ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ನೇಕಾರರಿಗೆ ತಲುಪದ ತುರ್ತು ಪರಿಹಾರ

ಪ್ರವಾಹದಿಂದ 2,299 ಮಗ್ಗಗಳಿಗೆ ಹಾನಿ: ಚೇತರಿಕೆ ಕಾಣದ ನೇಕಾರಿಕೆ
Last Updated 18 ಅಕ್ಟೋಬರ್ 2019, 19:46 IST
ಅಕ್ಷರ ಗಾತ್ರ

ಬಾಗಲಕೋಟೆ: ಪ್ರವಾಹದಲ್ಲಿ ಮುಳುಗಡೆಯಾಗಿದ್ದ ನೇಕಾರರ ಮಗ್ಗಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರ ಘೋಷಿಸಿದ್ದು ಇಲ್ಲಿಯವರೆಗೆ ಒಂದು ರೂಪಾಯಿ ಪರಿಹಾರ ಬಂದಿಲ್ಲ ಎಂದು ಜಿಲ್ಲೆಯ ನೇಕಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯ ಜಮಖಂಡಿ, ಬಾದಾಮಿ ಹಾಗೂ ಹುನಗುಂದ ತಾಲ್ಲೂಕಿನಲ್ಲಿ ಉಂಟಾಗಿದ್ದ ಪ್ರವಾಹದಿಂದ ಅನೇಕ ನೇಕಾರರ ಮಗ್ಗಗಳು ಹಾನಿಯಾಗಿವೆ. ಇವುಗಳ ದುರಸ್ತಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಅನಿವಾರ್ಯ ಇದ್ದು, ಸರ್ಕಾರ ನೀಡುವ ಪರಿಹಾರ ಕೂಡಲೇ ಬಿಡುಗಡೆಯಾದರೆ ನಮಗೆ ಅನುಕೂಲವಾಗಲಿದೆ ಎಂದು ಸಂತ್ರಸ್ತ ನೇಕಾರರು ಹೇಳುತ್ತಾರೆ.

ನೆರೆಯಿಂದ ಹಾನಿಯಾಗಿರುವ ಮಗ್ಗಗಳಿಗೆ ಸರ್ಕಾರ ₹25 ಸಾವಿರ ಪರಿಹಾರ ಘೋಷಿಸಿದ್ದು, ಅವುಗಳಿಗೆ ಬೇಕಾದ ಸಮೀಕ್ಷೆ ನಡೆಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿತ್ತು. ಅದರಂತೆ ಸಮೀಕ್ಷೆ ನಡೆಸಿದ ಇಲಾಖೆಯು ಜಿಲ್ಲೆಯ 131ಕೈಮಗ್ಗ ಹಾಗೂ 30 ವಿದ್ಯುತ್‌ ಮಗ್ಗ ಸೇರಿದಂತೆ ಒಟ್ಟು 181 ನೇಕಾರರು ಸರ್ಕಾರದ ಪರಿಹಾರಕ್ಕೆ ಒಳಗಾಗುತ್ತಾರೆ ಎಂಬ ವರದಿಯನ್ನು ತಿಳಿಸಲಾಗಿದೆ.

‘ಮೊದಲು ಸರ್ಕಾರ ಒಂದು ಯುನಿಟ್‌ಗೆ ₹25 ಸಾವಿರ ಎಂದು ಘೋಷಣೆ ಮಾಡಿತ್ತು, ನಂತರ ಮುಖ್ಯಮಂತ್ರಿ ಒಂದು ಮಗ್ಗಕ್ಕೆ ₹25 ಸಾವಿರ ಎಂದು ಹೇಳಿದ್ದಾರೆ. ಕೈಮಗ್ಗ ಮತ್ತು ಜವಳಿ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ನಮಗೆ ಇದರ ಬಗ್ಗೆ ಮಾಹಿತಿ ಇಲ್ಲ. ಸರ್ಕಾರ ಕೇಳಿರುವ ಮಾಹಿತಿಯನ್ನು ನಾವು ಅವರಿಗೆ ಸಲ್ಲಿಸುತ್ತಿದ್ದೇವೆ ಎಂದು ಹೇಳುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎನ್ನುತ್ತಾರೆ ರಬಕವಿಯ ನೇಕಾರ ಗಜಾನನ ತೆಗ್ಗಿ.

‘ನಮ್ಮ ಮನೆಯಲ್ಲಿ 10ರಿಂದ 12 ವಿದ್ಯುತ್‌ ಮಗ್ಗಗಳಿದ್ದು, ಸರ್ಕಾರ ಪ್ರತಿಯೊಂದು ಮಗ್ಗಕ್ಕೆ ಪರಿಹಾರ ನೀಡದರೆ ಮಾತ್ರ ನಮಗೆ ಉಪಯೋಗವಾಗಲಿದೆ. ಪ್ರವಾಹದಿಂದ ಹಾಳಾಗಿರುವ ಮಗ್ಗುಗಳ ದುರಸ್ತಿ ಕಾರ್ಯ ಪ್ರಾರಂಭಿಸಿದ್ದು, ದುರಸ್ತಿಗಾಗಿಯೇ ₹12 ರಿಂದ ₹15 ಸಾವಿರ ಖರ್ಚು ಬರುತ್ತದೆ. ಸರ್ಕಾರ ನೀಡುವ ಪರಿಹಾರ ಆದಷ್ಟು ಬೇಗ ನಮಗೆ ತಲುಪಿದರೆ ಅನುಕೂಲ’ ಎನ್ನುತ್ತಾರೆ ಅವರು.

‘ನೇಯ್ಗೆಗೆ ಬೇಕಿರುವ ಎಲ್ಲ ಕಚ್ಚಾ ವಸ್ತುಗಳನ್ನು ನಾವು ನೇಕಾರರಿಗೆ ನೀಡುತ್ತೇವೆ. ನಮ್ಮ ಅಂಗಡಿಯೂ ಪ್ರವಾಹಕ್ಕೆ ತುತ್ತಾಗಿದ್ದು, ಜವಳಿ ಇಲಾಖೆಯಿಂದ ಸಮೀಕ್ಷೆ ನಡೆಸಲಾಗಿದೆ. ಅಂದಾಜು ₹7 ಲಕ್ಷದ ಹಾನಿಯಾಗಿದ್ದು, ಸರ್ಕಾರ ಸರಿಯಾದ ಪರಿಹಾರ ನೀಡಬೇಕು’ ಎನ್ನುತ್ತಾರೆ ರಬಕವಿಯ ಬಸವರಾಜ ಯಂಡಿಗೇರಿ.

*
ಜಿಲ್ಲೆಯಲ್ಲಿ ಪ್ರವಾಹಕ್ಕೆ ತುತ್ತಾದ ಮಗ್ಗಗಳು ಹಾಗೂ ನೇಕಾರಿಕೆಯ ಕಚ್ಚಾ ವಸ್ತುವಿನ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ
-ಭಾರತಿ ಬಿದರಿಮಠ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT