ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗುಂಬೆ ಘಾಟಿ ರಸ್ತೆ ದುರಸ್ತಿ ಮತ್ತಷ್ಟು ವಿಳಂಬ; ಏಪ್ರಿಲ್ 30ರವರೆಗೆ ನಿಷೇಧ

ಅವಧಿ ವಿಸ್ತರಣೆ ಸಾಧ್ಯತೆ
Last Updated 26 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮೂರು ಜಿಲ್ಲೆಗಳನ್ನು ಅತೀ ಹತ್ತಿರದಿಂದ ಸಂಪರ್ಕಿಸುವ ಆಗುಂಬೆ ಘಾಟಿ ದುರಸ್ತಿ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಎಲ್ಲಾ ಕ್ಷಣಗಳು ಗೋಚರಿಸುತ್ತಿವೆ. ಏಪ್ರಿಲ್ 30ರವರೆಗೆ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಿದ್ದು, ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸಂಚಾರ ನಿಷೇಧದ ಅವಧಿಯನ್ನು ವಿಸ್ತರಿಸುವ ಸಾಧ್ಯತೆ ಹೆಚ್ಚಿದೆ.

ಮಳೆಗಾಲದಲ್ಲಿ ಈ ಮಾರ್ಗದ ವಾಹನ ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ಪ್ರಮುಖ ಉದ್ದೇಶದಿಂದ ತುರ್ತು ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಿರೀಕ್ಷೆಯಂತೆ ಕಾಮಗಾರಿ ಅವಧಿಯೊಳಗೆ ದುರಸ್ತಿ ಕಾರ್ಯ ಸಾಧ್ಯತೆ ಕ್ಷೀಣವಾಗಿದ್ದು, ಈ ಮಾರ್ಗದ ಪ್ರಯಾಣಿಕರು ಇನ್ನಷ್ಟು ದಿವಸ ಸಂಚಾರ ನಿಷೇಧದ ಸಮಸ್ಯೆ ಎದುರಿಸುವಂತಾಗಿದೆ.

ಘಾಟಿಯಲ್ಲಿ ಗುರುತಿಸಲಾದ ಅಗತ್ಯ ಸ್ಥಳಗಳಲ್ಲಿ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಉಡುಪಿ ಜಿಲ್ಲೆ ವ್ಯಾಪ್ತಿಗೆ ಸೇರುವ ಆನೆಕಲ್ಲು ಬಳಿ ತಡೆಗೋಡೆ, ರಸ್ತೆಗೆ ಕಾಂಕ್ರೀಟ್ ಹಾಕಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ ಭಾಗದಲ್ಲಿ ಅಲ್ಲಲ್ಲಿ ತಡೆಗೋಡೆಯನ್ನು ಕಿತ್ತು ಕಟ್ಟಲಾಗುತ್ತಿದೆ. ರಸ್ತೆಯಲ್ಲಿ ಕಲ್ಲು, ಜೆಲ್ಲಿ, ಮರಳಿನ ರಾಶಿ ಕಂಡುಬಂದಿದ್ದರೂ ನಿರೀಕ್ಷೆಯಂತೆ ಕಾಮಗಾರಿ ಆಗುತ್ತಿಲ್ಲ.

ಕಾಮಗಾರಿ ಅನುಷ್ಠಾನಕ್ಕೆ ಸೋಮೇಶ್ವರ ಅಭಯಾರಣ್ಯ ವನ್ಯಜೀವಿ ವಿಭಾಗದ ಆಕ್ಷೇಪಣೆಯಿಂದಾಗಿ ಹಿನ್ನೆಡೆ ಉಂಟಾಗಿದೆ.
ಮೇ ತಿಂಗಳಲ್ಲಿಯೂ ಘಾಟಿ ರಸ್ತೆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಕಡಿಮೆ ಇದ್ದು, ವಾಹನ ಸಂಚಾರ ನಿಷೇಧದಿಂದಾಗಿ ಪ್ರಯಾಣಿಕರು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸ್ಥಿತಿ ಹೇಳತೀರದಾಗಿದೆ. ಉಡುಪಿ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು ಸಂಪರ್ಕಕ್ಕೆ ಹೆಚ್ಚು ಪ್ರಯಾಣ ವೆಚ್ಚ, ಸಮಯ ವ್ಯರ್ಥ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಘಾಟಿ ಮಾರ್ಗದಲ್ಲಿ ಶಿಥಿಲಗೊಂಡಿರುವ ಆಯ್ದ ಸ್ಥಳಗಳ ದುರಸ್ತಿಗಾಗಿ 2019 ಏಪ್ರಿಲ್ 1ರಿಂದ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ಏಪ್ರಿಲ್ 30ರೊಳಗೆ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ನಿಷೇಧ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಘಾಟಿ ಮಾರ್ಗದಲ್ಲಿ ತುರ್ತು ದುರಸ್ತಿ ಕಾಮಗಾರಿ ವೇಗವಾಗಿ ನಡೆಯುತ್ತಿಲ್ಲ.

ಘಾಟಿ ಮಾರ್ಗದ ರಸ್ತೆ ಕಾಮಗಾರಿ ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಹಾಲಿ ರಸ್ತೆ ಮಾರ್ಗದ ಪಕ್ಷದಲ್ಲಿನ ಪ್ರದೇಶವನ್ನು ಅಲ್ಪ ಪ್ರಮಾಣದಲ್ಲಿ ಬಳಸಿಕೊಳ್ಳುವುದಕ್ಕೂ ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವಿಭಾಗ ಅವಕಾಶ ನೀಡುತ್ತಿಲ್ಲ. ಅಡೆತಡೆ ಒಡ್ಡುವ ಮರಗಿಡಗಳನ್ನು ಕಡಿದು ರಸ್ತೆ ದುರಸ್ತಿ ಮಾಡದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆಗೆ ಅಭಯಾರಣ್ಯ ಇಲಾಖೆ ಕಠಿಣ ಎಚ್ಚರಿಕೆ ನೀಡಿದೆ. ಇದರಿಂದಾಗಿ ಕಾಮಗಾರಿ ಇನ್ನಷ್ಟು ಜಠಿಲಗೊಂಡಿದ್ದು ಕಾನೂನಿನ ಮುಷ್ಟಿಗೆ ಸಿಲುಕಿದೆ.

ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವಿಭಾಗದಿಂದ ದುರಸ್ತಿ ಕಾಮಗಾರಿಯ ಅಂದಾಜು ನೀಲನಕ್ಷೆಗೆ ನಿರೀಕ್ಷೆಯಂತೆ ಪೂರ್ವಾನುಮತಿ ದೊರಕದೇ ಇರುವುದು ಈಗ ಹಲವು ಸಮಸ್ಯೆಗಳ ಹುಟ್ಟಿಗೆ ಕಾರಣವಾಗಿದೆ. ಅರಣ್ಯ ಇಲಾಖೆಯಿಂದ ಕಾಮಗಾರಿಗೆ ಅಡ್ಡಿ ಉಂಟಾಗಬಹುದು ಎಂಬ ನಿರೀಕ್ಷೆಯ ನಡುವೆ ವಾಹನ ಸಂಚಾರಕ್ಕೆ ನಿಷೇಧ ಹೇರಿ ರಸ್ತೆ ಮಾರ್ಗವನ್ನು ಬಂದ್ ಮಾಡಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಮಾಡಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT