ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ತೃತೀಯ ರಂಗ– ಪ್ರಾದೇಶಿಕ ಪಕ್ಷಗಳ ರಾಷ್ಟ್ರರಾಜಕಾರಣದ ಕನಸು

Last Updated 5 ಅಕ್ಟೋಬರ್ 2022, 20:29 IST
ಅಕ್ಷರ ಗಾತ್ರ

ದೇಶದ ರಾಷ್ಟ್ರರಾಜಕಾರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅನ್ನು ಹೊರತುಪಡಿಸಿದ ತೃತೀಯ ರಂಗವನ್ನು ಸೃಷ್ಟಿಸುವ ಯತ್ನ ಈಚಿನ ವರ್ಷಗಳಲ್ಲಿ ಆರಂಭವಾಗಿದೆ. 2019ರ ಲೋಕಸಭಾ ಚುನಾವಣೆಗೂ ಮುನ್ನ ಇಂತಹ ಪ್ರಯತ್ನ ಆರಂಭವಾಗಿತ್ತು. ಆದರೆ ಆ ಯತ್ನಗಳೆಲ್ಲವೂ ರಾಷ್ಟ್ರೀಯ ಪಕ್ಷಗಳನ್ನು ಬದಿಗೊತ್ತಿ, ಪ್ರಾದೇಶಿಕ ಪಕ್ಷಗಳು ತಮ್ಮ ನೆಲೆಯನ್ನು ವಿಸ್ತರಿಸುವುದೇ ಆಗಿತ್ತು. ಆದರೆ ಅಂತಹ ರಂಗ ಅಸ್ತಿತ್ವಕ್ಕೆ ಬರುವ ಮುನ್ನವೇ ಈ ಪಕ್ಷಗಳ ನಡುವೆ ಪೈಪೋಟಿ ಹೆಚ್ಚಿ, ಯತ್ನವು ‍ವಿಫಲವಾಗಿತ್ತು. ಈಗ 2024ರ ಲೋಕಸಭಾ ಚುನಾವಣೆಗೆ ತೃತೀಯ ರಂಗವನ್ನು ಕಟ್ಟುವ ಯತ್ನಕ್ಕೆ ಮತ್ತೆ ಚಾಲನೆ ದೊರೆತಿದೆ. ಈ ಬಾರಿ ಅಂತಹ ಯತ್ನಕ್ಕೆ ಮುನ್ನುಡಿ ಬರೆದಿರುವುದು ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್.

2020, 2021 ಮತ್ತು 2022ರಲ್ಲಿ ಹಲವು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ವಿರುದ್ಧ ತೃತೀಯ ರಂಗವನ್ನು ಕಟ್ಟುವ ಯತ್ನ ನಡೆದಿತ್ತು. ಆದರೆ, ಎಲ್ಲಿಯೂ ಅಂತಹ ಯತ್ನಗಳು ಸಫಲವಾಗಲಿಲ್ಲ. ಇದರ ಮಧ್ಯೆಯೇ ಆಯಾ ರಾಜ್ಯದಲ್ಲಿನ ಪ್ರಾದೇಶಿಕ ಪಕ್ಷಗಳಲ್ಲಿ ಕೆಲವು, ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದವು. ಆ ತಂತ್ರಗಾರಿಕೆಯೂ ಸಫಲವಾಗಲಿಲ್ಲ. ಉತ್ತರ ಪ್ರದೇಶ, ಬಿಹಾರದಲ್ಲಿ ಸಮಾಜವಾದಿ ಪಕ್ಷ ಮತ್ತು ಆರ್‌ಜೆಡಿಗಳು ನಡೆಸಿದ ಆ ಯತ್ನಗಳು ಫಲ ನೀಡಲಿಲ್ಲ. ಆನಂತರ ತೃತೀಯ ರಂಗ ರಚಿಸುವ ಯತ್ನ ಮತ್ತೆ ಆರಂಭವಾಯಿತು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಇಂತಹ ಯತ್ನ ಆರಂಭಿಸಿದವರಲ್ಲಿ ಮೊದಲಿಗರು. ಅದರ ಭಾಗವಾಗಿ ಗೋವಾ ಮತ್ತು ತ್ರಿಪುರಾ ಚುನಾವಣೆಯಲ್ಲಿ ಟಿಎಂಸಿ ಸ್ಪರ್ಧಿಸಿ, ಹೀನಾಯ ವಾಗಿ ಸೋತಿತು. ಆ ನಂತರ, ಮಮತಾ ಅವರ ಈ ಯತ್ನದ ತೀವ್ರತೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಯಿತು.‌

ಆದರೆ ಕೆ.ಚಂದ್ರಶೇಖರ ರಾವ್ ಅವರು ತೃತೀಯ ರಂಗವನ್ನು ಕಟ್ಟುವ ಯತ್ನವನ್ನು ಮತ್ತೆ ಮತ್ತೆ ಮಾಡುತ್ತಲೇ ಇದ್ದಾರೆ. ಇದರ ಭಾಗವಾಗಿಯೇ ಅವರು ತಮ್ಮ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿಗೆ (ಟಿಆರ್‌ಎಸ್‌) ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಬುಧವಾರವಷ್ಟೇ ಮರುನಾಮಕರಣ ಮಾಡಿದ್ದಾರೆ. ಈ ನಡೆಗೂ ಮುನ್ನ ಅವರು ದೇಶದ ಪ್ರಮುಖ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಶಿವಸೇನಾದ ಉದ್ಧವ್ ಠಾಕ್ರೆ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿದ್ದರು. ಎನ್‌ಸಿಪಿ ಮುಖ್ಯಸ್ಥ ಶರದ್ ‍ಪವಾರ್ ಅವರನ್ನೂ ಭೇಟಿ ಮಾಡಿದ್ದರು. ಠಾಕ್ರೆ ಅವರನ್ನು ಹೈದರಾಬಾದ್‌ಗೆ ಆಹ್ವಾನಿಸಿದ್ದರು. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ಜತೆಗೂ ಮಾತುಕತೆ ನಡೆಸಿದ್ದರು. ತಮಿಳುನಾಡಿನಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷವಾದ ಡಿಎಂಕೆಯ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಜತೆಗೂ ಮಾತುಕತೆ ನಡೆಸಿದ್ದರು. ಹೀಗೆ ದೇಶದ ಪ್ರಮುಖ ಪ್ರಾದೇಶಿಕ ಪಕ್ಷಗಳ ಮುಖ್ಯಸ್ಥರನ್ನು ಸ್ವತಃ ಭೇಟಿ ಮಾಡಿ, ತೃತೀಯ ರಂಗದ ಪ್ರಸ್ತಾವವನ್ನು ಕೆ.ಸಿ.ಆರ್‌ ಇಟ್ಟಿದ್ದರು.

ಆದರೆ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್‌ ವರಿಷ್ಠರು ಮತ್ತು ಡಿಎಂಕೆಯ ಮಿತ್ರ‍ಪಕ್ಷವಾದ ವಿಕೆಸಿ ಪಕ್ಷದ ಪ್ರತಿನಿಧಿ ಮಾತ್ರ ಭಾಗಿಯಾಗಿದ್ದಾರೆ. ಬೇರೆ ಪ್ರಮುಖ ಪ್ರಾದೇಶಿಕ ಪಕ್ಷಗಳ ಪ್ರಮುಖರು ಮತ್ತು ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಆದರೆ, ಕೆ.ಸಿ.ಆರ್‌ ಅವರಿಗೆ ರಾಷ್ಟ್ರಮಟ್ಟದಲ್ಲಿ ವರ್ಚಸ್ಸು ಇದೆ. ನಾವು ರಾಷ್ಟ್ರ ರಾಜಕಾರಣವನ್ನು ಪ್ರವೇಶಿಸುತ್ತೇವೆ ಎಂದು ನೂತನ ಬಿಆರ್‌ಎಸ್‌ ಪಕ್ಷ ಘೋಷಿಸಿದೆ.

---

ರಾಷ್ಟ್ರೀಯ ಪಕ್ಷವಾಗಬೇಕಾದರೆ

ಬಿಆರ್‌ಎಸ್‌ ರಾಷ್ಟ್ರೀಯ ಪಕ್ಷ ಎನಿಸಿಕೊಳ್ಳುವ ಹಾದಿ ಸುಲಭವಿಲ್ಲ. ಯಾವುದೇ ಪಕ್ಷವು ರಾಷ್ಟ್ರೀಯ ಪಕ್ಷ ಎನಿಸಿ ಕೊಳ್ಳಬೇಕಾದರೆ ಕೆಲವು ಷರತ್ತುಗಳನ್ನು ಪೂರೈಸಬೇಕಾಗುತ್ತದೆ. ಆ ಷರತ್ತುಗಳು ಈ ರೀತಿ ಇವೆ.

l ಯಾವುದೇ ನಾಲ್ಕು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಶೇ 6ರಷ್ಟು ಮತಗಳನ್ನು ಪಡೆದಿರಬೇಕು

l ಒಂದು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳು ಸೇರಿ ಒಟ್ಟು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರಬೇಕು

l ಒಟ್ಟು ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಶೇ 2ರಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರಬೇಕು

l ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ರಾಜ್ಯ ಪಕ್ಷದ ಸ್ಥಾನಮಾನವನ್ನು ಪಕ್ಷವು ಪಡೆದಿರಬೇಕು

ಬಿಆರ್‌ಎಸ್‌ನ ಪ್ರಧಾನ ನೆಲೆ ತೆಲಂಗಾಣ ಮಾತ್ರ. ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ನೆಲೆ ಕಂಡುಕೊಳ್ಳಲು ಪಕ್ಷವು ಯತ್ನ ನಡೆಸಿದೆಯಾದರೂ, ಅದು ನಿರೀಕ್ಷಿತ ಫಲ ನೀಡಿಲ್ಲ.

ಮಹತ್ವಾಕಾಂಕ್ಷಿ ಮಮತಾ

ಪಶ್ಚಿಮ ಬಂಗಾಳದಲ್ಲಿ ಸತತ ಮೂರು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಧುಮುಕುವ ಅಭಿಲಾಷೆ ಉತ್ಕಟವಾಗಿದೆ. 2021ರಲ್ಲಿ ಪಶ್ಚಿಮ ಬಂಗಾಳ ವಿಧಾಸನಸಭೆಗೆ ನಡೆದ ಚುನಾವಣೆ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಅಧಿಕಾರಕ್ಕೆ ಬರಲೇಬೇಕು ಎಂದು ಹಟ ತೊಟ್ಟಿದ್ದ ಬಿಜೆಪಿ ವಿರುದ್ಧ ಮಮತಾ ಸ್ಪಷ್ಟ ಗೆಲುವು ದಾಖಲಿಸಿ ಬೀಗಿದ್ದರು. ಗಾಲಿಕುರ್ಚಿಯಲ್ಲೇ ಚುನಾವಣಾ ಪ್ರಚಾರ ನಡೆಸಿ, ಬಿಜೆಪಿಯ ಆಸೆಗೆ ತಣ್ಣೀರೆರಚಿದ್ದರು. ಬಿಜೆಪಿಗೆ ದೊಡ್ಡ ಮಟ್ಟದ ಹೊಡೆತ ನೀಡುವುದು ಸಾಧ್ಯವಾಗಿದ್ದರಿಂದ, ಟಿಎಂಸಿ ಪಾಳಯದಲ್ಲಿ ರಾಷ್ಟ್ರ ರಾಜಕಾರಣ ಮಹತ್ವಾಕಾಂಕ್ಷೆ ಪ್ರಬಲವಾಯಿತು.

ಆದರೆ, ಬಂಗಾಳದ ಗೆಲುವಿನ ಉತ್ಸಾಹದಲ್ಲಿ ಗೋವಾ ಹಾಗೂ ತ್ರಿಪುರಾ ವಿಧಾನಸಭಾ ಚುನಾವಣೆಗೆ ಧುಮುಕಿದ ಪಕ್ಷಕ್ಕೆ ಆಘಾತವಾಯಿತು. ಐದು ತಿಂಗಳ ಕಡಿಮೆ ಅವಧಿಯಲ್ಲಿ ಗೋವಾದಲ್ಲಿ ಬಿರುಸಿನ ಚಟುವಟಿಕೆ ಗಳನ್ನು ನಡೆಸಿತು. ಸ್ಥಳೀಯ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿಯಿತು. ಆದರೆ, ಮಮತಾ ಅಂದುಕೊಂಡಂತೆ ಏನೂ ಮಾಡಲಾಗಲಿಲ್ಲ. ಒಂದೂ ಸ್ಥಾನ ಸಿಗದೇ ಟಿಎಂಸಿ ನಿರಾಸೆ ಅನುಭವಿಸಿತು. ಆದರೆ ಚಲಾವಣೆಯಾದ ಒಟ್ಟು ಮತಗಳಲ್ಲಿ
ಶೇ 5ರಷ್ಟು ಮತಗಳನ್ನು ಗಳಿಸುವಲ್ಲಿ ಟಿಎಂಸಿ ಯಶಸ್ವಿಯಾಗಿತ್ತು. ಇದು ದೊಡ್ಡ ಹೆಜ್ಜೆ ಎಂದು ಟಿಎಂಸಿ ನಾಯಕರು ಕರೆದರು.

2023ರಲ್ಲಿ ನಡೆಯಲಿರುವ ಮೇಘಾಲಯ ಹಾಗೂ ತ್ರಿಪುರಾ ವಿಧಾನಸಭಾ ಚುನಾವಣೆಗಳ ಮೇಲೆ ಪಕ್ಷ ದೃಷ್ಟಿ ಹಾಯಿಸಿದೆ. ಈ ಎರಡೂ ರಾಜ್ಯಗಳಲ್ಲಿ ಪಕ್ಷದ ಚಟುವಟಿಕೆಗಳು ಬಿರುಸಿನಿಂದ ಸಾಗಿದ್ದು, ಶಾಸಕರು ಸೇರಿದಂತೆ ಹಲವು ಮುಖಂಡರು ಟಿಎಂಸಿ ಸೇರ್ಪಡೆ
ಯಾಗಿದ್ದಾರೆ. ಗೋವಾದಲ್ಲಿ ಚುನಾವಣೆಗೆ ಸಿದ್ಧವಾಗಲು ಪಕ್ಷಕ್ಕೆ ಕಡಿಮೆ ಸಮಯಾವಕಾಶ ಸಿಕ್ಕಿತ್ತು. ಮೇಘಾಲಯ ಮತ್ತು ತ್ರಿಪುರಾದಲ್ಲಿ ಈ ರೀತಿ ಆಗದಂತೆ ಟಿಎಂಸಿ ನೋಡಿಕೊಂಡಿದ್ದು, ಈಗಾಗಲೇ ಚುನಾವಣಾ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಿದೆ.

ಬಂಗಾಳದ ಆಚೆಗೂ ಪಕ್ಷದ ಅಸ್ತಿತ್ವವನ್ನು ಸ್ಥಾಪಿಸುವ ಟಿಎಂಸಿ ಮಹತ್ವಾಕಾಂಕ್ಷೆ ಹೊಸದಲ್ಲ. 2011ರಲ್ಲಿ ರಾಜ್ಯದಿಂದ ಎಡಪಕ್ಷಗಳ ಸರ್ಕಾರವನ್ನು ಕೆಳಗಿಳಿಸಿದ ಬಳಿಕ ಈ ಆಸೆ ಚಿಗುರೊಡೆದಿತ್ತು. 2012ರಲ್ಲಿ ಈಶಾನ್ಯಭಾಗದ ಹಲವು ರಾಜ್ಯಗಳಲ್ಲಿ ಟಿಎಂಸಿ ಘಟಕಗಳನ್ನು ಶುರು ಮಾಡಲಾಗಿತ್ತು. ಆದರೆ, ಕೆಲವೇ ವರ್ಷಗಳಲ್ಲಿ ರಾಜ್ಯ ಘಟಕಗಳ ಮುಖಂಡರು ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ವಲಸೆ ಹೋದರು. ಹೀಗಾಗಿ ಈ ಎಲ್ಲ ರಾಜ್ಯ ಘಟಕಗಳನ್ನು ಟಿಎಂಸಿ ಮುಚ್ಚಿತ್ತು.

ಟಿಎಂಸಿಯ ರಾಷ್ಟ್ರೀಯ ಅಭಿಲಾಷೆಗೆ ಅಡ್ಡಿಯಾಗಿರುವುದು ಬಂಗಾಳಿ ಅಸ್ಮಿತೆ. ಕಳೆದ ವರ್ಷದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಬಂಗಾಳಿ ಅಸ್ತ್ರವನ್ನು ಬಳಸಿಯೇ ಮತ ಕೇಳಿತ್ತು. ಬಂಗಾಳಿ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳ ದೃಷ್ಟಿಕೋನದಲ್ಲೇ ಟಿಎಂಸಿಯನ್ನು ನೋಡಲಾಗುತ್ತಿದೆ. ಇದು ಬಂಗಾಳಿಗರ ಪಕ್ಷ ಎಂದೇ ಕರೆಯಲಾಗುತ್ತದೆ. ಬಹುಶಃ ಇದು, ಟಿಎಂಸಿಯ ರಾಷ್ಟ್ರೀಯ ರಾಜಕಾರಣದ ಆಕಾಂಕ್ಷೆಗೆ ಅಡ್ಡಿಯಾಗಬಹುದು ಎಂದು ವಿಶ್ಲೇಷಿಸಲಾಗಿದೆ.


ಗುಜರಾತ್, ಹಿಮಾಚಲದ ಮೇಲೆ ಎಎಪಿ ಕಣ್ಣು

ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಐತಿಹಾಸಿಕ ಸತ್ಯಾಗ್ರಹದ ಬಳಿಕ ಹುಟ್ಟಿಕೊಂಡ ಆಮ್ ಆದ್ಮಿ ಪಕ್ಷ (ಎಎಪಿ) ಕೆಲವೇ ವರ್ಷಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಛಾಪು ಮೂಡಿಸಿತು. 2013ರಲ್ಲಿ ದೆಹಲಿಯಿಂದ ಆರಂಭವಾದ ಎಎಪಿ ಜೈತ್ರಯಾತ್ರೆ, ಪಕ್ಕದ ಪಂಜಾಬ್‌ಗೂ ವಿಸ್ತರಿಸಿದೆ. ಮುಂದಿನ ವರ್ಷ ಗುಜರಾತ್‌ ವಿಧಾನಸಭೆಗೆ ನಡೆಯಲಿರುವ ಚುನಾವಣೆ ಮೇಲೆ ಎಎಪಿ ದೃಷ್ಟಿ ನೆಟ್ಟಿದ್ದು, ಆಡಳಿತಾರೂಢ ಬಿಜೆಪಿಗೆ ದೊಡ್ಡ ಮಟ್ಟದ ಪೈಪೋಟಿ ನೀಡಲು ಸಜ್ಜುಗೊಳ್ಳುತ್ತಿದೆ.

2013ರ ಚುನಾವಣೆಯಲ್ಲಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರವನ್ನೂ ಹಿಡಿಯಿತು. ಇದರ ಹುರುಪಿನಿಂದ, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಪಕ್ಷವನ್ನು ದೇಶದಾದ್ಯಂತ ವಿಸ್ತರಿಸಲು ಮುಂದಾದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ 434 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ದಿಟ್ಟತನ ತೋರಿದ್ದರು. ಆದರೆ, 414 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು.

ದೇಶದಾದ್ಯಂತ ಪಕ್ಷದ ಹರವು ವಿಸ್ತರಿಸುವ ಅವರ ಯತ್ನಕ್ಕೆ ಇದರಿಂದ ಅಡ್ಡಿಯಾಗಲಿಲ್ಲ. ಇದಾದ ಬಳಿಕ ವಿಧಾನಸಭಾ ಚುನಾವಣೆಗಳು ನಡೆದ 6 ರಾಜ್ಯಗಳಲ್ಲಿ ಒಟ್ಟು 554 ಅಭ್ಯರ್ಥಿಗಳನ್ನು ಅವರು ಪಕ್ಷದಿಂದ ಕಣಕ್ಕಿಳಿಸಿದರು. ಯಾವ ಅಭ್ಯರ್ಥಿಯೂ ಗೆಲ್ಲಲಿಲ್ಲವಾದರೂ, ಶೇ 0.7ರಷ್ಟು ಮತ ಪ್ರಮಾಣವನ್ನು ಪಕ್ಷ ಗಳಿಸಿತ್ತು. 2017ರಲ್ಲಿ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಗೆ ಎಎಪಿ ಮೊದಲ ಬಾರಿಗೆ ಧುಮುಕಿತು. ಒಟ್ಟು 117 ಸ್ಥಾನಗಳ ಪೈಕಿ 20 ಕಡೆಗಳಲ್ಲಿ ಎಎಪಿ ಶಾಸಕರು ಗೆದ್ದು ಬಂದರು. ಇದು ಎಎಪಿಗೆ ದೊಡ್ಡ ಬಲ ತಂದುಕೊಟ್ಟಿತು. ಇದೇ ವರ್ಷದ ಆರಂಭದಲ್ಲಿ ಪಂಜಾಬ್‌ನಲ್ಲಿ ಎಎಪಿ 92 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತು. ಆದರೆ, ಇದೇ ಫೆಬ್ರುವರಿಯಲ್ಲಿ ನಡೆದ ಗೋವಾ ವಿಧಾನಸಭಾ ಫಲಿತಾಂಶ ಎಎಪಿಗೆ ಕಹಿಯಾಯಿತು.

ತಳಮಟ್ಟದಿಂದ ಪಕ್ಷವನ್ನು ಕಟ್ಟುವಲ್ಲಿ ಎಎಪಿ ಸೈ ಎನಿಸಿದ್ದರಿಂದ ದೆಹಲಿ ಹಾಗೂ ಪಂಜಾಬ್‌ನಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿದೆ ಎನ್ನುತ್ತಾರೆ ವಿಶ್ಲೇಷಕರು. ಗುಜರಾತ್‌, ಮಧ್ಯಪ್ರದೇಶ, ಹರಿಯಾಣದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಎಪಿ ಗಮನಾರ್ಹ ಪ್ರಗತಿ ದಾಖಲಿಸಿದೆ. ಚಂಡೀಗಢ ಮಹಾನಗರ ಪಾಲಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಚುನಾವಣೆ ನಡೆಯಲಿರುವ ಗುಜರಾತ್, ಹಿಮಾಚಲ ಪ್ರದೇಶ, ರಾಜಸ್ಥಾನ, ಹರಿಯಾಣ, ಛತ್ತೀಸಗಡ, ಅಸ್ಸಾಂ, ತೆಲಂಗಾಣ ಮತ್ತು ಕೇರಳ ರಾಜ್ಯಗಳಿಗೆ ಪದಾಧಿಕಾರಿಗಳನ್ನು ನೇಮಿಸಿ ಪಕ್ಷದ ಚಟುವಟಿಕೆಯನ್ನು ಚುರುಕೊಗೊಳಿಸಿದ್ದು, ಹಂತ ಹಂತವಾಗಿ ದೇಶದಾದ್ಯಂತ ಪಕ್ಷವನ್ನು ವಿಸ್ತರಿಸಲು ಮುಂದಾಗಿದೆ.

ಕರ್ನಾಟಕದ ಮೇಲೆ ಎನ್‌ಪಿಪಿ ಕಣ್ಣು

ಮೇಘಾಲಯದಲ್ಲಿ ನೆಲೆ ಹೊಂದಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ರಾಷ್ಟ್ರ ರಾಜಕಾರಣದ ಕನಸು ಕಾಣುತ್ತಿದೆ. ಚುನಾವಣೆ ನಡೆಯಲಿರುವ ಕರ್ನಾಟಕ, ತ್ರಿಪುರಾ ಹಾಗೂ ನಾಗಾಲ್ಯಾಂಡ್‌ನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲುಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಸಜ್ಜಾಗಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪಕ್ಷದ ಕಾರ್ಯಕಾರಣಿಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ.

ಕರ್ನಾಟಕದಲ್ಲಿ 50ರಿಂದ 100 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಿಂತನೆಯಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಭು ಬೊಸ್ಕೊ ಅವರು ಹೇಳಿದ್ದಾರೆ. ಬಿಬಿಎಂಪಿ ಚುನಾವಣೆಯಲ್ಲೂ ಸ್ಪರ್ಧಿಸುವ ಬಗ್ಗೆ ಸಮಾಲೋಚನೆ ನಡೆಯುತ್ತಿದ್ದು, ರಾಜ್ಯದ ಹಲವು ಯುವ ನಾಯಕರನ್ನು ಗುರುತಿಸುವ ಕೆಲಸ ಆಗಿದೆ ಎಂದಿದ್ದಾರೆ. ಶೇ 50ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ಮೀಸಲಿಡುವ ಉದ್ದೇಶವನ್ನೂ ಪಕ್ಷ ಹೊಂದಿದೆ.

23 ಶಾಸಕರನ್ನು ಹೊಂದಿರುವ ಎನ್‌ಪಿಪಿ, ಬಿಜೆಪಿ ಜತೆ ಸೇರಿ ಮೇಘಾಲದಯಲ್ಲಿ ಅಧಿಕಾರ ನಡೆಸುತ್ತಿದೆ. ನಾಗಾಲ್ಯಾಂಡ್‌ನಲ್ಲಿ ಪಕ್ಷದ ಇಬ್ಬರು ಶಾಸಕರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT