ಕಡೆಗಣನೆಗೆ ಅಂಗನವಾಡಿ ಸಿಬ್ಬಂದಿ ಆಕ್ರೋಶ

7

ಕಡೆಗಣನೆಗೆ ಅಂಗನವಾಡಿ ಸಿಬ್ಬಂದಿ ಆಕ್ರೋಶ

Published:
Updated:

ಶಿವಮೊಗ್ಗ: ಕಾರ್ಮಿಕ ಕಾಯ್ದೆ ಪ್ರಕಾರ ಕನಿಷ್ಠ ವೇತನ ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕರ್ತವ್ಯ. ಆದರೆ, ನಮ್ಮನ್ನು ಎರಡೂ ಸರ್ಕಾರಗಳೂ ಕಡೆಗಣಿಸಿವೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಆರೋಪಿಸಿದರು.

ಸಮಗ್ರ ಶಿಶು ಅಭಿವೃದ್ಧಿಯಲ್ಲಿ ಆದ ಪ್ರಗತಿಯ ಅಧ್ಯಯನದ ವರದಿಯನ್ನು ಚಂದ್ರಕಲಾ ನಂದ ಹಾಗೂ ಬಿ.ಎಂ. ರೋಹಿಣಿ ಅವರು ಸರ್ಕಾರಕ್ಕೆ ಸಲ್ಲಿಸಿದ ನಂತರವೂ ಸರ್ಕಾರ ಮೌನ ತಾಳಿದೆ. ಹಾಗಾಗಿ, ಹೋರಾಟ ಅನಿವಾರ್ಯ ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಬಿ.ಪ್ರೇಮಾ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

44 ವರ್ಷಗಳಿಂದ ಅತ್ಯಂತ ಕಡಿಮೆ ಸಂಬಳಕ್ಕೆ ಜೀತದಾಳುಗಳಂತೆ ಲಕ್ಷಾಂತರ ಸಹೋದರಿಯರು ದುಡಿಯುತ್ತಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಎಂದು ಹೋರಾಟ ನಡೆಯುತ್ತಲೇ ಇದೆ. ಬೀದಿಯಲ್ಲಿ ಮಲಗಿದ್ದಾರೆ. ಹಸಿವಿನಿಂದ ಬಳಲಿದ್ದಾರೆ. ನಿರಂತರ ಹೋರಾಟಕ್ಕೆ ಬೆಲೆಯೇ ಇಲ್ಲ ಎಂದು ಅಳಲು ತೋಡಿಕೊಂಡರು.

1982ರಲ್ಲಿ ಇದ್ದ ₹ 50 ಪ್ರಭಾರ ಭತ್ಯೆ ಈಗಲೂ ಅದೇ ಮುಂದುವರಿದಿದೆ. ಇಲಾಖೇತರ ಕೆಲಸ ಮಾಡಿಸಬಾರದು ಎಂದು ನಿಯಮ ರೂಪಿಸಿದರೂ, ಅಧಿಕಾರಿಗಳು ಚುನಾವಣೆಯ ಕೆಲಸವೂ ಸೇರಿದಂತೆ ಎಲ್ಲ ಕೆಲಸವನ್ನು ಮಾಡಿಸುತ್ತಿದ್ದಾರೆ. ಮಕ್ಕಳ ಜತೆ ಸಮಾಜವನ್ನೂ ನೋಡಿಕೊಳ್ಳಬೇಕಿದೆ. ಅದಕ್ಕಾಗಿ ಯಾವುದೇ ಪ್ರತ್ಯೇಕ ಸಂಭಾವನೆ ನೀಡುತ್ತಿಲ್ಲ ಎಂದು ದೂರಿದರು.

ಬೆಂಗಳೂರಿನಲ್ಲಿ ಹಗಲು–ರಾತ್ರಿ ಧರಣಿ ಹಮ್ಮಿಕೊಂಡಾಗ ಸ್ಥಳಕ್ಕೆ ಎಚ್.ಡಿ. ಕುಮಾರಸ್ವಾಮಿ ಬಂದಿದ್ದರು. ನಮ್ಮ ಕಷ್ಟ ನೋಡಿ ಕಣ್ಣೀರಿಟ್ಟಿದ್ದರು. ಮುಖ್ಯಮಂತ್ರಿಯಾದರೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಅವರು ಕೊಟ್ಟ ಹೇಳಿಕೆ ಅವರಿಗೇ ಮರೆತು ಹೋಗಿದೆ ಎಂದು ಟೀಕಿಸಿದರು.

ಈ ಬಾರಿಯ ಬಜೆಟ್‌ನಲ್ಲಿ ಕಾರ್ಯಕರ್ತೆಯರಿಗೆ ₹ 500, ಸಹಾಯಕಿಯರಿಗೆ ₹ 250 ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಅದೂ ನವೆಂಬರ್ ತಿಂಗಳಿನಿಂದ ನೀಡಲಾಗುತ್ತದೆ. ಬಹುಶಃ ಅಷ್ಟರೊಳಗೆ ಸರ್ಕಾರ ಬೀಳಬಹುದು ಎಂದು ವ್ಯಂಗ್ಯವಾಡಿದರು.

ನಿವೃತ್ತರಾದವರಿಗೆ ಮಾಸಿಕ ಪಿಂಚಣಿ ನೀಡಬೇಕು. ಮಿನಿ ಅಂಗನವಾಡಿ ಮೇಲ್ದರ್ಜೆಗೆ ಏರಿಸಬೇಕು. ಸೇವಾ ಹಿರಿತನದ ಆಧಾರದಲ್ಲಿ ವೇತನ ಮತ್ತು ಮೇಲ್ವಿಚಾರಕಿ ಹುದ್ದೆ ನೀಡಬೇಕು. ಪ್ರಾಥಮಿಕ ಶಾಲೆಗಳಿಗೆ ಇರುವಂತೆ ಬೇಸಿಗೆ ರಜೆ ನೀಡಬೇಕು. ಅಂಗನವಾಡಿಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ಗರ್ಭಿಣಿ, ಬಾಣಂತಿಯರಿಗೆ ಮುಂಗಡವಾಗಿ ಆಹಾರ ವಿತರಿಸಬೇಕು. ಬೇಡಿಕೆಗಳು ಈಡೇರುವವರೆಗೆ ಆಹೋರಾತ್ರಿ ಧರಣಿ ನಡೆಸಲು ಸಂಘ ನಿರ್ಧರಿಸಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಎಸ್.ಕೆ.ಶಾಂತಾ, ಯಶೋಧ, ರೇಣುಕಾ, ಮಂಜುಳಾ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !