲ್ಲಿ ಗಣ್ಯವ್ಯಕ್ತಿಗಳ ಪರಿಚಯವಾಗಿ ಅವರಿಂದ ನಿಮಗೆ ಪ್ರಯಾಣದಲ್ಲಿ ಅನುಕೂಲವಾಗುತ್ತದೆ. ಸ್ವತಂತ್ರ ವೃತ್ತಿಯನ್ನು ಮಾಡುತ್ತಿರುವವರಿಗೆ ನಿರಂತರ ಆದಾಯ ಇದ್ದರೂ ಖರ್ಚುವೆಚ್ಚಗಳ ಬಗ್ಗೆ ಜಾಗರೂಕತೆ  ಅಗತ್ಯ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಾಹನ ರಿಪೇರಿ ಮಾಡುವವರಿಗೆ ಅಧಿಕ ಕೆಲಸ  ದೊರೆತು ಸಂಪಾದನೆ ಹೆಚ್ಚುತ್ತದೆ. ಮಕ್ಕಳ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದು. ಹೊಸ ರೀತಿಯ ವ್ಯವಹಾರಕ್ಕಾಗಿ ಪಾಲ್ಗೊಳ್ಳಲು ನಿಮಗೆ ಆಹ್ವಾನ ಬರಬಹುದು. ಬಹಳ ದಿನಗಳಿಂದ ನಿವೇಶನಕ್ಕಾಗಿ ಕಾಯುತ್ತಿದ್ದ ನಿಮಗೆ ಈಗ ನಿವೇಶನ ಸಿಗುವ ಸಾಧ್ಯತೆ ಇದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಆಸೆ ಪಡುತ್ತಿದ್ದ ವಾಹನ ಖರೀದಿ ಮಾಡಲು ಮುಂದಾಗುವಿರಿ. ಅದಕ್ಕೆ ಬೇಕಾದ ಸಾಲ ಸೌಲಭ್ಯಗಳು ದೊರೆಯುತ್ತವೆ. ಹಿರಿಯರಿಗೆ ಗಣ್ಯರ ಜೊತೆ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ಯೋಗವಿದೆ. ಸಾಂಸ್ಕೃತಿಕ ಕ್ಷೇತ್ರದ ಉನ್ನತಿಗಾಗಿ ಶ್ರಮ ಪಟ್ಟಿದ್ದಕ್ಕೆ ಗೌರವ ದೊರೆಯಬಹುದು. ಸರ್ಕಾರಿ ಮಟ್ಟದ ಕೆಲಸ ಕಾರ್ಯಗಳಲ್ಲಿ ಮುನ್ನಡೆಯನ್ನು ಕಾಣಬಹುದು. ನಿಮ್ಮ ಆದಾಯವು ಚೇತರಿಕೆಯತ್ತ ಸಾಗುತ್ತದೆ. ವಿದ್ಯಾರ್ಥಿಗಳಿಗೆ ಹೊಸ ವಿಷಯಗಳ ಪರಿಚಯದಿಂದ ಸಾಕಷ್ಟು ಸ್ಫೂರ್ತಿ ಮತ್ತು ಕಲಿಯಲು ಉತ್ಸಾಹ ಬರುತ್ತದೆ. ವೈದ್ಯಕೀಯ ಸಂಶೋಧಕರಿಗೆ ಅನಿರೀಕ್ಷಿತ ಫಲಿತಾಂಶ ಒದಗಿಬಂದು ಉತ್ತಮ ಹೆಸರು ಬರುವ ಸಾಧ್ಯತೆಗಳಿವೆ. ವಿದೇಶಕ್ಕೆ ಯಂತ್ರಗಳ ಬಿಡಿಭಾಗಗಳನ್ನು ರಫ್ತು ಮಾಡುವವರಿಗೆ ಉತ್ತೇಜನ ದೊರೆತು ಹೊಸ ಆದೇಶಗಳು ದೊರೆಯುವ ಸಾಧ್ಯತೆಗಳಿವೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಹಿರಿಯರ ಮಾತಿನಂತೆ ನಡೆದಲ್ಲಿ ಹೆಚ್ಚಿನ ಗೌರವ ದೊರೆಯುತ್ತದೆ. ಪ್ರೀತಿಪಾತ್ರರೊಂದಿಗೆ ವಿಹಾರಕ್ಕಾಗಿ ಹೋಗಿ ಬರುವ ಸಾಧ್ಯತೆಗಳಿವೆ. ಭೂಮಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುವವರಿಗೆ ಲಾಭ ಹೆಚ್ಚುವ ಸಾಧ್ಯತೆಗಳಿವೆ. ಕಾರ್ಯಕ್ಷೇತ್ರದಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಹಿತಶತ್ರುಗಳು ಹೆಚ್ಚಾಗಬಹುದು. ಮಿಶ್ರಲೋಹಗಳ ತಯಾರಕರಿಗೆ ಮಾರುಕಟ್ಟೆ ವಿಸ್ತಾರವಾಗುವ ಯೋಗವಿದೆ. ಸಂಗೀತ ವಿದ್ವಾಂಸರಿಗೆ ಸಾಕಷ್ಟು ಮನ್ನಣೆ ಇರುತ್ತದೆ. ಉತ್ತಮ ಆದಾಯವಿದ್ದರೂ ಖರ್ಚು ಹೆಚ್ಚಾಗುವ ಸಂದರ್ಭವಿದೆ. ಹೊಸ ಆಭರಣಗಳ ಖರೀದಿ ಮಾಡಬಹುದು.  ರಾಜಕೀಯ ಕ್ಷೇತ್ರದಲ್ಲಿರುವವರಿಗೆ ತುರುಸಿನ ಕೆಲಸಗಳನ್ನು ಮಾಡಲು ಮೇಲಿನಿಂದ ಆದೇಶ ಬರಬಹುದು. ಆರೋಗ್ಯದ ಕಡೆ ಸ್ವಲ್ಪ ಹೆಚ್ಚಿನ ಗಮನ ಕೊಡಿರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.