ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಹುಬ್ಬಳ್ಳಿ–ಧಾರವಾಡ ಪಾಲಿಕೆ ವಿಭಜನೆಗೆ ಕೂಗು ಜೋರು.. ಏನಿದರ ಮರ್ಮ?

Last Updated 20 ಏಪ್ರಿಲ್ 2022, 20:11 IST
ಅಕ್ಷರ ಗಾತ್ರ

ಜನಪ್ರತಿನಿಧಿಗಳು ಹಾಗೂ ಆಡಳಿತ ವರ್ಗದ ಮಲತಾಯಿ ಧೋರಣೆಯಿಂದ ಬೇಸತ್ತ ಧಾರವಾಡದ ಜನರು ಅಭಿವೃದ್ಧಿಗಾಗಿಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಹುಬ್ಬಳ್ಳಿ–ಧಾರವಾಡ ಅವಳಿ ನಗರವಾಗಿದ್ದರೂ ಅಭಿವೃದ್ಧಿಯಲ್ಲಿ ಸಮಾನತೆ ಇಲ್ಲವೆಂಬ ಆರೋಪ ಕೇಳಿ ಬರುತ್ತಿರುವುದರಿಂದ ಪ್ರತ್ಯೇಕತೆಯ ಕೂಗು ಈಗ ಇನ್ನಷ್ಟು ಹೆಚ್ಚಾಗಿದೆ.

ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರ ಹುಬ್ಬಳ್ಳಿ ಹಾಗೂ ಶಿಕ್ಷಣ ಕಾಶಿ ಧಾರವಾಡ ಸುಮಾರು 50 ವರ್ಷಗಳಿಂದ ಅವಳಿ ನಗರಗಳಾಗಿಯೇ ಗುರುತಿಸಿಕೊಂಡಿವೆ. ಆದರೆ ಈ ಅರ್ಧ ಶತಮಾನದಲ್ಲಿ ಎರಡೂ ನಗರಗಳು ನಿರೀಕ್ಷೆಯಂತೆ ಬೆಳವಣಿಗೆ ಕಂಡಿಲ್ಲ. ಕೆಲವೇ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕೆಲವು ಮಹಾನಗರ ಪಾಲಿಕೆಗಳ ಜನಸಂಖ್ಯೆಗಿಂತ ನಾಲ್ಕು ಪಟ್ಟು ಜನಸಂಖ್ಯೆ ಹುಬ್ಬಳ್ಳಿ ಧಾರವಾಡದಲ್ಲಿ ಇದೆ. ಹೀಗಿದ್ದರೂ ಧಾರವಾಡ ಈಗಲೂ ಒಂದು ‘ಸುಧಾರಿಸಿದ ಹಳ್ಳಿ’ ಎಂದೇ ಕರೆಯಿಸಿಕೊಳ್ಳುತ್ತಿದೆ.

ಈ ಅವಳಿ ನಗರಗಳಿಗೆ ಸರ್ಕಾರ ನೀಡುತ್ತಿರುವ ಅನುದಾನ ಏತಕ್ಕೂ ಸಾಲುತ್ತಿಲ್ಲ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಆಡಳಿತ ಯಂತ್ರ ನಿಭಾಯಿಸುವುದಕ್ಕೇ ದೊಡ್ಡ ಮೊತ್ತ ಖರ್ಚಾಗುತ್ತಿದೆ. ಅನುದಾನದ ಸಿಂಹ ಪಾಲು ಹುಬ್ಬಳ್ಳಿಗೆ ಮಾತ್ರ ವೆಚ್ಚವಾಗುತ್ತಿದೆ ಎಂಬುದು ಧಾರವಾಡದ ಜನರಲ್ಲಿ ಅತೃಪ್ತಿ ಮೂಡಿಸಿದೆ.

1962ರಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂತು. ಹುಬ್ಬಳ್ಳಿಯನ್ನು ಮಾತ್ರವೇ ಪಾಲಿಕೆ ಮಾಡುವ ಯೋಜನೆ ಇತ್ತಾದರೂ ಪಾಲಿಕೆ ರಚನೆಗೆ ಅಗತ್ಯ ಇರುವಷ್ಟು ಜನಸಂಖ್ಯೆ ಇಲ್ಲದ ಕಾರಣ ಜಿಲ್ಲಾ ಕೇಂದ್ರವಾದ ಧಾರವಾಡವನ್ನು ಸೇರಿಸಿಕೊಳ್ಳಲಾಯಿತು. ಆಗ ಅವಳಿ ನಗರದ ಒಟ್ಟು ಜನಸಂಖ್ಯೆ 3.80 ಲಕ್ಷ ಇತ್ತು. ಆದರೆ 2011ರ ಜನಗಣತಿಯಂತೆ ಅವಳಿ ನಗರದ ಜನಸಂಖ್ಯೆ 11.50ಲಕ್ಷ.

ನಗರೀಕರಣ, ನಗರಗಳತ್ತ ಜನರ ವಲಸೆ ಹಾಗೂ ಕೈಗಾರಿಕೆಗಳ ಸ್ಥಾಪನೆಯಿಂದಾಗಿ ಈಗ ಅವಳಿ ನಗರದ ಜನಸಂಖ್ಯೆ 16 ಲಕ್ಷ ದಾಟಿದೆ ಎಂದು ಅಂದಾಜು ಮಾಡಲಾಗಿದೆ. ಎರಡೂ ನಗರಗಳು ಒಟ್ಟು 244 ಚದರ ಕಿಲೋ ಮೀಟರ್ ವ್ಯಾಪ್ತಿಗೆ ವಿಸ್ತರಿಸಿಕೊಂಡಿವೆ. ಪಾಲಿಕೆಯ ವಾರ್ಡ್‌ಗಳ ಸಂಖ್ಯೆಯೂ ಕಳೆದ ಚುನಾವಣೆ ಸಂದರ್ಭದಲ್ಲಿ 82ಕ್ಕೆ ಏರಿಕೆಯಾಗಿದೆ. (2021ರ ಸೆ. 3ರಂದು ಚುನಾವಣೆ ನಡೆದಿತ್ತು. ಆದರೆ ಇಂದಿಗೂ ಚುನಾಯಿತರಿಗೆ ಅಧಿಕಾರ ಸಿಕ್ಕಿಲ್ಲ. ಮೇಯರ್, ಉಪಮೇಯರ್ ಆಯ್ಕೆಯೂ ಆಗಿಲ್ಲ). ಹೀಗಿದ್ದರೂ ರಾಜ್ಯದಲ್ಲಿರುವ ಇತರ ಹತ್ತು ಚಿಕ್ಕ ಮಹಾನಗರ ಪಾಲಿಕೆಗಳಿಗೆ ಸಿಗುವಷ್ಟೇ ಅನುದಾನ ಈ ಅವಳಿ ನಗರಕ್ಕೂ ಸಿಗುತ್ತಿರುವುದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

ಜನವಸತಿ, ಸಂಚಾರ ಎಲ್ಲವೂ ಹೆಚ್ಚಳ...

ನಗರೀಕರಣದಿಂದಾಗಿ ಎರಡೂ ನಗರಗಳಲ್ಲಿ ಅನೇಕ ವಸತಿ ಬಡಾವಣೆಗಳು ಅಸ್ತಿತ್ವಕ್ಕೆ ಬಂದಿವೆ. ಅದರಲ್ಲೂ ಧಾರವಾಡದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು,ವಿಶ್ವವಿದ್ಯಾಲಯ, ಐಐಟಿ ಹಾಗೂ ಐಐಐಟಿಯಂತಹ ಉನ್ನತ ಶಿಕ್ಷಣ ಸಂಸ್ಥೆಗಳು, ಹೈಕೋರ್ಟ್‌, ಆಸ್ಪತ್ರೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕಚೇರಿಗಳು ಸ್ಥಾಪನೆಗೊಂಡ ಪರಿಣಾಮ ಜನವಸತಿ, ಸಂಚಾರ ಎಲ್ಲವೂ ಹೆಚ್ಚಿದೆ.

ಕಲೆ, ಸಾಹಿತ್ಯ, ಸಂಗೀತದಿಂದ ಸಮೃದ್ಧವಾಗಿರುವ ಸಾಂಸ್ಕೃತಿಕ ನಗರವಾಗಿಯೂ ದೇಶ, ವಿದೇಶಗಳಲ್ಲಿ ಧಾರವಾಡ ಜನಪ್ರಿಯವಾಗಿದೆ. ಈ ಎಲ್ಲಾ ಕಾರಣಗಳಿಂದ ಧಾರವಾಡ ಇನ್ನಷ್ಟು ಅಭಿವೃದ್ಧಿ ಆಗಬೇಕು. ಅದಕ್ಕಾಗಿ ಪ್ರತ್ಯೇಕ ಪಾಲಿಕೆ ಘೋಷಿಸಬೇಕು ಎಂಬ ಕೂಗು ದಿನದಿಂದ ದಿನಕ್ಕೆ ಬಲವಾಗುತ್ತಿದೆ. ಇದರ ಪರಿಣಾಮ ಧಾರವಾಡದ ಪ್ರತಿ ಬಡಾವಣೆ, ಸಂಘಟನೆ, ವೇದಿಕೆಗಳು ನಿರಂತರ ಧರಣಿ ಆರಂಭಿಸಿವೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಹೋಲಿಸಿದರೆ ಇತರ ನಗರಪಾಲಿಕೆಗಲ್ಲಿಜನಸಂಖ್ಯೆ ಬಹಳ ಕಡಿಮೆ. ಹೀಗಿದ್ದರೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಷ್ಟೇ ಅನುದಾನವನ್ನು ಎಲ್ಲಾ ಪಾಲಿಕೆಗಳೂ ಪಡೆಯುತ್ತಿವೆ. ಹೀಗಾಗಿ, ಹುಬ್ಬಳ್ಳಿ–ಧಾರವಾಡ ಪಾಲಿಕೆಯನ್ನು ವಿಭಜಿಸಿದರೆ ಎರಡೂ ನಗರಗಳೂ ಸಮಾನವಾಗಿ ಬೆಳವಣಿಗೆ ಕಾಣಲಿವೆ ಎಂಬುದು ‘ಪ್ರತ್ಯೇಕ ಪಾಲಿಕೆ’ ಹೋರಾಟದ ಮುಖ್ಯ ಅಂಶವಾಗಿದೆ.

ಪಾಲಿಕೆಗಳಿಗೆ ಸಿಗುತ್ತಿರುವ ಪ್ರಮುಖ ಅನುದಾನಗಳು ಹೀಗಿವೆ: ಮೂರು ವರ್ಷ ನೀಡುವ ಮುಖ್ಯಮಂತ್ರಿಗಳ ಅನುದಾನ ₹100 ಕೋಟಿ, ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ ₹150 ಕೋಟಿ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಂದು ಅವಧಿಗೆ ₹1 ಸಾವಿರ ಕೋಟಿ, ಅಮೃತ ಯೋಜನೆಯಲ್ಲಿ ₹150ರಿಂದ ₹200 ಕೋಟಿ, ಕೇಂದ್ರ ಹಣಕಾಸು ಯೋಜನೆಯಲ್ಲಿ ₹50 ಕೋಟಿ, ರಾಜ್ಯ ಹಣಕಾಸು ಯೋಜನೆಯಲ್ಲಿ ವಾರ್ಷಿಕ ₹10 ಕೋಟಿ.

ಸ್ಮಾರ್ಟ್ ಸಿಟಿ ಅಡಿ ಯೋಜನೆಗಳಿಲ್ಲ...:

ಒಂದು ಅವಧಿಗೆ ನೀಡಲಾದ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಧಾರವಾಡಕ್ಕೆ ಒಂದು ಯೋಜನೆಯನ್ನೂ ಮಂಜೂರು ಮಾಡದಿರುವುದು ಧಾರವಾಡದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಇಷ್ಟು ಮಾತ್ರವಲ್ಲ, 2018ರ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಅವಳಿ ನಗರಕ್ಕೆ ಮೂರು ಟೆಂಡರ್ ಶೂರ್ ರಸ್ತೆ ಮಂಜೂರಾಗಿತ್ತು. ಅದರಲ್ಲಿ ಒಂದು ಧಾರವಾಡಕ್ಕೆ ಮೀಸಲಾಗಿತ್ತು. ಹುಬ್ಬಳ್ಳಿಯ ರಸ್ತೆಗಳ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾದವು. ಆದರೆ ಧಾರವಾಡ ಟೆಂಡರ್ ಶೂರ್ ರಸ್ತೆ ಇಂದಿಗೂ ಪೂರ್ಣಗೊಂಡಿಲ್ಲ. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ವಿಶ್ವ ಬ್ಯಾಂಕ್ ನೆರವೂ ಮರಳಿದೆ. ಈ ಎಲ್ಲವೂ ಧಾರವಾಡದ ಬಗ್ಗೆ ಮಲತಾಯಿ ಧೋರಣೆ ತಳೆಯಲಾಗಿದೆ ಎಂಬ ಭಾವನೆ ಹೆಚ್ಚಾಗಲು ಕಾರಣವಾಗಿವೆ.

ಪಾಲಿಕೆ ಆಯುಕ್ತರು ವಾರದಲ್ಲಿ ಎರಡು ದಿನ (ಮಂಗಳವಾರ, ಶುಕ್ರವಾರ) ಧಾರವಾಡ ಕಚೇರಿಯಲ್ಲಿ ಲಭ್ಯವಿರಬೇಕು ಎಂಬ ನಿರ್ಣಯವನ್ನು ಧಾರವಾಡದ ಸದಸ್ಯರ ಆಗ್ರಹದ ಮೇಲೆ ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು. ಹೀಗಿದ್ದರೂ ಈ ಎರಡು ದಿನಗಳಲ್ಲಿ ಧಾರವಾಡ ಜನರಿಗೆ ಆಯುಕ್ತರ ಲಭ್ಯತೆ ವಿರಳಾತಿವಿರಳ. ಆಯುಕ್ತರು ಕೈಗೆ ಸಿಗುವುದಿಲ್ಲ ಎಂದು ಜನರು ದೂರುವುದು ಸಾಮಾನ್ಯ.

ಜಿಲ್ಲೆಯ ಪ್ರಮುಖ ನಾಯಕರಾದಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಜಗದೀಶ ಶೆಟ್ಟರ್, ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ನೆಲೆಸಿರುವುದು ಹುಬ್ಬಳ್ಳಿಯಲ್ಲಿ.ಜಿಲ್ಲೆಗೆ ಸಂಬಂಧಿಸಿದ ಪ್ರಮುಖ ಸಭೆಗಳೂ ಹುಬ್ಬಳ್ಳಿಯಲ್ಲೇ ನಡೆದ ಉದಾಹರಣೆಗಳಿವೆ. ಈ ಎಲ್ಲಾ ಸಂಗತಿಗಳು ಧಾರವಾಡದ ಜನತೆಯಲ್ಲಿ ನಿರ್ಲಕ್ಷ್ಯ ಭಾವ ಮೂಡಿಸಿವೆ ಎಂಬುದು ಇಲ್ಲಿನ ಜನರ ಮಾತು.

ಹಿರಿಯ ಕವಿ ದಿವಂಗತ ಡಾ. ಚೆನ್ನವೀರ ಕಣವಿ ಅವರ ನೇತೃತ್ವದಲ್ಲಿ ಧಾರವಾಡ ಪ್ರತ್ಯೇಕ ಪಾಲಿಕೆಗೆ ಆಗ್ರಹಿಸಿಈ ಹಿಂದೆ ಸಹಿ ಸಂಗ್ರಹ ಅಭಿಯಾನವೂ ನಡೆದಿತ್ತು. ಶಾಸಕರು, ಸಂಸದ, ಸಚಿವ ಹಾಗೂ ಮುಖ್ಯಮಂತ್ರಿಗೂ ಮನವಿಯನ್ನು ಸಲ್ಲಿಸಲಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಧಾರವಾಡ ಪ್ರತ್ಯೇಕ ಪಾಲಿಕೆ ಘೋಷಣೆಯ ನಿರೀಕ್ಷೆ ಹುಸಿಯಾದ ಬೆನ್ನಲ್ಲೇ, ಹೋರಾಟದ ಕಾವು ಹೆಚ್ಚಿದೆ. ನಿತ್ಯ ತಂಡೋಪತಂಡವಾಗಿ ಪಾಲಿಕೆ ಕಚೇರಿ ಪಕ್ಕದಲ್ಲಿ ಜನರು ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಪಾಲಿಕೆ ವಿಭಜಿಸಲು ಹುಬ್ಬಳ್ಳಿ ಜನತೆಯ ವಿರೋಧವಿಲ್ಲ ಎಂಬ ಸಂಗತಿಯೂ ಇಲ್ಲಿ ಗಮನಾರ್ಹ. ಅಭಿವೃದ್ಧಿ ದೃಷ್ಟಿಯಿಂದ ಎರಡೂ ನಗರಗಳು ಸಮನಾಗಿ ಬೆಳವಣಿಗೆ ಕಾಣಬೇಕು ಎಂಬ ಅಭಿಪ್ರಾಯವನ್ನು ಹುಬ್ಬಳ್ಳಿ ಜನರೂ ವ್ಯಕ್ತಪಡಿಸುತ್ತಿದ್ದಾರೆ.

ಹೀಗಾಗಿ ಹೈಕೋರ್ಟ್‌, ಐಐಟಿ ಇರುವ ಮುಮ್ಮಿಗಟ್ಟಿ, ಬೇಲೂರು ಕೈಗಾರಿಕಾ ಪ್ರದೇಶಗಳನ್ನು ಸೇರಿಸಿಕೊಂಡು ಧಾರವಾಡವನ್ನು ಪ್ರತ್ಯೇಕ ಪಾಲಿಕೆ ಮಾಡಬಹುದು. ಪಾಲಿಕೆ ರಚನೆಗೆ ಬೇಕಾದಷ್ಟು ಜನಸಂಖ್ಯೆಯೂ ಇಲ್ಲಿ ಇದೆ.ಇದು ಅಭಿವೃದ್ಧಿಗೆ ನೆರವಾಗಲಿದೆ ಎಂಬ ಸಲಹೆ ಕೇಳಿಬಂದಿದೆ.

ಪ್ರತ್ಯೇಕಗೊಂಡರೆ ನೌಕರರಿಗೆ ಮನೆ ಬಾಡಿಗೆ ಭತ್ಯೆ ಕಡಿಮೆ ಸಿಗಲಿದೆ ಎಂಬ ಚರ್ಚೆಯೂ ಇದೆ. ಪ್ರಸಕ್ತ 5ರಿಂದ 25ಲಕ್ಷ ಜನಸಂಖ್ಯೆ ಇರುವ ನಗರಗಳಲ್ಲಿ ಕೆಲಸ ಮಾಡುವ ನೌಕರರಿಗೆ ಮೂಲ ವೇತನದ ಶೇ 20ರಷ್ಟು ಮನೆ ಬಾಡಿಗೆ ಭತ್ಯೆ ನೀಡಬೇಕು. ಆದರೆ ಪ್ರತ್ಯೇಕಗೊಂಡರೆ ಧಾರವಾಡದಲ್ಲಿ ಭತ್ಯೆ ಶೇ 10ಕ್ಕೆ ಕುಸಿಯುವ ಆತಂಕವೂ ನೌಕರರಲ್ಲಿದೆ.

ಇದರ ನಡುವೆ21 ಹಳ್ಳಿ ಹೊಂದಿರುವ ಅಣ್ಣಿಗೇರಿ ಹಾಗೂ 11 ಹಳ್ಳಿ ಒಳಗೊಂಡ ಅಳ್ನಾವರ ತಾಲ್ಲೂಕು ರಚನೆಗೆ ತೋರಿದ ರಾಜಕೀಯ ಹಿತಾಸಕ್ತಿಯನ್ನು ಹುಬ್ಬಳ್ಳಿ ಹಾಗೂ ಧಾರವಾಡ ನಗರಗಳಿಗೆ ಪ್ರತ್ಯೇಕ ಪಾಲಿಕೆ ಮಾಡಲು ರಾಜಕಾರಣಿಗಳು ತೋರುತ್ತಿಲ್ಲ ಎಂಬ ಬಗ್ಗೆಯೂ ಧಾರವಾಡದ ಜನರಲ್ಲಿ ಆಕ್ರೋಶ ಇದೆ.

ಪ್ರತ್ಯೇಕ ಪಾಲಿಕೆಯಿಂದ ಎರಡೂ ನಗರಗಳ ಅಭಿವೃದ್ಧಿ

ಜನಪ್ರತಿನಿಧಿಗಳೇ ಈ ವಿಷಯವನ್ನು ಆಸಕ್ತಿಯಿಂದ ನಿಭಾಯಿಸಬೇಕು. ಎರಡು ಪ್ರತ್ಯೇಕ ಪಾಲಿಕೆ ಆದಲ್ಲಿ ಪ್ರತ್ಯೇಕ ಅನುದಾನ ಸಿಗಲಿದೆ. ಇದರಿಂದ ಎರಡೂ ನಗರಗಳು ಹೆಚ್ಚಿನ ಅಭಿವೃದ್ಧಿ ಕಾಣಲಿವೆ. ಬೆಳಗಾವಿ, ಶಿವಮೊಗ್ಗ, ಬೀದರ್‌ ನಗರಗಳೂ ಉತ್ತಮವಾಗಿ ಅಭಿವೃದ್ಧಿ ಕಂಡಿವೆ. ಆದರೆ ಧಾರವಾಡದಂತಹ ಜಿಲ್ಲಾ ಕೇಂದ್ರದ ರಸ್ತೆಗಳು ಕಳೆದ 15 ವರ್ಷಗಳಿಂದ ಅಭಿವೃದ್ಧಿ ಕಂಡಿಲ್ಲ. ಹೀಗಿದ್ದರೂ ಪಾಲಿಕೆಯು ಕೊರತೆ ಬಜೆಟ್ ಮಂಡಿಸುತ್ತಿದೆ. ಹೀಗಾದರೆ ಧಾರವಾಡಿಗರು ಯಾವ ರೀತಿಯ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು?

ಧಾರವಾಡದ ಪಾಲಿಕೆ ಕಚೇರಿಗೆ ಅಧಿಕಾರಿ ಇಲ್ಲ. ಸದ್ಯ ಪಾಲಿಕೆಗೆ ಇಬ್ಬರು ಐಎಎಸ್ ಅಧಿಕಾರಿಗಳು ಇದ್ದರೂ, ಅವರು ಹುಬ್ಬಳ್ಳಿ ಕಚೇರಿಯಲ್ಲೇ ಇರುತ್ತಾರೆ. ವಲಯಾಧಿಕಾರಿಗಳಿಂದ ದಬ್ಬಾಳಿಕೆ ಹಾಗೂ ಭ್ರಷ್ಟಾಚಾರದ ನಡೆಯುತ್ತಿರುವ ಕುರಿತು ಜನರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಧಾರವಾಡದ ನಾಗರಿಕರ ಸಂಕಷ್ಟಗಳನ್ನು ಯಾರ ಬಳಿ ಹೇಳಬೇಕೆನ್ನುವ ಪ್ರಶ್ನೆಗೆ ಉತ್ತರವೇ ಸಿಗುತ್ತಿಲ್ಲ. ಜನಪ್ರತಿನಿಧಿಗಳು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಹಳೆಯ ಪಾಲಿಕೆಯಾದರೂದೂರದೃಷ್ಟಿಯ ಕೊರತೆಯಿಂದಾಗಿ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ.

ವೆಂಕಟೇಶ ಮಾಚಕನೂರ
ಧಾರವಾಡ ಪ್ರತ್ಯೇಕ ಮಹಾನಗರಪಾಲಿಕೆ ಹೋರಾಟ ವೇದಿಕೆ, ಧಾರವಾಡ

ಸಣ್ಣ ಸಂಸ್ಥೆಗಳಿಂದ ಉತ್ತಮ ಅಡಳಿತ

ಒಂದು ಕಾಲದಲ್ಲಿ ಧಾರವಾಡ, ಹಾವೇರಿ, ಗದಗ ಸೇರಿ ಒಂದು ಜಿಲ್ಲೆಯಾಗಿತ್ತು. ಧಾರವಾಡದಿಂದ ಜಿಲ್ಲಾಧಿಕಾರಿ ರಾಣೆಬೆನ್ನೂರಿಗೆ ಹೋದರೆ, ಅಲ್ಲಿ ಒಂದು ದಿನ ಉಳಿದು ಮರುದಿನ ಬರಬೇಕಾದ ಸ್ಥಿತಿ ಇತ್ತು. ಇದರಿಂದ ಎರಡೂ ಪ್ರದೇಶದ ಜನರಿಗೆ ಒಬ್ಬ ಅಧಿಕಾರಿ ನ್ಯಾಯ ದೊರಕಿಸುವುದು ಕಷ್ಟದ ಮಾತಾಗಿತ್ತು. ಹೀಗಾಗಿ ಮೂರು ಜಿಲ್ಲೆಗಳನ್ನಾಗಿ ಮಾಡಲಾಯಿತು. ಅದರಂತೆಯೇ ಹುಬ್ಬಳ್ಳಿ ಮತ್ತು ಧಾರವಾಡ ಎರಡೂ ಜನಸಂಖ್ಯೆ ಮತ್ತು ಆದಾಯ ಸಂಗ್ರಹದಲ್ಲಿ ಉತ್ತಮವಾಗಿವೆ. ಎರಡನ್ನೂ ಪ್ರತ್ಯೇಕ ಪಾಲಿಕೆ ಮಾಡಿದರೆ ಆಡಳಿತ ಇನ್ನಷ್ಟು ಬಿಗಿಯಾಗಲಿದೆ. ಎರಡೂ ನಗರಗಳ ಜನರಿಗೆ ತಮ್ಮ ಬಳಿಯೇ ಆಡಳಿತ ಸಿಗಲಿದೆ. ಇದನ್ನು 2011ರಲ್ಲೇ ಪ್ರಸ್ತಾಪಿಸಲಾಗಿತ್ತು. ಈಗ ಅದು ಚುರುಕು ಪಡೆದಿದೆ. ಈಗಲಾದರೂ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ನೀಡಿದರೆ ಉತ್ತರ ಕರ್ನಾಟಕದ ಪ್ರಮುಖ ನಗರಗಳು ಇನ್ನಷ್ಟು ಉತ್ತಮವಾಗಿ ಬೆಳೆಯುವ ಸಾಧ್ಯತೆ ಹೆಚ್ಚು.

ಡಾ. ಪಾಂಡುರಂಗ ಪಾಟೀಲ
ಮಾಜಿ ಮೇಯರ್, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT