ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಳೇದಗುಡ್ಡ | ಅಭಿವೃದ್ಧಿಯಾಗದ ಸಂಪರ್ಕ ರಸ್ತೆಗಳು 

ಗ್ರಾಮೀಣ ಭಾಗದ ಜನರು ಸಂಚರಿಸುವುದಕ್ಕೆ ಅನಾನುಕೂಲ
ಎಚ್.ಎಸ್.ಘಂಟಿ
Published 18 ಜೂನ್ 2024, 5:22 IST
Last Updated 18 ಜೂನ್ 2024, 5:22 IST
ಅಕ್ಷರ ಗಾತ್ರ

ಗುಳೇದಗುಡ್ಡ: ತಾಲ್ಲೂಕು ಅಸ್ತಿತ್ವಕ್ಕೆ ಬಂದು 5 ವರ್ಷಗಳಾಗಿವೆ. ಪಟ್ಟಣಕ್ಕೆ ವ್ಯಾಪಾರ, ವಹಿವಾಟಿಗೆ ಹಲವು ಹಳ್ಳಿಗಳಿಂದ ಜನರು ಬರುತ್ತಾರೆ. ಅದರಲ್ಲಿ ಹುನಗುಂದ, ಬಾದಾಮಿ ತಾಲ್ಲೂಕಿನ ಹಳ್ಳಿಗಳ ಜನರು ಗುಳೇದಗುಡ್ಡ ಪಟ್ಟಣ ಅವಲಂಭಿಸಿದ್ದಾರೆ. ಅವರು ಕೆಲವು ಕೂಡು ರಸ್ತೆಗಳ ಮೂಲಕ ಗುಳೇದಗುಡ್ಡ ಪಟ್ಟಣಕ್ಕೆ ಆಗಮಿಸುತ್ತಿದ್ದು ಅವುಗಳು ಅಭಿವೃದ್ಧಿಯಾಗದೆ ಜನ ಸಂಪರ್ಕಕ್ಕೆ ತೊಂದರೆಯಾಗಿದೆ.

ಮಲಪ್ರಭಾ ನದಿಯಾಚೆ ಇರುವ ಚಿಮ್ಮಲಗಿ, ಮಂಗಳಗುಡ್ಡ ಹಾಗೂ ಕಾಟಾಪೂರ ಗ್ರಾಮದ ಜನರು ಗುಳೇದಗುಡ್ಡ ತಾಲ್ಲೂಕು ವ್ಯಾಪ್ತಿಗೆ ಬರುವುದರಿಂದ ಕಚೇರಿ ಕೆಲಸಗಳಿಗೆ ಚಿಮ್ಮಲಗಿ-ನಾಗರಾಳ ಮಧ್ಯ ಇರುವ ಕೂಡು ರಸ್ತೆಯ ಮೂಲಕವೇ ಬರಬೇಕು. ಆದರೆ ಕೂಡುರಸ್ತೆ ಅಭಿವೃದ್ದಿಯಾಗಿಲ್ಲ. 10 ವರ್ಷಗಳ ಹಿಂದೆ ಸ್ವಲ್ಪು ಡಾಂಬರೀಕರಣವಾದದ್ದು ಬಿಟ್ಟರೆ ಇನ್ನುಳಿದದ್ದು ಕಚ್ಚಾ ರಸ್ತೆ ಇವೆ. ಇಲ್ಲಿ ಅಟೋ, ಟ್ಯಾಕ್ಟರ್‌, ಬೈಕ್ ಮುಂತಾದವುಗಳು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಕೂಡು ರಸ್ತೆಯಾಗಬೇಕೆಂದು ಚಿಮ್ಮಲಗಿ, ಮಂಗಳಗುಡ್ಡ ಗ್ರಾಮದ ಜನರ ಒತ್ತಾಸೆಯಾಗಿದೆ.

ಇನ್ನೊಂದು ತಾಲ್ಲೂಕಿನ ಆಸಂಗಿ ಗ್ರಾಮದ ಹತ್ತಿರವಿರುವ ಬ್ಯಾರೇಜ್‌ ಮೂಲಕ ಹುನಗುಂದ ತಾಲ್ಲೂಕಿನ ಗ್ರಾಮಗಳಾದ ನಿಂಬಲಗುಂದಿ, ಕಳ್ಳಿಗುಡ್ಡ ಮತ್ತು ಐಹೊಳೆಯ ಜನರು ವ್ಯವಹಾರಕ್ಕಾಗಿ ಹೆಚ್ಚಾಗಿ ಗುಳೇದಗುಡ್ಡ ಪಟ್ಟಣವನ್ನೆ ಅವಲಂಭಿಸಿದ್ದಾರೆ. ಹೀಗಾಗಿ ನಿಂಬಲಗುಂದಿ ಆಸಂಗಿ ಕೂಡುರಸ್ತೆಯ ಮಾರ್ಗವನ್ನೆ ಅವಲಂಬಿಸಿ ಸಂಚರಿಸಬೇಕಾಗಿದೆ. ಕೂಡು ರಸ್ತೆ ಅಭಿವೃದ್ದಿಯಾದರೇ ಗುಳೇದಗುಡ್ಡದಿಂದ ಐತಿಹಾಸಿಕ ಸ್ಥಳವಾದ ಐಹೊಳೆಗೆ ಹೋಗಲು ಅಂತರ ಕಡಿಮೆಯಾಗುವುದರಿಂದ ಜನಸಂಪರ್ಕ ಹೆಚ್ಚಾಗುತ್ತದೆ.

‘ಐಹೊಳೆಗೆ ಹೋಗಲು ಬಾದಾಮಿ, ಪಟ್ಟದಕಲ್ಲು ಮಾರ್ಗದಿಂದ ಇಲ್ಲವೇ ನಾಗರಾಳ ಪಟ್ಟದಕಲ್ಲು ಮಾರ್ಗದಿಂದ ಸಂಚರಿಸಬೇಕು. ಇದು ಹೆಚ್ಚು ದೂರವಾಗುತ್ತದೆ. ಹೀಗಾಗಿ ಕೂಡು ರಸ್ತೆ ಅಭಿವೃದ್ಧಿ ಪಡಿಸಿದರೆ ಅನುಕೂಲವಾಗಲಿದೆ’ ಎಂದು ಸುರೇಶಗೌಡ ಪಾಟೀಲ ಹೇಳಿದರು.

ತಾಲ್ಲೂಕಿನ ಹಂಸನೂರು-ಹಲಕುರ್ಕಿ ಮತ್ತು ಲಿಂಗಾಪೂರ ನೀಲಾನಗರ ಕೂಡು ರಸ್ತೆಗಳು ತುಂಬಾ ಹದಗೆಟ್ಟಿದ್ದು ಸಂಚರಿಸಲು ಸಾಧ್ಯವಾಗದಷ್ಟು ತಗ್ಗು, ದಿನ್ನೆಗಳಿಂದ ಕೂಡಿವೆ. ಇವುಗಳೆಲ್ಲ ಅಭಿವೃದ್ದಿಯಾದರೆ ಗುಳೇದಗುಡ್ಡ ಪಟ್ಟಣದ ಜೊತೆ ವ್ಯವಹಾರ, ವ್ಯಾಪಾರ ವೃದ್ಧಿಯಾಗಿ ಪಟ್ಟಣ ಅಭಿವೃದ್ಧಿಯಾಗುತ್ತದೆ.

ಈಗಾಗಲೇ ಗದ್ದನಕೇರಿ ಆಸಂಗಿ ಮೂಲಕ ಪಟ್ಟದಕಲ್ ಸಂಪರ್ಕಿಸುವ ಹೆದ್ದಾರಿಯ ಸ್ವಾಧೀನ ಪ್ರಕ್ರಿಯೇ ಚಾಲ್ತಿಯಲ್ಲಿದ್ದು ಮುಗಿದ ಕೂಡಲೇ ಹೆದ್ದಾರಿ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಪಣಜಿ–ಲಿಂಗಸೂರು ರಾಷ್ಟ್ರೀಯ ಹೆದ್ದಾರಿ ಪಟ್ಟಣದ ಪರ್ವತಿ ಹತ್ತಿರ ಹಾದು ನಿಂಬಲಗುಂದಿ, ಕಳ್ಳಿಗುಡ್ಡ, ಐಹೊಳೆಯ ಮೂಲಕ ಗುಡೂರು ಹುನಗುಂದ ಮೂಲಕ ಲಿಂಗಸುಗೂರ ಸಂಪರ್ಕ ಸಾಧಿಸುತ್ತದೆ ಎಂದು ಹೇಳಲಾಗುತ್ತಿದೆ.  ಅದರ ಪ್ರಕ್ರಿಯೆ ಭಾಗವಾಗಿ ರೈತರಿಗೆ ನೋಟೀಸ್ ನೀಡಲಾಗಿದೆ ಇನ್ನೂ ಹೆದ್ದಾರಿ ಕಾರ್ಯ ಆರಂಭವಾಗಿಲ್ಲ.

‘ಕೂಡು ರಸ್ತೆ ಅಭಿವೃದ್ಧಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಇದ್ದರೂ ಅದು ಇಲ್ಲಿ ಪ್ರಯೋಜನವಾಗಿಲ್ಲ‘ ಎಂದು ಜುಮ್ಮನ್ನ ಜುಮ್ಮನ್ನವರ ಹೇಳುತ್ತಾರೆ.

ಗುಳೇದಗುಡ್ಡ ಸಂಪರ್ಕಿಸುವ ನಿಂಬಲಗುಂದಿ ಐಹೊಳೆ ಕೂಡು ರಸ್ತೆ ಮಾರ್ಗ
ಗುಳೇದಗುಡ್ಡ ಸಂಪರ್ಕಿಸುವ ನಿಂಬಲಗುಂದಿ ಐಹೊಳೆ ಕೂಡು ರಸ್ತೆ ಮಾರ್ಗ

ಈಗಾಗಲೇ ಗದ್ದನಕೇರಿ ಆಸಂಗಿ ಮೂಲಕ ಪಟ್ಟದಕಲ್ ಸಂಪರ್ಕಿಸುವ ಹೆದ್ದಾರಿಯ ಭೂ ಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಮುಗಿದ ಕೂಡಲೇ ಹೆದ್ದಾರಿ ನಿರ್ಮಾಣ ಕಾರ್ಯ ಆರಂಭವಾಗಲಿದೆ.

-ಗೋಪಾಲ ಗೆಣ್ಣೂರಎಂಜಿನೀಯರ ಹೆದ್ದಾರಿ ಉಪವಿಭಾಗ ಹುನಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT