ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿಯ ತೋರಣ ಹೂರಣ

Last Updated 18 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಯುಗಾದಿ ಹೊಸವರ್ಷದ ಆರಂಭದ ದಿನ. ಬ್ರಹ್ಮ ಸೃಷ್ಟಿಯನ್ನು ಆರಂಭಿಸಿದ ದಿನವೆಂದೂ, ಶ್ರೀರಾಮನು ಅಯೋಧ್ಯೆಗೆ ಹಿಂದಿರುಗಿ ಪಟ್ಟಾಭಿಷಕ್ತನಾದ ದಿನವೆಂದೂ ಈ ದಿನವನ್ನು ಪರಿಗಣಿಸಲಾಗಿದೆ. ಚೈತ್ರಮಾಸ ವಸಂತಾಗಮನದ ಮಾಸ. ಅದಾಗ ಪಲ್ಲವಿಸಿದ ಮಾವು, ಬೇವು; ಇವುಗಳ ಜೊತೆಗೆ ಆಲೆಮನೆಯ ಬೆಲ್ಲ ಸೇರುವ ದಿನ. ಜೀವನದ ಸುಖ-ದುಃಖಗಳ ಮಿಶ್ರಣದ ಸಂಕೇತವಾಗಿ ಬೇವು-ಬೆಲ್ಲಗಳನ್ನು ಮೆಲ್ಲುವ ದಿನ. ಅಂದು ಪಂಚಾಂಗಶ್ರವಣ, ಹೊಸವರ್ಷದ ಫಲಾಫಲ, ಮಳೆಬೆಳೆಗಳ ಮುನ್ನೋಟ ಪಡೆವ ಪ್ರಯತ್ನ. ಅಭ್ಯಂಜನ, ಹೊಸ ಬಟ್ಟೆ, ಸಿಹಿಯೂಟ.

ಹಬ್ಬ ಕೇವಲ ಆಚರಣೆ, ಬಟ್ಟೆ, ಊಟಗಳಿಗಷ್ಟೇ ಸೀಮಿತವಲ್ಲ. ಇವುಗಳ ಹಿಂದಿರುವ ಭಾವದೂಟೆಯನ್ನೂ ಗ್ರಹಿಸುವ ಪ್ರಯತ್ನವನ್ನೂ ನಾವು ಮಾಡಬೇಕು. ಕೋಗಿಲೆಯ ಹಾಡಿನೊಂದಿಗೆ ದುಂಬಿಯ ಝೇಂಕಾರವೂ ಕೇಳಿಬರಬೇಕು, ಕಷ್ಟದ ನರಳುವಿಕೆಯ ಜೊತೆಗೆ ಸುಮ್ಮಾನದ ಉಲಿಯೂ ಇರಬೇಕು. ಇದನ್ನೇ ಬೇಂದ್ರೆಯವರು, ‘ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯು ತರುತಿದೆ’ ಎಂದರು. ಜೀವನ ನಿತ್ಯನೂತನಾದುದರಿಂದ ಅದು ಮತ್ತೆ ಮತ್ತೆ ಪಲ್ಲವಿಸುವುದನ್ನು ನೋಡಿ ಆನಂದಿಸಬೇಕು. ಪ್ರತಿ ಹಬ್ಬವೂ ಬದುಕಿನ ವಿಮರ್ಶೆಯ ಹೊಸ ಪುಟ; ನವಸಂಕಲ್ಪದ, ನವಶ್ರದ್ಧೆಯ ನವೀಕರಣ. ಯುಗಾದಿಯ ಸಂಕಲ್ಪವೇನಾಗಬೇಕು ಎಂಬುದನ್ನು ಕುವೆಂಪು ಅವರು ಸೊಗಸಾಗಿ ಹೇಳಿದ್ದಾರೆ: ‘ ಗತವರ್ಷದ ಮೃತಪಾಪವ ಸುಡು...ಕಳಚಲಿ ಬೀಳಲಿ ಬಾಳಿನ ಹಳೆಪೊರೆ ನವವತ್ಸರವನು ಕೂಗಿ ಕರೆ’.

ಭಾರತೀಯ ಸಂಪ್ರದಾಯದಲ್ಲಿ ಜೀವನದ ಎತ್ತರವನ್ನು ಅನ್ವೇಷಿಸುವ ಪ್ರಯತ್ನ ಹಾಸುಹೊಕ್ಕಾಗಿದೆ. ನಮ್ಮ ಹಬ್ಬಗಳೂ ಇದರಿಂದ ಹೊರತಲ್ಲ. ಬದುಕಿನ ಪಯಣದ ಸಾರ್ಥಕತೆಯನ್ನು ಕುರಿತಂತೆ ಕೆ.ಎಸ್.ನ ಹೀಗೆ ಹೇಳುತ್ತಾರೆ: ‘ಹೆಜ್ಜೆಗೊಂದು ಹೊಸ ಯುಗಾದಿ, ಚೆಲುವು ನಮ್ಮ ಜೀವನ! ನಮ್ಮ ಹಾದಿಯೋ ಅನಾದಿ, ಪಯಣವೆಲ್ಲ ಪಾವನ.’ ಪಯಣ ಪಾವನವೆನ್ನುವುದು ರಮ್ಯ ಕಲ್ಪನೆ. ಆದರೆ ವಾಸ್ತವ ಬೇರೆ ಇದೆ. ಸಾಮನ್ಯವಾಗಿ ಮನುಷ್ಯ ತನ್ನ ದುರ್ಬಲತೆಯಿಂದ ಕುಬ್ಜನಾಗುತ್ತಾನೆ. ಈ ದೌರ್ಬಲ್ಯದ ಕಾರಣದಿಂದಲೇ ಅವನು ಮಹೋದ್ದೇಶಗಳನ್ನು, ತನ್ನ ಮಹಾನತೆಯನ್ನು ಮರೆಯುತ್ತಾನೆ, ಶೋಷಣೆಗೆ ಕೈಯಿಕ್ಕುತ್ತಾನೆ. ಅಡಿಗರು ಈ ಮಿತಿಯನ್ನು ಸೊಗಸಾಗಿ ಹೇಳುತ್ತಾರೆ: ‘ ಯುಗಯುಗಾದಿಯ ತೆರೆಗಳೇಳುತಿವೆ, ಬೀಳುತಿವೆ ಹೊಸಹೊಸವು ಪ್ರತಿ ವರುಷವು; ಒಳಗೆ ಅದೋ ಕಾಣುತಿದೆ ಚೆಲುವಿರದ ನಲವಿರದ ಕೊಳೆಯ ಬೆಳೆ;- ರಂಗಮಂದಿರವು.

’ಬದುಕೆಂಬುದು ಕೂಳೆಬೆಳೆ, ಕೊಳೆಯಬೆಳೆ ಎಂಬುದನ್ನು ಒಪ್ಪಿದ ಬಳಿಕ ಅವನು ಪ್ರಗತಿಯ ಪಥ ಅರಸಬೇಕು. ಮನುಷ್ಯ ತನ್ನ ಮಿತಿಯನ್ನು ದಾಟುವ ಸವಾಲನ್ನೂ ಎದುರಿಸಬೇಕು, ಅಲ್ಪದಿಂದ ಮಹತ್ತಿಗೆ ಏರಬೇಕು ಎಂಬ ಸದಾಶಯಗಳೂ ಹಬ್ಬದಿ ಹಿಂದಿದೆ. ನಮ್ಮ ಅಲ್ಪಗಳನ್ನು ಮೀರಿದ ಮಹಾ ವಿರಾಡ್ರೂಪಿಯಾಗುವ ನಿಟ್ಟಿನಲ್ಲಿ ಯುಗಾದಿ ಒಂದು ಹೆಜ್ಜೆಯಾಗಲಿ ಎಂದು ಪು.ತಿ.ನ. ಬಯಸುತ್ತಾರೆ. ಅವರೆನ್ನುತ್ತಾರೆ: ‘ಹೊಸ ವರುಷವು ಬಹುದೆಂದಿಗೆ? ಮಹಾಪುರುಷ ತರುವಂದಿಗೆ ಅಲ್ಪಾಹಂಕಾರಗಳ ನುಂಗುತಲಿ ಮಹಾಹಂಕಾರದೊಂದಿಗೆ...’ ಅಲ್ಪ ಮತ್ತು ಮಹತ್ತಿನ ನಡುವಣ ಸಮೀಕರಣದ ಮಾತನ್ನು ನಾವು ನಿಸಾರ್ ಅಹಮದ್‌ರ ಸಾಲುಗಳಲ್ಲಿ ಕಾಣಬಹುದು: ‘ಪ್ರತಿ ಯುಗಾದಿ ವಿಜಯದೊಸಗೆ, ಸತ್ವ ರಜೋಗುಣದ ಬೆಸುಗೆ, ಅಸುರ ವಧೆಯ ವೀರಗಾಥೆ...’

ಮತ್ತೆ ಮತ್ತೆ ಬರುವ ಯುಗಾದಿಯನ್ನು ನಾವು ಎರಡು ರೀತಿಯಲ್ಲಿ ನಾವು ಪ್ರತಿಕ್ರಿಯಿಸಬಹುದು – ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ. ಎಚ್ಚೆಸ್ವಿ ಇದನ್ನು ಕಾಣಿಸುವ ಬಗೆ ಹೀಗೆ: ‘ಇನ್ನು ನಡೆ-ನಡೆದಂತೆ ಹೆಜ್ಜೆಯ ಗುರುತು, ಹೂವಾಗಿ ಅರಳಬೇಕು! ಅಥವಾ ಹಾವಾಗಿ ಹೊರಳಬೇಕು!’ ಜಿ.ಎಸ್.ಎಸ್. ಈ ನಿಟ್ಟಿನಲ್ಲಿ ನಮಗೊಂದು ಸೂತ್ರ ನೀಡುತ್ತಾರೆ: ‘ಒಳಿತೊ ಕೆಡುಕೋ ಏನು ಬಂದರು, ಇರಲಿ ಎಲ್ಲಕು ಸ್ವಾಗತ, ಸ್ಪರ್ಧೆಯಿಲ್ಲದ ಶ್ರದ್ಧೆಯೊಂದೇ, ಸ್ಫೂರ್ತಿಯಾಗಲಿ ಸಂತತ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT