ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಳೇದಗುಡ್ಡ | ಪಿಡಿಒ ಮೇಲೆ  ಶಾಸಕ ಚಿಮ್ಮನಕಟ್ಟಿ ಗರಂ

ಗ್ರಾಮದ ಅಭಿವೃದ್ಧಿ ಕುರಿತು ಪಿಡಿಒ ನಿರ್ಲಕ್ಷ್ಯ: ಗ್ರಾಮಸ್ಥರ ಆರೋಪ
Published 7 ಜುಲೈ 2024, 15:55 IST
Last Updated 7 ಜುಲೈ 2024, 15:55 IST
ಅಕ್ಷರ ಗಾತ್ರ

ಗುಳೇದಗುಡ್ಡ: ರಸ್ತೆ ಕಾಮಗಾರಿ ಮತ್ತು ಅಂಗನವಾಡಿ ಕಟ್ಟಡ ಕಾಮಗಾರಿ ಭೂಮಿಪೂಜೆಗೆಂದು ಶನಿವಾರ  ಗ್ರಾಮಕ್ಕೆ ಬಂದಿದ್ದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಸಭೆಯಲ್ಲಿಯೇ ಪಿಡಿಒ ಜ್ಯೋತಿ ಗೋವಿನಕೊಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. 

ತಾಲ್ಲೂಕಿನ ನಾಗರಾಳ ಎಸ್‌ಪಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ₹1.50 ಕೋಟಿ ಅನುದಾನದಲ್ಲಿ ನಾಗರಾಳ ಎಸ್.ಪಿ ಗ್ರಾಮದಿಂದ ಚಿಮ್ಮಲಗಿ ಗ್ರಾಮೀಣ ರಸ್ತೆ 1.50 ಕಿ.ಮೀ.ವರೆಗೆ ರಸ್ತೆ ಸುಧಾರಣೆ ಮಾಡುವುದು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ₹23 ಲಕ್ಷ ಅನುದಾನದಲ್ಲಿ ನಾಗರಾಳ ಎಸ್.ಪಿ ಗ್ರಾಮದ ಅಂಗನವಾಡಿ ಕೇಂದ್ರ 1, ಇದರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಬಂದಿದ್ದ ಅವರಿಗೆ ಗ್ರಾಮಸ್ಥರು ಪಿಡಿಒ ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡದೇ, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು  ದೂರು ಹೇಳಿದ್ದರಿಂದ ಶಾಸಕರು ಗರಂ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು.

ಜನರ ಸಮಸ್ಯೆಗಳನ್ನು ಪರಿಹರಿಸಿ, ಜವಾಬ್ದಾರಿಯಿಂದ ವರ್ತಿಸಬೇಕು ಹಾಗೂ ಮತ್ತೆ ಈ ರೀತಿಯ ಆರೋಪಗಳು ಬರದಂತೆ ನಡೆದುಕೊಳ್ಳಿ ಎಂದು ಪಿಡಿಒಗೆ ಸೂಚನೆ ನೀಡಿದರು.

‘ರಾಜ್ಯ ಸರ್ಕಾರ ಜನರ ಕಲ್ಯಾಣಕ್ಕಾಗಿ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಿದೆ. ಅದರಲ್ಲಿ ಮುಖ್ಯವಾಗಿ ಗ್ರಾಮಗಳಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ ನೀಡುತ್ತದೆ. ಗುತ್ತಿಗೆದಾರರು ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ಮಿಸಿ, ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದರು.

ಸಭೆಯಲ್ಲಿ ಗ್ರಾಮಸ್ಥರು ಗ್ರಾಮದ ಹಲವು ಸಮಸ್ಯೆಗಳನ್ನು ಶಾಸಕರಿಗೆ ತಿಳಿಸಿದರು.

ಗುಳೇದಗುಡ್ಡ ಬ್ಲಾಕ್ ಅಧ್ಯಕ್ಷ ಸಂಜಯ ಬರಗುಂಡಿ, ಅಶೋಕ ತೋಪಲಕಟ್ಟಿ, ದೇವೇಂದ್ರಪ್ಪ ಮೇಟಿ, ಗ್ರಾಮದ ಹಿರಿಯರಾದ ಗೋಪಾಲ ಜಕ್ಕಪ್ಪನವರ, ಯಲ್ಲಪ್ಪ ಹಿರ್ಯಾಳ, ಲೆಂಕೆಪ್ಪ ಹಿರೇಕುರುಬರ, ಮಲ್ಲಪ್ಪ ಪಾಟೀಲ, ಮಂಜುನಾಥ ವಾಲೀಕಾರ, ವೈ.ಆರ್. ಹೆಬ್ಬಳ್ಳಿ ಸೇರಿದಂತೆ ಇನ್ನೂ ಅನೇಕರು ಇದ್ದರು.

‘ಕಾನೂನು ಪ್ರಕಾರ ನಡೆದುಕೊಂಡಿದ್ದೇನೆ. ನರೇಗಾ ಕೂಲಿಕಾರ್ಮಿಕರಿಗೆ ಆದ ತೊಂದರೆಯಲ್ಲಿ ನನ್ನ ತಪ್ಪಿಲ್ಲ. ಅಭಿವೃದ್ಧಿ ಪರ ಕೆಲಸ ಮಾಡುತ್ತೇನೆ’ ಎಂದು ನಾಗರಾಳ ಎಸ್.ಪಿ ಗ್ರಾಮದ ಪಿಡಿಒ ಜ್ಯೋತಿ ಗೋವಿನಕೊಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT