ಹಸಿರು ಕರ್ನಾಟಕಕ್ಕೆ ಕೈ ಜೋಡಿಸಿ: ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ

7
72ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

ಹಸಿರು ಕರ್ನಾಟಕಕ್ಕೆ ಕೈ ಜೋಡಿಸಿ: ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ

Published:
Updated:
Deccan Herald

ಬಾಗಲಕೋಟೆ: 'ಹಸಿರೇ ಉಸಿರು ಎಂಬುವುದು ದೈವದತ್ತ ಸತ್ಯ. ನಿಸರ್ಗ ಪ್ರತಿ ಮನುಷ್ಯನಿಗೂ ಆಸರೆಯಾಗಿದೆ. ಆಗಸ್ಟ್ 15ರಿಂದ 18ರ ವರೆಗೆ ’ಹಸಿರು ಕರ್ನಾಟಕ’ ಆಂದೋಲನ ರಾಜ್ಯದಾದ್ಯಂತ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಪ್ರತಿಯೊಬ್ಬರೂ  ತಪ್ಪದೇ ಗಿಡ ನೆಡಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಸ್ವಾತಂತ್ರ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ’ಹಸಿರಿದ್ದರೆ ಮಾತ್ರ ಉಸಿರು, ಹಾಗಾಗಿ ಮನೆಯಂಗಳ, ಹೊಲ–ಗದ್ದೆ, ತೋಟ, ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಈ ಆಂದೋಲನದ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ’ ಎಂದು ಮನವಿ ಮಾಡಿದರು.

‘ಜಿಲ್ಲೆಯಲ್ಲೂ ಅನೇಕರು ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದಿದ್ದಾರೆ. ಈ ಮಹನೀಯರ ಹೋರಾಟ ಮತ್ತು ತ್ಯಾಗದ ಫಲವನ್ನು ಇಂದು ನಾವೆಲ್ಲಾ ಅನುಭವಿಸುತ್ತಿದ್ದೇವೆ’ ಎಂದರು.

‘ನಾ.ಸಾ.ಹರ್ಡೇಕರ್‌ ಬಾಗಲಕೋಟೆಯಲ್ಲಿ ಹಿಂದೂಸ್ತಾನಿ ಸೇವಾದಳ ಶಾಖೆ ಆರಂಭಿಸಿ ಅದನ್ನು ಉತ್ತರ ಕರ್ನಾಟಕದ ಕೇಂದ್ರಸ್ಥಾನವನ್ನಾಗಿ ಮಾಡಿದರು. ಹರ್ಡೇಕರ್‌ ಮಂಜಪ್ಪ ಆಲಮಟ್ಟಿಯಲ್ಲಿ ಆಶ್ರಮ ಸ್ಥಾಪಿಸಿದರು. ಇವೆಲ್ಲ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿಯ ನೆಲೆಯಾಗಿದ್ದವು’ ಎಂದರು.

‘ಕಿತ್ತೂರ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಜಮಖಂಡಿ ಸಂಸ್ಥಾನದ ವೀರ ಸೇನಾನಿ ಛಟ್ಟುಸಿಂಗ್, ಬಾದಾಮಿಯ ನಿಂಬಾಜಿ, ವೀರ ಸಿಂಧೂರ ಲಕ್ಷ್ಮಣ, ಸುರಪುರದ ವೆಂಕಟಪ್ಪ ನಾಯಕ, ನರಗುಂದದ ಬಾಬಾಸಾಹೇಬ, ದೊಂಡಿಯ ವಾಘ, ಹಲಗಲಿಯ ಬೇಡರು ಹಾಗೂ ಮೈಸೂರಿನ ಟಿಪ್ಪು ಸುಲ್ತಾನರು ನಡೆಸಿದ ಅಪ್ರತಿಮ ಹೋರಾಟದ ಕಥೆ ದೇಶವಾಸಿಗಳ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ’ ಎಂದರು.

'ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ, ಮತ್ತೊಬ್ಬರ ಭಾವನೆಗಳನ್ನು ಘಾಸಿಗೊಳಿಸುವುದಲ್ಲ. ಸ್ವಾತಂತ್ರ್ಯ ಎಂದರೆ ಒಂಟಿ ಮಹಿಳೆ ಮಧ್ಯರಾತ್ರಿ ಸುರಕ್ಷಿತ ವಾಗಿ ಮನೆ ಮುಟ್ಟುವ ವಾತಾವರಣ ಸೃಷ್ಟಿಯಾಗಬೇಕು. ಇದು ಮಹಾತ್ಮಾ ಗಾಂಧೀಜಿ ಅವರ ಕನಸಾಗಿತ್ತು. ಅದನ್ನು ಸಾಕಾರಗೊಳಿಸಲು ಶ್ರಮಿಸೋಣ' ಎಂದರು.

ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಇಲಾಖೆ ಆ್ಯಪ್‌ನ್ನು ಸಚಿವ ಶಿವಾನಂದ ಪಾಟೀಲ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ, ಹನಮಂತ ನಿರಾಣಿ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ, ಹೆಚ್ಚುವರಿ  ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !