ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀಳಗಿ | ಮಕ್ಕಳ ಕೈ ಸೇರದ ಪಠ್ಯಪುಸ್ತಕ

ಪೂರೈಕೆ ಆಗಬೇಕಿದೆ 91,648 ಪುಸ್ತಕಗಳು
ಕಾಶೀನಾಥ ಸೋಮನಕಟ್ಟಿ
Published 6 ಜುಲೈ 2024, 5:52 IST
Last Updated 6 ಜುಲೈ 2024, 5:52 IST
ಅಕ್ಷರ ಗಾತ್ರ

ಬೀಳಗಿ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳು ಕಳೆದರೂ ಈವರೆಗೆ ಸರ್ಕಾರದಿಂದ ಉಚಿತವಾಗಿ ನೀಡಬೇಕಿದ್ದ ಪಠ್ಯಪುಸ್ತಕಗಳು ಎಲ್ಲ ಶಾಲೆಗಳಿಗೆ, ಎಲ್ಲ ತರಗತಿಗಳಿಗೂ ಪೂರೈಕೆ ಆಗಿಲ್ಲ. ಆದರೆ ಸರ್ಕಾರ ಮಾತ್ರ ಈಗಾಗಲೇ ಪಠ್ಯಪುಸ್ತಕಗಳನ್ನು ಪೂರೈಸಲಾಗಿದೆ ಎಂದು ಹೇಳಿದೆ.

ತಾಲ್ಲೂಕಿನ ಕೆಲವು ಶಾಲೆಗಳಲ್ಲಿ ಪರಿಶೀಲಿಸಿದಾಗ ಎಲ್ಲ ಪುಸ್ತಕಗಳು ಪೂರೈಕೆಯಾಗದಿರುವುದು ತಿಳಿದಿದೆ. ತಾಲ್ಲೂಕಿನಲ್ಲಿ 160 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಪ್ರೌಢ ಶಾಲೆಗಳು, 13 ಅನುದಾನಿತ, 53 ಖಾಸಗಿ ಶಾಲೆಗಳು, ಸಾಮಾಜಿಕ ಇಲಾಖೆಗೆ ಸೇರಿದ 6  ಮತ್ತು ಒಂದು ಮೌಲಾನಾ ಆಜಾದ ಶಾಲೆ ಇದೆ. ಉಚಿತ ವಿತರಣೆಗಾಗಿ 3,69,844 ಹಾಗೂ ಮಾರಾಟಕ್ಕಾಗಿ 98,306 ಸೇರಿ ಒಟ್ಟು 4,68,150 ಪಠ್ಯ ಪುಸ್ತಕಗಳಿಗೆ ಬೇಡಿಕೆ ಇದೆ.

ಆದರೆ ಈವರೆಗೆ ಉಚಿತ ವಿತರಣೆಗಾಗಿ 2,85,452 ಮತ್ತು ಮಾರಾಟಕ್ಕಾಗಿ 91,050 ಪುಸ್ತಕಗಳು ಮಾತ್ರ ಪೂರೈಕೆ ಆಗಿದ್ದು, ಇನ್ನೂ 91,648 ಪುಸ್ತಕಗಳು ಪೂರೈಕೆ ಆಗಬೇಕಾಗಿದೆ.

‘ಬಹುತೇಕ ಎಲ್ಲ ತರಗತಿಗಳ ಪುಸ್ತಕಗಳು ಬಂದಿವೆ. ಶೇ 90 ರಷ್ಟು ಪುಸ್ತಕಗಳು ಶಾಲೆಗಳಿಗೆ ತಲುಪಿವೆ, ಉಳಿದ ಪುಸ್ತಕಗಳನ್ನು ಶೀಘ್ರ ಆಯಾ ಶಾಲೆಗಳಿಗೆ ತಲುಪಿಸುವ ಮೂಲಕ ಪಾಠ ಬೋಧನೆಗೆ ಅನುಕೂಲ ಮಾಡಿಕೊಡಲಾಗುವುದು ’ ಎಂದು ಬೀಳಗಿ ಕ್ಷೇತ್ರ ಶಿಕ್ಷಣಾಧಿಕಾರಿ  ಆರ್.ಎಸ್.ಆದಾಪುರ ತಿಳಿಸಿದ್ದಾರೆ.

‘ಈ ವರ್ಷ ಎಲ್ಲ ತರಗತಿಯ ಪುಸ್ತಕಗಳು ಭಾಗ 1 ಮತ್ತು 2 ಎಂದು ಮಾಡಿದ್ದರಿಂದ ಮುದ್ರಣವಾಗಿ ಬರುವುದು ಸ್ವಲ್ಪ ತಡವಾಗಿದೆ. ಈಗಾಗಲೇ ಶೇ 90 ರಷ್ಟು ಪಠ್ಯಪುಸ್ತಕಗಳು ಬಂದಿದ್ದು ವಿತರಿಸಲಾಗುತ್ತಿದೆ’ ಪುಸ್ತಕ ವಿತರಣೆ ತಾಲ್ಲೂಕು ನೋಡಲ್ ಅಧಿಕಾರಿ ಎಸ್.ಆರ್ ಗಣಿ ತಿಳಿಸಿದ್ದಾರೆ.

ಶೇ 90ರಷ್ಟು ಪುಸ್ತಕ ಪೂರೈಕೆ ಪುಸ್ತಕಗಳನ್ನು ಭಾಗ ಮಾಡಿದ್ದರಿಂದ ಮುದ್ರಣ ತಡ ಶೀಘ್ರ ಎಲ್ಲ ಶಾಲೆಗಳಿಗೆ ಪುಸ್ತಕ ವಿತರಣೆ: ಭರವಸೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT