ಹಂಚಿನಾಳದಲ್ಲಿ ‘ಆದರ್ಶ ಗುರುಕುಲ’

7
ಸರ್ಕಾರಿ ಪ್ರಾಥಮಿಕ ಶಾಲೆಯ ಹಿರಿಮೆ; ಎಲ್ಲೆಡೆ ಪ್ರಶಂಸೆಯ ಸುರಿಮಳೆ

ಹಂಚಿನಾಳದಲ್ಲಿ ‘ಆದರ್ಶ ಗುರುಕುಲ’

Published:
Updated:
Deccan Herald

ಸಿಂದಗಿ:  ಸರ್ಕಾರಿ ಶಾಲೆಗಳು ಪಡಸಾಲಿಗಳಾಗಿವೆ ಎಂಬ ಸಾಮೂಹಿಕ ಟೀಕೆಗೆ ವ್ಯತಿರಿಕ್ತವಾಗಿ ಇಲ್ಲೊಂದು ಶಾಲೆಯಿದೆ. ‘ಆದರ್ಶ ಗುರುಕುಲ’ ಎಂದೇ ಇದು ಖ್ಯಾತವಾಗಿದೆ. ವಿಜಯಪುರ-ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ತಾಲ್ಲೂಕಿನ ಕುಗ್ರಾಮ ಹಂಚಿನಾಳ ಶಾಲೆಯೇ ಈ ಖ್ಯಾತಿ ಹೊಂದಿದೆ.

ಹಂಚಿನಾಳ ಗ್ರಾಮದಲ್ಲಿ 242 ಕುಟುಂಬಗಳಿದ್ದು, 1277 ಜನಸಂಖ್ಯೆಯಿದೆ. ‘ಆದರ್ಶ ಶಾಲೆ’ಯಿಂದಲೇ ಗ್ರಾಮ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇಲ್ಲಿನ ಪರಿಸರ ಸಂಪೂರ್ಣ ಶೈಕ್ಷಣಿಕಮಯ. ಜ್ಞಾನ ಪ್ರಸಾರಕ್ಕಾಗಿ ತಮ್ಮನ್ನೇ ಸಮರ್ಪಸಿಕೊಂಡ ಶಿಕ್ಷಕ ಬಳಗ. ಶಿಕ್ಷಕರಿಗೆ ತಕ್ಕ ಶಿಷ್ಯರೆಂಬಂತೆ ಯೋಗ್ಯ ಮಕ್ಕಳು. ಶಿಕ್ಷಕರು-ಮಕ್ಕಳಿಗೆ ಸದಾ ಪ್ರೋತ್ಸಾಹಿಸುವ ಪಾಲಕ ವರ್ಗ ಇಲ್ಲಿದೆ.

ಭೌತಿಕವಾಗಿ ಅತ್ಯುತ್ತಮ ಪರಿಸರ ಹೊಂದಿದೆ. ಪಾಲಕರ ಸಹಾಯ ಹಸ್ತದಿಂದ ಸುಸಜ್ಜಿತ 10 ಶಾಲಾ ಕೊಠಡಿಗಳು, ಕೊಠಡಿಯಲ್ಲಿ ವಿದ್ಯುತ್ ಸಂಪರ್ಕ, ಫ್ಯಾನ್, ತಾಲ್ಲೂಕಿನಲ್ಲಿಯೇ ಪ್ರಥಮ ಎನ್ನಬಹುದಾದ ಡಿಜಿಟಲ್ ವರ್ಗ ಕೋಣೆ, ಶುದ್ಧ ಕುಡಿಯುವ ನೀರು, ತರ–ತರಹದ ಅಡುಗೆಯನ್ನೊಳಗೊಂಡ ಬಿಸಿಯೂಟ ವ್ಯವಸ್ಥೆ, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಹೈಟೆಕ್ ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ, ಗಣಕಯಂತ್ರಗಳನ್ನು ಈ ಶಾಲೆ ಒಳಗೊಂಡಿದೆ. ಮಾದರಿ ನಲಿ-ಕಲಿ ಕೊಠಡಿ, ಗ್ರಾಮಸ್ಥರು ₹ 2 ಲಕ್ಷ ದೇಣಿಗೆ ನೀಡಿ ಇಡೀ ಶಾಲೆಗೆ ರಕ್ಷಣಾ ಕಬ್ಬಿಣದ ಗ್ರಿಲ್ ಜೋಡಿಸಿರುವುದು ವಿಶೇಷವಾಗಿದೆ.

ಮಾಹಿತಿ ತಂತ್ರಜ್ಞಾನ ಲೋಕದ ದಿಗ್ಗಜ ಅಜೀಂ ಪ್ರೇಮ್‌ಜಿ ಈ ಶಾಲೆಗೆ ಅನಿರಿಕ್ಷಿತ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸುವದರ ಜತೆಗೆ ‘ಕಲಿಕಾ ಶಾಲೆ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಶಾಲೆಗೆ ಭೇಟಿ ನೀಡಿ ಪ್ರಶಂಸಿದ್ದಾರೆ. ಇಡೀ ಜಿಲ್ಲೆಯಲ್ಲಿಯೇ ಅತ್ಯುತ್ತಮ ಶಾಲೆ ಪ್ರಶಸ್ತಿ ಗರಿಯನ್ನು ಈ ಶಾಲೆ ತನ್ನದಾಗಿಸಿಕೊಂಡಿದೆ.

ಶಾಲೆಯ ಸರಾಸರಿ ಹಾಜರಾತಿ 90ಕ್ಕೂ ಅಧಿಕ. ಈ ಗ್ರಾಮದ ಹೆಣ್ಣು ಮಕ್ಕಳು ಮದುವೆಯಾಗಿ ಹೋದರೂ; ತಮ್ಮ ಮಕ್ಕಳನ್ನು ಇದೇ ಶಾಲೆಯಲ್ಲಿ ಓದಿಸುವುದು ಸಾಮಾನ್ಯ. ಶಾಲೆಯಲ್ಲಿ ಕ್ರಿಯಾಶೀಲ, ಸೃಜನಶೀಲ, ಸಮಯನಿಷ್ಠೆಯುಳ್ಳ ಬೋಧನಾ ವರ್ಗ, ಶಾಲಾ ಚಟುವಟಿಕೆಗಳಿಗೆ ಸದಾ ಸ್ಪಂದಿಸುವ ಸಮುದಾಯ ಇಲ್ಲಿದೆ.

ಪ್ರತಿಯೊಂದು ಮಗುವಿನ ಬಗ್ಗೆ ವಿಶೇಷ ಕಾಳಜಿ ವಹಿಸಿ, ಕಲಿಕೆಯಲ್ಲಿ ಹಿಂದುಳಿದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆ ತಂದು ವಿಶೇಷ ಬೋಧನಾ ವ್ಯವಸ್ಥೆಯನ್ನು ಈ ಶಾಲೆಯಲ್ಲಿ ಕಲ್ಪಿಸಲಾಗಿದೆ. ಆದರೆ ಇಂತಹ ಆದರ್ಶ ಶಾಲೆ ಆಟದ ಮೈದಾನದ ಕೊರತೆ ಎದುರಿಸುತ್ತಿದೆ. ಅಂಗೈ ಅಗಲ ಬಯಲು ಜಾಗ... ಹೀಗಾಗಿ ನಿತ್ಯವೂ ಮಕ್ಕಳು ಪ್ರಾರ್ಥನೆಯನ್ನು ಎಲ್ಲೆಲ್ಲೋ ನಿಂತು ಮಾಡುತ್ತಿರುವುದು ಅಷ್ಟೇ ವಿಷಾದನೀಯ.
 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !