ರಾಹುಲ್ ಗಾಂಧಿಯನ್ನು ಮಾಧ್ಯಮಗಳು ಬಿಂಬಿಸುತ್ತಿಲ್ಲ: ದೇವೇಗೌಡ ಆರೋಪ

ಬುಧವಾರ, ಏಪ್ರಿಲ್ 24, 2019
28 °C

ರಾಹುಲ್ ಗಾಂಧಿಯನ್ನು ಮಾಧ್ಯಮಗಳು ಬಿಂಬಿಸುತ್ತಿಲ್ಲ: ದೇವೇಗೌಡ ಆರೋಪ

Published:
Updated:
Prajavani

ಚಿಕ್ಕಬಳ್ಳಾಪುರ: ‘ವಯಸ್ಸಿನಲ್ಲಿ ಚಿಕ್ಕವರಾದರೂ ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸುವ ಶಕ್ತಿ ಬೆಳೆಸಿಕೊಂಡಿದ್ದಾರೆ. ಆದರೆ ಮಾಧ್ಯಮಗಳು ಅವರನ್ನು ಅಷ್ಟಾಗಿ ಬಿಂಬಿಸುತ್ತಿಲ್ಲ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅಭಿಪ್ರಾಯಪಟ್ಟರು.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯಿಲಿ ಅವರ ಪರ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಈ ದೇಶದಲ್ಲಿ 18 ವರ್ಷ ದಾಟಿದವರಿಗೆ ಮತದಾನದ ಹಕ್ಕು ಕೊಟ್ಟವರು ನಾವು. ಆದರೆ ಮೋದಿ ಅವರು ಇವತ್ತು ಯುವಜನರು ನಮ್ಮ ಪರವಾಗಿ ಇದ್ದಾರೆ ಎಂದು ಬಿಂಬಿಸುತ್ತಿದ್ದಾರೆ. ಮಾಧ್ಯಮಗಳೂ ಹಾಗೇ ಹೇಳುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇವತ್ತು ಯುವಕರು ಮೋದಿ, ಮೋದಿ ಎಂದು ಕೂಗಿಕೊಳ್ಳುವಂತಹ ಸನ್ನಿವೇಶ ಎಲ್ಲಾ ಕಡೆ ಇದೆ. ಅದಕ್ಕೆ ಕಾರಣ ಅವರಿಗೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಇದ್ದಾರೆ. ನಮ್ಮಲ್ಲಿ ಅಂತಹ ಕಾರ್ಯಕರ್ತರು ಇಲ್ಲ. ಅವರು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒಂದೆರಡು ಮಾಧ್ಯಮಗಳನ್ನು ಬಿಟ್ಟು ಇವತ್ತು ಎಲ್ಲ ದೃಶ್ಯ ಮಾಧ್ಯಮಗಳು ಮೋದಿಯಂತಹ ಬಲಿಷ್ಠ ನಾಯಕ ಈ ದೇಶಕ್ಕೆ ಬೇಕು ಎಂದು ಬಿಂಬಿಸುತ್ತಿವೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ 21 ಪಕ್ಷಗಳ ನಾಯಕರು ಒಂದೇ ವೇದಿಕೆ ಮೇಲೆ ಬರುವ ವಾತಾವರಣ ನಿರ್ಮಾಣವಾದ ಬಳಿಕ ದೇಶದಲ್ಲಿ ನಡೆದ 13 ಉಪ ಚುನಾವಣೆಗಳಲ್ಲಿ ಬಿಜೆಪಿ 12 ರಲ್ಲಿ ಸೋಲು ಕಂಡಿತು. ಆಗಲೇ ಮೋದಿ ಅವರಿಗೆ ಮುಂದೆ ಕಷ್ಟವಾಗುತ್ತದೆ ಎಂದು ಅರಿವಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಿಲ್ಲ. ಕೆಲವೆಡೆ ಗೊಂದಲವಿದೆ. ಎಲ್ಲರನ್ನೂ ಒಂದೆಡೆ ಸೇರಿಸಿದರೆ ಜಾತ್ಯತೀತ ಬದ್ಧತೆ ಇರುವ ಸರ್ಕಾರ ಬರುತ್ತದೆ’ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ‘ದೇಶದಲ್ಲಿ ಚೌಕಿದಾರ್‌ ಎನ್ನುವುದು ಈಗ ಫ್ಯಾಷನ್‌ ಆಗಿಬಿಟ್ಟಿದೆ. ಮೋದಿ ಅವರಿಗೆ ಈ ಬಿರುದು ಕೊಟ್ಟಿರುವುದು ಯಾರು? ಅವರೇ ಕರೆದುಕೊಂಡಿರುವುದು. ಯಾವಾಗ ಮೋದಿ ಚೌಕಿದಾರ್ ಎನ್ನಲು ಶುರು ಮಾಡಿದರೋ ಕರ್ನಾಟಕದಲ್ಲಿ ಎಲ್ಲರೂ ಚೌಕಿದಾರರೇ ಆಗಿದ್ದಾರೆ ಗಿರಾಕಿಗಳು’ ಎಂದು ವ್ಯಂಗ್ಯ ಮಾಡಿದರು.

‘ಅಮಿತ್ ಶಾ, ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು, ಜನಾರ್ದನ ರೆಡ್ಡಿ..ಹೀಗೆ ಜೈಲಿಗೆ ಹೋಗಿ ಬಂದವರೆಲ್ಲ ಈಗ ಚೌಕಿದಾರ್ ಆಗಿದ್ದಾರೆ. ಅಂದರೆ ಜೈಲಿ ಹೋದವರೆಲ್ಲ ಚೌಕಿದಾರರೇ? ನಾಚಿಕೆ ಆಗುವುದಿಲ್ಲವೇ ಇವರಿಗೆ? ಮಾನ, ಮರ್ಯಾದೆ ಇದೆಯಾ? ಇದಕ್ಕೆ ಬಿಜೆಪಿಯವರು ಉತ್ತರ ಹೇಳುತ್ತಾರಾ? ಬಿಜೆಪಿಯವರು ಇದಕ್ಕೆ ಉತ್ತರಿಸಲಿ’ ಎಂದು ಸವಾಲು ಹಾಕಿದರು.

‘ಇವತ್ತು ಬಿಜೆಪಿಯವರು ಅಭ್ಯರ್ಥಿಗಿಂತಲೂ ಮೋದಿ ಮುಖ ನೋಡಿ ಮತ ಹಾಕಿ ಎಂದು ಮತ ಯಾಚನೆ ಮಾಡುತ್ತಿದ್ದಾರೆ. ಅನೇಕ ಸುಳ್ಳುಗಳನ್ನು ಹೇಳಿದ ಮೋದಿ ಅವರ ಮುಖ ಏನು ನೋಡುವುದು? ಐದು ವರ್ಷಗಳಲ್ಲಿ ಮೋದಿ ಅವರು ಏನೂ ಮಾಡಿಲ್ಲ. ಅವರ ಈ ಡೋಂಗಿ ರಾಜಕಾರಣ ಎಷ್ಟು ದಿನ ನಡೆಯುತ್ತದೆ? ಬಿಜೆಪಿಯವರ ಬಣ್ಣದ ಮಾತಿಗೆ ಮರುಳಾಗಬೇಡಿ’ ಎಂದು ಸಭೀಕರನ್ನು ಉದ್ದೇಶಿಸಿ ಹೇಳಿದರು.

‘ಇವತ್ತು ಜಾತ್ಯತೀತ ಶಕ್ತಿಗಳನ್ನು ಕೇಂದ್ರದಲ್ಲಿ ಇರುವವರು ಲೇವಡಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ. ಆದ್ದರಿಂದ ಸ್ಥಳೀಯವಾಗಿ ಇರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮೈತ್ರಿ ಅಭ್ಯರ್ಥಿ ಗೆಲುವಿಗೆ ಎರಡು ಪಕ್ಷಗಳ ಮುಖಂಡರು, ನಾಯಕರು ಶ್ರಮಿಸಬೇಕು’ ಎಂದು ತಿಳಿಸಿದರು.

ಸಭೆ ಬಹಿಷ್ಕರಿಸಿದ ಜೆಡಿಎಸ್‌ ಮುಖಂಡರು
ಕಾರ್ಯಕ್ರಮದ ವೇದಿಕೆಯಲ್ಲಿ ಅಳವಡಿಸಿದ್ದ ಬ್ಯಾನರ್‌ನಲ್ಲಿ ಜೆಡಿಎಸ್‌ ಮುಖಂಡ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅವರ ಭಾವಚಿತ್ರ ಇಲ್ಲದಿರುವುದನ್ನು ಕಂಡು ಆಕ್ರೋಶಗೊಂಡು ಬಚ್ಚೇಗೌಡರ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಕಾರ್ಯಕ್ರಮವನ್ನು ಬಹಿಷ್ಕರಿಸಿದ ಘಟನೆ ನಡೆಯಿತು. ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್‌ನ ಕೆಲ ಮುಖಂಡರು ಬಚ್ಚೇಗೌಡರ ಮನವೊಲಿಸಲು ಮುಂದಾದರೂ ಅದು ಕೈಗೂಡಲಿಲ್ಲ. ಹೀಗಾಗಿ, ಮೈತ್ರಿ ಅಭ್ಯರ್ಥಿಯ ಪರವಾದ ಕಾರ್ಯಕ್ರಮ ಬಹುತೇಕ ಕಾಂಗ್ರೆಸ್‌ಮಯವಾಗಿ ಕಂಡುಬಂತು.

*
ಒಂದೆರಡು ಮಾಧ್ಯಮಗಳನ್ನು ಬಿಟ್ಟು ಇವತ್ತು ಎಲ್ಲ ದೃಶ್ಯ ಮಾಧ್ಯಮಗಳು ಮೋದಿಯಂತಹ ಬಲಿಷ್ಠ ನಾಯಕ ಈ ದೇಶಕ್ಕೆ ಬೇಕು ಎಂದು ಬಿಂಬಿಸುತ್ತಿವೆ’.
-ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

*
ಅಮಿತ್ ಶಾ, ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು, ರೆಡ್ಡಿ.. ಹೀಗೆ ಜೈಲಿಗೆ ಹೋಗಿ ಬಂದವರೆಲ್ಲ ಈಗ ಚೌಕಿದಾರ್ ಆಗಿದ್ದಾರೆ.
-ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !