ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: 48 ಗಂಟೆ; ₹95 ಕೋಟಿ ಬಾಕಿ ಪಾವತಿ!

ಜಿಲ್ಲಾಡಳಿತದಿಂದ ನಿರಾಣಿ ಶುಗರ್ಸ್, ಸಾವರಿನ್ ಶುಗರ್ಸ್ ಸಕ್ಕರೆ ಮುಟ್ಟುಗೋಲು
Last Updated 3 ಜುಲೈ 2019, 16:02 IST
ಅಕ್ಷರ ಗಾತ್ರ

ಬಾಗಲಕೋಟೆ: ನಿಗದಿತ ಗಡುವಿನಲ್ಲಿ ರೈತರಿಗೆ ಕಬ್ಬಿನ ಬಾಕಿ ಪಾವತಿಸದ ಕಾರಣ ಸಕ್ಕರೆ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾದ ಸರ್ಕಾರದ ನಿಲುವಿಗೆ ಸಕ್ಕರೆ ಕಾರ್ಖಾನೆ ಮಾಲೀಕರಿಂದಲೂ ಉತ್ತಮ ಸ್ಪಂದನೆ ದೊರೆತಿದೆ.

ಸರ್ಕಾರ ನಿಗದಿಪಡಿಸಿದ್ದ ಗಡುವು ಜೂನ್ 30ರ ನಂತರವೂ ಜಿಲ್ಲೆಯ ನಾಲ್ಕು ಕಾರ್ಖಾನೆಗಳು ₹149.89 ಕೋಟಿ ಬಾಕಿ ಉಳಿಸಿಕೊಂಡಿದ್ದವು. ಸರ್ಕಾರದ ಕ್ರಮದಿಂದಾಗಿ ಕೇವಲ 48 ಗಂಟೆಗಳಲ್ಲಿ ₹95.55 ಕೋಟಿ ಬಾಕಿ ಪಾವತಿಯಾಗಿದೆ.

ಬಾಕಿ ಸಂಪೂರ್ಣ ಚುಕ್ತಾ:

ಮುಧೋಳ ತಾಲ್ಲೂಕಿನ ಸಮೀರವಾಡಿಯ ಗೋದಾವರಿ ಶುಗರ್ಸ್ ಮೇ 31ರವರೆಗೆ ₹115.36 ಕೋಟಿ ಬಾಕಿ ಉಳಿಸಿಕೊಂಡಿತ್ತು. ಸರ್ಕಾರದ ಗಡುವು ಮುಗಿಯುವ ವೇಳೆಗೆ ಆ ಪ್ರಮಾಣ ₹32 ಕೋಟಿಗೆ ಇಳಿದಿತ್ತು. ಜಿಲ್ಲಾಡಳಿತ ಸಕ್ಕರೆ ಮುಟ್ಟುಗೋಲು ಪ್ರಕ್ರಿಯೆ ಆರಂಭಿಸುತ್ತಿದ್ದಂತೆಯೇ ಉಳಿದ ಬಾಕಿಯನ್ನು ಪಾವತಿಸಿರುವ ಕಾರ್ಖಾನೆ ಆಡಳಿತ, ಬುಧವಾರ ಜಿಲ್ಲಾಡಳಿತಕ್ಕೆ ಪ್ರಮಾಣ ಪತ್ರ ಸಲ್ಲಿಸಿದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಶ್ರೀಶೈಲ ಕಂಕಣವಾಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಕಿ ಪಾವತಿ ಚುರುಕು:

‘ಎಫ್‌ಆರ್‌ಪಿ ದರದ ಅನ್ವಯ ರೈತರಿಗೆ ಬಾಕಿ ಪಾವತಿ ಕಾರ್ಯವನ್ನುಉಳಿದ ಕಾರ್ಖಾನೆಗಳು ಚುರುಕುಗೊಳಿಸಿವೆ. ₹61.49 ಕೋಟಿ ಬಾಕಿ ಉಳಿಸಿಕೊಂಡಿದ್ದ ಮುಧೋಳದ ನಿರಾಣಿ ಶುಗರ್ಸ್ ಎರಡು ದಿನಗಳಲ್ಲಿ ₹35.56 ಕೋಟಿ ಪಾವತಿಸಿದೆ. ಬೀಳಗಿ ತಾಲ್ಲೂಕು ಕುಂದರಗಿಯ ಜೆಮ್ ಶುಗರ್ಸ್ ₹35.60 ಕೋಟಿ ಇದ್ದ ಬಾಕಿಯನ್ನು ₹26.62 ಕೋಟಿಗೆ ಇಳಿಸಿಕೊಂಡಿದೆ. ₹20.8 ಕೋಟಿ ಇದ್ದ ತೇರದಾಳದ ಸಾವರಿನ್ ಶುಗರ್ಸ್‌ನ ಬಾಕಿ ಈಗ ₹4.78 ಕೋಟಿಗೆ ಇಳಿದಿದೆ’ ಎಂದು ಕಂಕಣವಾಡಿ ಹೇಳಿದರು.

1.65 ಲಕ್ಷ ಕ್ವಿಂಟಲ್ ಮುಟ್ಟುಗೋಲು:

ಮುಧೋಳ ತಾಲ್ಲೂಕಿನ ನಿರಾಣಿ ಸಕ್ಕರೆ ಕಾರ್ಖಾನೆಗೆ ಸೇರಿದ 1.65 ಲಕ್ಷ ಕ್ವಿಂಟಲ್‌ ಸಕ್ಕರೆಯನ್ನು ತಹಶೀಲ್ದಾರ್ ಎಸ್.ಬಿ. ಇಂಗಳೆ ಮುಟ್ಟುಗೋಲು ಹಾಕಿಕೊಂಡರು. ಬಿಜೆಪಿ ಶಾಸಕ ಮುರುಗೇಶ ನಿರಾಣಿ ಇದರ ಮಾಲೀಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT