ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆಗೆ ಭದ್ರ ಬುನಾದಿ ಹಾಕಿದ ಬಿಜೆಪಿ: ಎರಡನೇ ಬಾರಿಗೆ ಗದ್ದಿಗೌಡರಗೆ ಗೆಲುವು

Published 20 ಏಪ್ರಿಲ್ 2024, 5:37 IST
Last Updated 20 ಏಪ್ರಿಲ್ 2024, 5:37 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ, ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದದ್ದು, ಪಕ್ಷದ ಸಂಘಟನೆಯ ವಿಸ್ತರಣೆ ಪರಿಣಾಮ 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಎರಡನೇ ಬಾರಿ ಗೆಲುವು ಸಾಧಿಸಿದರು.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಜೊತೆಗೆ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿಯೂ ಅಧಿಕಾರಕ್ಕೆ ಬಂದಿತ್ತು. ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿದ ಫಲವಾಗಿ ಬಿಜೆಪಿಯ ಕಮಲ ಮತ್ತೊಮ್ಮೆ ಬಾಗಲಕೋಟೆ ಕ್ಷೇತ್ರದಲ್ಲಿ ಅರಳಿತು.

2008ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆಯ ಪರಿಣಾಮವಾಗಿ ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿದ್ದ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರ ರದ್ದಾಗಿ, ಜಮಖಂಡಿ ತಾಲ್ಲೂಕಿನ ತೇರದಾಳ ಅನ್ನು ನೂತನ ವಿಧಾನಸಭಾ ಕ್ಷೇತ್ರವನ್ನಾಗಿ ಅಸ್ತಿತ್ವಕ್ಕೆ ತರಲಾಗಿತ್ತು. ಜೊತೆಗೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಿನ ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರವನ್ನು ಕೈಬಿಟ್ಟು, ಅದೇ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರವನ್ನು ಸೇರ್ಪಡೆ ಮಾಡಲಾಯಿತು.

ರೋಣ ವಿಧಾನಸಭಾ ಕ್ಷೇತ್ರವು ಬಾಗಲಕೋಟೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಿಂದ ಕೈಬಿಟ್ಟ ಪರಿಣಾಮ ರೋಣದ ಆರ್‌.ಎಸ್‌. ಪಾಟೀಲ ಅವರು ಸ್ಪರ್ಧೆಗೆ ಹೆಚ್ಚಿನ ಆಸಕ್ತಿ ತೋರಿಸಲಿಲ್ಲ. ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿ ಹುಡುಕತೊಡಗಿತು. ಅಷ್ಟೊತ್ತಿಗಾಗಲೇ ಬೀಳಗಿಯಿಂದ ಶಾಸಕರಾಗಿ, 2008ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಜೆ.ಟಿ. ಪಾಟೀಲ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಹಳಷ್ಟು ರೆಡ್ಡಿ ಸಮುದಾಯದವರು ಗೆಲುವು ಸಾಧಿಸಿದ್ದರು. ಮತ್ತೊಮ್ಮೆ ಅದೇ ಸಮುದಾಯದವರನ್ನು ಕಣಕ್ಕಿಳಿಸಲಾಗಿತ್ತು.

ಈಗಾಗಲೇ ಸಂಸದರಾಗಿದ್ದ ಪಿ.ಸಿ.ಗದ್ದಿಗೌಡರ ಸರಳ, ಸಜ್ಜನ ಎಂಬ ಹೆಸರು ಪಡೆದಿದ್ದರು. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ರಚನೆಯಾಗಿತ್ತು. ಪಕ್ಷದ ಸಂಘಟನೆಯೂ ಹಳ್ಳಿ, ಹಳ್ಳಿಗೂ ವಿಸ್ತರಿಸಿಕೊಂಡಿತ್ತು. ಅಭ್ಯರ್ಥಿ ಪರವಾಗಿ ಕೆಲಸ ಮಾಡಲು ಮುಖಂಡರ, ಕಾರ್ಯಕರ್ತರ ದೊಡ್ಡ ಪಡೆಯೇ ಸಜ್ಜಾಗಿತ್ತು. ಪರಿಣಾಮ ಗೆಲುವು ಸಾಧಿಸಿದರು.

ಜೆಡಿಎಸ್‌ನಿಂದ ಜಿ.ಎಂ. ಸಿಂಧೂರ ನಾಮಪತ್ರ ಸಲ್ಲಿಸಿದ್ದರು. ಪ್ರಚಾರವನ್ನೂ ಆರಂಭಿಸಿದ್ದರು. ಆದರೆ, ಏಕಾಏಕಿ ನಾಮಪತ್ರ ವಾಪಸ್‌ ಪಡೆದಿದ್ದರಿಂದ ಜೆಡಿಎಸ್‌ ಅಭ್ಯರ್ಥಿ ಕಣದಲ್ಲಿಲ್ಲದಂತಾಗಿತ್ತು. ದೇವೇಗೌಡರಿಗೂ ಸಿಂಧೂರ ನಡೆ ಅಚ್ಚರಿ ಮೂಡಿಸಿತ್ತು. ನಾಮಪತ್ರ ವಾಪಸ್ ಪಡೆದ ಬಗ್ಗೆ ಹಲವಾರು ಊಹಾಪೋಹಗಳು ಎದುರಾಗಿದ್ದವು.

ಜೆ.ಟಿ.ಪಾಟೀಲ
ಜೆ.ಟಿ.ಪಾಟೀಲ
35,446 ಮತಗಳಿಂದ ಗೆಲುವು
ಬಾಗಲಕೋಟೆ: 2009ರಲ್ಲಿ ನಡೆದ ಚುನಾವಣೆಯಲ್ಲಿ 17 ಅಭ್ಯರ್ಥಿಗಳು ಸ್ಪರ್ಧಸಿದ್ದರು. 8,59,928 ಮತಗಳು ಚಲಾವಣೆಯಾಗಿದ್ದವು. ಗದ್ದಿಗೌಡರ 4,13,272 ಮತಗಳನ್ನು ಪಡೆದರೆ, ಜೆ.ಟಿ. ಪಾಟೀಲ 3,77,826 ಮತಗಳನ್ನು ಪಡೆದರು. ಗದ್ದಿಗೌಡರ 35,446 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT