‘ಅಕ್ರಮ ವಲಸೆ ತಡೆಗೆ ಗೋಡೆ ಬೇಕು’: ಡೊನಾಲ್ಡ್‌ ಟ್ರಂಪ್‌

7
‘ಅಮೆರಿಕನ್ನರ ರಕ್ತ ಹರಿಯುವುದು ನಿಲ್ಲಿಸಬೇಕಾಗಿದೆ’

‘ಅಕ್ರಮ ವಲಸೆ ತಡೆಗೆ ಗೋಡೆ ಬೇಕು’: ಡೊನಾಲ್ಡ್‌ ಟ್ರಂಪ್‌

Published:
Updated:
Prajavani

ವಾಷಿಂಗ್ಟನ್‌ (ಪಿಟಿಐ/ಎಎಫ್‌ಪಿ/ರಾಯಿಟರ್ಸ್‌): ಅಕ್ರಮ ವಲಸೆ ಮತ್ತು ಮಾದಕ ದ್ರವ್ಯ ತಡೆಯಲು ಮೆಕ್ಸಿಕೊ ಗಡಿಯಲ್ಲಿ ಉಕ್ಕಿನ ಗೋಡೆ ನಿರ್ಮಿಸುವುದು ಅಗತ್ಯವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.

ಅಧ್ಯಕ್ಷರಾದ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಮೊದಲ ಬಾರಿ ಟಿ.ವಿ. ಭಾಷಣ ಮಾಡಿದ ಟ್ರಂಪ್‌ ಅವರು, ಅಕ್ರಮ ವಲಸೆಗಾರರಿಂದ ಹಲವು ಅಮಾಯಕರು ಹತ್ಯೆಗೀಡಾಗಿದ್ದಾರೆ ಎಂದು ಉದಾಹರಣೆಗಳ ಸಮೇತ ವಿವರಿಸಿದರು. ಗೋಡೆ ನಿರ್ಮಾಣಕ್ಕೆ $5.7 ಬಿಲಿಯನ್‌ (₹40153.08 ಕೋಟಿ) ಅಗತ್ಯವಿದೆ ಎಂದು ಹೇಳಿದ್ದಾರೆ.

ಹಲವು ವರ್ಷಗಳಿಂದ ಹತ್ಯೆಗೀಡಾದ ಕುಟುಂಬದ ಸದಸ್ಯರನ್ನು ಭೇಟಿಯಾಗುತ್ತಿದ್ದೇನೆ. ತಾಯಂದಿರು ನನ್ನ ಮುಂದೆ ಕಣ್ಣೀರು ಸುರಿಸಿದ್ದಾರೆ. ಅವರ ಕಣ್ಣುಗಳಲ್ಲಿ ನೋವು ಇರುವುದನ್ನು ಕಂಡಿದ್ದೇನೆ. ಅತ್ಯಂತ ನೋವಿನ ಕ್ಷಣಗಳನ್ನು ನಾನು ಮರೆಯಲು ಎಂದಿಗೂ ಸಾಧ್ಯವಿಲ್ಲ. ಇನ್ನೂ ಎಷ್ಟು ಮಂದಿ ಅಮೆರಿಕನ್ನರ ರಕ್ತ ಹರಿಯಬೇಕು’ ಎಂದು ಪ್ರಶ್ನಿಸಿದ್ದಾರೆ.

‘ಸಂಸತ್‌ಗೂ ಜವಾಬ್ದಾರಿ ಇದೆ. ಇದು ಸರಿ ಮತ್ತು ತಪ್ಪು, ನ್ಯಾಯ ಹಾಗೂ ಅನ್ಯಾಯದ ನಡುವಣ ಆಯ್ಕೆಯಾಗಿದೆ. ನಮ್ಮ ಪವಿತ್ರವಾದ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ. ಗಡಿಯಲ್ಲಿನ ಸಮಸ್ಯೆಯನ್ನು ಅರಿತುಕೊಳ್ಳಲು ಡೆಮಾಕ್ರಟಿಕ್‌ ಪಕ್ಷದವರು ವಿಫಲರಾಗಿದ್ದಾರೆ. ಗಡಿಯಲ್ಲಿ ಗೋಡೆ ನಿರ್ಮಿಸುವುದಕ್ಕಾಗಿ ಸಂಸತ್‌ನಲ್ಲಿ ಮಂಡಿಸಿರುವ ವೆಚ್ಚದ ಮಸೂದೆಗೆ ಡೆಮಾಕ್ರಟಿಕ್‌ ಪಕ್ಷ ಅನುಮೋದನೆ ನೀಡುತ್ತಿಲ್ಲ. ಈ ಬಿಕ್ಕಟ್ಟನ್ನು ಕೇವಲ 45 ನಿಮಿಷಗಳಲ್ಲಿ ಇತ್ಯರ್ಥಗೊಳಿಸಬಹುದು’ ಎಂದಿದ್ದಾರೆ.

‘ಶ್ರೀಮಂತ ರಾಜಕಾರಣಿಗಳು ತಮ್ಮ ಮನೆ ಆವರಣದ ಸುತ್ತ ಗೋಡೆಗಳನ್ನು ಏಕೆ ನಿರ್ಮಿಸಿಕೊಳ್ಳುತ್ತಾರೆ. ಹೊರಗಿನ ಜನರನ್ನು ದ್ವೇಷಿಸುವ ಉದ್ದೇಶದಿಂದ ಗೋಡೆಗಳನ್ನು ಅವರು ನಿರ್ಮಿಸುವುದಿಲ್ಲ. ಬದಲಾಗಿ, ಆವರಣದ ಗೋಡೆ ಒಳಗೆ ಇರುವ ಜನರನ್ನು ಪ್ರೀತಿಸುತ್ತಾರೆ’ ಎಂದು ಹೇಳಿದ್ದಾರೆ.

ಹತ್ಯೆಗೀಡಾದ ಪೊಲೀಸ್ ಅಧಿಕಾರಿ ಸೇವೆ ಸ್ಮರಣೆ
ಅಕ್ರಮ ವಲಸೆಗಾರರಿಂದ ಹತ್ಯೆಗೀಡಾದ ಭಾರತ–ಅಮೆರಿಕನ್‌ ಪೊಲೀಸ್ ಅಧಿಕಾರಿ ರೊನಿಲ್‌ ‘ರೋನ್‌’ ಸಿಂಗ್‌ ಅವರ ತ್ಯಾಗ, ಬಲಿದಾನವನ್ನು ಡೊನಾಲ್ಡ್ ಟ್ರಂಪ್‌ ಸ್ಮರಿಸಿದರು. ರೊನಿಲ್‌ ಅವರನ್ನು ‘ಅಮೆರಿಕನ್‌ ಹೀರೊ’ ಎಂದು ಬಣ್ಣಿಸಿದರು.

ನ್ಯೂಮ್ಯಾನ್‌ ಪೊಲೀಸ್‌ ಇಲಾಖೆಯ ಸಿಂಗ್‌ ಅವರನ್ನು ಡಿಸೆಂಬರ್‌ 26ರಂದು ಕ್ಯಾಲಿಫೋರ್ನಿಯಾದಲ್ಲಿ ಮೆಕ್ಸಿಕೊದ ಅಕ್ರಮ ವಲಸೆಗಾರನೊಬ್ಬ ಹತ್ಯೆ ಮಾಡಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಕ್ರಿಸಮಸ್‌ ಮರುದಿನವೇ ನಡೆದ ಹತ್ಯೆ ಭೀಕರ. ಇಡೀ ಅಮೆರಿಕವೇ ಈ ಯುವ ಪೊಲೀಸ್‌ ಅಧಿಕಾರಿಯ ಹತ್ಯೆಗೆ ದುಃಖಪಟ್ಟಿದೆ. ಅಮೆರಿಕದ ಹೀರೊನನ್ನು ಹತ್ಯೆ ಮಾಡಿದ ವ್ಯಕ್ತಿಗೆ ನಮ್ಮ ದೇಶದಲ್ಲಿ ವಾಸಿಸುವ ಹಕ್ಕು ಇಲ್ಲ’ ಎಂದು ಹೇಳಿದರು.

*
ಕೇವಲ ಒಂದೇ ಒಂದು ಕಾರಣಕ್ಕೆ ಅಡಳಿತ ಸ್ಥಗಿತಗೊಂಡಿದೆ. ಗಡಿಯಲ್ಲಿನ ಭದ್ರತೆ ಬಿಗಿ ಮಾಡುವ ಕಾರ್ಯಕ್ಕೆ ಅನುದಾನ ನೀಡಲು ಡೆಮಾಕ್ರಟಿಕ್‌ ಪಕ್ಷ ಒಪ್ಪಿಗೆ ನೀಡುತ್ತಿಲ್ಲ.
-ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !