ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮದ ಸ್ಥಳಾಂತರಕ್ಕೆ ಹೈಕೋರ್ಟ್‌ ಆದೇಶ: ವಜ್ಜಲ ಗ್ರಾಮಸ್ಥರ ಸಂಕಷ್ಟಕ್ಕೆ ಸಿಗದ ಪರಿಹಾರ

Published 13 ಜೂನ್ 2023, 23:30 IST
Last Updated 13 ಜೂನ್ 2023, 23:30 IST
ಅಕ್ಷರ ಗಾತ್ರ

ಇಳಕಲ್: ಚಿಕ್ಕಶಿವನಗುತ್ತಿ ಕೆರೆಯ ಹಿನ್ನಿರು ಹಾಗೂ ಹಳ್ಳದ ಪ್ರವಾಹದಿಂದ ಬಾಧಿತಗೊಳ್ಳುವ ತಾಲ್ಲೂಕಿನ ವಜ್ಜಲ ಗ್ರಾಮ ಸ್ಥಳಾಂತರಗೊಳ್ಳಬೇಕಿದ್ದು, ಪುನರ್ವಸತಿ ಕೇಂದ್ರ ಸಿದ್ಧವಾಗಿದ್ದು, ಸಂತ್ರಸ್ತರಿಗೆ ೩ ವರ್ಷಗಳಿಂದ ನಿವೇಶನಗಳ ಹಕ್ಕುಪತ್ರ ನೀಡದೇ ಜಿಲ್ಲಾಡಳಿತ ಸತಾಯಿಸುತ್ತಿದೆ.

2008 ರಲ್ಲಿ ಸುರಿದ ಭಾರಿ ಮಳೆಗೆ ಚಿಕ್ಕಶಿವನಗುತ್ತಿ ಕೆರೆ ಹಿನ್ನೀರು ಹಾಗೂ ಹಳ್ಳದ ಪ್ರವಾಹದಿಂದ ವಜ್ಜಲ ಗ್ರಾಮ ನಲುಗಿತ್ತು. ನೀರು ಊರೊಳಗೆ ಹೊಕ್ಕ ಪರಿಣಾಮ ಧಾನ್ಯ ಸಂಗ್ರಹದ ಹಗೆವುಗಳು, ಅನೇಕ ಮನೆಗಳು ಕುಸಿದಿದ್ದವು. 280 ಕುಟುಂಬಗಳು ತೀವ್ರ ಕಷ್ಟಕ್ಕೆ ಸಿಲುಕಿದ್ದವು.


ತಮ್ಮ ಸಂಕಷ್ಟಕ್ಕೆ ಪರಿಹಾರ ಕಲ್ಪಿಸದ ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ಮನವಿ ಮಾಡದೇ, ತಮ್ಮ ಸಂಕಷ್ಟವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಹೈಕೋರ್ಟ್ ಮುಂದಿಟ್ಟರು. 2008 ಅಕ್ಟೋಬರ್ 25ರಂದು ಹೈಕೋರ್ಟ ವಜ್ಜಲ ಗ್ರಾಮವನ್ನು ಆದ್ಯತೆಯ ಮೇಲೆ ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತು.


2017 ಮೇ 17ರಂದು ಬಾಗಲಕೋಟೆ ಉಪವಿಭಾಗಾಧಿಕಾರಿಗಳು ಭೂಸ್ವಾದೀನಕ್ಕಾಗಿ ಹಾಗೂ ಪರಿಹಾರವಾಗಿ 12.04 ಕೋಟಿ ನೀಡುವಂತೆ ಐತೀರ್ಪು ನೀಡಿದರು. ತೀರ್ಪಿನ ಪ್ರಕಾರ ಗ್ರಾಮದಿಂದ 1 ಕಿ.ಮೀ ದೂರದಲ್ಲಿ ಕಂದಗಲ್ ರಸ್ತೆಗೆ ಹೊಂದಿಕೊಂಡಂತೆ 30 ಏಕರೆ ಜಮೀನು ಸ್ವಾದೀನಪಡಿಸಿಕೊಂಡು ಪುನರ್ ವಸತಿ ಕೇಂದ್ರ ರೂಪಿಸಲಾಗಿದೆ.


ಪುನರ್ವಸತಿ ಕೇಂದ್ರದಲ್ಲಿ ರಸ್ತೆ, ವಿದ್ಯುತ್ ಸಂಪರ್ಕ, ನೀರು ಪೂರೈಕೆ, ನಿವೇಶನಗಳ ಲೇಔಟ್, ಶಾಲೆ, ಅಗಸಿ, ಅಂಗನವಾಡಿ ಸೇರಿದಂತೆ ಸಾರ್ವಜನಿಕ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಎಲ್ಲ ಕಟ್ಟಡಗಳು ಪೋಲಿಗಳ, ಕುಡುಕರ ಚಟುವಟಿಕೆಗಳಿಗೆ ಬಳಕೆಯಾಗುತ್ತಿವೆ. ಈವರೆಗೂ ಹಿನ್ನೀರಿನಿಂದ ಬಾಧಿತಗೊಳ್ಳುವ ಸಂತ್ರಸ್ತರಿಗೆ ನಿವೇಶನ ಹಂಚಿಕೆಯಾಗಿಲ್ಲ. ಪರಿಹಾರವಾಗಿ ದೊರೆತ ಹಣವನ್ನು ಅನೇಕ ಕುಟುಂಬಗಳು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿವೆ. ಪ್ರತಿ ಮಳೆಗಾಲದಲ್ಲಿ ಗ್ರಾಮಸ್ಥರು ಜೀವ ಕೈಯಲ್ಲಿಡಿದುಕೊಂಡು ಆತಂಕದಲ್ಲಿ ಬದುಕುತ್ತಿದ್ದಾರೆ.


'2018ರಲ್ಲಿಯೇ ಸಾಂಕೇತಿಕವಾಗಿ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಆದರೆ ಈವರೆಗೂ ಹಕ್ಕುಪತ್ರಗಳನ್ನು ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಹಿಂದಿನ ಶಾಸಕರು ಈ ಬಗ್ಗೆ ಆಸಕ್ತಿ ವಹಿಸಲಿಲ್ಲ. ಈಗ ವಿಜಯಾನಂದ ಕಾಶಪ್ಪನವರ ಮತ್ತೆ ಶಾಸಕರಾಗಿದ್ದು, ಅವರಾದರೂ ನಮಗೆ ಹಕ್ಕು ಪತ್ರ ಕೊಡಿಸಬೇಕು' ಎಂದು ಗ್ರಾಮದ ಸೀತಿಮಾ ವಜ್ಜಲ್ ಮನವಿ ಮಾಡಿದರು.

ಪುನರ್ವಸತಿ ಕೇಂದ್ರದಲ್ಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಎರಡು ಗುಂಪುಗಳಾಗಿದ್ದು, ಪರಸ್ಪರರ ನಡುವೆ ಸಹಮತ ಮೂಡದ ಕಾರಣಕ್ಕೆ ವಿಳಂಬವಾಗಿದೆ ಎಂದು ಇಲ್ಲಿಯ ತಹಶೀಲ್ದಾರ್ ಕಚೇರಿಯ ಸಿಬ್ಭಂದಿಯೊಬ್ಬರು ಹೇಳುತ್ತಾರೆ.

ಈ ಬಗ್ಗೆ ತಹಶೀಲ್ದಾರ್‌ ಬಸವರಾಜ ಮೆಳವಂಕಿ ಪ್ರತಿಕ್ರಿಯಿಸಿ, ʼಫಲಾನುಭವಿಗಳ ಪಟ್ಟಿ ಸರಿ ಇಲ್ಲ ಎಂದು ಕೇಲವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, ಹಾಗಾಗಿ ನಿವೇಶನಗಳ ಹಕ್ಕುಪತ್ರ ಹಂಚಿಕೆ ವಿಳಂಬವಾಗಿದೆ. ಕಾನೂನು ಸಲಹೆ ಪಡೆದು, ಉಪವಿಭಾಗಾಧಿಕಾರಿಗಳೊಂದಿಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದುʼ ಎಂದು ಹೇಳಿದರು.

'ನಮ್ಮ ಗ್ರಾಮವನ್ನು ಸ್ಥಳಾಂತರಿಸಿ, ಸಂತ್ರಸ್ತರಿಗೆ ಪುನರ್ವಸತಿ ವ್ಯವಸ್ಥೆ ಮಾಡುವಂತೆ ಹೈಕೋರ್ಟ ಆದೇಶಿಸಿ ೧೫ ವರ್ಷವಾಯಿತು. ಪುನರ್ ವಸತಿ ಕೇಂದ್ರ ಸಿದ್ಧವಾಗಿ ೫ ವರ್ಷ ಗತಿಸಿದೆ. ಆದರೂ ಸಂತ್ರಸ್ತರಿಗೆ ನಿವೇಶನದ ಹಕ್ಕುಪತ್ರ ವಿತರಿಸಿಲ್ಲ. ಶಾಸಕ ವಿಜಯಾನಂದ ಕಾಶಪ್ಪನವರಾದರೂ ನಮಗೆ ನ್ಯಾಯ ಕೊಡಿಸಬೇಕುʼ ಎಂದು ವಜ್ಜಲ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಕೆರೆ ಹಿನ್ನೀರಿನಿಂದ ಬಾಧಿತಗೊಳ್ಳುವ ವಜ್ಜಲ ಗ್ರಾಮದ ಸ್ಥಳಾಂತರಕ್ಕೆ ಸಿದ್ದಗೊಂಡಿರುವ ಪುನರ್‌ವಸತಿ ಕೇಂದ್ರದ ಅಗಸಿ ಹಾಗೂ ಸುತ್ತಮುತ್ತ ಮುಳ್ಳು ಕಂಟಿಗಳು ಬೆಳೆದಿವೆ.
ಕೆರೆ ಹಿನ್ನೀರಿನಿಂದ ಬಾಧಿತಗೊಳ್ಳುವ ವಜ್ಜಲ ಗ್ರಾಮದ ಸ್ಥಳಾಂತರಕ್ಕೆ ಸಿದ್ದಗೊಂಡಿರುವ ಪುನರ್‌ವಸತಿ ಕೇಂದ್ರದ ಅಗಸಿ ಹಾಗೂ ಸುತ್ತಮುತ್ತ ಮುಳ್ಳು ಕಂಟಿಗಳು ಬೆಳೆದಿವೆ.
ಕೆರೆ ಹಿನ್ನೀರಿನಿಂದ ಬಾಧಿತಗೊಳ್ಳುವ ವಜ್ಜಲ ಗ್ರಾಮದ ಸ್ಥಳಾಂತರಕ್ಕೆ ಸಿದ್ದಗೊಂಡಿರುವ ಪುನರ್‌ವಸತಿ ಕೇಂದ್ರದ ಶಾಲಾ ಕಟ್ಟಡದಲ್ಲಿ ಹಾಗೂ ಆವರಣದಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ.
ಕೆರೆ ಹಿನ್ನೀರಿನಿಂದ ಬಾಧಿತಗೊಳ್ಳುವ ವಜ್ಜಲ ಗ್ರಾಮದ ಸ್ಥಳಾಂತರಕ್ಕೆ ಸಿದ್ದಗೊಂಡಿರುವ ಪುನರ್‌ವಸತಿ ಕೇಂದ್ರದ ಶಾಲಾ ಕಟ್ಟಡದಲ್ಲಿ ಹಾಗೂ ಆವರಣದಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT