ಭಾನುವಾರ, ಜೂನ್ 26, 2022
29 °C

ಅರವತ್ತರ ತಾರುಣ್ಯಕ್ಕೆ ‘ಜ್ಞಾನಜ್ಯೋತಿ’

ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

Deccan Herald

‘ಇ ಷ್ಟು ದಿನ ಬದುಕಿನ ಬೇಕುಗಳನ್ನು ಪೂರೈಸುವ ಹಂಗು ಇತ್ತು. ಈಗ ಅರವತ್ತಾಯಿತು. ಮುಂದಿನ ಜೀವಿತಾವಧಿಯನ್ನು ನನಗೆ ಬೇಕಾದಂತೆ ಬದುಕುವ ಉಮೇದು ಬಂದಿದೆ ಎಂದು ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆ ಹೇಳಿಕೊಳ್ಳಬೇಕು, ಅದರಂತೆ ಬಾಳಬೇಕು’.

– ಎಚ್.ಆರ್.ಗೋಪಾಲಕೃಷ್ಣ ರಾಮಸ್ವಾಮಿ ಅವರ ಈ ಖಡಕ್‌ ಮಾತು, ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಫರ್ಮಾನು ಹೊರಡಿಸಿದಂತಿತ್ತು.

ಬನಶಂಕರಿ ಎರಡನೇ ಹಂತದಲ್ಲಿ 1999ರಲ್ಲಿ ಆರಂಭವಾದ ‘ಜ್ಞಾನಜ್ಯೋತಿ ಹಿರಿಯ ನಾಗರಿಕರ ವೇದಿಕೆ’ಯ ಧ್ಯೇಯ ವಾಕ್ಯವೇ ಇದು. 15 ವರ್ಷಗಳಿಂದಲೂ ಪ್ರತಿ ತಿಂಗಳೂ ತಪ್ಪದೇ ನಿಗದಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಈ ವೇದಿಕೆಯ ಈಗಿನ ಅಧ್ಯಕ್ಷರು ಗೋಪಾಲಕೃಷ್ಣ ರಾಮಸ್ವಾಮಿ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯಲ್ಲಿ ಸಾಂಖ್ಯಿಕ ಸಮಿತಿ
ಯಲ್ಲಿ ಸದಸ್ಯರಾಗಿದ್ದವರು.

‘58 ಅಥವಾ 60ನೇ ವಯಸ್ಸಿನವರೆಗೂ ದುಡಿತದಲ್ಲಿ ಕಳೆಯುವ ಉದ್ಯೋಗಸ್ಥರು, ವಯೋ ಸಹಜ ದೈಹಿಕ ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುವ ಗೃಹಿಣಿಯರು ಇಳಿವಯಸ್ಸು ಎಂದರೆ ನಿಷ್ಪ್ರಯೋಜಕ ಎಂದುಕೊಂಡು ಬಿಡುತ್ತಾರೆ. ವಾಸ್ತವವಾಗಿ ಕುಟುಂಬದಿಂದ ಹೊರಗಿನ ಜಗತ್ತಿಗೆ ಅವರು ತೆರೆದುಕೊಳ್ಳಬೇಕಾದ ವಯಸ್ಸು ಆರಂಭವಾಗೋದೇ ಆಗ’ ಎಂದು ಗೋಪಾಲಕೃಷ್ಣ ವಿಶ್ಲೇಷಿಸುತ್ತಾರೆ.

‘ವಿಶಾಖಪ‌ಟ್ಟಣ ಮತ್ತು ಭಿಲಾಯ್‌ನಲ್ಲಿ ನೆಲೆಸಿದ್ದ ಉಷಾ ಮಧುರನಾಥನ್‌ ಎಂಬ ಕ್ರಿಯಾಶೀಲ ಮಹಿಳೆ 1999ರಲ್ಲಿ ಬೆಂಗಳೂರಿನ ಬನಶಂಕರಿಯಲ್ಲಿ ಬಂದು ನೆಲೆಸಿದಾಗ ಸ್ನೇಹಿತರಿಲ್ಲದೆ ಬದುಕೇ ಮರುಭೂಮಿಯಂತಾಗಿದೆ ಎಂದು ಭಾಸವಾಗುತ್ತದೆ. ಬನಶಂಕರಿ
ಯಲ್ಲಿ ‘ಕ್ಷೇಮಸಮಾಚಾರ’ ಎಂಬ ನಿಯತಕಾಲಿಕ ನಡೆಸುತ್ತಿದ್ದ ಎಂ.ಆರ್. ರಂಗಸ್ವಾಮಿ ಅವರೊಂದಿಗೆ ಈ ಬಗ್ಗೆ ಚರ್ಚಿಸಿ ಇಬ್ಬರೂ ತಮ್ಮ ಸಮಾನ ಮನಸ್ಕ ಮತ್ತು ನಿವೃತ್ತಿ ವಯಸ್ಸಿನ ನೆರೆಕರೆಯವರನ್ನು ಮಾತನಾಡಿಸಿದಾಗ ಅವರು ಹೇಳಿದ್ದೂ ಅದೇ ಮಾತನ್ನು.

ಶಾಂತಾ ವಿ.ಮೂರ್ತಿ (ಈಗಿನ ಕಾರ್ಯದರ್ಶಿ) ಮತ್ತು ಕ್ಯಾಪ್ಟನ್‌ ವಾಮನಮೂರ್ತಿ ದಂಪತಿ, ವಿನುತಾ ಗುರು, ಕೆ.ಗೋಪಾಲಕೃಷ್ಣ ಮುಂತಾದ 40ಕ್ಕೂ ಹೆಚ್ಚು ಹಿರಿಯ ನಾಗರಿಕರು ಸಭೆ ಸೇರಿ ಚರ್ಚಿಸಿದರು. ‘ಮನೆಯಿಂದಾಚೆಗೆ ಒಂದು ಆಪ್ತ ವಾತಾವರಣ ಬೇಕು’ ಎಂಬ ಒಕ್ಕೊರಲ ಅಭಿಪ್ರಾಯದ ಫಲವಾಗಿ ಅದೇ ವರ್ಷ ನವೆಂಬರ್‌ನಲ್ಲಿ ‘ಜ್ಞಾನಜ್ಯೋತಿ’ ಆರಂಭವಾಯಿತು’ ಎಂದು ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ, ಗೋಪಾಲಕೃಷ್ಣ.

ಬೆಂಗಳೂರು ದಕ್ಷಿಣ ಭಾಗದ ಹಿರಿಯ ನಾಗರಿಕರ ಚಟುವಟಿಕೆಗಳಿಗೆ ಚೈತನ್ಯಪೂರ್ಣ ವೇದಿಕೆಯಾಗಬೇಕು ಎಂಬ ಉದ್ದೇಶದಿಂದ ಆರಂಭವಾದ ಈ ವೇದಿಕೆಗೆ ಬೆಂಗಳೂರೇ ಅಲ್ಲದೆ ಇತರೆ ಜಿಲ್ಲೆಗಳಿಂದಲೂ ಸದಸ್ಯತ್ವಕ್ಕೆ ಬೇಡಿಕೆ ಬರತೊಡಗಿತು. ಇದಕ್ಕೆ ವೇದಿಕೆಯ ಚಟುವಟಿಕೆ ಮತ್ತು ಚಿಂತನೆಗಳು ಕಾರಣ. 60 ವರ್ಷ ದಾಟಿದವರಿಗೆ ಮಾತ್ರ ಸದಸ್ಯತ್ವಕ್ಕೆ ಅವಕಾಶ, ಗಂಡ ಮತ್ತು ಹೆಂಡತಿ ಇಬ್ಬರಿಗೂ ಒಂದೇ ಸದಸ್ಯತ್ವ (ಶುಲ್ಕ ₹ 550), ಪ್ರತಿ ಸಭೆ ಅಥವಾ ಕಾರ್ಯಕ್ರಮಕ್ಕೆ ಇಬ್ಬರೂ ಹಾಜರಾಗಬೇಕು ಎಂಬುದು ವೇದಿಕೆಯ ಪ್ರಮುಖ ಷರತ್ತು.

ಟೆಲಿಫೋನ್‌ ಡೈರೆಕ್ಟರಿ, ಪ್ರತಿ ಸದಸ್ಯರಿಗೆ ಗುರುತಿನ ಚೀಟಿ, ಆರೋಗ್ಯ ತಪಾಸಣೆ, ಯಾವುದೇ ಅಭಿಪ್ರಾಯ ಹಂಚಿಕೊಳ್ಳಲು ವೇದಿಕೆಯಲ್ಲಿ ಮುಕ್ತ ಅವಕಾ, ಹುಟ್ಟುಹಬ್ಬ ಆಚರಣೆ, ಪ್ರತಿ ತಿಂಗಳೂ ಕಡ್ಡಾಯ ಕಾರ್ಯಕ್ರಮ ಮತ್ತು ಅದರಲ್ಲಿ ಕಡ್ಡಾಯ ಪ್ರತಿಭಾ ಪ್ರದರ್ಶನ, ಮದುವೆಯಾಗಿ 50 ವರ್ಷ ತುಂಬಿದ ದಂಪತಿಗೆ ವಿಶೇಷ ಸತ್ಕಾರ, ವರ್ಷಕ್ಕೊಮ್ಮೆ ಆಯ್ದ ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಲು ‘ವಿದ್ಯಾ ಕಿರಣ’ ಯೋಜನೆ, ಸಂಘದ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ... ಹೀಗೆ, ಪ್ರತಿ ಹೆಜ್ಜೆಯಲ್ಲೂ ಸಮಷ್ಟಿಭಾವಕ್ಕೆ ಆದ್ಯತೆ ನೀಡಿರುವುದು ವೇದಿಕೆ 15 ವರ್ಷಗಳಿಂದಲೂ ಭಿನ್ನಾಭಿಪ್ರಾಯವಿಲ್ಲದೆ ಮುಂದುವರಿಯಲು ಕಾರಣವಾಗಿದೆ ಎಂಬುದು ಸದಸ್ಯರ ಅಭಿಪ್ರಾಯ.

ಹಿರಿಯ ನಾಗರಿಕರೆಂದರೆ ಸಮಾಜದಲ್ಲಿ ಅಸಡ್ಡೆಯ ಭಾವವನ್ನು ಸಾಮಾನ್ಯವಾಗಿ ಕಾಣುತ್ತೇವೆ. ಆದರೆ 60ರ ನಂತರ ಹೆಚ್ಚು ಕ್ರಿಯಾಶೀಲತೆ ಯಿಂದ ಇರುವುದು ತಮಗೂ, ಕುಟುಂಬಕ್ಕೂ, ಸಮಾಜಕ್ಕೂ ಉತ್ತಮ. ವಯಸ್ಸಾಗುತ್ತಿದ್ದಂತೆ ಕುಟುಂಬದ ಸದಸ್ಯರಿಗಿಂತಲೂ ಹೊರಗಿನ ಆಪ್ತರೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಲು ಬಯಸುತ್ತಾರೆ. ಇದೇ ಕಾರಣಕ್ಕೆ ತಮ್ಮ ಗುರುತಿನ ಕೆಲವರು ‘ಜ್ಞಾನಜ್ಯೋತಿ’ಯ ಸದಸ್ಯತ್ವ ಪಡೆದಿದ್ದರು ಎಂದು ಹೇಳುತ್ತಾರೆ, ಸ್ಥಾಪಕ ಸದಸ್ಯರೊಬ್ಬರು.

‘ಜ್ಞಾನಜ್ಯೋತಿ’ಯ ಸದಸ್ಯರು ಸಮಾಜಪರ ಚಿಂತನೆಯಿಂದ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಸದಸ್ಯರ ಸಲಹೆಯ ಮೇರೆಗೆ ‘ದೇಹದಾನ’ದ ಕುರಿತು ತಜ್ಞ ವೈದ್ಯರಿಂದ ಉಪನ್ಯಾಸ ಏರ್ಪಡಿಸಲಾಗಿತ್ತು. 15 ಸದಸ್ಯರು ಸ್ವಯಂಪ್ರೇರಣೆಯಿಂದ ದೇಹದಾನದ ಒಪ್ಪಿಗೆ ಪತ್ರವನ್ನು ನೀಡಿದರು. ನೇತ್ರ ದಾನಕ್ಕೆ ಒಪ್ಪಿಗೆ ಪತ್ರ ನೀಡಿರುವ ಅನೇಕ ಸದಸ್ಯರು ಈ ಸಂಘದಲ್ಲಿದ್ದಾರೆ.

ಕ್ರಿಯಾಶೀಲತೆ ಮತ್ತು ಧನಾತ್ಮಕ ಚಿಂತನೆಗಳಿದ್ದರೆ ಅರವತ್ತರಲ್ಲೂ ತಾರುಣ್ಯದ ಉಮೇದು ತಮ್ಮದಾಗಬಹುದು ಎಂಬುದಕ್ಕೆ ‘ಜ್ಞಾನಜ್ಯೋತಿ’ಯ ಸದಸ್ಯರೇ ನಿದರ್ಶನ. ಸಂಘದ ಸಂಪರ್ಕಕ್ಕೆ: 93410 73994.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು