ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದಪುರ: ಪರ್ಯಾಯ ಬೆಳೆಗಳ ಸಂಶೋಧನೆಯತ್ತ ಕೃಷಿ ವಿ.ವಿ.

ಮಲೆನಾಡ ರೈತರ ಆರ್ಥಿಕ ಪುನಶ್ಚೇತನಕ್ಕೆ ಒತ್ತು
Last Updated 8 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಆನಂದಪುರ (ಶಿವಮೊಗ್ಗ ಜಿಲ್ಲೆ): ಸಮೀಪದ ಇರುವಕ್ಕಿಯಲ್ಲಿ ಸುಮಾರು 777 ಎಕರೆಯಲ್ಲಿ ನೂತನ ಕೃಷಿ ವಿಶ್ವವಿದ್ಯಾಲಯ ನಿರ್ಮಾಣವಾಗುತ್ತಿರುವುದು ಆರ್ಥಿಕ ಪುನಶ್ಚೇತನಗೊಳ್ಳಬಹುದೆಂಬ ಆಶಾಕಿರಣ ರೈತರಲ್ಲಿ ಮೂಡುತ್ತದೆ. ಈ ವಿಶ್ವವಿದ್ಯಾಲಯದಲ್ಲಿ ಕೃಷಿ, ಅರಣ್ಯ, ತೋಟಗಾರಿಕೆ ಮೂರು ವಿಭಾಗಗಳ ಬಗ್ಗೆ ಸಂಶೋಧನೆ ಇರುವುದರಿಂದ ಮಲೆನಾಡ ರೈತರು ಹಾಗೂ ಕರಾವಳಿ ಭಾಗದ ರೈತರಿಗೆ ಮಿಶ್ರಬೆಳೆ ಹಾಗೂ ಪರ್ಯಾಯ ಬೆಳೆಗಳ ಬಗ್ಗೆ ಸಂಶೋಧನೆ ನಡೆಯುವುದರ ಜೊತೆ ಪೂರಕ ಮಾಹಿತಿ ಸಿಗುವುದರಿಂದ ವರದಾನವಾಗಿದೆ.

ಮಲೆನಾಡ ಭಾಗದ ರೈತರು ಪರ್ಯಾಯ ಮಾರ್ಗ ಕಂಡುಕೊಳ್ಳದೆ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದಾರೆ. ಇದರಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಗಳಿಂದ ಬೆಳೆ ನಾಶವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ವಿಶ್ವವಿದ್ಯಾಲಯದಲ್ಲಿ ಮಿಶ್ರಬೆಳೆ, ಪರ್ಯಾಯ ಬೆಳೆಗಳ ಮಾಹಿತಿ, ಸಂಶೋಧನೆಯಿಂದ ಲಾಭವಾಗಬಹುದು ಎಂಬ ನಿರೀಕ್ಷೆ ಹೆಚ್ಚಿದೆ.

ಭತ್ತ, ಅಡಿಕೆ, ಶುಂಠಿಯನ್ನು ಮಾತ್ರ ಈ ಭಾಗದಲ್ಲಿ ಬೆಳೆಯುತ್ತಿದ್ದರು. ಇದರ ಹೊರತಾಗಿ ಇಲ್ಲಿನ ವಾತಾವರಣ ಹಾಗೂ ಹವಾಮಾನಕ್ಕೆ ಅನುಗುಣವಾಗಿ ಪರ್ಯಾಯ ಬೆಳೆಗಳನ್ನು ಬೆಳೆಯಲು ವಿಶ್ವವಿದ್ಯಾಲಯದಲ್ಲಿ ಸಂಸ್ಕರಣೆ ಹಾಗೂ ಸಂಶೋಧನೆ ಮಾಡಲಾಗುತ್ತಿದೆ.

ಕಾಫಿ ವಿವಿಧ ತಳಿಗಳಾದ ಚಂದ್ರಗಿರಿ ಕಾಫಿ, ಸಿ.ಎಎಕ್ಸ್.ಆರ್ ಅನ್ನು 5 ಎಕರೆಯಲ್ಲಿ ಬೆಳೆದು ಸಂಶೋಧನೆ ಮಾಡಲಾಗುತ್ತಿದೆ. ಕೊಡಗಿನ ಕಿತ್ತಳೆ, ನಾಗಪುರದ ಕಿತ್ತಳೆ, ಮುಸಂಬಿಯನ್ನು ಸಹ ಇಲ್ಲಿ ಬೆಳೆದು ಪರೀಕ್ಷೆ ಮಾಡಲಾಗುತ್ತಿದೆ. ಬಟರ್ ಫ್ರೂಟ್, ಮ್ಯಾಂಗಸ್ಟನ್, ರಾಮ್ ಬಟಾನ್, ಸುಗಂಧ ದ್ರವ್ಯ, ಚಕ್ಕೆ, ಲವಂಗ, ದಾಲ್ ಚಿಹ್ನೆ ಸಹ ಬೆಳೆಯಲಾಗಿದೆ.

ಅರಣ್ಯ ಇಲಾಖೆಯ ಸಹಯೋಗದಲ್ಲಿ 5 ಎಕರೆ ಬಿದಿರನ್ನು ಬೆಳೆಯುವ ಮೂಲಕ ಅರಣ್ಯ ಕೃಷಿಗೂ ಒತ್ತು ನೀಡಲಾಗುತ್ತಿದೆ. ಬಿದಿರಿನಲ್ಲಿ ವಿಶೇಷವಾದ 7 ತಳಿಗಳನ್ನು ಬೆಳೆಯಲಾಗಿದೆ. ಬಿದಿರು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದ್ದು, ಹೆಚ್ಚಿನ ಫ್ರೋತ್ಸಾಹ ನೀಡುತ್ತದೆ. ರೈತರಿಗೂ ಆರ್ಥಿಕವಾಗಿ ಸಹಕಾರಿಯಾಗುತ್ತದೆ ಎಂಬ ನಿರೀಕ್ಷೆ ಇದೆ.

ಸ್ಥಳೀಯವಾಗಿ ಸಾಗರ ಹಾಗೂ ತೀರ್ಥಹಳ್ಳಿಯ ಅಡಿಕೆ ಸಸಿಗಳನ್ನು ಬೆಳೆದು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಅರಸಿಕೆರೆ ತೆಂಗು, ಎತ್ತರ ತಳಿ (ಟಾಲ್) ತೆಂಗಿನ ಸಸಿಗಳನ್ನು ಬೆಳೆಯಲಾಗುತ್ತಿದೆ. ಇವು ಉತ್ತಮ ತಳಿಯ ಹಾಗೂ ದೀರ್ಘಾವಧಿ ಬೆಳೆ ನೀಡುವ ಸಸ್ಯಗಳಾಗಿದ್ದು, ರೈತರು ಇದರ ಪ್ರಯೋಜನ ಪಡೆಯಬಹುದಾಗಿದೆ.

ಹಸಿರು ಮನೆಯಲ್ಲಿ ಗೋಡಂಬಿಯ ವಿವಿಧ ತಳಿಗಳಾದ ವೆಂಗೂರ್ಲ– 4 ಹಾಗೂ ವೆಂಗೂರ್ಲ– 7 ಗಿಡಗಳನ್ನು ಬೆಳೆಸುತ್ತಿದ್ದು, ಶೀಘ್ರದಲ್ಲಿ ರೈತರು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದು. ಅಲ್ಲದೆ ಏಲಕ್ಕಿ, ಕಾಳುಮೆಣಸು, ಸಿಲ್ವರ್ ಓಕ್ ಇನ್ನ ಹಲವು ಸಸ್ಯಗಳು ಮುಂದಿನ ದಿನಗಳಲ್ಲಿ ದೊರೆಯುತ್ತದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದರು.

ತರಬೇತಿ ಕಾರ್ಯಾಗಾರ: ವಿಶ್ವವಿದ್ಯಾಲಯದ ಮೂಲಕ ಹಲವಾರು ರೈತರು ಸೂಕ್ತ ಸಲಹೆ ಹಾಗೂ ತರಬೇತಿ ಪಡೆದುಕೊಂಡು ಉತ್ತಮ ಬೆಳೆಯನ್ನು ಬೆಳೆಯುತ್ತಿದ್ದಾರೆ. ಅಲ್ಲದೆ ಭತ್ತ ಹಾಗೂ ಜೋಳಕ್ಕೆ ಬರುವ ಸೈನಿಕ ಹುಳು ಹಾಗೂ ವಿವಿಧ ರೋಗಗಳ ಬಗ್ಗೆ ಹಲವು ಕಾರ್ಯಾಗಾರಗಳನ್ನು ವಿವಿಧೆಡೆ ನಡೆಸಲಾಗಿದೆ.

ಸಮಸ್ಯೆಗೆ ಸೂಕ್ತ ಪರಿಹಾರ: ‘ನಮ್ಮ ಮಲೆನಾಡ ಭಾಗದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಆಗುತ್ತಿರುವುದು ಸಂತಸವಾಗಿದೆ. ನಾವು ಬೆಳೆದ ಬೆಳೆಗಳಲ್ಲಿ ಯಾವುದಾದರೂ ಸಮಸ್ಯೆ ಕಂಡುಬಂದರೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತ ಪರಿಹಾರ ನೀಡುತ್ತಾರೆ ಎಂದು ಹೊಸನಗರ ತಾಲ್ಲೂಕಿನ ಹರತಾಳು ಗ್ರಾಮದ ರೈತ ರೇಣುಕೇಶ್ ಹೇಳಿದರು.

ನೂತನ ಕೃಷಿ ವಿಶ್ವವಿದ್ಯಾಲಯದಲ್ಲಿ ಅತ್ಯಂತ ಕಡಿಮೆ ದರದಲ್ಲಿ ವಿಶೇಷ ತಳಿಯ ಗಿಡಗಳು ಸಿಗುತ್ತವೆ. ಇದರ ದೂರದ ಊರುಗಳಿಗೆ ಹೋಗಿ ಗಿಡಗಳನ್ನು ತರುವುದು ತಪ್ಪಿದೆ. ಅಲ್ಲದೇ ಬೆಳೆ ಹೇಗೆ ಬೆಳೆಯಬೇಕು ಎಂಬುದರ ಬಗ್ಗೆ ನಿಖರ ಮಾಹಿತಿಯೂ ಸಿಗುತ್ತದೆ ಎಂದು ರೈತ ಗುರುರಾಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT