ದಬ್ಬಾಳಿಕೆ ನಡೆಯುತ್ತಿರುವುದು ದುರಂತ: ಲಕ್ಷ್ಮಿ ಹೆಬ್ಬಾಳಕರ

7

ದಬ್ಬಾಳಿಕೆ ನಡೆಯುತ್ತಿರುವುದು ದುರಂತ: ಲಕ್ಷ್ಮಿ ಹೆಬ್ಬಾಳಕರ

Published:
Updated:

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ಯಾಯ, ದಬ್ಬಾಳಿಕೆ ನಡೆಯುತ್ತಿರುವುದು ದುರಂತ’ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಇಲ್ಲಿ ಹೇಳಿದರು.

ಲಿಂಗಾಯತ ಪಂಚಮಸಾಲಿ ಪೀಠದ ವತಿಯಿಂದ ನಡೆದ ಬಸವ ಪಂಚಮಿ ಆಚರಣೆ ಹಾಗೂ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬೇರೆ ಸಮಾಜವನ್ನು ಸಮಾನತೆಯಿಂದ ಕಂಡು ನಮ್ಮ ಸಮಾಜವನ್ನು ಕಟ್ಟಿದವರು ನಾವು. ಆದರೆ, ನಮ್ಮ ಜನರ, ನಾಯಕರ ಮೇಲೆಯೇ ಕೆಲವರು ನಿರಂತರ ದಬ್ಬಾಳಿಕೆ, ಶೋಷಣೆ ಮಾಡುತ್ತಾ ಬರುತ್ತಿದ್ದಾರೆ. ಇಂಥವರಿಗೆ ಸಮಾಜದ ಬಾಂಧವರು ಸಂಘಟನೆಯ ಮೂಲಕ ಉತ್ತರ ಕೊಡಬೇಕು’ ಎಂದರು.

‘ಇಲ್ಲಿಯವರೆಗೆ ನಡೆದ ಕೆಟ್ಟ ಘಟನೆಗಳನ್ನು ಮರೆಯಿರಿ. ಆದರೆ, ಯಾರಾದರೂ ನಮಗೆ ಅನ್ಯಾಯ ಮಾಡಿದರೆ ಸಂಘಟನಾತ್ಮಕವಾಗಿ ಉತ್ತರಿಸಲು ಸಜ್ಜಾಗಬೇಕು’ ಎಂದ ಅವರು, ‘ಬಸವ ತತ್ವದ ಮೇಲೆ ನಾನು ರಾಜಕೀಯ ಮಾಡುತ್ತಿದ್ದುದರಿಂದ ನನಗೆ ವಿಜಯ ದೊರಕಿದೆ’ ಎಂದೂ ಹೇಳಿದರು.

ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಪಂಚಮಸಾಲಿ ಸಮಾಜದ ಮುರುಗೇಶ ನಿರಾಣಿ, ಬಸನಗೌಡ ಪಾಟೀಲ ಯತ್ನಾಳ, ಕಾಶಪ್ಪನವರ, ಹೆಬ್ಬಾಳಕರ ಅವರ ಏಳಿಗೆ ಸಹಿಸದೆ ಹಲವರು ತೊಂದರೆ ಕೊಡುತ್ತಿರುವುದನ್ನು ಸಮಾಜ ಜನ ಅರಿಯಬೇಕು’ ಎಂದರು. ಹೆಬ್ಬಾಳಕರ ಅವರಿಗೆ ಸಚಿವ ಸ್ಥಾನ ನೀಡುವಂತೆಯೂ ಆಗ್ರಹಿಸಿದರು.

‘ಹುನಗುಂದದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಸಂದರ್ಭದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ, ಪಿಎಲ್‌ಡಿ ಬ್ಯಾಂಕ್‌ ಚುನಾವಣೆಗೆ ಸಂಬಂಧಿಸಿದಂತೆ ಹೆಬ್ಬಾಳಕರ ಮೇಲಿನ ದಬ್ಬಾಳಿಕೆ ಖಂಡಿಸಿ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಪಂಚಮಸಾಲಿ ಪಂಚ ಸೈನ್ಯದ ರಾಜ್ಯ ಘಟಕದ ಅಧ್ಯಕ್ಷ  ಮಹಾಂತೇಶ ಹಳ್ಳೂರ ಘೋಷಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಇದ್ದರು.

 
 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !