ವಿದ್ಯುತ್‌ ಉತ್ಪಾದನಾ ಯಾನ

7
ಚಾವಣಿಯಲ್ಲಿ ಗಾಳಿಯಂತ್ರ ಅಳವಡಿಕೆ: ಕಾಡುರಕ್ಷಣೆಗೆ ವಿದ್ಯುತ್‌ ಸ್ವಾವಲಂಬನೆಯ ಮಾರ್ಗ

ವಿದ್ಯುತ್‌ ಉತ್ಪಾದನಾ ಯಾನ

Published:
Updated:
ವಿದ್ಯುತ್‌ ಉತ್ಪಾದನಾ ಯಾನ

ತೀರ್ಥಹಳ್ಳಿ: ನೈಸರ್ಗಿಕ ಶಕ್ತಿಯನ್ನೇ ಬಳಸಿ ಗೃಹಪಯೋಗದ ಮಟ್ಟದಲ್ಲಿ ವಿದ್ಯುತ್‌ ಉತ್ಪಾದನೆಯ ಮಾರ್ಗವನ್ನು ತೀರ್ಥಹಳ್ಳಿ ಪಟ್ಟಣದ ಬಾಳೇಬೈಲಿನ ರಮೇಶ್ ಗೌಡ ಕಂಡುಹಿಡಿದಿದ್ದಾರೆ.

ಮನೆಯ ಚಾವಣಿಯ ಮೇಲೆ ನಿರುಪಯುಕ್ತ ಜಾಗವನ್ನು ಬಳಕೆ ಮಾಡಿಕೊಂಡ ರಮೇಶ್ ಅಲ್ಲಿ ಒಂದು ಗಾಳಿಯಂತ್ರ ಅಳವಡಿಸಿದ್ದಾರೆ. ಪ್ರಕೃತಿದತ್ತವಾಗಿ ದೊರಕುವ ಗಾಳಿಯನ್ನು ಶಕ್ತಿಯಾಗಿ ಪರಿವರ್ತಿಸಿ ಅದರಿಂದ ವಿದ್ಯುತ್ ಉತ್ಪಾದಿಸಿ ಬಳಸುತ್ತಿದ್ದಾರೆ. ಸರ್ಕಾರ ಪೂರೈಸುವ ವಿದ್ಯುತ್‌ ಶಕ್ತಿಯ ಮೇಲೆ ಅವಲಂಬಿತರಾಗದ ರಮೇಶ್‌ ಗೌಡ, ಈ ಯಂತ್ರದಿಂದಲೇ ವಿದ್ಯುತ್‌ ಉತ್ಪಾದಿಸಿ ಅಕ್ಕಪಕ್ಕದ ಮನೆಗೂ ವಿದ್ಯುತ್‌ ಪೂರೈಸುತ್ತಿದ್ದಾರೆ.

ಮಲೆನಾಡು ಭಾಗದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸಾಹಸದ ಕೆಲಸ. ಇಲ್ಲಿ ಚದುರಿಹೋಗಿರುವ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಮಾಡಲು ವಿದ್ಯುತ್ ಇಲಾಖೆ ಸಾಕಷ್ಟು ಹಣ ಖರ್ಚು ಮಾಡಬೇಕು. ಒಂದು ಊರಿಗೆ ಒಂದೇ ಮನೆ ಇದ್ದರೂ ಅಲ್ಲಿಗೆ ಸೌಲಭ್ಯ ನೀಡುವ ಅನಿವಾರ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ವಿದ್ಯುತ್ ಕಂಬಗಳನ್ನು ನೆಟ್ಟು ತಂತಿ ಎಳೆದು ಸಂಪರ್ಕ ನೀಡಬೇಕು. ಹೀಗೆ ವಿದ್ಯುತ್ ಮಾರ್ಗ ನಿರ್ಮಾಣ ಮಾಡುವಾಗ ಲಕ್ಷಾಂತರ ಮರಗಳು ನೆಲಕ್ಕುರುಳುತ್ತವೆ. ವಿದ್ಯುತ್ ಮಾರ್ಗವನ್ನು ತಡೆರಹಿತವಾಗಿ ಉಳಿಸಲು ಅಪಾರ ಪ್ರಮಾಣದ ಕಾಡು ನಾಶವಾಗುತ್ತದೆ. ಕಾಡು ನಾಶವನ್ನು ತಡೆಯಲು ವಿದ್ಯುತ್ ಮನೆ ಯಲ್ಲಿಯೇ ಉತ್ಪಾದಿಸುವುದು ಉತ್ತಮ  ವಿಧಾನ ಎಂದು ರಮೇಶ್ ಗೌಡ ಹೇಳುತ್ತಾರೆ.

ಜಲವಿದ್ಯುತ್ ಉತ್ಪಾದನೆಗಾಗಿ ಸಾವಿರಾರು ಎಕರೆ ಪ್ರದೇಶದ ಕಾಡು ನಾಶವಾಗಿದೆ. ಅಣುವಿದ್ಯುತ್ ಉತ್ಪಾದನೆಯೂ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಂಥಹ ಸಂದರ್ಭದಲ್ಲಿ ಸ್ವಾವಲಂಬಿಗಳಾಗುವ ಅಗತ್ಯವಿದೆ ಎನ್ನುತ್ತಾರೆ ಅವರು.

 ನಿತ್ಯ ಸರಾಸರಿ 9 ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಏಕಕಾಲದಲ್ಲಿ ನೀರಿನ ಪಂಪು, ವಾಷಿಂಗ್ ಮಷಿನ್, ಟಿವಿ, ಮನೆ ಬೆಳಕು, ಇಸ್ತ್ರಿಪೆಟ್ಟಿಗೆ, ಫ್ರಿಜ್‌ ಬಳಕೆಗೆ ‌ಉತ್ಪಾದಿಸುವ ವಿದ್ಯುತ್‌ ಬಳಕೆಯಾಗುತ್ತಿದೆ.  ಪೂರೈಕೆಗೆ ಅಡ್ಡಿ ಆಗದಂತೆ ಸೋಲಾರ್ ಘಟಕವನ್ನು ವಿಂಡ್ ಫ್ಯಾನ್ ಜೊತೆ ಅಳವಡಿಸಲಾಗಿದೆ. ಗಾಳಿಯ ಪ್ರಮಾಣ ಕಡಿಮೆ ಇದ್ದಾಗ ಇದು ಉಪಯೋಗಕ್ಕೆ

ಬರಲಿದೆ.

ಮನೆಯ ಕೆಳ ಭಾಗದಲ್ಲಿ ಪಾಲುದಾರ ಸಹಭಾಗಿತ್ವದಲ್ಲಿ ಕಾಫಿ ಪುಡಿ ಘಟಕವನ್ನು ಆರಂಭಿಸಲಾಗಿದೆ. ಕಾಫಿ ಪುಡಿ ಘಟಕಕ್ಕೆ ಬೇಕಾಗುವಷ್ಟು ವಿದ್ಯುತ್ ಲಭ್ಯವಿದೆ. 1 ಕಿಲೋ ವ್ಯಾಟ್ ಸಾಮರ್ಥ್ಯಕ್ಕೆ ₹ 1 ಲಕ್ಷದ 35 ಸಾವಿರ ವೆಚ್ಚವಾಗಲಿದೆ. ಪರಿಸರಸ್ನೇಹಿಯಾಗಿ ವಿದ್ಯುತ್ ಉತ್ಪಾದಿಸುವ ಕಡೆಗೆ ಆಸಕ್ತಿ ಹೆಚ್ಚಬೇಕು ಎನ್ನುತ್ತಾರೆ ರಮೆಶ್ ಗೌಡ.

- ಶಿವಾನಂದ ಕರ್ಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry