ಮಂಗಳವಾರ, ಸೆಪ್ಟೆಂಬರ್ 21, 2021
22 °C
ಮಳೆ ಹಾನಿ: ಮೇಯರ್‌ ನೇತೃತ್ವದಲ್ಲಿ ಸಭೆ * ರಸ್ತೆ ಗುಂಡಿ ಈಗಲೇ ಮಚ್ಚುವಂತೆ ಸೂಚನೆ

ಕಾಮಗಾರಿ ವಿಳಂಬದಿಂದ ಮಳೆ ಹಾನಿ: ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಗರದಲ್ಲಿನ ಕೆಲವು ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿದ್ದು, ಮಳೆ ಬಂದಾಗ ಇಂತಹ ಕಡೆಯೇ ಹೆಚ್ಚಾಗಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಮೇಯರ್‌ ಗಂಗಾಂಬಿಕೆ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ಸುರಿದ ಮಳೆಗೆ ಕೆಲವು ತಗ್ಗು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಮೇಯರ್‌ ಹಾಗೂ ಉಪಮೇಯರ್‌ ಭದ್ರೇಗೌಡ ಅವರು ಗುರುವಾರ ಪಾಲಿಕೆಯ ಎಂಟು ವಲಯಗಳ ಮುಖ್ಯ ಎಂಜಿನಿಯರ್‌ಗಳ ಜೊತೆ ಸಭೆ ನಡೆಸಿದರು. ಮಳೆ ಹಾನಿ ತಡೆಯಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ಕಾಮಗಾರಿ ವಿಳಂಬದಿಂದಾಗಿ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ. ತುರ್ತು ಸ್ಪಂದನಾ ತಂಡಗಳನ್ನು ರಚಿಸಿಕೊಂಡು ಅನಾಹುತಗಳನ್ನು ತಡೆಗಟ್ಟಬೇಕು. ರಾಜಕಾಲುವೆಗಳು ಮತ್ತು ಮೋರಿಗಳಲ್ಲಿನ ಹೂಳು ತೆಗೆದು ಸ್ವಚ್ಛಗೊಳಿಸಬೇಕು’ ಎಂದು ಮೇಯರ್‌ ಸೂಚಿಸಿದರು.

‘ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು. ಅವುಗಳಲ್ಲಿನ ಹೂಳನ್ನು ತೆಗೆದು ರಸ್ತೆ ಬದಿಯಲ್ಲೇ ಬಿಡಲಾಗುತ್ತಿದೆ ಎಂಬ ದೂರುಗಳಿವೆ. ಮಳೆ ಬಂದರೆ ಅದು ಮತ್ತೆ ಚರಂಡಿಯನ್ನು ಸೇರುತ್ತದೆ. ಇದಕ್ಕೆ ಅವಕಾಶ ಕಲ್ಪಿಸಬಾರದು. ತಕ್ಷಣವೇ ಅದನ್ನು ತೆರವುಗೊಳಿಸಿ’ ಎಂದು ಆದೇಶ ಮಾಡಿದರು. 

‘ಡಾಂಬರು ರಸ್ತೆಗಳಲ್ಲಿರುವ ಗುಂಡಿಗಳನ್ನು ಪತ್ತೆ ಹಚ್ಚಿ ಮಳೆಗಾಲಕ್ಕೆ ಮುನ್ನವೇ ಮುಚ್ಚಬೇಕು. ಇದರಿಂದ ಮಳೆಗಾಲದಲ್ಲಿ ರಸ್ತೆಗುಂಡಿಯಿಂದ ಅನಾಹುತ ಆಗದಂತೆ ತಡೆಯಬಹುದು’ ಎಂದು ಅವರು ಸಲಹೆ ನಿಡಿದರು.

‘ಉಪವಿಭಾಗಗಳಲ್ಲಿ 64 ಕಡೆ ಸ್ಥಾಪಿಸಿರುವ ನಿಯಂತ್ರಣಾ ಕೊಠಡಿಗಳ ಜೊತೆ ಸತತ ಸಂಪರ್ಕ ಇಟ್ಟುಕೊಂಡು ಅನಾಹುತ ಸಂಭವಿಸದಂತೆ, ನಿಗಾ ವಹಿಸಬೇಕು. ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳೊಂದಿಗೆ ಸಮನ್ವಯದ ಕೊರತೆ ಇದೆ. ಇದಕ್ಕೆ ಆಸ್ಪದ ನೀಡಬಾರದು’ ಎಂದರು.

‘ಪಾಲಿಕೆ ವ್ಯಾಪ್ತಿಯಲ್ಲಿ 182 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಹಾನಿಯ ಸುಳಿವು ಸಿಕ್ಕಲ್ಲಿ ಸರ್ಕಾರದ ಇತರ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ತುರ್ತಾಗಿ ಪರಿಹಾರ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಂದ ದೂರು ಬಂದರೆ, ಸಮಸ್ಯೆ ಬಗೆಹರಿಸಲು ತಕ್ಷಣವೇ ಕಾರ್ಯೋನ್ಮುಖರಾಗಬೇಕು. ತುರ್ತು ಕಾಮಗಾರಿಗಳಿಗೆ ವಾರ್ಡ್‍ಗಳಲ್ಲಿ ಅಭಿವೃದ್ಧಿ  ಅನುದಾನ ಬಳಸಿ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು