ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿ: ಸಮಸ್ಯೆಗಳ ಸುಳಿಯಲ್ಲಿ ಕೆ.ಡಿ. ಜಂಬಗಿ

Published 6 ಡಿಸೆಂಬರ್ 2023, 4:28 IST
Last Updated 6 ಡಿಸೆಂಬರ್ 2023, 4:28 IST
ಅಕ್ಷರ ಗಾತ್ರ

ಜಮಖಂಡಿ: ಕೃಷ್ಣಾ ನದಿಯ ತಟದಲ್ಲಿರುವ ತಾಲ್ಲೂಕಿನ ಕೆ.ಡಿ ಜಂಬಗಿ ಗ್ರಾಮ ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಬಂದರೆ ಈ ಗ್ರಾಮ ನಡುಗಡ್ಡೆಯಾಗಿ ಮುಳುಗುತ್ತದೆ. ಈ ಗ್ರಾಮ ಮುಳುಗಡೆ ಪ್ರದೇಶವಾಗಿರುವದರಿಂದ ಗ್ರಾಮದ ಅಭಿವೃದ್ಧಿಗೆ ಸರಿಯಾದ ಅನುದಾನ ಸಿಗದಕ್ಕೆ ಕುಗ್ರಾಮದಂತಾಗಿದೆ.

ಗ್ರಾಮದಲ್ಲಿ ಸರಿಯಾದ ಬೀದಿ ದೀಪಗಳಿಲ್ಲ, ಇಕ್ಕಟ್ಟಾದ ರಸ್ತೆಯ ಅಕ್ಕ-ಪಕ್ಕ ಮುಳ್ಳಿನ ಕಂಟಿಗಳು, ಎಲ್ಲೆಂದರಲ್ಲಿ ತಿಪ್ಪೆಗುಂಡಿಗಳು, ರಸ್ತೆಯ ಮೇಲೆಯೇ ಶೌಚದಿಂದಾಗಿ ಗ್ರಾಮದಲ್ಲಿ ಗಬ್ಬೆದ್ದು ನಾರುತ್ತಿದೆ. ಇದರಿಂದ ವಿಪರಿತ ಸೊಳ್ಳೆಗಳ ಕಾಟವಿದ್ದು, ಜನರಿಗೆ ರೋಗರುಜಿನ ಬರುವ ಸಾಧ್ಯತೆಯೂ ಇದ್ದು ಸ್ವಚ್ಛತೆ ಇಲ್ಲಿ ಮರೀಚಿಕೆಯಾಗಿದೆ.

ಶೂರ್ಪಾಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆ.ಡಿ ಜಂಬಗಿ ಹಾಗೂ ತುಬಚಿ ಗ್ರಾಮ ಸೇರಿವೆ. ಕೆ.ಡಿ ಜಂಬಗಿ ಗ್ರಾಮದಲ್ಲಿ ಎರಡು ವಾರ್ಡ್‌ಗಳಿದ್ದು, ಅಂದಾಜು 3,500 ಜನಸಂಖ್ಯೆ ಹೊಂದಿದೆ. ಟಕ್ಕೋಡ-ತುಬಚಿ ಮುಖ್ಯರಸ್ತೆಯಿಂದ ಒಂದು ಕಿ.ಮೀ ಒಳಗೆ ಗ್ರಾಮ ಇದ್ದು, ಗ್ರಾಮಕ್ಕೆ ಬರಲು ಸರಿಯಾದ ರಸ್ತೆ ಇಲ್ಲದ ಕಾರಣ ಮಳೆಯಾದರೆ ಕೆಸರಿನಲ್ಲಿ, ಮಳೆಯಾಗದಿದ್ದರೆ ದೂಳಿನಲ್ಲಿ ಹೋಗುವ ಪರಿಸ್ಥಿತಿ ಇದೆ.

ಗ್ರಾಮದ ಒಳಗೆ ಪ್ರಮುಖ ರಸ್ತೆಯ ಮೇಲೆಯೇ ಚರಂಡಿ ನೀರು ಹರಿಯುತ್ತದೆ. ರಸ್ತೆಯ ಪಕ್ಕದ ಮನೆಗಳಲ್ಲಿ ಗಬ್ಬು ವಾಸನೆ ಬೀರುತ್ತದೆ. ಪಾದಚಾರಿಗಳು ಹಾಗೂ ಬೈಕ್‌ಗಳು ಹೋಗುವಾಗ ಪಕ್ಕಕ್ಕೆ ಯಾರಾದರೂ ಬಂದರೆ ಚರಂಡಿ ನೀರು ಮೈಮೇಲೆ ಸಿಡಿಯುತ್ತದೆ. ಅಷ್ಟು ಇಕ್ಕಟ್ಟಾದ ರಸ್ತೆಯ ಮೇಲೆಯೇ ನೀರು ಹರಿಯುತ್ತಿರುವುದು ಅಲ್ಲಿನ ನಿವಾಸಿಗಳಿಗೆ ನುಂಗಲಾರದ ತುತ್ತಾಗಿದೆ.

ಗ್ರಾಮದಲ್ಲಿ 1-8ರವರೆಗೆ ಹಿರಿಯ ಪ್ರಾಥಮಿಕ ಶಾಲೆ ಇದ್ದು, ಪ್ರೌಢಶಾಲೆಗೆ ಐದು ಕಿ.ಮೀ ಶೂರ್ಪಾಲಿ ಗ್ರಾಮಕ್ಕೆ ಯಾವುದೇ ವಾಹನ ಸೌಲಭ್ಯವಿಲ್ಲದೇ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಮುಳುಗಡೆ ಪ್ರದೇಶವಾಗಿರುವುದರಿಂದ ಹಿರಿಯ ಪ್ರಾಥಮಿಕ ಶಾಲೆಗೆ ಐದು ಕೊಠಡಿಗಳ ಅವಶ್ಯಕತೆ ಇದೆ. ಅದರಲ್ಲಿ ಮೂರು ಕೊಠಡಿಗಳನ್ನು ಗ್ರಾಮದ ಅಪ್ಪಯ್ಯಸ್ವಾಮಿ ಮಠದಿಂದ ಪಡೆದಿದ್ದಾರೆ. ಇನ್ನೂ ಎರಡು ತರಗತಿಗಳನ್ನು ಪತ್ರಾಸ್ ಶೆಡ್ನಲ್ಲಿ ನಡೆಸುತ್ತಿದ್ದಾರೆ.

ಮೂರು ಅಂಗನವಾಡಿ ಕೇಂದ್ರಗಳಿದ್ದು ಸ್ವಂತ ಕಟ್ಟಡ ಇಲ್ಲದೇ ಬಾಡಿಗೆ ಮನೆಯಲ್ಲಿ ನಡೆಸಲಾಗುತ್ತಿದೆ. ನೀರು, ಸರಿಯಾದ ಗಾಳಿ, ಬೆಳಕು ಇಲ್ಲದೆ ಅನಿವಾರ್ಯವಾಗಿ ನಡೆಸಲಾಗುತ್ತಿದೆ. ಸರಿಯಾದ ಬಾಡಿಗೆಯನ್ನು ಸರ್ಕಾರ ಭರಿಸುತ್ತಿಲ್ಲ ಇದರಿಂದ ತೊಂದರೆಯಾಗುತ್ತಿದೆ ಎಂದು ಅಂಗನವಾಡಿ ಸಿಬ್ಬಂದಿ ಅಳಲು ತೋಡಿಕೊಂಡರು.

ಪ್ರವಾಹ ಬಂದರೆ ಗ್ರಾಮದಲ್ಲಿ ನೀರು ಬರುತ್ತದೆ. ಗ್ರಾಮದ ಮನೆಗಳು ಸಂಪೂರ್ಣವಾಗಿ ಆಲಮಟ್ಟಿ 519 ಕ್ಕೆ ಮುಳುಗಡೆಯಾಗಿದ್ದು, 8 ಕಿ.ಮೀ ಅಂತರದಲ್ಲಿ ನಾಕೂರ ಆರ್.ಸಿ. ಕೇಂದ್ರದಲ್ಲಿ ನಿವೇಶನ ನೀಡಿದ್ದಾರೆ. ಆದರೆ ಜಮೀನುಗಳು ಮುಳುಗಡೆಯಾಗಿಲ್ಲ. ಪ್ರತಿನಿತ್ಯ ಅಲ್ಲಿಂದ ಜಮೀನಿಗೆ ಕೆಲಸಕ್ಕೆ ಬಂದು ಹೋಗುವುದು ತುಂಬಾ ತೊಂದರೆಯಾಗುತ್ತದೆ. ನಮ್ಮ ಜಮೀನುಗಳಿಗೆ ಪರಿಹಾರ ನೀಡಿದರೆ ನಾವು ಸಂಪೂರ್ಣವಾಗಿ ಇಲ್ಲಿಂದ ಕಿತ್ತುಕೊಂಡು ಹೋಗುತ್ತೇವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ನಾವಿ.

ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಕೊಠಡಿಗಳ ಅವಶ್ಯಕತೆ ಇದೆ. ಕೂಡಲೇ ಸರ್ಕಾರ ಕಟ್ಟಡಗಳನ್ನು ಮುಂಜೂರು ಮಾಡಬೇಕು. ರಸ್ತೆಗಳ ಅಭಿವೃದ್ಧಿ ಮಾಡಬೇಕು

-ಶ್ರೀಶೈಲ ಅಲ್ಲವ್ವಗೊಳ ಗ್ರಾಮಸ್ಥ

ನಾನು ವರ್ಗಾವಣೆಯಾಗಿ ಬಂದು ಒಂದು ತಿಂಗಳಾಯಿತು. ಬರುವ ದಿನಗಳಲ್ಲಿ ಕ್ರೀಯಾಯೋಜನೆ ರೂಪಿಸಿ ಅಭಿವೃದ್ಧಿ ಮಾಡಲಾಗುವುದು

–ಶ್ರೀಶೈಲ ರಾಠೋಡ ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT