ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರೊಂದಿಗೆ ನಂಟು ಆರೋಪ: ಪಿಎಫ್‌ಐಗೆ ಬೀಗಮುದ್ರೆ

Last Updated 28 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

‘ರಾಜ್ಯಗಳ ಶಿಫಾರಸಿನಂತೆ ನಿಷೇಧ’

ಕರ್ನಾಟಕ,ಉತ್ತರ ಪ್ರದೇಶ ಮತ್ತು ಗುಜರಾತ್ ಸರ್ಕಾರಗಳ ಶಿಫಾರಸಿನ ಆಧಾರದಲ್ಲಿ ಪಿಎಫ್‌ಐ ಮತ್ತು ಅದರ ಅಧೀನ ಸಂಸ್ಥೆಗಳನ್ನು ಐದು ವರ್ಷಗಳವರೆಗೆ ನಿಷೇಧ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು ತನ್ನ ಗೆಜೆಟ್‌ನಲ್ಲಿ ಹೇಳಿದೆ.

ದೇಶದ ಸಂವಿಧಾನ ಮತ್ತು ಸಾರ್ವಭೌಮತೆಗೆ ಗೌರವ ತೋರದೇ ಇರುವ ಆರೋಪದಲ್ಲಿ ವ್ಯಕ್ತಿ ಅಥವಾ ಸಂಘಟನೆಯನ್ನು ನಿಷೇಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. 1967ಕ್ಕೂ ಮುನ್ನ ಭಾರತೀಯ ದಂಡ ಸಂಹಿತೆಯ 153ಎ ಮತ್ತು 154ಬಿ ಸೆಕ್ಷನ್‌ಗಳ ಅಡಿ ತಪ್ಪಿತಸ್ಥ ಎಂದು ಸಾಬೀತಾದ ವ್ಯಕ್ತಿ ಅಥವಾ ಸಂಘಟನೆಯನ್ನು ಹೀಗೆ ನಿಷೇಧಿಸಲಾಗುತ್ತಿತ್ತು. 1967ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಜಾರಿಗೆ ಬಂದಿತು. ಆನಂತರದಲ್ಲಿ ಯುಎಪಿಎ ಅಡಿ ಸಂಘಟನೆಗಳನ್ನು ನಿಷೇಧಿಸಲಾಗುತ್ತಿದೆ. 2008ರಲ್ಲಿ ಈ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ತಂದು, ಅದನ್ನು ಮತ್ತಷ್ಟು ಕಠಿಣಗೊಳಿಸಲಾಗಿತ್ತು. ಈಗ ಪಿಎಫ್‌ಐ ಮತ್ತು ಅದರ ಅಧೀನ ಸಂಸ್ಥೆಗಳನ್ನು ಈ ಕಾಯ್ದೆಯ ಅಡಿಯಲ್ಲೇ ಐದು ವರ್ಷಗಳವರೆಗೆ ನಿಷೇಧಿಸಲಾಗಿದೆ.

ಈ ಎಲ್ಲಾ ಕಾನೂನುಗಳ ಅಡಿಯಲ್ಲಿ ಈವರೆಗೆ ಹತ್ತಾರು ಸಂಘಟನೆಗಳನ್ನು ನಿಷೇಧಿಸಲಾಗಿದೆ. ಕೆಲವು ಸಂಘಟನೆಗಳ ಮೇಲಿನ ನಿಷೇಧವನ್ನು ತೆರವು ಮಾಡಲಾಗಿದೆ. ಪಿಎಫ್‌ಐ ಕಾನೂನುಬಾಹಿರ ಚಟುವಟಿಕೆ ನಡೆಸಿದೆ ಎಂದು ಯುಎಪಿಎ ಕಾಯ್ದೆಯ 3ನೇ ಸೆಕ್ಷನ್‌ನ ಅಡಿಯಲ್ಲಿ ಪರಿಗಣಿಸಲಾಗಿದೆ. ಜತೆಗೆ ಇದೇ ಕಾಯ್ದೆಯ 35ನೇ ಸೆಕ್ಷನ್‌ ಅಡಿಯಲ್ಲಿ ಪಿಎಫ್‌ಐ ಮತ್ತು ಅದರ ಅಧೀನಸಂಸ್ಥೆಗಳನ್ನು ‘ಭಯೋತ್ಪಾದನಾ ಸಂಘಟನೆಗಳು’ ಎಂದು ಪಟ್ಟಿ ಮಾಡಲಾಗಿದೆ. ನೇರವಾಗಿ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾದ ಅಥವಾ ಭಯೋತ್ಪಾದನಾ ಕೃತ್ಯಕ್ಕೆ ಸಿದ್ಧತೆ ನಡೆಸಿದ ಅಥವಾ ಭಯೋತ್ಪಾದನೆಯನ್ನು ಪ್ರೋತ್ಸಾಹಿಸಿದ ಅಥವಾ ಭಯೋತ್ಪಾದನೆಯಲ್ಲಿ ಭಾಗಿಯಾದ ಸಂಘಟನೆಗಳನ್ನು ಈ ಸೆಕ್ಷನ್‌ ಅಡಿಯಲ್ಲಿ ಭಯೋತ್ಪಾದನಾ ಸಂಘಟನೆ ಎಂದು ಪರಿಗಣಿಸಲು ಅವಕಾಶವಿದೆ.

ಭಯೋತ್ಪಾದನಾ ಸಂಘಟನೆ ಎಂದು ಪಟ್ಟಿ ಮಾಡಲಾದ ಸಂಘಟನೆಗೆ ಸೇರಿದ ಬ್ಯಾಂಕ್ ಖಾತೆ, ಠೇವಣಿಗಳು, ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಯುಎಪಿಎ ಕಾಯ್ದೆಯ 51ನೇ ಎ ಸೆಕ್ಷನ್‌ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಪಿಎಫ್‌ಐ ಮತ್ತು ಅದರ ಅಧೀನ ಸಂಸ್ಥೆಗಳಿಗೆ ಸೇರಿದ ಬ್ಯಾಂಕ್‌ ಖಾತೆ, ಠೇವಣಿಗಳು ಮತ್ತು ಸ್ವತ್ತುಗಳನ್ನು ಇದೇ ಸೆಕ್ಷನ್‌ನ ಅಡಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳು ಮುಟ್ಟುಗೋಲು ಹಾಕಿಕೊಂಡಿವೆ.

ಸರ್ಕಾರದ ಆರೋಪಗಳು

lಸಮಾಜದ ಬೇರೆ ಬೇರೆ ವರ್ಗ ಮತ್ತು ವೃತ್ತಿಯ ಜನರನ್ನು ತಲುಪುವ ಉದ್ದೇಶದಿಂದ ಪಿಎಫ್ಐ ಹಲವು ಸಂಘಟನೆಗಳನ್ನು ಸ್ಥಾ‍ಪಿಸಿದೆ. ಹೆಚ್ಚಿನ ಜನರ ಜತೆಗೆ ಸಂಪರ್ಕ ಸಾಧಿಸುವುದೇ ಇದರ ಹಿಂದಿನ ಉದ್ದೇಶ

lಈ ಎಲ್ಲಾ ಸಂಘಟನೆಗಳು ಬಹಿರಂಗವಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಕೊಂಡಿವೆ. ಆದರೆ, ದೇಶದ ಸಂವಿಧಾನ ಮತ್ತು ಸಾಂವಿಧಾನಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಉದ್ದೇಶದಿಂದ ಒಂದು ಸಮುದಾಯವನ್ನು ಪ್ರಚೋದಿಸುವ ಕಾರ್ಯಸೂಚಿಯನ್ನು ರಹಸ್ಯವಾಗಿ ಅನುಷ್ಠಾನಕ್ಕೆ ತರುತ್ತಿವೆ

lದೇಶದ ಕೋಮು ಸೌಹಾರ್ದವನ್ನು ಹಾಳು ಮಾಡುವ, ಶಾಂತಿಗೆ ಭಂಗ ತರುವ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡುವ ಕೆಲಸವನ್ನು ಈ ಸಂಘಟನೆಗಳು ಮಾಡಿವೆ

lಪಿಎಫ್‌ಐನ ಕೆಲವು ಸಂಸ್ಥಾಪಕ ಸದಸ್ಯರು ನಿಷೇಧಿತ ಸಿಮಿ ಸಂಘಟನೆಯ ನಾಯಕರಾಗಿದ್ದರು

lಪಿಎಫ್‌ಐನ ಸದಸ್ಯರು ಅಂತರರಾಷ್ಟ್ರೀಯ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ (ಐಎಸ್‌) ಜತೆ ಸಂಪರ್ಕ ಹೊಂದಿದ್ದಾರೆ

ಮೂಲ ಯಾವುದು?

ಯಾವುದೇ ಕಾರಣಕ್ಕಾಗಿ ಒಂದು ಸಾಮಾಜಿಕ ಅಥವಾ ರಾಜಕೀಯ ಸಂಘಟನೆಯ ಮೇಲೆ ನಿಷೇಧ ಹೇರಿದಾಗ ಅದು ಬೇರೊಂದು ರೂಪದಲ್ಲಿ ಕಾಣಿಸಿಕೊಂಡ ಉದಾಹರಣೆಗಳು ಇವೆ. ಈಗ ನಿಷೇಧಿಸಲಾಗಿರುವ ಪಿಎಫ್‌ಐಯಲ್ಲಿ ಈ ಹಿಂದೆ ನಿಷೇಧಿಸಲಾಗಿದ್ದಸಂಘಟನೆಗಳ ಹಲವರು ಸದಸ್ಯರಾಗಿದ್ದರು.

ಸ್ಟೂಡೆಂಟ್‌ ಇಸ್ಲಾಮಿಕ್‌ ಮೂವ್‌ಮೆಂಟ್ ಆಫ್‌ ಇಂಡಿಯಾವನ್ನು (ಸಿಮಿ) 2001ರಲ್ಲಿ ನಿಷೇಧಿಸಲಾಗಿದೆ. ಭಾರತವನ್ನು ಮುಸ್ಲಿಂ ದೇಶವಾಗಿ ಪರಿವರ್ತಿಸಿ, ವಿಮೋಚನೆಗೊಳಿಸುವುದು ಸಿಮಿಯ ಗುರಿ ಎಂದು ಹೇಳಲಾಗಿತ್ತು. 1977ರಲ್ಲಿ ಉತ್ತರ ಪ್ರದೇಶದ ಅಲೀಗಢದಲ್ಲಿ ಈ ಸಂಘಟನೆ ಆರಂಭಗೊಂಡಿತು. ಭಾರತ ಸರ್ಕಾರವು ಸಿಮಿಯನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿದೆ. ಹಾಗಾಗಿಯೇ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 9/11ರಂದು ನಡೆದ ದಾಳಿಯ ಬಳಿಕ ಸಿಮಿಯನ್ನು ನಿಷೇಧ ಮಾಡಲಾಯಿತು.

ವಿಶೇಷ ನ್ಯಾಯಾಲಯವು ನಿಷೇಧವನ್ನು 2008ರ ಆಗಸ್ಟ್‌ನಲ್ಲಿ ರದ್ದುಪಡಿಸಿತು. ಆದರೆ, ಆಗ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕೆ.ಜಿ. ಬಾಲಕೃಷ್ಣನ್‌ ಅವರು ನಿಷೇಧವನ್ನು ಎತ್ತಿ ಹಿಡಿದರು. ಸಿಮಿಯ ಮೇಲಿನ ನಿಷೇಧವನ್ನು 2019ರ ಫೆಬ್ರುವರಿಯಲ್ಲಿ ಮತ್ತೆ ಐದು ವರ್ಷಕ್ಕೆ ವಿಸ್ತರಿಸಲಾಗಿದೆ.

ನ್ಯಾಷನಲ್‌ ಡೆವಲಪ್‌ಮೆಂಟ್‌ ಫ್ರಂಟ್ (ಎನ್‌ಡಿಎಫ್‌) ಎಂಬ ಸಂಘಟನೆಯನ್ನು1993ರಲ್ಲಿ ಸ್ಥಾಪಿಸಲಾಯಿತು. ಬಾಬರಿ ಮಸೀದಿ ನೆಲಸಮದ ನಂತರ ಇದು ಆರಂಭಗೊಂಡಿತು. ಸಿಮಿಯ ನಿಷೇಧದ ಬಳಿಕ, ಸಿಮಿಯ ಹಲವು ಸದಸ್ಯರು ಎನ್‌ಡಿಎಫ್‌ ಸೇರಿಕೊಂಡರು. 2002 ಮತ್ತು 2003ರಲ್ಲಿ ಕೇರಳದ ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಗಳಿಗೆ ಎನ್‌ಡಿಎಫ್‌ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಎನ್‌ಡಿಎಫ್‌ ಭಯೋತ್ಪಾದಕ ಸಂಘಟನೆಯಾಗಿದ್ದು ಅದನ್ನು ನಿಷೇಧಿಸಬೇಕು ಎಂದು ಆಗ ಸಿಪಿಎಂನ ಕೇರಳ ರಾಜ್ಯ ಕಾರ್ಯದರ್ಶಿಯಾಗಿದ್ದ ಪಿಣರಾಯಿ ವಿಜಯನ್ ಒತ್ತಾಯಿಸಿದ್ದರು.

ಕರ್ನಾಟಕ ಫೋರಂ ಫಾರ್ ಡಿಗ್ನಿಟಿ ಎಂಬ ಸಂಘಟನೆ ಕರ್ನಾಟಕದಲ್ಲಿ 2001ರಲ್ಲಿ ಆರಂಭವಾಯಿತು. ತಮಿಳುನಾಡಿನಲ್ಲಿ ಮನಿತ ನೀತಿ ಪಸರೈ ಎಂಬ ಸಂಘಟನೆಯೂ ಇದೇ ಹೊತ್ತಿಗೆ ಆರಂಭವಾಗಿತ್ತು. ಈ ಎರಡೂ ಸಂಘಟನೆಗಳ ಜತೆಗೆ ಸೇರಿಕೊಂಡ ಕೆಲವರು ಪಿಎಫ್‌ಐಯನ್ನು 2006ರಲ್ಲಿ ಆರಂಭಿಸಿದರು. ಸಿಮಿ ಮತ್ತು ಎನ್‌ಡಿಎಫ್‌ನಲ್ಲಿ ಸಕ್ರಿಯರಾಗಿದ್ದ ಹಲವರು ಪಿಎಫ್‌ಐ ಸೇರಿಕೊಂಡರು ಎಂದು ಹೇಳಲಾಗುತ್ತಿದೆ.

ನಂತರದ ವರ್ಷಗಳಲ್ಲಿ, ಪಿಎಫ್‌ಐ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು. ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಲಾಯಿತು. ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ, ನ್ಯಾಷನಲ್‌ ವಿಮೆನ್ಸ್ ಫ್ರಂಟ್‌, ರೆಹಾಬ್‌ ಇಂಡಿಯಾ ಫೌಂಡೇಶನ್‌, ಎಂಪವರ್ ಇಂಡಿಯಾ ಫೌಂಡೇಶನ್‌ ಮುಂತಾದ ಸಂಘಟನೆಗಳು ಪಿಎಫ್‌ಐಯ ಅಂಗ ಸಂಸ್ಥೆಗಳಾಗಿ ನಂತರ ಆರಂಭಗೊಂಡವು.

ಪಿಎಫ್‌ಐ, ಸಿಮಿಯ ಪುನರವತಾರ, ಈ ಸಂಘಟನೆಯು ಆರ್‌ಎಸ್ಎಸ್ ಮತ್ತು ಸಿಪಿಎಂ ಕಾರ್ಯಕರ್ತರ ಹತ್ಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದೆ ಎಂದು 2012ರಲ್ಲಿ ಕೇರಳ ಹೈಕೋರ್ಟ್‌ಗೆ ಅಲ್ಲಿನ ಸರ್ಕಾರ ಪ್ರಮಾಣಪತ್ರ ಸಲ್ಲಿಸಿತ್ತು.

ಅವರು ಸದಾ ಪಿಎಫ್‌ಐ ಬಗ್ಗೆ ಮಾತನಾಡುತ್ತಿರುತ್ತಾರೆ. ಆದರೆ, ಹಿಂದೂ ತೀವ್ರವಾದಕ್ಕೆ ಆರ್‌ಎಸ್‌ಎಸ್‌ ಕಾರಣವಾಗಿದೆ. ಹಾಗಾಗಿ, ಮೊದಲು ಆರ್‌ಎಸ್‌ಎಸ್‌ ಅನ್ನು ನಿಷೇಧಿಸಬೇಕಿತ್ತು

- ಲಾಲು ಪ್ರಸಾದ್‌,ಆರ್‌ಜೆಡಿ ಮುಖ್ಯಸ್ಥ

ಇದು ನವ ಭಾರತ. ಭಯೋತ್ಪಾದಕರು, ಅಪರಾಧಿಗಳು, ದೇಶದ ಏಕತೆ, ಸಮಗ್ರತೆ ಹಾಗೂ ಭದ್ರತೆಗೆ ಬೆದರಿಕೆ ಒಡ್ಡುವವರಿಗೆ ಇಲ್ಲಿ ಅವಕಾಶವೇ ಇಲ್ಲ

- ಯೋಗಿ ಆದಿತ್ಯನಾಥ,ಉತ್ತರ ಪ್ರದೇಶ ಮುಖ್ಯಮಂತ್ರಿ

ಪಿಎಫ್‌ಐನಂತಹ ಸಂಘಟನೆಗಳನ್ನು ನಿಷೇಧಿಸುವುದು ಸಮಸ್ಯೆಗೆ ಪರಿಹಾರ ಅಲ್ಲ. ರಾಜಕೀಯವಾಗಿ ಅವರನ್ನು ಏಕಾಂಗಿಯಾಗಿಸಬೇಕು ಮತ್ತು ಅಪರಾಧ ಚಟುವಟಿಕೆಗಳ ವಿರುದ್ಧ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು

- ಸೀತಾರಾಮ್‌ ಯೆಚೂರಿ,ಸಿಪಿಎಂ ಪ‍್ರಧಾನ ಕಾರ್ಯದರ್ಶಿ

ಪಿಎಫ್‌ಐನ ತೀವ್ರವಾದಿ ನಿಲುವನ್ನು ಸದಾ ವಿರೋಧಿಸಿದ್ದೇನೆ. ಆದರೆ, ಯಾರೋ ಕೆಲವರು ಮಾಡುವ ಅಪರಾಧಗಳಿಗಾಗಿ ಸಂಘಟನೆಯನ್ನೇ ನಿಷೇಧಿಸುವುದು ಸರಿಯಲ್ಲ. ನಿರ್ದಿಷ್ಟ ಸಂಘಟನೆಯೊಂದಿಗೆ ನಂಟು ಇದೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಶಿಕ್ಷಿಸಲಾಗದು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ

ಅಸಾದುದ್ದೀನ್‌ ಒವೈಸಿ,ಎಐಎಂಐಎಂ ಅಧ್ಯಕ್ಷ

ದೇಶದ ಭದ್ರತೆ ಮತ್ತು ಜನರ ಕುರಿತು ಇರುವ ಬದ್ಧತೆಯಿಂದಾಗಿ ಸರ್ಕಾರವು ನಿಷೇಧದ ನಿರ್ಧಾರ ತೆಗೆದುಕೊಂಡಿದೆ. ಆದರೆ ಈ ಕ್ರಮದಿಂದ ರಾಜಕೀಯ ಲಾಭ ಅಥವಾ ನಷ್ಟದ ಕುರಿತು ಕೆಲವರು ಲೆಕ್ಕ ಹಾಕುತ್ತಿರುವುದು ದುರದೃಷ್ಟಕರ

ಮುಕ್ತಾರ್ ಅಬ್ಬಾಸ್ ನಖ್ವಿ,ಬಿಜೆಪಿ ಮುಖಂಡ

ಧರ್ಮವನ್ನು ದುರ್ಬಳಕೆ ಮಾಡಿಕೊಂಡು ಸಮಾಜವನ್ನು ಧ್ರುವೀಕರಣ ಮಾಡುವ ಎಲ್ಲ ಸಿದ್ಧಾಂತಗಳು ಮತ್ತು ಸಂಸ್ಥೆಗಳ ವಿರುದ್ಧ ಯಾವುದೇ ರಾಜಿ ಇಲ್ಲದೆ ಹೋರಾಡುವುದೇ ಕಾಂಗ್ರೆಸ್‌ನ ನೀತಿ. ಕಾಂಗ್ರೆಸ್ ಪಕ್ಷವು ಎಲ್ಲ ರೀತಿಯ ಕೋಮುವಾದದ ವಿರುದ್ಧವೇ ಇದೆ

ಜೈರಾಮ್ ರಮೇಶ್‌,ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ಪಿಎಫ್‌ಐ ನಿಷೇಧವು ಪ್ರಜಾತಂತ್ರದ ಮೇಲಿನ ನೇರ ದಾಳಿ. ವಿರೋಧ ಪಕ್ಷಗಳನ್ನು ಸುಮ್ಮನಿರಿಸಲು ಮತ್ತು ಭಿನ್ನಮತ ತೋರುವ ಜನರನ್ನು ಬೆದರಿಸಲು ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ

ಎಂ.ಕೆ. ಫೈಝಿ,ಎಸ್‌ಡಿಪಿಐ ಅಧ್ಯಕ್ಷ

ಮಹಾರಾಷ್ಟ್ರದಲ್ಲಿ ಕೂಡ ಗಂಭೀರವಾದ ಏನನ್ನೋ ಮಾಡುವ ಯೋಜನೆಯನ್ನು ಪಿಎಫ್‌ಐ ಹಾಕಿಕೊಂಡಿತ್ತು. ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವಲ್ಲಿ ಮತ್ತು ಸಮಾಜವನ್ನು ಒಡೆಯುವಲ್ಲಿ ಸಮಾಜಘಾತುಕ ಶಕ್ತಿಗಳು ಯಶಸ್ವಿ ಆಗುವುದಿಲ್ಲ

ಏಕನಾಥ ಶಿಂದೆ,ಮಹಾರಾಷ್ಟ್ರ ಮುಖ್ಯಮಂತ್ರಿ

ಆರ್‌ಎಸ್‌ಎಸ್‌ ಮೂರು ಬಾರಿ ನಿಷೇಧ

ಆರ್‌ಎಸ್‌ಎಸ್‌ ಮೇಲಿನ ನಿಷೇಧ ತೆರವು ಮಾಡುವ ಸಂಬಂಧಕೇಂದ್ರ ಗೃಹ ಸಚಿವಾಲಯದ ವಾರ್ಷಿಕ ವರದಿಯಲ್ಲಿ ಇರುವ ಉಲ್ಲೇಖ
ಆರ್‌ಎಸ್‌ಎಸ್‌ ಮೇಲಿನ ನಿಷೇಧ ತೆರವು ಮಾಡುವ ಸಂಬಂಧ
ಕೇಂದ್ರ ಗೃಹ ಸಚಿವಾಲಯದ ವಾರ್ಷಿಕ ವರದಿಯಲ್ಲಿ ಇರುವ ಉಲ್ಲೇಖ

ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ಕೇಂದ್ರ ಗೃಹ ಸಚಿವಾಲಯವು ಈವರೆಗೆ ಮೂರು ಬಾರಿ ನಿಷೇಧ ಮಾಡಿದೆ. 1948, 1975 ಮತ್ತು 1992ರಲ್ಲಿ ಆರ್‌ಎಸ್‌ಎಸ್‌ ಅನ್ನು ಅಲ್ಪಾವಧಿಗೆ ನಿಷೇಧಿಸಲಾಗಿತ್ತು. ನಂತರ ನಿಷೇಧವನ್ನು ತೆರವು ಮಾಡಲಾಗಿತ್ತು.

ಮಹಾತ್ಮ ಗಾಂಧಿ ಅವರ ಹತ್ಯೆಯ ನಂತರ 1948ರ ಫೆಬ್ರುವರಿಯಲ್ಲಿ ಆರ್‌ಎಸ್‌ಎಸ್‌ ಅನ್ನು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ನಿಷೇಧಿಸಿದ್ದರು. ಈ ಸಂಬಂಧ ಸರ್ಕಾರವು ಹೊರಡಿಸಿದ್ದ ಸುತ್ತೋಲೆಯಲ್ಲಿ, ‘ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಲವು ಸದಸ್ಯರು ದೇಶದಾದ್ಯಂತ ದರೋಡೆ, ಕಳ್ಳತನ, ಕೊಲೆಯಂತಹ ಹಿಂಸಾಚಾರದಲ್ಲಿ ತೊಡಗಿರುವುದು ಪತ್ತೆಯಾಗಿದೆ. ಅಕ್ರಮವಾಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿರುವುದೂ ಪತ್ತೆಯಾಗಿದೆ. ದ್ವೇಷ ಮತ್ತು ಹಿಂಸಾಚಾರದ ಮೂಲವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆರ್‌ಎಸ್‌ಎಸ್‌ ಅನ್ನು ಭಾರತದಾದ್ಯಂತ ನಿಷೇಧಿಸಲಾಗಿದೆ’ ಎಂದು ವಿವರಿಸಲಾಗಿತ್ತು. ಈ ಸುತ್ತೋಲೆಯಲ್ಲಿನ ವಿವರವನ್ನು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿತ್ತು ಎಂದು ದಿ ವೈರ್ ವರದಿ ಮಾಡಿದೆ.

ಆರ್‌ಎಸ್‌ಎಸ್‌ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವು ಮಾಡುವ ಸಂಬಂಧ ಸರ್ಕಾರದ ಆದೇಶವು ಕೇಂದ್ರ ಗೃಹ ಸಚಿವಾಲಯದ ವಾರ್ಷಿಕ ವರದಿಯಲ್ಲಿ ಲಭ್ಯವಿದೆ. 1949–50ನೇ ಸಾಲಿನ ವಾರ್ಷಿಕ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌.ಎಸ್‌.ಎಸ್‌.ಎಸ್‌) ಎಂದು ಉಲ್ಲೇಖಿಸಲಾಗಿದೆ. ‘ದೇಶದ ಕಾನೂನಿಗೆ ನಿಷ್ಠರಾಗಿರುತ್ತೇವೆ ಮತ್ತು ಸಾಂಸ್ಕೃತಿಕ ವಲಯಕ್ಕಷ್ಟೇ ನಮ್ಮ ಚಟುವಟಿಕೆಯನ್ನು ಸೀಮಿತಗೊಳಿಸಿಕೊಳ್ಳುತ್ತೇವೆ ಎಂದು ಆರ್‌ಎಸ್‌ಎಸ್‌ ನಾಯಕ ಗೋಲ್ವಲ್ಕರ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅದನ್ನು ಆಧರಿಸಿ ನಿಷೇಧವನ್ನು ತೆರವು ಮಾಡಲಾಯಿತು ಮತ್ತು ದೇಶದಾದ್ಯಂತ ಬಂಧನದಲ್ಲಿರುವ ಆರ್‌ಎಸ್‌ಎಸ್ ಸ್ವಯಂಸೇವಕರನ್ನು ಬಿಡುಗಡೆ ಮಾಡಲು ಸೂಚಿಸಲಾಯಿತು’ ಎಂದು ವಾರ್ಷಿಕ ವರದಿಯ 34 ಮತ್ತು 35ನೇ ಪುಟದಲ್ಲಿ ಉಲ್ಲೇಖಿಸಲಾಗಿದೆ.

ಈಗ ಮತ್ತೆ ಆರ್‌ಎಸ್‌ಎಸ್‌ ಅನ್ನು ನಿಷೇಧಿಸುವಂತೆ ಕೆಲವು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

ಆಧಾರ: ಯುಎಪಿಎ–2008, ಭಾರತ ಸರ್ಕಾರದ ಗೆಜೆಟ್, ಕೇಂದ್ರ ಗೃಹ ಸಚಿವಾಲಯದ
ವಾರ್ಷಿಕ ವರದಿ:1949–50, ಪಿಐಬಿ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT