ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಉಕ್ರೇನ್‌ ಗಡಿಗಳಲ್ಲಿ ನ್ಯಾಟೊ ಶಸ್ತ್ರಕೋಠಿ, ಹೆಚ್ಚಿದ ಆತಂಕ

ನ್ಯಾಟೊ ದೇಶಗಳಿಂದ ಸೇನಾ ನೆರವು; ಅಪಾಯಕಾರಿ ರೂಪ ತಳೆದ ರಷ್ಯಾ–ಉಕ್ರೇನ್ ಸಂಘರ್ಷ
Last Updated 6 ಮಾರ್ಚ್ 2022, 22:00 IST
ಅಕ್ಷರ ಗಾತ್ರ

(ಉಕ್ರೇನ್ ಜೊತೆ ಗಡಿ ಹಂಚಿಕೊಂಡಿರುವ ದೇಶಗಳಿಗೆ ನ್ಯಾಟೊ ಸದಸ್ಯ ದೇಶಗಳು ಸೇನೆ ಹಾಗೂ ಶಸ್ತ್ರಾಸ್ತ್ರ ಕಳುಹಿಸಿವೆ. ಬೆಲ್ಜಿಯಂ, ಕೆನಡಾ, ಜೆಕ್ ಗಣರಾಜ್ಯ, ಎಸ್ಟೋನಿಯಾ, ಫ್ರಾನ್ಸ್, ಜರ್ಮನಿ, ಗ್ರೀಸ್, ಲಾಟ್ವಿಯಾ, ಲಿಥುವೇನಿಯಾ, ದಿ ನೆದರ್ಲೆಂಡ್ಸ್, ಪೋಲೆಂಡ್, ಪೋರ್ಚುಗಲ್, ರೊಮೇನಿಯಾ, ಸ್ಲೋವಾಕಿಯಾ, ಸ್ಲೊವೇನಿಯಾ, ಬ್ರಿಟನ್ ಹಾಗೂ ಅಮೆರಿಕ ದೇಶಗಳು ಉಕ್ರೇನ್‌ಗೆ ಈಗಾಗಲೇ ಸೇನಾ ಉಪಕರಣ ಹಾಗೂ ಕೋಟ್ಯಂತರ ಡಾಲರ್ ಹಣಕಾಸು ನೆರವು ನೀಡಿವೆ ಅಥವಾ ನೀಡಲು ಅನುಮತಿ ಕೊಟ್ಟಿವೆ)

ಡಚ್ಚರು ರಾಕೆಟ್ ಲಾಂಚರ್‌ಗಳನ್ನು, ಎಸ್ಟೋನಿಯಾದವರು ಟ್ಯಾಂಕ್ ನಿಗ್ರಹ ಕ್ಷಿಪಣಿಗಳನ್ನು, ಪೋಲೆಂಡ್ ಹಾಗೂ ಲಾಟ್ವಿಯಾದವರು ನೆಲದ ಮೇಲ್ಮೈನಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಗಳನ್ನು ಒದಗಿಸುತ್ತಿದ್ದಾರೆ. ಜೆಕ್ ಗಣರಾಜ್ಯದವರು ಮಷಿನ್ ಗನ್, ಸ್ನೈಪರ್ ರೈಫಲ್, ಪಿಸ್ತೂಲ್ ಹಾಗೂ ಮದ್ದುಗುಂಡುಗಳನ್ನು ಪೂರೈಸುತ್ತಿದ್ದಾರೆ. ತಟಸ್ಥ ನಿಲುವಿನ ದೇಶಗಳು ಎನಿಸಿಕೊಂಡಿರುವ ಸ್ವೀಡನ್, ಫಿನ್ಲೆಂಡ್‌ ಸಹ ಶಸ್ತ್ರಾಸ್ತ್ರಗಳನ್ನು ನೀಡುತ್ತಿವೆ.ಭುಜದ ಮೇಲೆ ಹೊತ್ತು ಉಡಾಯಿಸಬಲ್ಲ ರಾಕೆಟ್ ಲಾಂಚರ್‌ಗಳನ್ನು ಜರ್ಮನಿ ಕಳುಹಿಸಿಕೊಡುತ್ತಿದೆ.

ನ್ಯಾಟೊ ಸದಸ್ಯತ್ವ ಹಾಗೂ ಐರೋಪ್ಯ ಒಕ್ಕೂಟದ ಸದಸ್ಯತ್ವ ಪಡೆದಿರುವ ಸುಮಾರು 20 ದೇಶಗಳುರಷ್ಯಾದ ಆಕ್ರಮಣಕಾರರ ವಿರುದ್ಧ ಹೋರಾಡಲು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿವೆ.ಇದೇ ವೇಳೆ ನ್ಯಾಟೊ ಸಹ, ಅಪಾರ ಪ್ರಮಾಣದ ಸೇನಾ ಸಲಕರಣೆಗಳನ್ನು ಮತ್ತು 22,000ಕ್ಕೂ ಹೆಚ್ಚು ಸೈನಿಕರನ್ನು ರಷ್ಯಾ ಮತ್ತು ಬೆಲಾರುಸ್ ಗಡಿಯಲ್ಲಿರುವ ಸದಸ್ಯ ರಾಷ್ಟ್ರಗಳಿಗೆ ಸ್ಥಳಾಂತರಿಸುತ್ತಿದೆ.

ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿಯು ಐರೋಪ್ಯ ಒಕ್ಕೂಟದ ದೇಶಗಳನ್ನು ಒಗ್ಗೂಡಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಂದ ದೀರ್ಘಕಾಲದಲ್ಲಿ ಎದುರಾಗಬಹುದಾದ ಅಪಾಯವನ್ನು ಎದುರಿಸುವತ್ತ ಈ ದೇಶಗಳು ಗಮನ ಕೇಂದ್ರೀಕರಿಸಿವೆ.ಸದಸ್ಯ ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಹಾಗೂ ಹಣದ ನೆರವು ನೀಡುವ ಮೂಲಕ, ತಮ್ಮದು ಅತಿದೊಡ್ಡ ಸೇನಾ ಶಕ್ತಿ ಎಂಬುದನ್ನು ಬಿಂಬಿಸಲು ಐರೋಪ್ಯ ಒಕ್ಕೂಟ ಯತ್ನಿಸುತ್ತಿದೆ.

ಐರೋಪ್ಯ ಶಸ್ತ್ರಾಸ್ತ್ರ ಪಡೆಯು ಉಕ್ರೇನ್‌ನ ಸಮರಾಂಗಣಕ್ಕೆ ಧುಮುಕಲಿದೆಯೇ ಅಥವಾ ಯುದ್ಧವು ಜಾಗತಿಕ ಸ್ವರೂಪ ಪಡೆದುಕೊಳ್ಳಲಿದೆಯೇ ಎಂಬುದು ಪುಟಿನ್ ನಿಲುವುಗಳನ್ನು ಅವಲಂಬಿಸಿದೆ. ಆದರೆ, ಪೋಲೆಂಡ್ ಗಡಿಗೆ ಮಾರಕ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿರುವುದರ ಹಿಂದಿನ ಉದ್ದೇಶ ರಷ್ಯಾ ಸೈನಿಕರನ್ನು ಕೊಲ್ಲುವುದೇ ಆಗಿದೆ. ‘ಉಕ್ರೇನ್‌ಗೆ ನೆರವು ನೀಡುವ ಮೂಲಕ ರಷ್ಯಾವನ್ನು ನಾಶ ಮಾಡಲು ನ್ಯಾಟೊ ಯತ್ನಿಸುತ್ತಿದೆ’ ಎಂದು ಪುಟಿನ್ ಇತ್ತೀಚೆಗೆ ತಮ್ಮ ಭಾಷಣಗಳಲ್ಲಿ ಆರೋಪಿಸಿದ್ದರು. ಯುರೋಪ್ ಮತ್ತು ಅಮೆರಿಕದ ಮಧ್ಯಪ್ರವೇಶವನ್ನು ನಿಗ್ರಹಿಸಲು ಪರಮಾಣು ದಾಳಿಯ ಎಚ್ಚರಿಕೆ ನೀಡುವ ಯತ್ನವನ್ನೂ ಪುಟಿನ್ ಮಾಡಿದ್ದರು.

ಸಣ್ಣ ಸಂಘರ್ಷಗಳಿಂದ ಹುಟ್ಟಿಕೊಂಡ ಜಾಗತಿಕ ಯುದ್ಧಗಳು ಬಹುತೇಕ ನ್ಯಾಟೊ ಸದಸ್ಯ ದೇಶಗಳ ವ್ಯಾಪ್ತಿಯಲ್ಲಿ ಆಗಿವೆ. ಈ ಸಂಘರ್ಷಗಳು ಇತರೆ ದೇಶಗಳನ್ನು ಅನಿರೀಕ್ಷಿತವಾಗಿ ಯುದ್ಧದೊಳಕ್ಕೆ ಎಳೆದು ತರುವ ಅಪಾಯವನ್ನು ಹೊಂದಿದೆ.

ನ್ಯಾಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್‌ಟೆನ್‌ಬರ್ಗ್ ಅವರು ಇತ್ತೀಚೆಗೆ ಪೋಲೆಂಡ್‌ ವಾಯುನೆಲೆಗೆ ಭೇಟಿ ನೀಡಿದ್ದರು. ‘ಪುಟಿನ್‌ ಆರಂಭಿಸಿರುವ ಯುದ್ಧವು ನಮ್ಮೆಲ್ಲರ ಮೇಲೂ ಪರಿಣಾಮ ಬೀರಲಿದ್ದು, ನ್ಯಾಟೊ ಮಿತ್ರದೇಶಗಳು ಒಂದಾಗಿ ಪರಸ್ಪರರನ್ನು ರಕ್ಷಿಸಿಕೊಳ್ಳಲಿವೆ’ ಎಂದು ಅವರು ಹೇಳಿದ್ದರು. ‘ನ್ಯಾಟೊ ಸದಸ್ಯ ದೇಶಗಳಿಗೆ ಸೇರಿದ ಜಾಗದ ಒಂದು ಇಂಚನ್ನೂ ಬಿಡದಂತೆ ರಕ್ಷಿಸಿಕೊಳ್ಳುತ್ತೇವೆ. ತಪ್ಪು ಲೆಕ್ಕಾಚಾರ ಅಥವಾ ತಪ್ಪು ಗ್ರಹಿಕೆಗೆ ಜಾಗ ಇರಬಾರದು’ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಸದ್ಯಕ್ಕೆ ಯುದ್ಧವು ಉಕ್ರೇನ್‌ಗೆ ಸೀಮಿತವಾಗಿದೆ. ತಮ್ಮ ಸೈನಿಕರು ರಷ್ಯಾ ವಿರುದ್ಧ ಹೋರಾಡುವುದಿಲ್ಲ, ಆದರೆ ಉಕ್ರೇನಿಯನ್ನರು ತಮ್ಮನ್ನು ತಾವು ರಕ್ಷಿಸಿಕೊಳ್ಳುವಲ್ಲಿ ಸೈನಿಕರು ಸಕ್ರಿಯವಾಗಿ ನೆರವಾಗುತ್ತಿದ್ದಾರೆ ಎಂದುನ್ಯಾಟೊ ಮತ್ತು ಐರೋಪ್ಯ ಒಕ್ಕೂಟ ಸ್ಪಷ್ಟವಾಗಿ ತಿಳಿಸಿವೆ. ಆದರೆ,ಐರೋಪ್ಯ ಒಕ್ಕೂಟದ 27 ದೇಶಗಳ ಪೈಕಿ 21 ದೇಶಗಳು ಪೋಲೆಂಡ್‌ ಮೂಲಕ ಶಸ್ತ್ರಾಸ್ತ್ರಗಳನ್ನು ಪ್ರತ್ಯೇಕವಾಗಿ ಸಾಗಿಸುತ್ತಿವೆ. ಹೀಗಾಗಿ ಈ ಯತ್ನವನ್ನು ನ್ಯಾಟೊ ಅಥವಾ ಐರೋಪ್ಯ ಒಕ್ಕೂಟದ ಅಧಿಕೃತ ನಿಯೋಜನೆ ಎಂದು ಹೇಳಲಾಗದು. ಈ ಎಲ್ಲ ಶಸ್ತ್ರಾಸ್ತ್ರ ಹಾಗೂ ಸೇನಾ ನಿಯೋಜನೆ ಪ್ರಕ್ರಿಯೆಯನ್ನು ಐರೋಪ್ಯ ಒಕ್ಕೂಟದ ಅಧಿಕಾರಿಗಳು ನಿರ್ವಹಣೆ ಮಾಡುತ್ತಿದ್ದಾರೆ ಎಂದು ಫ್ರಾನ್ಸ್ ಹೇಳಿದೆ. ಬ್ರಿಟನ್ ಮತ್ತು ಅಮೆರಿಕ ಸಹ ನಿರ್ವಹಣೆಯಲ್ಲಿ ತೊಡಗಿವೆ. ಈ ಎಲ್ಲ ಪ್ರಕ್ರಿಯೆಗಳನ್ನು ಉದ್ದೇಶಪೂರ್ವಕವಾಗಿ ಸದ್ದಿಲ್ಲದೇ ಮಾಡಲಾಗುತ್ತಿದೆ. ಇದಕ್ಕೆ ಅಂತರರಾಷ್ಟ್ರೀಯ ದಾನಿಗಳ ಸಮನ್ವಯ ಕೇಂದ್ರ ಎಂದು ಕರೆಯಲಾಗಿದೆ. ಆದರೆ ಇಂತಹ ಹೆಸರುಗಳಿಂದ ಪುಟಿನ್ ಅವರನ್ನು ಮೋಸಗೊಳಿಸುವುದು ಕಷ್ಟ.

‘ರಷ್ಯಾ ವಿರುದ್ಧ ಪ್ರಬಲ ಪ್ರತಿರೋಧ ತೋರಲು ಉಕ್ರೇನ್‌ಗೆ ನೆರವಾಗುವುದು ಒಳ್ಳೆಯದೇ. ಆದರೆ ಪುಟಿನ್ ಇದಕ್ಕೆ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕುತೂಹಲವಿದೆ. ಅವರು ಗಡಿಯ ಮತ್ತೊಂದು ಕಡೆಯಿಂದ ದಾಳಿ ನಡೆಸಬಹುದು’ ಎಂದು ರಕ್ಷಣಾ ಸಂಶೋಧನಾ ಸಂಸ್ಥೆ ರಾಯಲ್ ಯುನೈಟೆಡ್ ಸರ್ವೀಸ್‌ ಇನ್‌ಸ್ಟಿಟ್ಯೂಟ್‌ನ ಉಪ ನಿರ್ದೇಶಕ ಮಾಲ್ಕಮ್ ಚಾಲ್ಮರ್ಸ್‌ ಹೇಳುತ್ತಾರೆ.

ರಷ್ಯಾದ ಯುದ್ಧವಿಮಾನಗಳು ಉಕ್ರೇನ್ ವಿಮಾನಗಳನ್ನು ಬೆನ್ನಟ್ಟಿ ನ್ಯಾಟೊ ವಾಯುಪ್ರದೇಶವನ್ನು ಪ್ರವೇಶಿಸುವ ಸಾಧ್ಯತೆಯಿದೆ. ಒಂದು ವೇಳೆ ರಷ್ಯಾ ದೇಶವು ಇಂಟರ್ನೆಟ್‌ ಅನ್ನು ಸ್ಥಗಿತಗೊಳಿಸಿದರೆ ಸೇನೆ ಹಾಗೂ ಜನರ ನಡುವೆ ಸಂವಹನ ನಡೆಸಲು ಉಕ್ರೇನ್‌ಗೆ ಕಷ್ಟವಾಗಬಹುದು. ಹೀಗಾಗಿ ಸುರಕ್ಷಿತ ಸಂವಹನ ಉಪಕರಣಗಳೂ ಸೇರಿದಂತೆ ಉಕ್ರೇನ್‌ಗೆ ಕ್ಷಿಪಣಿ, ಟ್ಯಾಂಕ್ ನಿರೋಧಕ ಶಸ್ತ್ರಾಸ್ತ್ರಗಳ ಪೂರೈಕೆ ನಿರ್ಣಾಯಕವಾಗಿದೆ ಎಂದು ನ್ಯಾಟೊಗೆ ಅಮೆರಿಕದ ರಾಯಭಾರಿಯಾಗಿದ್ದ ಮಾಜಿ ಲೆಫ್ಟಿನೆಂಟ್ ಜನರಲ್ ಡಗ್ಲಾಸ್ ಲೂಟ್ ಹೇಳುತ್ತಾರೆ.

ಅಫ್ಗಾನಿಸ್ತಾನದ ಮೇಲೆ ನ್ಯಾಟೊ ಪಡೆಗಳು ದಾಳಿ ಮಾಡುವಾಗ ಪಾಕಿಸ್ತಾನವನ್ನು ನೆಲೆಯಾಗಿಸಿಕೊಂಡಿದ್ದವು. ಅದೇ ರೀತಿ ಪೋಲೆಂಡ್‌ನಲ್ಲಿ ಶಸ್ತ್ರಕೋಠಿ ಸ್ಥಾಪಿಸಿ, ಅವುಗಳನ್ನು ಉಕ್ರೇನ್‌ಗೆ ಸರಬರಾಜು ಮಾಡುವ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ.

******

ಸದ್ದಿಲ್ಲದೇ ಸಿದ್ದತೆ

ರಷ್ಯಾದಿಂದ ಯುದ್ಧ ಘೋಷಣೆ ಬಳಿಕ ಉಕ್ರೇನ್ ಗಡಿಯಲ್ಲಿರುವ ರೊಮೇನಿಯಾ, ಪೋಲೆಂಡ್, ಸ್ಲೋವೇನಿಯಾ ದೇಶಗಳಲ್ಲಿ ನ್ಯಾಟೊ ದೇಶಗಳು ಬೀಡುಬಿಟ್ಟಿವೆ. ಆದರೆ ಯಾರೂ ಉಕ್ರೇನ್ ಗಡಿ ಪ್ರವೇಶಿಸಿಲ್ಲವಾದರೂ, ಶಸ್ತ್ರಾಸ್ತ್ರ ಹಾಗೂ ಹಣಕಾಸು ನೆರವು ಒದಗಿಸುತ್ತಿವೆ. ಯುದ್ಧ ಘೋಷಣೆಯಾದ ಮರುದಿನ ಅಂದರೆ, ಫೆ. 25ರಂದು ₹2,525 ಕೋಟಿ ಮೊತ್ತದ ಶಸ್ತ್ರಾಸ್ತ್ರ ಪೂರೈಕೆಯನ್ನು ಅಮೆರಿಕ ಅಂತಿಮಗೊಳಿಸಿತು. ಪೋಲೆಂಡ್ ಹಾಗೂ ರೊಮೇನಿಯಾಕ್ಕೆ ದಾಸ್ತಾನು ಪೂರೈಕೆ ಆರಂಭಿಸಲಾಯಿತು. ಇವು ಅಲ್ಲಿಂದ ಉಕ್ರೇನ್‌ ಪಶ್ಚಿಮ ಗಡಿಯನ್ನು ತಲುಪಲಿವೆ.

ಅಮೆರಿಕವೊಂದೇ 15,000 ಹೆಚ್ಚುವರಿ ಸೈನಿಕರನ್ನು ಯುರೋಪ್‌ಗೆ ಕಳುಹಿಸಿದೆ. ಅಗತ್ಯಬಿದ್ದರೆ ನ್ಯಾಟೊ ಪಡೆಗೆ ಹೆಚ್ಚುವರಿಯಾಗಿ 12 ಸಾವಿರ ಸೈನಿಕರನ್ನು ಕಳುಹಿಸಲು ನಿರ್ಧರಿಸಿದೆ. ರೊಮೇನಿಯಾ, ಪೋಲೆಂಡ್ ಹಾಗೂ ಬಾಲ್ಟಿಕ್ ದೇಶಗಳಲ್ಲಿ ಯುದ್ಧವಿಮಾನ ಹಾಗೂ ದಾಳಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ.ಪೋಲೆಂಡ್ ಪ್ರಧಾನಿ ಮೊರಾವಿಕಿ ಅವರು ಉಕ್ರೇನ್‌ಗೆ ಸಾವಿರಾರು ಶೆಲ್‌, ಮದ್ದುಗುಂಡು, ಯುದ್ಧವಿಮಾನ ನಿರೋಧಕ ಕ್ಷಿಪಣಿ, ಡ್ರೋನ್‌ಗಳನ್ನು ಪೂರೈಸುವ ವಾಗ್ದಾನ ನೀಡಿದ್ದಾರೆ.

ನ್ಯಾಟೊ ಸದಸ್ಯತ್ವ ಪಡೆದಿಲ್ಲವಾದರೂ, ಉಕ್ರೇನ್‌ಗೆ 5 ಸಾವಿರ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರ, 5 ಸಾವಿರ ಹೆಲ್ಮೆಟ್, ಇತರೆ ಯುದ್ಧೋಪಕರಣಗಳು ಹಾಗೂ ಉಕ್ರೇನ್ ಸೇನೆಗೆ ₹400 ಕೋಟಿ ನೆರವು ನೀಡುವುದಾಗಿ ಸ್ವೀಡನ್ ಘೋಷಿಸಿದೆ. ಫಿನ್ಲೆಂಡ್ ಸಹ 2,500 ರೈಫಲ್, 1.5 ಲಕ್ಷ ಮದ್ದುಗುಂಡು, 1,500 ಟ್ಯಾಂಕ್ ನಿರೋಧಕ ಉಪಕರಣಗಳನ್ನು ನೀಡುವ ಮಾತು ಕೊಟ್ಟಿದೆ.ಫ್ರಾನ್ಸ್ ದೇಶವು ಪೋಲೆಂಡ್‌ಗೆ ರಫೇಲ್ ಯುದ್ಧವಿಮಾನಗಳನ್ನು ಕಳುಹಿಸಿದೆ.

ಲಿಥುವೇನಿಯಾದಲ್ಲಿ ನ್ಯಾಟೊದ ಮುಂಚೂಣಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವಜರ್ಮನಿ, ಅಲ್ಲಿ ಹಲವು ಹೊವಿಟ್ಜರ್‌ಗಳನ್ನು ನಿಯೋಜಿಸಿದೆ. 6 ಯುದ್ಧವಿಮಾನಗಳನ್ನುರೊಮೇನಿಯಾದಲ್ಲಿ ನಿಲ್ಲಿಸಿದೆ. ಎಸ್ಟೋನಿಯಾದಲ್ಲಿ ನ್ಯಾಟೊ ಪಡೆಯ ನೇತೃತ್ವ ವಹಿಸಿರುವ ಬ್ರಿಟನ್, 850 ಸೈನಿಕರನ್ನು ಹಾಗೂ ಟ್ಯಾಂಕ್‌ಗಳು ನಿಯೋಜಿಸಿದೆ. ಪೋಲೆಂಡ್‌ಗೆ 350 ಸೈನಿಕರ ತಂಡ ಕಳುಹಿಸಿದೆ.ಕೆನಡಾ, ಇಟಲಿ, ಡೆನ್ಮಾರ್ಕ್ ದೇಶಗಳು ಸೈನಿಕರನ್ನು, ಯುದ್ಧೋಪಕರಣಗಳನ್ನು ಒದಗಿಸಿವೆ.ಪೋಲೆಂಡ್, ಹಂಗೆರಿ ಹಾಗೂ ಮಾಲ್ಡೋವಿಯಾಗಳು ಯುದ್ಧ ನಿರಾಶ್ರಿತರನ್ನು ಸ್ವಾಗತಿಸುತ್ತಿವೆ.

*****

ಏಷ್ಯಾದಲ್ಲಿ ಮಿಶ್ರ ಪ್ರತಿಕ್ರಿಯೆ

–ಸ್ಯೂ ಲೀ ವೀ, ಎಮಿಲಿ ಷ್ಮಾಲ್, ಸಮೀರ್ ಯಾಸಿರ್

ರಷ್ಯಾ, ಉಕ್ರೇನ್‌ ಅನ್ನು ಅತಿಕ್ರಮಿಸಿದ ನಂತರ ವಿಶ್ವದ ಹಲವು ದೇಶಗಳು ರಷ್ಯಾ ವಿರುದ್ಧ ಒಟ್ಟಾಗಿವೆ. ರಷ್ಯಾದ ರಾಜತಾಂತ್ರಿಕ ನಾಯಕತ್ವದ ಸಮರ್ಥನೆಗಳನ್ನು ಕೇಳಬೇಕಿದ್ದ ಸಭೆಯಿಂದ ವಿಶ್ವದ ಬಹುತೇಕ ದೇಶಗಳ ನಿಯೋಗಗಳು ಹೊರನಡೆದಿದ್ದವು. ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ಜಾಗತಿಕ ನಿರ್ಬಂಧ ಹೇರುವ ಅಂತಿಮ ಹಂತದಲ್ಲಿವೆ. ಈ ದೇಶಗಳ ಬಾರ್‌ಗಳಲ್ಲಿ ರಷ್ಯಾದ ವೋಡ್ಕಾವನ್ನೂ ನಿಷೇಧಿಸಲಾಗಿದೆ. ಆದರೆ, ಏಷ್ಯಾದ ದೇಶಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಮೆರಿಕದ ಜತೆಗೆ ಮೈತ್ರಿ ಹೊಂದಿರುವ ಏಷ್ಯಾದ ದೇಶಗಳು, ರಷ್ಯಾದ ಅತಿಕ್ರಮಣವನ್ನು ಖಂಡಿಸುವ ಮತ್ತು ನಿರ್ಬಂಧಗಳನ್ನು ಪಾಲಿಸುವ ಮಾತುಗಳನ್ನಾಡಿವೆ. ಆದರೆ ಏಷ್ಯಾದಲ್ಲಿನ ಸರ್ವಾಧಿಕಾರಿ ಧೋರಣೆಯ ಸರ್ಕಾರಗಳು ಮತ್ತು ಪಾಶ್ಚಿಮಾತ್ಯ ಜಗತ್ತಿನೊಂದಿಗೆ ದುರ್ಬಲ ಸಂಬಂಧ ಹೊಂದಿರುವ ದೇಶಗಳು, ಉಕ್ರೇನ್‌ನಲ್ಲಿನ ಅತಿಕ್ರಮಣದ ವಿರುದ್ಧದ ನಿಲುವು ತಳೆಯಲು ಬಯಸಿಲ್ಲ.

‘ರಷ್ಯಾದ ಕ್ರಿಯೆಗಳು ಸರಿಯಾಗಿವೆ’ ಎಂದು ಮ್ಯಾನ್ಮಾರ್‌ನ ಸೇನಾ ಮುಖ್ಯಸ್ಥರು ರಷ್ಯಾ ಅತಿಕ್ರಮಣವನ್ನು ಅನುಮೋದಿಸಿದ್ದಾರೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ, ರಷ್ಯಾದ ಅತಿಕ್ರಮಣವನ್ನು ಖಂಡಿಸುವ ನಿರ್ಣಯದಿಂದ ಭಾರತ ಹಿಂದೆ ಸರಿದಿದೆ. ಉಕ್ರೇನ್‌ ಮೇಲಿನ ಅತಿಕ್ರಮಣವನ್ನು, ಅತಿಕ್ರಮಣ ಎಂದು ಕರೆಯಲು ಚೀನಾ ನಿರಾಕರಿಸಿದೆ. ವಿಯೆಟ್ನಾಂನಲ್ಲಿ ಈಗಲೂ ವ್ಲಾಡಿಮಿರ್ ಪುಟಿನ್ ಅವರನ್ನು ಬಹಳ ಆದರದಿಂದ, ‘ಅಂಕಲ್ ಪುಟಿನ್‌’ ಎಂದೇ ಕರೆಯಲಾಗುತ್ತಿದೆ.

ಏಷ್ಯಾ–ಪೆಸಿಫಿಕ್‌ ಪ್ರದೇಶದಲ್ಲಿ ಜಪಾನ್, ಸಿಂಗಪುರ, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯ ಮಾತ್ರವೇ ರಷ್ಯಾ ವಿರುದ್ಧದ ನಿರ್ಬಂಧಗಳನ್ನು ಪಾಲಿಸುವುದಾಗಿ ಹೇಳಿವೆ. ಚೀನಾದ ದಾಳಿಯ ಭೀತಿಯಲ್ಲಿರುವ ತೈವಾನ್‌ ಸಹ ರಷ್ಯಾ ವಿರುದ್ಧದ ನಿರ್ಬಂಧಗಳನ್ನು ಪಾಲಿಸಲು ಒಪ್ಪಿಕೊಂಡಿದೆ, ಉಕ್ರೇನ್‌ನ ಬೆಂಬಲಕ್ಕೆ ನಿಂತಿದೆ.

ಏಷ್ಯಾದ ದೇಶಗಳ ಈ ಮಿಶ್ರ ನಿಲುವುಗಳು, ರಷ್ಯಾ ವಿರುದ್ಧದ ಪಾಶ್ಚಿಮಾತ್ಯ ದೇಶಗಳ ಸಿಟ್ಟನ್ನು ಸರಿಗಟ್ಟುವಷ್ಟು ಸಮರ್ಥವಾಗಿಲ್ಲ. ಆದರೆ, ‘ಪುಟಿನ್ ಅವರನ್ನು ಜಾಗತಿಕಮಟ್ಟದಲ್ಲಿ ಏಕಾಂಗಿಯನ್ನಾಗಿಸುತ್ತೇವೆ’ಎಂದು ಜೋ ಬೈಡನ್‌ ಅವರು ಮಾಡಿದ್ದ ಪ್ರತಿಜ್ಞೆಯ ಮಿತಿಗಳನ್ನಂತೂ ಇವು ಪರೀಕ್ಷೆಗೆ ಒಡ್ಡುತ್ತವೆ.

‘ರಷ್ಯಾವನ್ನು ದೂರವಿಡುವುದು ಸಾಧ್ಯ ಎಂದು ನಾನು ಭಾವಿಸುವುದಿಲ್ಲ. ರಷ್ಯಾ ಈಗಲೂ ವಿಶ್ವದ ದೊಡ್ಡ ದೇಶಗಳಲ್ಲಿ ಒಂದು. ಮತ್ತು ರಷ್ಯಾ ಅಣ್ವಸ್ತ್ರ ಹೊಂದಿರುವ ದೇಶವೂ ಹೌದು. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ಶಾಶ್ವತ ಸದಸ್ಯತ್ವ ಹೊಂದಿದೆ. ಈ ಪರಿಸ್ಥಿತಿ ಸದ್ಯಕ್ಕಂತೂ ಬದಲಾಗುವುದಿಲ್ಲ’ ಎನ್ನುತ್ತಾರೆ ರಷ್ಯಾದಲ್ಲಿ ಸಿಂಗಪುರದ ರಾಯಭಾರಿಯಾಗಿದ್ದ ಬಿಲಾಹರಿ ಕೌಶಿಕನ್.

ಏಷ್ಯಾದ ದೇಶಗಳ ಮೇಲೆ ಅಮೆರಿಕವು ಹೊಂದಿರುವ ಪ್ರಭಾವಕ್ಕೆ ಹೋಲಿಸಿದರೆ, ರಷ್ಯಾ ಹೊಂದಿರುವ ಪ್ರಭಾವ ಕಡಿಮೆಯೇ. ಆದರೆ ಈಚಿನ ವರ್ಷಗಳಲ್ಲಿ ರಷ್ಯಾದ ಪ್ರಭಾವ ಹೆಚ್ಚುತ್ತಿದೆ ಎಂಬುದಂತೂ ನಿಜ.ಉಕ್ರೇನ್‌ ಮೇಲಿನ ದಾಳಿಗೆ ಪ್ರತಿಯಾಗಿ ಪಾಶ್ಚಿಮಾತ್ಯ ದೇಶಗಳು ಹೇರಿರುವ ನಿರ್ಬಂಧವನ್ನು ತಪ್ಪಿಸಲು, ಏಷ್ಯಾದ ದೇಶಗಳ ಜತೆಗೆ ಆರ್ಥಿಕ ಮತ್ತು ವಾಣಿಜ್ಯ ಸಂಬಂಧವನ್ನು ವೃದ್ಧಿಸಲು ಯತ್ನಿಸುತ್ತೇವೆ ಎಂದು ರಷ್ಯಾದ ಹಣಕಾಸು ಸಚಿವಾಲಯ ಸ್ಪಷ್ಟವಾಗಿ ಹೇಳಿದೆ. ರಷ್ಯಾದೊಂದಿಗೆ ವಾಣಿಜ್ಯ ಸಂಬಂಧ ಹೊಂದಿರುವ ದೇಶಗಳೂ ಇದೇ ರೀತಿಯ ಮಾತುಗಳನ್ನಾಡಿವೆ.

ಇಂಡೊನೇಷ್ಯಾ, ಮಲೇಷ್ಯಾ ಮತ್ತು ಮ್ಯಾನ್ಮಾರ್‌ ಸೇನೆಗಳಿಗೆ ರಷ್ಯಾವು ತನ್ನ ಯುದ್ಧವಿಮಾನಗಳನ್ನು ಮಾರಾಟ ಮಾಡಿದೆ. ಆದರೆ ದಕ್ಷಿಣ ಏಷ್ಯಾದಲ್ಲಿ ರಷ್ಯಾದ ಅತ್ಯಂತ ದೊಡ್ಡ ಮಾರುಕಟ್ಟೆ ಎಂದರೆ, ಅದು ವಿಯೆಟ್ನಾಂ. 2000ದಿಂದ 2019ರವರೆಗೆ ವಿಯೆಟ್ನಾಂ ಮಾಡಿಕೊಂಡಿರುವ ಸೇನಾ ಸಲಕರಣೆಗಳ ಆಮದಿನಲ್ಲಿ ರಷ್ಯಾದ ಪಾಲು ಶೇ 84ರಷ್ಟು. ಚೀನಾವನ್ನು ಎದುರಿಸುವ ಸಲುವಾಗಿ ವಿಯೆಟ್ನಾಂ ಎಲ್ಲಾ ಸ್ವರೂಪದ ಸೇನಾ ಸಲಕರಣೆಗಳನ್ನು ರಷ್ಯಾದಿಂದ, ದೊಡ್ಡ ಪ್ರಮಾಣದಲ್ಲಿ ಖರೀದಿಸಿದೆ.ಭಾರತಕ್ಕೆ ರಷ್ಯಾವು ಹಲವು ದಶಕಗಳಿಂದ ಸೇನಾ ಸಲಕರಣೆಗಳ ಆಮದಿನ ಮೂಲವಾಗಿದೆ. ರಷ್ಯಾದಿಂದ ಇಡೀ ವಿಶ್ವಕ್ಕೆ ರಫ್ತಾಗುವ ಸೇನಾ ಸಲಕರಣೆಗಳ ಅತಿದೊಡ್ಡ ಗ್ರಾಹಕರಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ. ಕಳೆದ ವರ್ಷ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಹತ್ತಾರು ಸಾವಿರ ಕೋಟಿ ಮೊತ್ತದ ಎಸ್‌400–ಟ್ರಯಂಫ್‌ ಕ್ಷಿಪಣಿ ನಿರೋಧಕ ವ್ಯವಸ್ಥೆ ಖರೀದಿಗೆ ರಷ್ಯಾದೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ.

ಭಾರತದ ಈಶಾನ್ಯದ ಗಡಿಗಳಲ್ಲಿ ಚೀನಾ ಒತ್ತುವರಿಯ ಬೆದರಿಕೆಯಾಗಿ ಬಂದು ಕುಳಿತಿದೆ. ಇಂತಹ ಸಂದರ್ಭದಲ್ಲಿ ರಷ್ಯಾದ ಈ ಅತಿಕ್ರಮಣವನ್ನು ಖಂಡಿಸುವ ಮೂಲಕ, ಅದರೊಂದಿಗೆ ಸ್ನೇಹವನ್ನು ಹಾಳುಮಾಡಿಕೊಳ್ಳದೇ ಇರುವಂತಹ ಎಚ್ಚರಿಕೆಯ ನಡೆಯನ್ನು ಭಾರತ ತೋರಿದೆ. ಕಾಶ್ಮೀರ ವಿವಾದದ ವಿಚಾರದಲ್ಲಿ, ಭದ್ರತಾ ಮಂಡಳಿಯಲ್ಲಿ ಭಾರತವನ್ನು ಖಂಡಿಸುವ ಪಾಕಿಸ್ತಾನದ ಎಲ್ಲಾ ನಿರ್ಣಯಗಳನ್ನು ರಷ್ಯಾ ತನ್ನ ವಿಟೋ ಅಧಿಕಾರ ಬಳಸಿ ವಿಫಲಗೊಳಿಸುತ್ತಲೇ ಬಂದಿದೆ. 2014ರಲ್ಲಿ ಕ್ರಿಮಿಯಾವನ್ನು ರಷ್ಯಾ ಅತಿಕ್ರಮಿಸಿದಾಗ, ಅದನ್ನು ಖಂಡಿಸುವ ನಿರ್ಣಯದಿಂದ ಭಾರತವು ಹಿಂದೆ ಉಳಿದಿತ್ತು.

ರಷ್ಯಾದ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ತಪ್ಪಿಸಿ, ವ್ಯಾಪಾರ ವಹಿವಾಟು ನಡೆಸಲು ರಷ್ಯಾದೊಂದಿಗೆ ರೂಪಾಯಿಯನ್ನೇ ಬಳಸಿಕೊಳ್ಳಬಹುದು ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿ ಭಾರತ ಯಾರೊಂದಿಗೆ ಇದೆ ಎಂದು ಪ್ರಶ್ನಿಸಿದರೆ, ‘ನಾವು, ನಮ್ಮೊಂದಿಗೆ ಇದ್ದೇವೆ’ ಎನ್ನುತ್ತಾರೆ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿದ್ದ ಪಂಕಜ್ ಸರಣ್.

ಭಾರತದಂತೆಯೇ ಇಂಡೊನೇಷ್ಯಾ ಸಹ ರಕ್ಷಣಾ ಸಾಮಗ್ರಿಗಳಿಗಾಗಿ ರಷ್ಯಾವನ್ನು ಅವಲಂಬಿಸಿದೆ. ಈಚಿನ ವರ್ಷಗಳಲ್ಲಿ ಈ ಅವಲಂಬನೆ ಹೆಚ್ಚಾಗುತ್ತಿದೆ. 2021ರಲ್ಲಿ ರಷ್ಯಾದಿಂದ ಇಂಡೊನೇಷ್ಯಾ ಮಾಡಿಕೊಂಡ ಆಮದು ಶೇ 42.3ರಷ್ಟು ಏರಿಕೆಯಾಗಿದೆ. ಅದೇ ವರ್ಷ ಇಂಡೊನೇಷ್ಯಾದಿಂದ ರಫ್ತಾದ ತಾಳೆ ಎಣ್ಣೆಯಲ್ಲಿ ಶೇ 38ರಷ್ಟನ್ನು ರಷ್ಯಾವೇ ಖರೀದಿಸಿದೆ.‘ರಷ್ಯಾದ ಮೇಲೆ ನಿರ್ಬಂಧ ಹೇರುವ ಯೋಚನೆ ಇಲ್ಲ. ಬೇರೆ ದೇಶಗಳು ತೆಗೆದುಕೊಂಡ ನಿರ್ಧಾರವನ್ನು ಹಿಂಬಾಲಿಸುವ ಅಗತ್ಯವಿಲ್ಲ’ ಎಂದು ಇಂಡೊನೇಷ್ಯಾದ ವಿದೇಶಾಂಗ ಸಚಿವಾಲಯ ಹೇಳಿದೆ.

ಒಂದೆಡೆ ರಷ್ಯಾದ ಅತಿಕ್ರಮಣವನ್ನು ಅಮೆರಿಕವು ಖಂಡಿಸಿದೆ. ಆಗ್ನೇಯ ಏಷ್ಯಾದ ಹಲವು ದೇಶಗಳಲ್ಲಿ ಪ್ರಬಲ ನಾಯಕತ್ವವನ್ನು ಮೆಚ್ಚಲಾಗುತ್ತದೆ. ಅಂತಹ ದೇಶಗಳು ಪುಟಿನ್ ಅವರ ಸರ್ವಾಧಿಕಾರಿ ಧೋರಣೆಯನ್ನು ಹೊಗಳುತ್ತಿವೆ.ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಫಿಲಿಪ್ಪೀನ್ಸ್ ಮತ್ತು ವಿಯೆಟ್ನಾಂಗೆ ರಷ್ಯಾವು ಕೋವಿಡ್‌ ಲಸಿಕೆಗಳನ್ನು ಉಚಿತವಾಗಿ ನೀಡಿತ್ತು. ‘ನಾನು ಅಂಕಲ್ ಪುಟಿನ್ ಅವರ ದೊಡ್ಡ ಅಭಿಮಾನಿ. ಅವರು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ’ ಎಂದು ವಿಯೆಟ್ನಾಂನ ಕಲಾವಿದ ಟ್ರಾನ್‌ ಟ್ರುಂಗ್ ಹಿಯೂ ಹೇಳಿದ್ದಾರೆ.

ಅಮೆರಿಕದ ಮಿತ್ರರಾಷ್ಟ್ರಗಳೂ ಸಹ ನಿರ್ಬಂಧಗಳ ಬಗ್ಗೆ ಆಕ್ಷೇಪದ ಮಾತುಗಳನ್ನಾಡಿವೆ. ಐರೋಪ್ಯ ಒಕ್ಕೂಟ ಮತ್ತು ಅಮೆರಿಕವು ಹೇರಿದ್ದ ನಿರ್ಬಂಧಗಳಿಗೆ ಅನುಮೋದನೆ ನೀಡುವಲ್ಲಿ ದಕ್ಷಿಣ ಕೊರಿಯಾ ವಿಳಂಬ ನೀತಿ ಅನುಸರಿಸಿತು. ಜತೆಗೆ, ‘ನಾವು ಹೆಚ್ಚುವರಿ ದಂಡಗಳನ್ನು ವಿಧಿಸುವುದಿಲ್ಲ’ ಎಂದು ಘೋಷಿಸಿತು.⇒ನ್ಯೂಯಾರ್ಕ್ ಟೈಮ್ಸ್‌ ವರದಿ

‘ರಷ್ಯಾವನ್ನು ಪೂರ್ಣಪ್ರಮಾಣದಲ್ಲಿ ಖಂಡಿಸಲು ಹಿಂದೇಟು ಹಾಕುವುದು, ಜಾಗತಿಕ ಭದ್ರತೆಯಲ್ಲಿ ಮಾಡಿಕೊಂಡ ರಾಜಿಯಲ್ಲದೇ ಮತ್ತೇನಲ್ಲ. ಇಲ್ಲಿ ಮೌನವಾಗಿರುವುದು ಮತ್ತು ತಟಸ್ಥ ನೀತಿ ಅನುಸರಿಸುವುದು, ರಷ್ಯಾದ ಅತಿಕ್ರಮಣದ ಅನುಮೋದನೆಯೇ ಸರಿ’ ಎಂದು ಸಿಂಗಪುರದಲ್ಲಿನ, ಉಕ್ರೇನ್ ರಾಯಭಾರ ಕಚೇರಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT