ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯದಲ್ಲಿ ಪತ್ನಿ ಆಸ್ತಿಯಲ್ಲಿ ಪತಿ ಮುಂದೆ

Last Updated 18 ಜೂನ್ 2018, 13:22 IST
ಅಕ್ಷರ ಗಾತ್ರ

ವಿಜಾಪುರ: ಇಲ್ಲಿನ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ರಾಠೋಡ ಅವರಿಗಿಂತ ಸಂಪಾದನೆಯಲ್ಲಿ ಅವರ ಪತ್ನಿ ಡಾ.ಬಿ.ಎಲ್‌. ಸುಜಾತಾ ಮುಂದಿದ್ದಾರೆ. ಆದರೆ ಪತ್ನಿಗಿಂತ ಪತಿಯೇ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ.

₨7.64 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಪ್ರಕಾಶ ರಾಠೋಡ ವಾರ್ಷಿಕ ಆದಾಯ ₨3.88 ಲಕ್ಷ. ಅವರ ಅರ್ಧದಷ್ಟು (₨3.17 ಕೋಟಿ) ಆಸ್ತಿ ಹೊಂದಿರುವ ಅವರ ಪತ್ನಿಯ ಆದಾಯ ₨15.82 ಲಕ್ಷ. ಪ್ರಕಾಶ ಬಳಿ ಎರಡು ಕಾರುಗಳಿದ್ದರೆ, ಅವರ ಪತ್ನಿ ಬಳಿ ಮೂರು ಕಾರುಗಳಿವೆ. ಆದಾಯ ಗಳಿಕೆಯಲ್ಲಿ ಮುಂದಿದ್ದರೂ ಸುಜಾತಾ ತಮ್ಮ ಪತಿಗೆ ₨6.45 ಲಕ್ಷ ಸಾಲ ಕೊಡಬೇಕಿದೆ!

ಶುಕ್ರವಾರ ಚುನಾವಣಾಧಿಕಾರಿಗಳಿಗೆ ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಅವರ ಕುಟುಂಬದ ಒಟ್ಟು ಆಸ್ತಿ ₨11.23 ಕೋಟಿ. ₨65.90 ಲಕ್ಷ ಬೆಲೆಯ ಆರು ಕಾರುಗಳು ಅವರ ಕುಟುಂಬದಲ್ಲಿವೆ.  ₨14.40 ಲಕ್ಷ ಮೌಲ್ಯದ 530 ಗ್ರಾಂ ಚಿನ್ನ, ₨2 ಲಕ್ಷ ಮೌಲ್ಯದ ಎರಡು ಕೆ.ಜಿ. ಬೆಳ್ಳಿಯನ್ನೂ ಈ ಕುಟುಂಬ ಹೊಂದಿದೆ.

ಪ್ರಕಾಶ ಅವರ ಬಳಿ ಇರುವುದು ₨26.32 ಲಕ್ಷ ಮೌಲ್ಯದ ಬಿ.ಎಂ.ಡಬ್ಲ್ಯು ಐಷಾರಾಮಿ ಕಾರು. ಅದರ ಜೊತೆಗೆ ಅವರಲ್ಲಿ ಫೋಕ್ಸ್‌ವ್ಯಾಗನ್‌ ಕಾರು ಸಹ ಇದೆ. ಸುಜಾತಾ ಹೊಂಡಾ ಜಾಜ್‌, ಮಾರುತಿ ಸ್ವಿಫ್ಟ್‌, ಟೊಯೊಟಾ ಇನೊವಾ, ಪುತ್ರಿ ದಿಶಿತಾ ಟೊಯೊಟಾ ಇನೊವಾ ಕಾರು ಹೊಂದಿದ್ದಾರೆ. ಅವರ ಪುತ್ರ ಚಿರಾಗ್‌ ಹೆಸರಿನಲ್ಲಿ ಯಾವುದೇ ವಾಹನ ಇಲ್ಲ.

ಪ್ರಕಾಶ ರಾಠೋಡ ಅವರು ನಾಯಕ ಶಿಕ್ಷಣ ಸಂಸ್ಥೆಗೆ ₨31 ಲಕ್ಷ ಸಾಲ ಕೊಟ್ಟಿದ್ದಾರೆ. ವಿಜಾಪುರದಲ್ಲಿ ₨ 2 ಲಕ್ಷ ಮೌಲ್ಯದ ಎರಡು ಎಕರೆ ಕೃಷಿ ಭೂಮಿ ಹಾಗೂ ₨10 ಲಕ್ಷ ಮೌಲ್ಯದ 900 ಚ.ಅಡಿ ಆಸ್ತಿ ಇದೆ.

ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ 3,855 ಚ.ಅಡಿ ವಾಣಿಜ್ಯ ಕಟ್ಟಡ ಹೊಂದಿದ್ದು, ಅದರ ಮೌಲ್ಯ ₨ 3.97 ಕೋಟಿ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ವಸಂತ ನಗರದಲ್ಲಿ 1200 ಚ.ಅಡಿ ನಿವೇಶನದಲ್ಲಿ ₨750 ಚ.ಅಡಿ ಮನೆಯನ್ನು ಪತ್ನಿಯ ಪಾಲುದಾರಿಕೆಯಲ್ಲಿ ಹೊಂದಿದ್ದು, ಅದರ ಮಾರುಕಟ್ಟೆ ಮೌಲ್ಯ ₨2.50 ಕೋಟಿ. ಪ್ರಕಾಶ ₨6.68 ಲಕ್ಷ ಆದಾಯ ತೆರಿಗೆ ಹಾಗೂ ₨1.78 ಲಕ್ಷ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT