ಸಂಭ್ರಮದಲ್ಲಿ ಮಿಂದೆದ್ದ ರೈತಾಪಿ ವರ್ಗ

7
ಬನಹಟ್ಟಿ, ಕೆರೂರ ಕರಿ ಹರಿದ ಎತ್ತುಗಳು

ಸಂಭ್ರಮದಲ್ಲಿ ಮಿಂದೆದ್ದ ರೈತಾಪಿ ವರ್ಗ

Published:
Updated:

ಬನಹಟ್ಟಿ/ಕೆರೂರ: ಕಾರ ಹುಣ್ಣಿಮೆ ನಿಮಿತ್ತ ಎತ್ತುಗಳನ್ನು ಓಡಿಸಿ ಕರಿ ಹರಿಯುವ ಕಾರ್ಯಕ್ರಮ ಗುರುವಾರ ಸಂಜೆ ಸಂಭ್ರಮ ಸಡಗರದೊಂದಿಗೆ ನಡೆಯಿತು.

ಬನಹಟ್ಟಿ ನಗರದ ವೀರಭದ್ರೇಶ್ವರ ದೇವಸ್ಥಾನದ ಲೇನ್‌ನಲ್ಲಿ ಗುರುವಾರ ಸಂಜೆ ನಡೆದ ಕರಿ ಹರಿಯುವ ಸಂದರ್ಭದಲ್ಲಿ ನಾಲ್ಕು ಎತ್ತುಗಳನ್ನು ಓಡಿಸಲಾಯಿತು.

ಮಧ್ಯಾಹ್ನ ಎತ್ತುಗಳನ್ನು ಸ್ಥಳೀಯ ಗೌಡರ ಮನೆಯಲ್ಲಿ ವಿವಿಧ ಬಣ್ಣಗಳಿಂದ ಅಲಂಕಾರ ಮಾಡಲಾಯಿತು. ಬೇವಿನ ಎಲೆಗಳ ಮಾಲೆ ಹಾಕಿ ಕರಿಗಳನ್ನು ವಾದ್ಯ ಮೇಳದೊಂದಿಗೆ ಮೆರವಣಿಗೆಯ ಮೂಲಕ ನಗರದ ಗಾಂಧಿ ಚೌಕಕ್ಕೆ ತಂದು ಊರಿನ ಪ್ರಮುಖರು ಕೂಡಿ ಪೂಜೆ ಮಾಡಿದರು.

ಓಟದಲ್ಲಿ ರಾಜುಗೌಡ ಪಾಟೀಲ ಎತ್ತು ಪ್ರಥಮ ಸ್ಥಾನ ಪಡೆದರೆ, ಮಹಾದೇವ ಗುಂಡಿ ಅವರ ಎತ್ತು ದ್ವಿತೀಯ ಸ್ಥಾನ, ಸಿದ್ದನಗೌಡ ಪಾಟೀಲರ ಎತ್ತು ತೃತೀಯ ಸ್ಥಾನ ಪಡೆದವು.

ಈ ಸಂದರ್ಭದಲ್ಲಿ ಸಿದ್ದನಗೌಡ ಪಾಟೀಲ, ರಾಜುಗೌಡ ಪಾಟೀಲ, ಶ್ರೀಶೈಲ ಧಬಾಡಿ, ಬಸವರಾಜ ಗುಂಡಿ, ಶ್ರೀಶೈಲ ಉಳ್ಳಾಗಡ್ಡಿ, ಶಶಿಕಾಂತ ಪಾಟೀಲ, ಮುರಿಗೆಪ್ಪ ಆದರಗಿ, ಸಂಗಣ್ಣ ಗಣೇಶನವರ, ಮಲ್ಲು ತುಂಗಳ, ಬಸವರಾಜ ಜಾಡಗೌಡ, ಪಂಡಿತ ಪಟ್ಟಣ, ಮಹಾಶಾಂತ ಶೆಟ್ಟಿ, ಮಂಗಳವಾರ ಮತ್ತು ಸೋಮವಾರ ಪೇಟೆಯ ದೈವ ಮಂಡಳಿ ಸದಸ್ಯರು ಇದ್ದರು.

ಕೆರೂರ ವರದಿ: ಪಟ್ಟಣದ ವಿವಿಧ ಸಮಾಜಗಳ ಪ್ರಮುಖರು ಅಗಸಿಯ ಬಾಗಿಲಿಗೆ ಕರಿ ಕಟ್ಟಿದರು. ಶೆಟ್ಟರ ಸಮಾಜದ ರಾಚಪ್ಪ ಅಗಸಿಯಲ್ಲಿ ನಿಂತು ಕೊಡೆ ಮೇಲೆರಿಸುತ್ತಲೇ ಯುವಕರು ಸಂಭ್ರಮದಿಂದ ತಮ್ಮ ಎತ್ತುಗಳನ್ನು ಓಡಿಸಿ ಅಗಸಿಯ ಬಾಗಿಲಿಗೆ ಕಟ್ಟಿದ ಕರಿ ಹರಿದರು.

ಬಿಳಿಜೋಳ ಮುಂದು: ಸ್ಪರ್ಧೆಯಲ್ಲಿ ಬಿಳಿ ಎತ್ತು ಮುಂದಾಗಿ ಕರಿ ಹರಿದುಕೊಂಡು ಹೋಗಿದ್ದರಿಂದ ‘ಬಿಳಿ ಜೋಳ’ ಮುಂದು ಎಂದು ಹರ್ಷದಿಂದ ರೈತರು ಶಿಳ್ಳೆ,ಕೇಕೆ ಹಾಕಿ ಸಂಭ್ರಮಿಸಿದರು.

ಹಿರಿಯರಾದ ಆರ್‌.ಆರ್. ಶೆಟ್ಟರ ನೇತೃತ್ವದಲ್ಲಿ ಹಳಪೇಟೆ, ಹೊಸಪೇಟೆ, ಮ್ಯಾಗಾಡಿ ಮತ್ತು ನೆಹರೂ ನಗರ, ಕಿಲ್ಲಾಪೇಟೆಯ ಯುವಕರು, ಚಿಣ್ಣರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !