ದೂಳುಮಯ ಇಳಕಲ್

7
ಕೇಳವರೂ ಇಲ್ಲ, ಹೇಳುವವರೂ ಇಲ್ಲ. ಆಸ್ತಮಾ, ಉಸಿರಾಟದ ತೊಂದರೆಯಿಂದ ನರಳುವ ಜನರು

ದೂಳುಮಯ ಇಳಕಲ್

Published:
Updated:
ಇಳಕಲ್‌ನಲ್ಲಿ ಮುಖ್ಯರಸ್ತೆಯಲ್ಲಿ ತುಂಬಿರುವ ದೂಳು

 ಇಳಕಲ್ : ನಾಡಿನಾದ್ಯಂತ ಸೀರೆಗೆ ಹೆಸರಾಗಿರುವ ಇಳಕಲ್‌ ತುಂಬಾ ಈಗ ಬರೀ ದೂಳೆ ತುಂಬಿ ಹೋಗಿದೆ. ಪಟ್ಟಣದ ಮುಖ್ಯ ರಸ್ತೆಗಳು ಸೇರಿ ಯಾವ ಕಡೆ ಹೋದರೂ ಬರೀ ದೂಳು,ದೂಳು. ಇದರಿಂದಾಗಿ ಜನರು ಆಸ್ತಮಾ, ಉಸಿರಾಟದ ಸಮಸ್ಯೆಯಿಂದ ನರಳುತ್ತಿದ್ದಾರೆ.

ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ನೆರವಿನಲ್ಲಿ ಒಳಚರಂಡಿ, ನಿರಂತರ ಕುಡಿಯುವ ನೀರು ಪೂರೈಕೆ ಕಾಮಗಾರಿಗಳು 6 ವರ್ಷಗಳಿಂದ ನಡೆಯುತ್ತಿವೆ. ಈ ಯೋಜನೆಗಳಿಗಾಗಿ ಅಗೆದಿರುವ ರಸ್ತೆಗಳನ್ನು ಸರಿಪಡಿಸದೆ ಬಿಟ್ಟಿರುವುದು ಇದಕ್ಕೆಲ್ಲ ಕಾರಣವಾಗಿದೆ.

ಈ ರಸ್ತೆಗಳನ್ನು ರಸ್ತೆ ಪುನರ್‌ ನಿರ್ಮಾಣದ ಅನುದಾನ ಬಳಸಿ ದುರಸ್ತಿ ಮಾಡಬೇಕಿತ್ತು. ಆದರೆ ಆ ಕೆಲಸ ಎಲ್ಲೂ ನಡೆದಿಲ್ಲ. ರಸ್ತೆ ಅಗೆದು ಹಾಕಿದ ಮಣ್ಣಿನ ಮೇಲೆ ವಾಹನಗಳ ಓಡಾಟದಿಂದ ಎದ್ದೇಳುವ ದೂಳಿನ ಕಣಗಳು ಮೋಡಗಳ ರೀತಿಯಲ್ಲಿ ವಾತಾವರಣದಲ್ಲಿ ಹರಡುತ್ತಿವೆ.

 ನಗರದ ಬಸವೇಶ್ವರ ವೃತ್ತದಿಂದ ಕಂಠಿ ವೃತ್ತದ ರಸ್ತೆಯ ಅಕ್ಕಪಕ್ಕ ಇದ್ದ ಮರಗಳನ್ನು ರಸ್ತೆ ವಿಸ್ತರಣೆ ವೇಳೆ ಕಡಿದು ಹಾಕಲಾಯಿತು. ನಂತರ ನೆಟ್ಟಿದ್ದ ಗಿಡಗಳನ್ನು ಸರಿಯಾಗಿ ಬೆಳೆಸಲಿಲ್ಲ. ಇದರಿಂದಾಗಿ ಈ ಮಾರ್ಗದಲ್ಲಿ ದೂಳಿಗೆ ಅಡೆತಡೆ ಇಲ್ಲದೆ ಹರಡುತ್ತಿದೆ ಎನ್ನುತ್ತಾರೆ ಪರಿಸರವಾದಿಗಳು.

 ಕಂಠಿ ವೃತ್ತದಿಂದ ಗೊರಬಾಳ ಕ್ರಾಸ್, ಕಂಠಿ ವೃತ್ತದಿಂದ ನಗರಸಭೆ, ಮಹಾಂತೇಶ ಚಿತ್ರ ಮಂದಿರ, ಪೊಲೀಸ್ ಗ್ರೌಂಡ್- ಬನ್ನಿ ಕಟ್ಟಿ, ಕೊಪ್ಪರದ ಪೇಟೆ- ಬಸವಣ್ಣ ದೇವರ ಗುಡಿ, ಬಜಾರ್ ರಸ್ತೆ, ಗಾಂಧಿ ಚೌಕ್‌ನಿಂದ ಕಂಠಿ ಸರ್ಕಲ್ ಮತ್ತು ಗೊರಬಾಳ ನಾಕಾವರೆಗಿನ ರಸ್ತೆಗಳು ದೂಳುಮಯವಾಗಿವೆ.

ಈ ಭಾಗದ ಎಲ್ಲರೂ  ದೂಳು ಸೇವನೆ ಮಾಡುವುದು ಅನಿವಾರ್ಯವಾಗಿದೆ. ಇದರಿಂದ ಇಲ್ಲಿನ ಜನರಲ್ಲಿ ಅಲರ್ಜಿ, ಆಸ್ತಮಾ, ಕ್ಷಯ (ಟಿಬಿ) ಸೇರಿ ಉಸಿರಾಟ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಹಿರಿಯ ನಾಗರಿಕರೊಬ್ಬರು ತಿಳಿಸಿದರು.

 ದೂಳಿನ ಪ್ರಮಾಣ ಪ್ರತಿ ಕ್ಯುಬಿಕ್‌ ಮೀಟರ್‌ಗೆ 100 ಮೈಕ್ರೋ ಗ್ರಾಂಗೂ ಹೆಚ್ಚಿದೆ. ಇದು  60 ಮೈಕ್ರೋ ಗ್ರಾಂ ದಾಟಬಾರದು ಎನ್ನುತ್ತಾರೆ ಇಲ್ಲಿನ ಕಾಲೇಜೊಂದರ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು.

ನಗರಸಭೆಯಲ್ಲಿ ದೂಳು ಹೀರುವ ಯಂತ್ರವಿದೆ. ಅದನ್ನು ಬಳಸುವುದಿಲ್ಲ. ಯಾರಾದರೂ ಗಣ್ಯ ವ್ಯಕ್ತಿಗಳು ಭೇಟಿ ನೀಡುವ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ. ಇದನ್ನು ಪ್ರತಿ ದಿನ ಬಳಸಬೇಕು. ರಸ್ತೆ ದುರಸ್ತಿ ಕಾಮಗಾರಿಗಳನ್ನು ತುರ್ತಾಗಿ ಆರಂಭಿಸಬೇಕು. ದೂಳು ಹೆಚ್ಚಿರುವ ರಸ್ತೆಗಳಿಗೆ ಪ್ರತಿ ದಿನ ನೀರು ಸಿಂಪಡಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಎಡಿಬಿ ಯೋಜನೆಯ ಕಾಮಗಾರಿಗೆ ಅಗೆದ ರಸ್ತೆಗಳ ದುರಸ್ತಿಗೆ ₹10 ಕೋಟಿ ಮಂಜೂರಾಗಿದೆ ಎಂದು ನಗರಸಭೆ ಪೌರಾಯುಕ್ತರೇ ತಿಳಿಸಿದ್ದರು. ಆದರೆ ರಸ್ತೆಗಳು ಇನ್ನೂ ದುರಸ್ತಿ ಆಗಿಲ್ಲ
– ಉಮೇಶ ಶಿರೂರ, ಜೆಡಿಎಸ್‌ ಮುಖಂಡ

ಎಡಿಬಿ ಯೋಜನೆಯ ಕಾಮಗಾರಿಗೆ ಅಗೆದ ರಸ್ತೆಗಳ ದುರಸ್ತಿಗೆ ₹10 ಕೋಟಿ ಮಂಜೂರಾಗಿದೆ ಎಂದು ನಗರಸಭೆ ಪೌರಾಯುಕ್ತರೇ ತಿಳಿಸಿದ್ದರು. ಆದರೆ ರಸ್ತೆಗಳು ಇನ್ನೂ ದುರಸ್ತಿ ಆಗಿಲ್ಲ
– ಉಮೇಶ ಶಿರೂರ, ಜೆಡಿಎಸ್‌ ಮುಖಂಡ

  ಬಸವರಾಜ ಅ. ನಾಡಗೌಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !