ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ‘ಸಾಲ ಮಂಜೂರಾತಿಗೆ 15 ದಿನಗಳ ಗಡುವು ‘

ಬ್ಯಾಂಕರ್ಸ್‌ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ
Published 26 ಜೂನ್ 2024, 15:58 IST
Last Updated 26 ಜೂನ್ 2024, 15:58 IST
ಅಕ್ಷರ ಗಾತ್ರ

ಬಾಗಲಕೋಟೆ: ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಬ್ಯಾಂಕ್‌ಗಳಲ್ಲಿ ಸಾಲ ಮಂಜೂರಾತಿಗಾಗಿ ಬಾಕಿ ಇರುವ ಎಲ್ಲ ಅರ್ಜಿಗಳನ್ನು 15 ದಿನಗಳೊಳಗೆ ಇತ್ಯರ್ಥಪಡಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಜಿಲ್ಲಾ ಅಗ್ರಣಿ ಬ್ಯಾಂಕ್ ವತಿಯಿಂದ ಜರುಗಿದ ಬ್ಯಾಂಕರ್ಸ್‌ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸರ್ಕಾರದ ಯೋಜನೆಗಳಿಗೆ ಬ್ಯಾಂಕುಗಳು ಸಾಲ ಕೊಡದೇ ಇದ್ದರೆ ಯೋಜನೆಗಳು ಅನುಷ್ಠಾನಗೊಳ್ಳುವುದು ಕಷ್ಟ. ಬ್ಯಾಂಕ್ ಅಧಿಕಾರಿಗಳು ಕಾಟಾಚಾರಕ್ಕೆ ಸಭೆಗೆ ಬರುತ್ತೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂದಿನ ವರ್ಷಗಳದ್ದೇ ಶೇ 50 ರಷ್ಟು ಸಾಲದ ಅರ್ಜಿಗಳು ಬಾಕಿ ಉಳಿದಿವೆ. ಎಸ್.ಬಿ.ಐನಲ್ಲೇ ಹೆಚ್ಚಿನ ಅರ್ಜಿಗಳು ಬಾಕಿ ಇದ್ದು, ಕೂಡಲೇ ವಿಲೇವಾರಿಯಾಗಬೇಕು. 6 ತಿಂಗಳುಗಟ್ಟಲೇ ಅರ್ಜಿಗಳನ್ನು ಇಟ್ಟುಕೊಂಡರೆ ಹೇಗೆ. ಅರ್ಹತೆ ಇದ್ದವರಿಗೆ ಸಾಲ ವಿತರಿಸಬೇಕು. ದಾಖಲಾತಿ ಸರಿಯಾಗಿ ಇರದಿದ್ದರೆ ರಿಜೆಕ್ಟ ಮಾಡಬೇಕು’ ಎಂದು ಹೇಳಿದರು.

‘ಸಂಬಂಧಿಸಿದ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿಕೊಂಡು 15 ದಿನಗಳ ಒಳಗಾಗಿ ಎಲ್ಲ ಅರ್ಜಿಗಳ ವಿಲೇವಾರಿ ಮಾಡಬೇಕು. ಬಾಕಿ ಉಳಿದಲ್ಲಿ ಸಂಬಂಧಿಸಿದ ಬ್ಯಾಂಕುಗಳ ಮೇಲಧಿಕಾರಿಗಳಿಗೆ ಶಿಸ್ತುಕ್ರಮಕ್ಕಾಗಿ ಪತ್ರ ಬರೆಯಲಾಗುವುದು’ ಎಂದು ಎಚ್ಚರಿಸಿದರು.

ಭಾರತೀಯ ರಿಸರ್ವ್‌ ಬ್ಯಾಂಕಿನ ಅಗ್ರಣೀಯ ಜಿಲ್ಲಾ ಅಧಿಕಾರಿ ಜಯಶ್ರೀ ಮಾತನಾಡಿ, ‘ಆರ್ಥಿಕ ಸಾಕ್ಷರತೆಯನ್ನು ಉತ್ತೇಜಿಸುವ ಉದ್ದೇಶದಿಂದ 2024ರ ಆರ್ಥಿಕ ಸಪ್ತಾಹವನ್ನು ಜೂನ್ 26 ರಿಂದ ಮಾರ್ಚ್‌ 1ರವರೆಗೆ ಆಚರಿಸಲಾಗುತ್ತಿದೆ. ಈ ವರ್ಷ ಯುವ ವಯಸ್ಕರನ್ನು ಮುಖ್ಯವಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ. ಚಿಕ್ಕ ವಯಸ್ಸಿನಿಂದಲೇ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಸಾಲ ಯೋಜನೆಯ ಮಾರ್ಗದರ್ಶಿ ಪುಸ್ತಕ ಬಿಡುಗಡೆ ಮಾಡಲಾಯಿತು. ನಬಾರ್ಡನ ಡಿಡಿಎಂ ಮಂಜುನಾಥ ರೆಡ್ಡಿ, ಕೆನರಾ ಬ್ಯಾಂಕಿನ ರೀಜನಲ್ ಮ್ಯಾನೇಜರ್ ಶೈಲಜಾ ಕೆ.ಎಂ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ರಿಜಿನಲ್ ಮ್ಯಾನೇಜರ್ ರಾಜಶೇಖರ, ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಬ್ಯಾಂಕಿನ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕೃಷಿ: ಶೇ 100.56 ರಷ್ಟು ಸಾಧನೆ ಜಿಲ್ಲಾ ಅಗ್ರಣೀಯ ಬ್ಯಾಂಕಿನ ವ್ಯವಸ್ಥಾಪಕ ರಾಜಕುಮಾರ ಹೂಗಾರಮಾರ್ಚ್‌ 24ಕ್ಕೆ ಕೊನೆಗೊಂಡ ತ್ರೈಮಾಸಿಕ ಡಿಎಲ್ಆರ್‌ಸಿ ಸಭೆಯ ಕಾರ್ಯಸೂಚಿಯ ಬಗ್ಗೆ ಸಭೆಗೆ ತಿಳಿಸಿದರು. ಆದ್ಯತಾ ವಲಯದಲ್ಲಿ ಕೃಷಿಗೆ ಸಂಬಂಧಿಸಿ ಶೇ 100.56 ರಷ್ಟು ಸಾಧನೆ ಮಾಡಲಾಗಿದೆ. ಬೆಳೆ ಸಾಲದಲ್ಲಿ ಶೇ 98.27 ರಷ್ಟು ಇತರ ಕೃಷಿ ಸಾಲದಲ್ಲಿ ಶೇ 107.67 ರಷ್ಟು ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಶೇ 91.24 ರಷ್ಟು ಇತರ ಆದ್ಯತಾ ವಲಯಕ್ಕೆ ಶೇ 64.16 ರಷ್ಟು ಸಾಲ ವಿತರಣೆ ಮಾಡಲಾಗಿದೆ ಎಂದು  ಸಭೆಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT