ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ಲೋಕಸಭಾ ಕ್ಷೇತ್ರ: 44,707 ಹೊಸ ಮತದಾರರು

18 ರಿಂದ 19 ವರ್ಷದೊಳಗಿನ ಯುವಕರಿಂದ ನೋಂದಣಿ
Published 28 ಮಾರ್ಚ್ 2024, 6:04 IST
Last Updated 28 ಮಾರ್ಚ್ 2024, 6:04 IST
ಅಕ್ಷರ ಗಾತ್ರ

ಬಾಗಲಕೋಟೆ: ಲೋಕಸಭಾ ಕ್ಷೇತ್ರದಲ್ಲಿ 17,81,395 ಮತದಾರರಿದ್ದಾರೆ. ಅದರಲ್ಲಿ ಲೋಕಸಭಾ ಚುನಾವಣೆಯಲ್ಲಿ 44,707 ಮತದಾರರು ಮೊದಲ ಬಾರಿಗೆ ತಮ್ಮ ಮತದ ಹಕ್ಕು ಚಲಾಯಿಸಲಿದ್ದಾರೆ. ಇವರೆಲ್ಲರೂ 18 ರಿಂದ 19 ವರ್ಷದೊಳಗಿನವರಾಗಿದ್ದಾರೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತವು ವಿಶೇಷ ಅಭಿಯಾನ ನಡೆಸುವ ಮೂಲಕ ಮನೆ, ಮನೆಗೆ ತೆರಳಿ ಯುವ ಮತದಾರರ ಹೆಸರು ನೋಂದಾಯಿಸಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮತಗಟ್ಟೆ ಅಧಿಕಾರಿಗಳ ತಂಡವು ತಿಂಗಳುಗಟ್ಟಲೇ ಹೊಸ ಮತದಾರರ ನೋಂದಣಿ ಕೆಲಸ ಮಾಡಿದೆ.

18 ವರ್ಷ ಪೂರ್ಣಗೊಳಿಸಿರುವ ಯುವಕರು ಮತದಾರರ ಪಟ್ಟಿಯಿಂದ ಹೊರಗಿರಬಾರದು ಎಂಬ ಉದ್ದೇಶದಿಂದ ಕಟ್ಟುನಿಟ್ಟಾಗಿ ನೋಂದಣಿ ಮಾಡಲಾಗಿದೆ. ಕಾಲೇಜುಗಳಲ್ಲಿ ಅಭಿಯಾನ ನಡೆಸಿದ್ದಷ್ಟೇ ಅಲ್ಲದೆ, ಮನೆಗಳಿಗೂ ತೆರಳಿ ಹೆಸರು ನೋಂದಾಯಿಸಲಾಗಿದೆ.

ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಅಂದರೆ; 6,058 ಹೊಸ ಮತದಾರರು ನೋಂದಣಿಯಾಗಿದ್ದರೆ, ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ; 4,539 ಮಂದಿ ನೋಂದಣಿಯಾಗಿದ್ದಾರೆ.

ಇವರಲ್ಲದೇ 2019ರ ಚುನಾವಣೆಯ ನಂತರದ ಐದು ವರ್ಷಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವವರ ಸಂಖ್ಯೆ ಲಕ್ಷಕ್ಕೂ ಹೆಚ್ಚಿದೆ. ಅದರಲ್ಲಿ ಮೃತಪಟ್ಟವರ, ವರ್ಗಾವಣೆಗೊಂಡವರ ಹೆಸರುಗಳು ರದ್ದು ಆಗಿದ್ದರೆ, ಹೊಸದಾಗಿ ಐದು ವರ್ಷಗಳಿಂದ ಮತದಾರರು ಸೇರ್ಪಡೆಯಾಗುತ್ತಲೇ ಇದ್ದಾರೆ.

2019ರಲ್ಲಿ ಚುನಾವಣೆ ನಡೆದಾಗ ನರಗುಂದ ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 17 ಲಕ್ಷ ಮತದಾರರಿದ್ದರು. ಈಗ ಅವರ ಸಂಖ್ಯೆ 17.81 ಲಕ್ಷಕ್ಕೆ ಏರಿಕೆಯಾಗಿದೆ. 

ಹೊಸ ಮತದಾರರ ಮತದಾನದ ಸಂಖ್ಯೆ ಹೆಚ್ಚು: ಹೊಸದಾಗಿ ಸೇರ್ಪಡೆಗೊಂಡ ಯುವಕರು ಉತ್ಸಾಹದಿಂದ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸುತ್ತಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅವರ ಸಂಖ್ಯೆ 5 ಸಾವಿರದಿಂದ 6 ಸಾವಿರದಷ್ಟಿದೆ. ಶೇ 90ಕ್ಕೂ ಹೆಚ್ಚು ಮತದಾನದಲ್ಲಿ ಭಾಗವಹಿಸಲಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು. ಯುವಕರು ಈ ಬಾರಿಯ ಚುನಾವಣೆ ಫಲಿತಾಂಶದಲ್ಲಿ ನಿರ್ಣಾಯಕರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT