ಸೋಮವಾರ, ನವೆಂಬರ್ 18, 2019
27 °C

ಆರೋಗ್ಯ ಭಾಗ್ಯ ಜಾಗೃತಿಗೆ ಸಲಹೆ

Published:
Updated:
Prajavani

ವಿಜಯಪುರ: ‘ಆರೋಗ್ಯ ಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳ ಶೇ 100ರಷ್ಟು ಹಾಗೂ ಎಪಿಎಲ್ ಕುಟುಂಬಗಳ ಶೇ 30ರಷ್ಟು ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

ನಗರದ ರುಡ್‌ಸೆಟ್ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಯುಷ್ಮಾನ್ ಭಾರತ, ಪೋಷಣ್ ಅಭಿಯಾನ, ಜಲಶಕ್ತಿ ಅಭಿಯಾನ ಹಾಗೂ ಸ್ವಸ್ಥ ಎಸ್‍ಎಚ್‌ಜಿ ಪರಿವಾರ ಜಾಗೃತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆಯುಷ್ಮಾನ್ ಭಾರತ ಯೋಜನೆಯಡಿ ವಿವಿಧ ಕಾಯಿಲೆಗಳಿಗೆ ಸಂಬಂಧಪಟ್ಟಂತೆ ಬಿಪಿಎಲ್ ಮತ್ತು ಎಪಿಎಲ್ ಫಲಾನುಭವಿಗಳು ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಇದಕ್ಕೆ ಸಂಬಂಧಪಟ್ಟಂತೆ ಪ್ರತಿ ಗ್ರಾಮದ ಸೇವಾ ಸಿಂಧು ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿ, ಕಾರ್ಡ್‌ಗಳನ್ನು ಪಡೆಯಬಹುದಾಗಿದೆ’ ಎಂದರು.

‘ಪೋಷಣ್ ಅಭಿಯಾನ ಯೋಜನೆಯಡಿ ಗರ್ಭಿಣಿ ತಾಯಂದಿರು, ಬಾಣಂತಿಯರು ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತದೆ. ತಾಯಂದಿರ ಆರೋಗ್ಯ ಸ್ವಸ್ಥ ಇದ್ದಲ್ಲಿ ಮಕ್ಕಳು ಆರೋಗ್ಯವಂತರಾಗಿರಲು ಸಾಧ್ಯ’ ಎಂದು ಹೇಳಿದರು.

‘ರಾಷ್ಟ್ರದಾದ್ಯಂತ ಜಲಶಕ್ತಿ ಅಭಿಯಾನವನ್ನು ಆರಂಭಿಸಲಾಗಿದ್ದು, ಕರ್ನಾಟಕ ರಾಜ್ಯದಲ್ಲಿಯೂ ಕೂಡ ಈ ಅಭಿಯಾನ ಕುರಿತು ಹಲವು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ನೀರಿನ ಸಮರ್ಪಕ ಬಳಕೆಯಾಗಬೇಕಿದೆ. ಆಲಮಟ್ಟಿ ಜಲಾಶಯವು 123 ಟಿಎಂಸಿ ಅಡಿ ನೀರು ಸಂಗ್ರಹ ಸಾಮಥ್ರ್ಯ ಹೊಂದಿದ್ದರೂ, ಈಚೆಗೆ ಬಂದ ನೆರೆಯಿಂದ 400 ಟಿಎಂಸಿ ಅಡಿಯಷ್ಟು ನೀರು ಸಮುದ್ರಕ್ಕೆ ಸೇರಿಕೊಂಡಿದೆ. ಜಿಲ್ಲೆಗೆ ವರ್ಷಕ್ಕೆ 4 ರಿಂದ 5 ಟಿಎಂಸಿ ಅಡಿ ನೀರಿನ ಅವಶ್ಯಕತೆ ಇದ್ದು, ಬೃಹತ್ ಪ್ರಮಾಣದ ನೀರು ಪೋಲಾಗಿ ಹೋದಂತಾಗಿದೆ’ ಎಂದರು.

‘ಸ್ವಸ್ಥ ಸ್ವಸಹಾಯ ಗುಂಪುಗಳನ್ನು ರಚಿಸುವ ಉದ್ದೇಶದೊಂದಿಗೆ ಸ್ವಸ್ಥ ಎಸ್‍ಎಚ್‌ಜಿ ಪರಿವಾರ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ.  ಈ ಯೋಜನೆಗಳ ಕುರಿತು ಸ್ವ ಸಹಾಯ ಸಂಘಗಳ ಸದಸ್ಯರಿಗೆ, ಮಹಿಳೆಯರಿಗೆ ವಿಶೇಷ ಕಾರ್ಯಾಗಾರ ಹಮ್ಮಿಕೊಂಡು ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಪಾಲಿಕೆ ಆಯುಕ್ತ ಡಾ.ಔದ್ರಾಮ, ರುಡ್‌ಸೆಟ್ ಸಂಸ್ಥೆ ನಿರ್ದೇಶಕ ರಾಜೇಂದ್ರ ಜೈನಾಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸಿ.ಬಿ.ಕುಂಬಾರ, ಸಹಾಯಕ ನಿರ್ದೇಶಕಿ ಉಷಾದೇವಿ ಹಿರೇಮಠ, ಐಟಿಐ ಕಾಲೇಜಿನ ಪ್ರಾಂಶುಪಾಲ ಎಸ್.ಎಚ್.ಮಲ್ಲಾಡಕರ, ರುಡ್‌ಸೆಟ್ ಸಂಸ್ಥೆಯ ನಿವೃತ್ತ ನಿರ್ದೇಶಕ ರಮೇಶ ಉತ್ತರಕರ್, ಸಂಯೋಜಕ ಸಂಗಣ್ಣ ಬಿರಾದಾರ, ರಾಜೇಶ್ವರಿ ಬಿರಾದಾರ, ಮಂಜುಳಾ ಬಂಕಾಪುರ, ಪೀಟರ್ ಅಲೆಕ್ಸಾಂಡರ್ ಇದ್ದರು.

ಪ್ರತಿಕ್ರಿಯಿಸಿ (+)