ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಮಗನ ದುರ್ಗುಣ ತಿಳಿದ ಯಜ್ಞದತ್ತ

ಭಾಗ 111
ಅಕ್ಷರ ಗಾತ್ರ

ದಾರಿ ತಪ್ಪಿದ ಮಗ ಗುಣನಿಧಿಗೆ ತಾಯಿ ಬುದ್ಧಿಮಾತನ್ನು ಸಾಕಷ್ಟು ಹೇಳುತ್ತಾಳೆ. ಕೆಟ್ಟಜನರ ಸಹವಾಸ ಬಿಟ್ಟುಬಿಡು, ಒಳ್ಳೆಯ ಜನರ ಸಹವಾಸ ಮಾಡು, ಸದ್ವಿದ್ಯೆಗಳಲ್ಲಿ ಮನಸ್ಸನ್ನಿಡು, ಸಜ್ಜನರ ಆಚರಣೆಗಳನ್ನು ಅನುಸರಿಸು. ರೂಪದಲ್ಲಿ ನಿಮ್ಮ ತಂದೆಗೆ ಸರಿಹೋಲುವಂತೆಯೇ ಯಶಸ್ಸಿನಲ್ಲಿಯೂ, ಕುಲಶೀಲಗಳಲ್ಲಿಯೂ ಒಳ್ಳೆಯ ಕೀರ್ತಿ ಸಂಪಾದಿಸು. ಉತ್ತಮ ಕುಲದಲ್ಲಿ ಹುಟ್ಟಿ, ನೀಚ ಕೆಲಸ ಮಾಡಲು ನಿನಗೆ ನಾಚಿಕೆಯಾಗುವುದಿಲ್ಲವೇ? – ಹೀಗೆ ಕಟುಮಾತುಗಳಲ್ಲಿ ಹೇಳುತ್ತಾಳೆ.

ನಿನ್ನ ಕೆಟ್ಟ ನಡತೆಯನ್ನು ಬಿಟ್ಟುಬಿಡು. ಇಲ್ಲದಿದ್ದರೆ ನಾವೆಲ್ಲಾ ಸಮಾಜದಲ್ಲಿ ತಲೆತಗ್ಗಿಸುವಂತಾಗುತ್ತದೆ. ನಿನಗೂ ಹತ್ತೊಂತ್ತು ವರ್ಷಗಳು ತುಂಬಿದುವು. ನಿನ್ನ ಪತ್ನಿಗೂ ಹದಿನಾರು ವರ್ಷಗಳಾಯಿತು. ಸುಶೀಲಳಾದ ಅವಳನ್ನು ಪರಿಗ್ರಹಿಸು. ತಂದೆಯಲ್ಲಿ ಭಕ್ತಿಯಿಟ್ಟು ಗೌರವದಿಂದ ನಡೆ. ನಿನ್ನ ಮಾವನೂ ತಮ್ಮ ಗುಣಗಳಿಂದ, ನಡತೆಯಿಂದ ಎಲ್ಲೆಡೆ ಗೌರವಕ್ಕೆ ಪಾತ್ರರಾಗಿರುವರು. ಅವರ ಅಳಿಯ ಇಂಥ ಕೆಟ್ಟವನು ಅಂತ ಜನ ಆಡಿಕೊಳ್ಳದಂತೆ ಸರಿಯಾಗಿ ನಡೆದುಕೋ.

ನಿನ್ನ ಸೋದರಮಾವಂದಿರೆಲ್ಲರೂ ವಿದ್ಯೆಯಿಂದಲೂ ಶೀಲದಿಂದಲೂ ಮನೆತನದಿಂದಲೂ ತಮಗೆ ಸಮಾನರಾರೂ ಇಲ್ಲವೆಂಬಂತೆ ಬದುಕಿದವರು. ಅವರನ್ನು ನೋಡಿಯಾದರೂ ಉತ್ತಮ ನಡತೆ ಕಲಿಯಬಾರದೆ? ನೀನು ಅವರಿಗೂ ಹೆದರುವುದಿಲ್ಲವೇ? ಮಾತಾ-ಪಿತೃವಂಶಗಳೆರಡರಿಂದಲೂ ನೀನು ಶುದ್ಧನಾದವನಲ್ಲವೇ? ನೆರೆಹೊರೆಯ ಮನೆಗಳಲ್ಲಿರುವ ಹುಡುಗರನ್ನು ನೋಡು, ಅಷ್ಟೇಕೆ? ನಿಮ್ಮ ಮನೆಯಲ್ಲೇ ನಿಮ್ಮ ತಂದೆಯ ಬಳಿ ಓದುತ್ತಿರುವ ವಿನೀತರಾದ ಶಿಷ್ಯರನ್ನು ನೋಡು. ಅವರೆಲ್ಲಾ ಎಷ್ಟು ಒಳ್ಳೆಯ ಬುದ್ಧಿ ಕಲಿತು, ಒಳ್ಳೆಯ ಮಕ್ಕಳೆನಿಸಿಕೊಂಡಿದ್ದಾರೆ. ಅವರನ್ನು ನೋಡಿಯಾದರೂ ನಿನಗೆ ಬುದ್ಧಿ ಬರುವುದಿಲ್ಲವೇ?

ನಮ್ಮ ನಾಡಿನ ಅರಸರಿಗೇನಾದರೂ ನಿನ್ನ ಕೆಟ್ಟ ನಡತೆ ಗೊತ್ತಾದರೆ ನಿನ್ನ ತಂದೆಯ ಮೇಲಿನ ನಂಬುಗೆಯೆಲ್ಲವನ್ನೂ ಬಿಟ್ಟು, ಅವರ ಮಾಸಾಶನ ಮುಂತಾದ ಜೀವನಮಾರ್ಗವನ್ನೇ ಕಸಿದುಕೊಳ್ಳುತ್ತಾರೆ. ಈಗಲೂ ಜನರು ಇನ್ನೂ ಹುಡುಗತನವೆಂದು ನಿನ್ನ ಅವಿವೇಕ ವರ್ತನೆಯನ್ನು ಸಹಿಸಿಕೊಂಡಿದ್ದಾರೆ. ಮುಂದೆಯೂ ಹೀಗೆಯೇ ಇದ್ದರೆ ನಿನ್ನ ದೀಕ್ಷಿತತನವನ್ನೇ ಕಳೆದುಕೊಂಡು, ಜನರಿಂದ ಛೀ-ಥೂ ಅಂತ ಉಗಿಸಿಕೊಳ್ಳಬೇಕಾಗುತ್ತದೆ. ಸಿಕ್ಕಿದವರೆಲ್ಲರೂ, ಬಾಯಿಗೆ ಬಂದಂತೆ ನಿನ್ನ ತಂದೆಯನ್ನೂ ನನ್ನನ್ನೂ ಆಡಬಾರದ ಮಾತುಗಳನ್ನು ಆಡಿ ಹೀನಾಯವಾಗಿ ಮಾನ ಕಳೆಯುವರು.

ಶ್ರುತಿ-ಸ್ಮೃತಿ ವಿಹಿತವಾದ ಧರ್ಮಮಾರ್ಗದಲ್ಲೇ ನಡೆಯುವ ನಿನ್ನ ತಂದೆ ಸ್ವಲ್ಪವೂ ಪಾಪ ಮಾಡಿದವರಲ್ಲ. ಹೀಗಿದ್ದರೂ ನಿನ್ನಂತಹ ಕೆಟ್ಟ ಮಗ ನನ್ನ ಹೊಟ್ಟೆಯಲ್ಲಿ ಹುಟ್ಟಬೇಕೇ? ಅಯ್ಯೋ! ವಿಧಿಯೇ. ನಿನ್ನ ಬಲವೇ ಬಲ. ಅದನ್ನು ಮೀರಿದವರಾರು? – ಅಂತ ಆ ತಾಯಿ ರೋದಿಸುತ್ತಾ ಬುದ್ಧಿ ಹೇಳುತ್ತಿದ್ದರೂ ದುಷ್ಟ ಗುಣನಿಧಿ ತನ್ನ ಕೆಟ್ಟ ಚಾಳಿಯನ್ನು ಬಿಡಲಿಲ್ಲ. ಯಾವ ಉಪದೇಶವೂ ಅವನ ತಲೆಗೆ ಹಿಡಿಸದಷ್ಟರ ಮಟ್ಟಿಗೆ ದುರ್ವ್ಯಸನಗಳಲ್ಲಿ ಆಸಕ್ತನಾಗಿಬಿಟ್ಟಿದ್ದ.

ಬೇಟೆ, ಮದ್ಯ, ಪಿಸುಣತನ, ಸುಳ್ಳು, ಕಳ್ಳತನ, ಜೂಜು, ವೇಶ್ಯೆ ಸಹವಾಸಗಳಂಥ ದುರ್ವ್ಯಸನಗಳಿಗೆ ಸಿಲುಕಿದವರು ಒಳ್ಳೆಯ ಬುದ್ಧಿ ಕಲಿಯಲಾರರು. ಅದರಂತೆ ಕೆಟ್ಟ ಬುದ್ಧಿಯುಳ್ಳ ಗುಣನಿಧಿಗೆ ತಾಯಿ ಹಣ ಕೊಡದಿದ್ದಾಗ, ಮನೆಯಲ್ಲಿ ಕಣ್ಣಿಗೆ ಕಾಣುವ ವಸ್ತುಗಳೆಲ್ಲವನ್ನೂ ಕದ್ದೊಯ್ದು ಜೂಜಾಡಿ ಕಳೆಯುತ್ತಿದ್ದ. ಇದರಿಂದ ಆತನ ಮನೆಯಲ್ಲಿದ್ದ ಪಾತ್ರೆ-ಪದಾರ್ಥ, ಬಟ್ಟೆ-ಬರೆಗಳೆಲ್ಲವೂ ಜೂಜುಕೋರರ ಪಾಲಾಗುತ್ತಿದ್ದವು.
ಒಂದು ದಿನ ಮನೆಯಲ್ಲಿದ್ದ ತನ್ನ ತಂದೆಯ ಕೈಬೆರಳಿನ ಉಂಗುರವನ್ನು ಕದ್ದು ಜೂಜುಕೋರನೊಬ್ಬನ ಕೈಗೆ ಕೊಟ್ಟು ಜೂಜಾಡಿ ಸೋತ. ಯಜ್ಞದತ್ತದೀಕ್ಷಿತ ತನ್ನ ಕಳೆದುಹೋದ ಉಂಗುರ ಹುಡುಕುವಾಗ ಜೂಜುಕೋರನೊಬ್ಬನ ಕೈಲಿರುವುದನ್ನು ಅಕಸ್ಮಾತ್ತಾಗಿ ಕಂಡ. ‘ನಿನಗೆ ಈ ಉಂಗುರ ಎಲ್ಲಿ ಸಿಕ್ಕಿತು’ ಎಂದು ಯಜ್ಞದತ್ತ ಬಲವಂತಪಡಿಸಿ ಕೇಳಿದಾಗ ಆ ಜೂಜುಗಾರ, ‘ಅಯ್ಯಾ ದೀಕ್ಷಿತರೆ! ನನ್ನನ್ನೇಕೆ ವ್ಯರ್ಥವಾಗಿ ಕೇಳಿ ಪೀಡಿಸುವೆ? ನಿನ್ನ ಮಗನೇ ಕದ್ದು ನನಗೆ ಕೊಟ್ಟಿದ್ದಾನೆ. ಅಲ್ಲದೆ ನಿನ್ನೆ ತನ್ನ ತಾಯಿಯ ಸೀರೆಯನ್ನೂ ಜೂಜಿನಲ್ಲಿ ಸೋತು ನನಗೆ ಕೊಟ್ಟು ಹೋಗಿದ್ದಾನೆ’ ಎಂದಾಗ ಯಜ್ಞದತ್ತನಿಗೆ ಆಘಾತವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT