ಶುಕ್ರವಾರ, ನವೆಂಬರ್ 22, 2019
21 °C
ಗುರುವನ್ನು ಕಂಡು ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡ ವೆಂಕಟರಮಣ

ತಮಟೆ ವಾದನದಲ್ಲಿ ಕಟ್ಟಿಕೊಂಡ ಬದುಕು

Published:
Updated:
Prajavani

ಹನೂರು (ಚಾಮರಾಜನಗರ): ಜಿಲ್ಲೆಯಲ್ಲಿಯೇ ಇವರ ತಮಟೆ ಕಲೆ ಪ್ರದರ್ಶನ ಅತ್ಯಂತ ಪ್ರಸಿದ್ಧಿ. ಧಾರ್ಮಿಕ, ಸಾಂಸ್ಕ್ರತಿಕ  ಕಾರ್ಯಕ್ರಮಗಳಿಗೆ ತಮಟೆ ಬೇಕು ಎಂದರೆ ಥಟ್ಟನೇ ನೆನಪಾಗುವುದು ಬೂದುಬಾಳು ಗ್ರಾಮದ ವೆಂಕಟರಮಣ ಅವರು. ತಮಟೆ ಬಾರಿಸುವ ಕಲೆಯನ್ನೇ ಉಸಿರಾಗಿಸಿಕೊಂಡು ಅದರಿಂದಲೇ ಅವರು ಬದುಕು ಕಟ್ಟಿಕೊಂಡಿದ್ದಾರೆ.

ತಮಟೆ ಬಾರಿಸುವುದ ಜೊತೆಗೆ ತಯಾರಿಸುವುದರಲ್ಲೂ ಇವರು ಎತ್ತಿದ ಕೈ. ಬಾಲ್ಯದಿಂದಲೇ ಈ ಕಲೆ ಅವರಿಗೆ ಕರಗತವಾಗಿದೆ. ಬುದುಬಾಳು ಜಾತ್ರೆಗೆ ತಮಟೆ ಬಾರಿಸುವುದು ಇವರ ಸಮುದಾಯಕ್ಕೆ ಮೀಸಲಾದ ಸೇವೆ.

ಊರು ಕೇರಿಯ ಹಬ್ಬ, ಜಾತ್ರೆ, ದೇವರ ಉತ್ಸವ, ಕಂಡಾಯ ಮೆರವಣಿಗೆ ಮುಂತಾದವುಗಳಿಗೆ ಅವರ  ಹಿರಿಯರು ತಮಟೆ ಬಾರಿಸುತ್ತಿದ್ದರು. ಹಿರಿಯರು ಪ್ರದರ್ಶಿಸುತ್ತಿದ್ದ ಕಲೆಯನ್ನು ಬಾಲ್ಯದಿಂದಲೇ ಕುತೂಹಲದಿಂದ ಅನುಕರಣೆ ಮಾಡುತ್ತಾ ಪರಿಣತಿ ಸಾಧಿಸಿದರು. 

‘ಗ್ರಾಮದಲ್ಲಿ ಮುತ್ತಯ್ಯ ಎಂಬುವವರಿದ್ದರು. ನಮ್ಮ ಗ್ರಾಮದಲ್ಲಿ ತಮಟೆ ವಾದ್ಯದ ಮೊದಲಿಗರು. ಅವರು ಜಾತ್ರೆಯಲ್ಲಿ  ತಮಟೆ ಬಾರಿಸಲು ನಿಂತರೆ ಭಕ್ತರು, ಅವರನ್ನು ಹೆಗಲ ಮೇಲೆ ಹೊತ್ತು ಕುಣಿದಾಡುತ್ತಿದ್ದರು. ಅವರ ತಮಟೆ ಅಷ್ಟರಮಟ್ಟಿಗೆ ಸದ್ದು ಮಾಡುತ್ತಿತ್ತು. ಅವರು ಪಡೆಯುತ್ತಿದ್ದ ಮರ್ಯಾದೆಯನ್ನು ನಾನೂ ಗಳಿಸಬೇಕು  ಎಂಬ ಹಂಬಲ ನನ್ನನ್ನು ತಮಟೆ ವಾದ್ಯ ಕಲಿಯಲು ಪ್ರೇರೇಪಿಸಿತು’ ಎಂದು ಹೇಳುತ್ತಾರೆ ವೆಂಕಟರಮಣ.

ಅವರು ತಮ್ಮದೇ ಆದ ತಂಡ ಕಟ್ಟಿಕೊಂಡು ಪ್ರದರ್ಶನ ನೀಡುತ್ತಾರೆ. ವರ್ಷದಲ್ಲಿ 9 ತಿಂಗಳು ಕಾಲ ನಿರಂತರವಾಗಿ ಕಾರ್ಯಕ್ರಮಗಳಿರುತ್ತವೆ. ವಿವಿಧೆಡೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು  ಹಾಗೂ ಸರ್ಕಾರಿ ಕಾರ್ಯಕ್ರಮಗಳಿಗೆ ಇವರ ತಂಡಕ್ಕೆ ಆಹ್ವಾನವಿರುತ್ತದೆ.

‘ನಮ್ಮ ತಂಡದಲ್ಲಿ 8 ಸದಸ್ಯರಿದ್ದು, ಒಂದು ಕಾರ್ಯಕ್ರಮಕ್ಕೆ ₹ 5,000ದಿಂದ ₹ 8,000 ಸಂಭಾವನೆ ಪಡೆಯುತ್ತೇವೆ. ಬಾಲ್ಯದಿಂದಲೂ ಇದನ್ನೇ ಕಸುಬಾಗಿಸಿಕೊಂಡಿರುವ ನಾನು ಆಸ್ತಿ ಸಂಪಾದನೆ ಮಾಡುವ ಗೋಜಿಗೆ ಹೋಗಲಿಲ್ಲ.  ಕಲೆಯನ್ನೇ ನಂಬಿ ಬದುಕುತ್ತಿದ್ದೇನೆ. ನನ್ನ ಅನುಪಸ್ಥಿತಿಯಲ್ಲಿ ಮಗನನ್ನು ಸಭೆ, ಸಮಾರಂಭಗಳಿಗೆ ಕಳುಹಿಸುವ ಮೂಲಕ ಕಲೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ವೆಂಕಟರಮಣ ‘ಪ್ರಜಾವಾಣಿ’ಗೆ ತಿಳಿಸಿದರು.‌

ಚಿಕ್ಕ ತಿರುಪತಿಯೆಂದೇ ಬಿಂಬಿತವಾಗಿರುವ ತಾಲ್ಲೂಕಿನ ಬೂದುಬಾಳು ವೆಂಕಟರಮಣ ಜಾತ್ರೆಯಲ್ಲಿ ಇವರದ್ದೇ ಪ್ರಮುಖ ಪಾತ್ರ. ಬ್ರಹ್ಮರಥೋತ್ಸವ, ಪಲ್ಲಕ್ಕಿ ಮೆರವಣಿಗೆ ಮುಂತಾದ ಕಾರ್ಯಕ್ರಮಗಳಲ್ಲಿ ಇವರ ತಮಟೆ ತಂಡ  ಇರಲೇಬೇಕು.  ರಥೋತ್ಸವದ ಮುಖ್ಯ ಕಾರ್ಯಕ್ರಮವೆಂದರೆ ಇವರ ತಂಡದ ತಮಟೆ ಪ್ರದರ್ಶನವೇ. ಇಂದಿಗೂ ಇವರ ತಮಟೆ ವಾದನ ಜಾತ್ರೆಯ ಅವಿಭಾಜ್ಯ ಅಂಗವಾಗಿದೆ. 

ಯಾರೂ ಗುರುತಿಸದ ನೋವು

ಮೇಕೆಯ ಚರ್ಮದಿಂದ ಸ್ವತಃ ತಮಟೆ  ತಯಾರಿಸಿಕೊಳ್ಳುವುದನ್ನೂ ಕರಗತ ಮಾಡಿಕೊಂಡಿರುವ ವೆಂಕಟರಮಣ ಅವರು, ತಮ್ಮ ಗುರು ಮುತ್ತಯ್ಯ ಅವರು ಬಾರಿಸುತ್ತಿದ್ದ ತಮಟೆಯನ್ನು ಜತನದಿಂದ ಕಾಪಾಡುತ್ತಾ ಬಂದಿದ್ದಾರೆ.

ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ಹಲವಾರು ತಮಟೆ ಕಲಾಮೇಳಗಳಲ್ಲಿ  ಭಾಗವಹಿಸಿದ್ದರೂ ಸರ್ಕಾರ, ಜಿಲ್ಲಾಡಳಿತ ಸಂಘ ಸಂಸ್ಥೆಗಳು ಇವರನ್ನು ಇನ್ನೂ ಗುರುತಿಸಿಲ್ಲ. ಎಲೆ ಮರೆ ಕಾಯಿಯಂತಲೇ ಇದ್ದಾರೆ.

ಆಧುನಿಕ ಶೈಲಿಯ ವಾದ್ಯಮೇಳಗಳ ಭರಾಟೆ ನಡುವೆ ತಮಟೆ ವಾದನ ಕಲೆ ನಶಿಸಿ ಹೋಗುತ್ತದೆ ಎಂಬ ಭಯ ಅವರನ್ನು ಕಾಡುತ್ತಿದೆ. ನೂರು ಆಧುನಿಕ ವಾದ್ಯಗಳು ಬಂದರೂ ತಮಟೆಯ ಸದ್ದಿಗೆ ಸಾಟಿ ಇಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ. 

ವೆಂಕಟರಮಣ ಅವರು ದೈಹಿಕವಾಗಿ ದಣಿದಿದ್ದರೂ ಅವರ ಒಳಗಿರುವ ಕಲಾವಿದ ಇನ್ನೂ ದಣಿದಿಲ್ಲ.

ಪ್ರತಿಕ್ರಿಯಿಸಿ (+)