ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲೀನ ಹಂತದ ಶಾಲೆಗೆ ‘ಬೆಳಕು’ ತಂದ ಮುಖ್ಯಶಿಕ್ಷಕ ಎಂ.ಎಸ್‌. ಬೀಳಗಿ

ಅರ್ಧ ಶತಮಾನ ಕಂಡ ಇಳಕಲ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 9
Last Updated 31 ಆಗಸ್ಟ್ 2018, 17:45 IST
ಅಕ್ಷರ ಗಾತ್ರ

ಇಳಕಲ್‌ : ಹಿಂದೊಮ್ಮೆ ಮುಚ್ಚುವ ಹಂತ ತಲುಪಿದ್ದ ಇಲ್ಲಿನ ಹಡಪದ ಅಪ್ಪಣ್ಣ ಮಂದಿರದ ಎದುರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 9 ಈಗ ಅತ್ಯುತ್ತಮ ಮೂಲಸೌಲಭ್ಯಗಳು, ಹಸಿರಿನಿಂದ ತುಂಬಿರುವ ಆವರಣದಲ್ಲಿ ಮಕ್ಕಳ ಕಲರವದಿಂದ ಗಮನ ಸೆಳೆಯುತ್ತಿದೆ.

ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಇಲ್ಲಿ ಮೂಲಸೌಲಭ್ಯಗಳಿವೆ. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳು ಹಾಗೂ ಪಾಲಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಡವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕೂಡಲಸಂಗಮ ಕಾಲೊನಿಯ ಮಕ್ಕಳು ಈಗ ಖಾಸಗಿ ಶಾಲೆಗೆ ಬದಲಾಗಿ ಇಲ್ಲಿಗೆ ದಾಖಲಾಗುತ್ತಿದ್ದಾರೆ. ಸಿಬ್ಭಂದಿಯ ಪ್ರಯತ್ನಿದಿಂದಾಗಿ ದಾನಿಗಳು ಈ ಶಾಲೆಯ ವಿದ್ಯಾರ್ಥಿಗಳಿಗೆ ಬಟ್ಟೆ, ಪುಸ್ತಕ ಹಾಗೂ ಲೇಖನ ಸಾಮಗ್ರಿ ನೀಡುತ್ತಿದ್ದಾರೆ.

1962 ರಲ್ಲಿ ಆರಂಭವಾಗಿರುವ ಈ ಶಾಲೆ 56 ವರ್ಷಗಳನ್ನು ಪೂರೈಸಿದೆ. ಮಕ್ಕಳ ಕೊರತೆಯಿಂದ ಇನ್ನೇನು ಮುಚ್ಚಿ ಹೋಗುತ್ತದೆ ಎನ್ನುವ ಹಂತದಲ್ಲಿತ್ತು.ಶಾಲಾ ಕಟ್ಟಡ ಹಾಳು ಹೊಡೆಯುತ್ತಿತ್ತು. ಯಾವೊಂದು ಸೌಲಭ್ಯಗಳಿರಲಿಲ್ಲ. ರಾತ್ರಿ ಕಿಡಿಗೇಡಿಗಳು ಕೊಠಡಿಗಳ ಬಾಗಿಲುಗಳನ್ನು ಮುರಿದು ಮದ್ಯಸೇವನೆ ಸೇರಿದಂತೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದರು. ಬಿಡಾಡಿ ದನಗಳು ಠಿಕಾಣಿ ಹೂಡುತ್ತಿದ್ದವು. ಕೊಠಡಿಗಳ ಆರ್‌ಸಿಸಿ ಮೇಲ್ಛಾವಣಿ ಕತ್ತರಿಸಿಕೊಂಡು ಬೀಳುತ್ತಿತ್ತು. ಮಳೆಗಾಲದಲ್ಲಿ ಸೋರುತ್ತಿದ್ದವು. ಜೊತೆಗೆ ದಾಖಲಾತಿಯೂ ಇಳಿಮುಖವಾಗಿತ್ತು.

ಇಂತಹ ಹೀನಾಯ ಸ್ಥಿತಿಯಲ್ಲಿದ್ದ ಶಾಲೆಗೆ ಮುಖ್ಯಶಿಕ್ಷಕರಾಗಿ ಎಂ.ಎಸ್‌. ಬೀಳಗಿ ವರ್ಗವಾಗಿ ಬಂದ ನಂತರ ಬದಲಾವಣೆಯ ಪರ್ವ ಆರಂಭವಾಯಿತು ಎಂದು ಎಸ್‌ಡಿಎಂಸಿ ಅಧ್ಯಕ್ಷ ಹನಮಂತಪ್ಪ ಭಜಂತ್ರಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಶಾಲೆಯಲ್ಲಿ ಈಗ 120 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕುಡಿಯುವ ನೀರು, ಶೌಚಾಲಯ, ಕಂಪೌಂಡ್, ಶಾಲಾ ಕೈತೋಟ, ಗ್ರಂಥಾಲಯ, ದೃಕ್‌ಶ್ರವಣ ಮಾಧ್ಯಮಗಳ ಮೂಲಕ ಬೋಧನೆಗೆ ಟಿವಿ, ರೇಡಿಯೊ ಬಳಕೆ, ಸುಸಜ್ಜಿತ ತರಗತಿ ಕೊಠಡಿಗಳಿವೆ. ಸುತ್ತಮುತ್ತಲಿನ ನಿವಾಸಿಗಳು ಇದು ‘ನಮ್ಮ ಶಾಲೆ’ ಎಂಬ ಭಾವದಿಂದ ಸಿಬ್ಬಂದಿ ಜತೆಗೆ ಕೈಜೋಡಿಸಿದ್ದಾರೆ.

ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಶಿಕ್ಷಕರ ಕಲಿಕಾ (ತರಬೇತಿ) ಕೇಂದ್ರವು ಕೂಡಾ ಈ ಶಾಲೆಯ ಆವರಣದಲ್ಲಿದೆ. ಇಲ್ಲಿರುವ ಸುಸಜ್ಜಿತ ಪ್ರಯೋಗಾಲಯದಲ್ಲಿ ಮಕ್ಕಳು ವಿಜ್ಞಾನದ ಕಲಿಕೋಪಕರಣ ಸ್ವತಃ ಬಳಸುತ್ತಾರೆ. ಶಾಲಾ ಆವರಣದಲ್ಲಿ ತೆಂಗಿನಮರ, ನುಗ್ಗೆ, ನಿಂಬೆ, ಕರಿಬೇವು, ಮಾವು, ಪೇರಲ, ಪಪ್ಪಾಯಿ, ಗುಲಾಬಿ, ದಾಸವಾಳ, ಜಾಜಿ ಸೇರಿದಂತೆ ಹಲವಾರು ಜಾತಿಯ ಅಲಂಕಾರಿಕ ಸಸ್ಯಗಳಿವೆ. ಕೈತೋಟದ ತರಕಾರಿಯನ್ನು ಬಿಸಿಯೂಟಕ್ಕೆ ಬಳಸಲಾಗುತ್ತಿದೆ. ಫಲಿತ ಹಣ್ಣುಗಳನ್ನು ವಿದ್ಯಾರ್ಥಿಗಳು ಸಾಮೂಹಿಕವಾಗಿ ಹಂಚಿಕೊಂಡು ಸೇವಿಸುತ್ತಾರೆ.

‘ಎಸ್‌ಡಿಎಂಸಿ ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಬದಲಾವಣೆ ಸಾಧ್ಯವಾಗಿದೆ. ಮನಸ್ಸಿಗೊಪ್ಪುವಂತೆ ಕೆಲಸ ಮಾಡಿದರೇ ನಾಳೆಯ ದಿನಗಳು ಫಲಪ್ರದವಾಗುತ್ತವೆ’ ಎಂದು ರಜೆಯ ದಿನವೂ ಶಾಲೆಯ ಕೈತೋಟದಲ್ಲಿ ಕಳೆ ಕೀಳುತ್ತಿದ್ದ ಎಂ.ಎಸ್‌. ಬೀಳಗಿ ಹೇಳಿದರು.

ನೆಪಗಳನ್ನು ಬಿಟ್ಟು ಕೆಲಸ ಮಾಡಿದರೇ ಯಾರೂ ನಮ್ಮ ಕೈಕಟ್ಟಲಾರರು, ಮನಸ್ಸು ಬೇಕಷ್ಟೇ
- ಎಂ.ಎಸ್‌. ಬೀಳಗಿ, ಮುಖ್ಯ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT