ಭಾನುವಾರ, ಫೆಬ್ರವರಿ 5, 2023
21 °C
5,788 ಅನರ್ಹರ ಪತ್ತೆ; ₹89 ಲಕ್ಷ ದಂಡ ವಸೂಲಿ; ದುರುಪಯೋಗ ತಡೆಗೆ ಆಧಾರ್‌ ಜೋಡಣೆ

83 ಪ್ರಕರಣ, 165 ಆರೋಪಿಗಳು

ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಕೋವಿಡ್‌ ನಂತರದಲ್ಲಿ ನಕಲಿ ಪಡಿತರ ಚೀಟಿಗಳ ಪತ್ತೆ, ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆದಾರರ ವಿರುದ್ಧ ಆಹಾರ ಇಲಾಖೆ ದಾಳಿ ಆರಂಭಿಸಿದ್ದು, ಕಳೆದ ಎರಡು ವರ್ಷಗಳಲ್ಲಿ ₹89 ಲಕ್ಷ ದಂಡ ವಸೂಲಿ ಹಾಗೂ ₹85 ಲಕ್ಷ ಮೌಲ್ಯದ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.

ಬಡ ಕುಟುಂಬಗಳಿಗೆ ನೆರವಾಗಲಿ ಎಂದು ಸರ್ಕಾರ ಬಿಪಿಎಲ್‌, ಅಂತ್ಯೋದಯ ಪಡಿತರ ಚೀಟಿಗಳ ಮೂಲಕ ಅಕ್ಕಿ, ಗೋಧಿ ಮುಂತಾದ ಆಹಾರಧಾನ್ಯಗಳನ್ನು ವಿತರಿಸಲಾಗುತ್ತದೆ. ಆದರೆ, ಇಲ್ಲಿಯೂ ಉಳ್ಳವರು ಬಡವರ ಬಿಪಿಎಲ್‌ ಕಾರ್ಡ್‌ ಪಡೆದಿದ್ದಾರೆ. ಜೊತೆಗೆ ಇನ್ನೂ ಕೆಲವರು ವಾಮಮಾರ್ಗಗಳ ಮೂಲಕ ಪಡಿತರ ಅಕ್ಕಿ ಖರೀದಿಸುತ್ತಾರೆ. ಅವರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ.

ಆಧಾರ್ ಸಂಖ್ಯೆ ಜೋಡಣೆ, ಭೂಮಿ, ಆರ್‌ಟಿಒ, ಎಚ್‌ಆರ್‌ಎಂಎಸ್ ದಾಖಲೆಗಳ ಸಹಾಯದಿಂದ 619 ಸರ್ಕಾರಿ ನೌಕರರು ಬಿಪಿಎಲ್‌ ಪಡಿತರ ಚೀಟಿ ಹೊಂದಿರುವುದನ್ನು ಪತ್ತೆ ಹಚ್ಚಿ ₹68.24 ಲಕ್ಷ ದಂಡ ವಸೂಲಿ ಮಾಡಲಾಗಿದೆ.

4,956 ಪಡಿತರ ಚೀಟಿ ಹೊಂದಿದ ಅನರ್ಹರನ್ನು ಪತ್ತೆ ಹಚ್ಚಿ, ₹18.47 ಲಕ್ಷ ದಂಡ, ನಾಲ್ಕು ಚಕ್ರ ವಾಹನ ಹೊಂದಿದ 213 ಮಂದಿ ಬಿಪಿಎಲ್‌ ಕಾರ್ಡ್‌ ಹೊಂದಿರುವುದನ್ನು ಪತ್ತೆ ಹಚ್ಚಿ, ಅವರಿಗೆ ₹3.23 ಲಕ್ಷ ದಂಡ ವಿಧಿಸಲಾಗಿದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ‘ಪ್ರಜಾವಾಣಿ‘ಗೆ ತಿಳಿಸಿದರು.

ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದವರ ವಿರುದ್ಧ 83 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅವರಿಂದ ₹85 ಲಕ್ಷ ಮೌಲ್ಯದ 5,101 ಕ್ವಿಂಟಲ್‌ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ₹1.27 ಕೋಟಿ ಮೌಲ್ಯದ 57 ವಾಹನಗಳ ಜಪ್ತಿ ಮಾಡಲಾಗಿದ್ದು 165 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 29 ನ್ಯಾಯಬೆಲೆ ಅಂಗಡಿಗಳ ಅನುಮತಿ ಅಮಾನತು ಮಾಡಲಾಗಿದ್ದು, ಐದು
ಅಂಗಡಿಗಳ ಅನುಮತಿ ರದ್ದು ಮಾಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 4,10,851 ಪಡಿತರ ಚೀಟಿಗಳಿವೆ. ಪಡಿತರ ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಶೇ99.99 ರಷ್ಟು ಪಡಿತರ ಚೀಟಿಗಳ ಹಾಗೂ ಶೇ 99.92ರಷ್ಟು ಪಡಿತರ ಚೀಟಿ ಸದಸ್ಯರ ಆಧಾರ್‌ ಜೋಡಣೆ ಮಾಡಲಾಗಿದೆ.

ಅಕ್ರಮ ಪಡಿತರ ಚೀಟಿ, ಅಕ್ರಮ ಪಡಿತರ ಅಕ್ಕಿ ಸಾಗಣೆ ಪತ್ತೆ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಚನ್ನಬಸಪ್ಪ ಕೊಡ್ಲಿ, ಜಂಟಿ ನಿರ್ದೇಶಕ, ಆಹಾರ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು