ಶನಿವಾರ, ಡಿಸೆಂಬರ್ 14, 2019
24 °C
ಪ್ರತಿ ಬಾರಿಯೂ ಹಳೇ ಬಟ್ಟೆ ಎಸೆದು ಹೊಸ ಬಟ್ಟೆ ಖರೀದಿಸುವ ವಿಲಿಯಮ್ಸ್‌

ಯೋಗಾಧ್ಯಯನಕ್ಕೆ ಬಂದಿದ್ದ ಆಸ್ಟ್ರೇಲಿಯಾದ ಪಾದ್ರಿ!

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಕೊಂಕಣಕೊಪ್ಪದಲ್ಲಿ ಸೋಮವಾರ ರಾತ್ರಿ ಗ್ರಾಮಸ್ಥರಿಂದ ಹಲ್ಲೆಗೀಡಾದ ಆಸ್ಟ್ರೇಲಿಯಾ ಪ್ರಜೆ ವಿಲಿಯಮ್ಸ್ ಕೈರನ್ ಜೇಮ್ಸ್ ಕ್ರೈಸ್ತ ಧರ್ಮಬೋಧಕ (ಪಾದ್ರಿ). ಯೋಗ ಹಾಗೂ ಆಧ್ಯಾತ್ಮದ ಬಗ್ಗೆ ಅಧ್ಯಯನಕ್ಕಾಗಿ ಒಂದು ವರ್ಷದ ಅವಧಿಯ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

‘ಫ್ರೆಂಚ್, ಜರ್ಮನ್ ಭಾಷೆ ಮಾತನಾಡುವ ವಿಲಿಯಮ್ಸ್‌ಗೆ ಇಂಗ್ಲಿಷ್ ಗೊತ್ತಿಲ್ಲ. ಜೊತೆಗೆ ಮದ್ಯ ಸೇವನೆ ಮಾಡಿದ್ದರು. ಇದು ಗ್ರಾಮಸ್ಥರೊಂದಿಗೆ ತಪ್ಪು ಸಂವಹನಕ್ಕೆ ಕಾರಣವಾಗಿ ಹೊಡೆದಾಟಕ್ಕೆ ದಾರಿಯಾಗಿದೆ’ ಎಂದು ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಐಸಿಯುನಲ್ಲೇ ಯೋಗ: ‘ಕುಮಾರೇಶ್ವರ ಆಸ್ಪತ್ರೆ ವೈದ್ಯರ ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ವಿಲಿಯಮ್ಸ್ ಸದ್ಯ ಅವರ ಬಳಿ ಮಾತ್ರ ಮಾತನಾಡುತ್ತಿದ್ದಾರೆ. ಆಧ್ಯಾತ್ಮದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದು, ಐಸಿಯುನಲ್ಲೇ ಯೋಗ ಮತ್ತು ಪ್ರಾರ್ಥನೆ ಮಾಡುತ್ತಿದ್ದಾರೆ. ಉದ್ದನೆಯ ತಲೆಕೂದಲು ಹಾಗೂ ಗಡ್ಡವನ್ನು ಅವರೇ ಕತ್ತರಿಸಿಕೊಂಡಿದ್ದಾರೆ’ ಎಂದರು.

‘ಚೆನ್ನೈನ ಆಸ್ಟ್ರೇಲಿಯಾ ರಾಯಭಾರ ಕಚೇರಿ ಅಧಿಕಾರಿಗಳು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ವಿಲಿಯಮ್ಸ್ ಕುಟುಂಬದವರನ್ನೂ ಸಂಪರ್ಕಿಸಲಾಗಿದೆ’ ಎಂದು ತಿಳಿಸಿದರು.

ಎಂಟು ರಾಷ್ಟ್ರ ಸುತ್ತಿದ್ದರು: ವಿಲಿಯಮ್ಸ್, ಸೆ.27ರಂದು ಕೇರಳದ ಕೊಚ್ಚಿಗೆ ಬಂದಿದ್ದು, ಅಲ್ಲಿ ಯೋಗ ಕಲಿತಿದ್ದಾರೆ. 2020ರ ಸೆಪ್ಟೆಂಬರ್ ಅಂತ್ಯದವರೆಗೆ ಅವರ ವೀಸಾ ಅವಧಿ ಇತ್ತು.  2013ರಲ್ಲಿ ವಿದೇಶ ಪ್ರವಾಸ ಆರಂಭಿಸಿದ್ದು, ಈಗಾಗಲೇ ಎಂಟು ರಾಷ್ಟ್ರಗಳನ್ನು ಸುತ್ತಿದ್ದಾರೆ. ಕೊಚ್ಚಿಯಿಂದ ಕರ್ನಾಟಕಕ್ಕೆ ಎರಡು ತಿಂಗಳ ಹಿಂದೆ ಬಂದಿದ್ದು, ಧಾರವಾಡ ಮೂಲದ ಪ್ರವಾಸಿ ಮಾರ್ಗದರ್ಶಕರೊಬ್ಬರ (ಗೈಡ್) ನೆರವಿನಿಂದ ಹಂಪಿ– ಹೊಸಪೇಟೆ, ವಿಜಯಪುರದಲ್ಲಿ ಸುತ್ತಾಡಿದ್ದಾರೆ. ಘಟನೆ ನಡೆದ ದಿನವಷ್ಟೇ ಬಾದಾಮಿಗೆ ಬಂದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸದಾ ಒಬ್ಬಂಟಿಯಾಗಿ ತಿರುಗಾಡುವುದನ್ನೇ ಹವ್ಯಾಸವಾಗಿಸಿಕೊಂಡಿದ್ದ ವಿಲಿಯಮ್ಸ್ ಬಳಿ ಪಾಸ್‌ಪೋರ್ಟ್, ವೀಸಾ, ಒಂದಷ್ಟು ನಗದು, ಕ್ರೆಡಿಟ್‌ ಕಾರ್ಡ್ ಸೇರಿ ಪ್ರಮುಖ ದಾಖಲೆಗಳನ್ನುಳಗೊಂಡ ಒಂದು ಬ್ಯಾಗ್ ಹೊರತಾಗಿ ಬೇರೇನೂ ಇರಲಿಲ್ಲ. ಸದಾ ಒಂದು ಬರ್ಮುಡಾ, ಟೀ ಶರ್ಟ್ ಧರಿಸುತ್ತಿದ್ದರು. ಎರಡು ದಿನಗಳ ನಂತರ ಆ ಬಟ್ಟೆಗಳನ್ನು ಎಸೆದು ಹೊಸ ಬಟ್ಟೆ ಖರೀದಿಸುತ್ತಿದ್ದರು’ ಎಂದು ಅಧಿಕಾರಿ ಮಾಹಿತಿ ನೀಡಿದರು.

ಭಾಷೆ ತೊಡಕಿನ ಕಾರಣ ವಿಲಿಯಮ್ಸ್‌ಗೆ ಪರಿಚಯ ಇರುವ ಧಾರವಾಡದ ಗೈಡ್ ಕರೆಸಿ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ.

10 ಮಂದಿ ಬಂಧನ: ‘ಘಟನೆಗೆ ಸಂಬಂಧಿಸಿದಂತೆ ಕೆರೂರು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕೊಂಕಣಕೊಪ್ಪದ 10 ಮಂದಿಯನ್ನು ಬಂಧಿಸಿದ್ದಾರೆ. ಘಟನೆಯ ವಿಡಿಯೊ ದೃಶ್ಯಗಳನ್ನು ಆಧರಿಸಿ ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ’ ಎಂದು ಚಂದ್ರಕಾಂತ ತಿಳಿಸಿದರು.

ಪ್ರತಿಕ್ರಿಯಿಸಿ (+)