ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಖರೀದಿಗೆ ಕುತ್ತಾದ ನೀತಿಸಂಹಿತೆ

Published 4 ಏಪ್ರಿಲ್ 2024, 0:23 IST
Last Updated 4 ಏಪ್ರಿಲ್ 2024, 0:23 IST
ಅಕ್ಷರ ಗಾತ್ರ

ಬಾಗಲಕೋಟೆ: ಲೋಕಸಭಾ ಚುನಾವಣೆಯ ನಿಯಮ, ನಿಬಂಧನೆಗಳು ಅಭ್ಯರ್ಥಿಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಅಷ್ಟೇ ‘ಬಿಸಿ’ ಮುಟ್ಟಿಸಿಲ್ಲ. ಜಾನುವಾರು ಸಂತೆ ಮೇಲೆಯೂ ಪರಿಣಾಮ ಬೀರಿದೆ. ಎತ್ತು, ಕರು, ಕುರಿ ಸೇರಿ ಜಾನುವಾರು ಮಾರಾಟಗಾರರು ಸಂತೆಗೆ ತಂದರೂ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ.

ಚುನಾವಣೆ ನೀತಿ ಸಂಹಿತೆಯ ಕಾರಣ ‘ಸೂಕ್ತ ದಾಖಲೆಯಿಲ್ಲದೆ ಎಲ್ಲಿಯೂ ನಗದು ಒಯ್ಯುವಂತಿಲ್ಲ’ ಎಂಬ ನಿಯಮ ಜಾರಿಯಲ್ಲಿ ಇರುವ ಕಾರಣ ಜಾನುವಾರು ಖರೀದಿ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.

ಜಿಲ್ಲೆಯ ಕೆರೂರು ಹಾಗೂ ಅಮೀನಗಡದಲ್ಲಿ ನಡೆಯುವ ಕುರಿ ಸಂತೆಗೆ ಆಂಧ್ರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ರಾಜ್ಯದ ವ್ಯಾಪಾರಸ್ಥರು ಖರೀದಿಗೆ ಬರುತ್ತಾರೆ. ಇಲ್ಲಿ ಬಹುತೇಕ ವಹಿವಾಟು ನಗದು ರೂಪದಲ್ಲೇ ನಡೆಯುತ್ತದೆ. ಬಾಯಿ ಮಾತಿನಲ್ಲೇ ಕೊಡು–ಕೊಳ್ಳುವ ವ್ಯವಹಾರ ನಡೆಯುತ್ತದೆಯೇ ಹೊರತು ದಾಖಲೆಗಳು ಇರುವುದಿಲ್ಲ.

‘ಕೆರೂರಿನಲ್ಲಿ ಪ್ರತಿ ಮಂಗಳವಾರ ಮತ್ತು ಅಮೀನಗಡದಲ್ಲಿ ಪ್ರತಿ ಶನಿವಾರ ನಡೆಯುವ ಸಂತೆಯಲ್ಲಿ ಕುರಿ, ಆಡು, ಎತ್ತು, ಎಮ್ಮೆ, ಕೋಳಿ ಮಾರಾಟ ನಡೆಯುತ್ತದೆ. ರಂಜಾನ್‌ ಮಾಸದ ಸಂದರ್ಭದಲ್ಲಿ ಉತ್ತಮ ವಹಿವಾಟು ನಿರೀಕ್ಷಿಸಿದ್ದೆವು. ಎಂದಿನಂತೆ ಈ ಸಲವೂ ಒಂದು ಕೋಟಿಗೂ ಹೆಚ್ಚು ವಹಿವಾಟು ನಡೆಯುವುದೆಂದು ಭಾವಿಸಿದ್ದೆವು. ಆದರೆ, ಅದು ನೆರವೇರಲಿಲ್ಲ’ ಎಂದು ರೈತರು ತಿಳಿಸಿದರು.

ಕೆರೂರು ಹೊರವಲಯದಲ್ಲಿನ ಎರಡು ಚೆಕ್‌ಪೋಸ್ಟ್‌ಗಳಲ್ಲಿ ಮಂಗಳವಾರ ಬೆಳಿಗ್ಗೆ ನಗದು ಸಾಗಿಸುತ್ತಿದ್ದ 9 ಪ್ರಕರಣಗಳನ್ನು ದಾಖಲಿಸಿದ್ದು, ₹15.61 ಲಕ್ಷ ವಶಪಡಿಸಿಕೊಳ್ಳಲಾಗಿದೆ.

‘ಕುರಿ ಖರೀದಿಗೆ ನಾನೂ ಸೇರಿ ಮೂವರು ಕೆರೂರಿಗೆ ಹೊರಟಿದ್ದೆವು. ನನ್ನ ಬಳಿ ₹90 ಸಾವಿರ ಇತ್ತು. ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ಹಣ ವಶಪಡಿಸಿಕೊಂಡರು. ಪಾಸ್‌ಬುಕ್‌ನಿಂದ ₹40 ಸಾವಿರ ಡ್ರಾ ಮಾಡಿರುವ ದಾಖಲೆ ತೋರಿಸಿ, ₹50 ಸಾವಿರ ಮನೆಯಲ್ಲಿರುವ ಹಣ ತಂದಿರುವುದಾಗಿ ಹೇಳಿದೆ. ಆದರೆ, ಸೂಕ್ತ ದಾಖಲೆಯಿರದ ಕಾರಣ ಅಧಿಕಾರಿಗಳು ಹಣ ನೀಡಲಿಲ್ಲ. ಕುರಿ ಖರೀದಿಸದೆ ಮರಳಿದೆವು’ ಎಂದು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕಾಟಗನಹಳ್ಳಿ ಚಿಕ್ಕನಾಗಪ್ಪ ಹೇಳಿದರು.

‘ಉತ್ತರ ಕರ್ನಾಟಕದಲ್ಲಿ ಬೇಸಿಗೆ ಸಮಯದಲ್ಲಿ ಜಾತ್ರೆಗಳು ಹೆಚ್ಚು ನಡೆಯುತ್ತವೆ. ಅಲ್ಲಲ್ಲಿ ದನದ ಜಾತ್ರೆ, ಎತ್ತುಗಳ ಖರೀದಿ ನಡೆಯುತ್ತದೆ. ಚುನಾವಣೆ ನೀತಿ ಸಂಹಿತೆಯಿಂದ ನಗದು ಒಯ್ಯಲು ತೊಂದರೆಯಾಗಿದೆ. ಚುನಾವಣೆ ಮುಗಿದ ಬಳಿಕ ಜಾನುವಾರು ಖರೀದಿಸಬೇಕಾದ ಪರಿಸ್ಥಿತಿಯಿದೆ’ ಎಂದು ದಲ್ಲಾಳಿ ಸಂತೋಷ ಹೇಳಿದರು.

ಬಾಗಲಕೋಟೆ ಜಿಲ್ಲೆಯ ಕೆರೂರಿನ ಕುರಿಗಳ ಸಂತೆ
ಬಾಗಲಕೋಟೆ ಜಿಲ್ಲೆಯ ಕೆರೂರಿನ ಕುರಿಗಳ ಸಂತೆ

Quote - ಕುರಿ ಖರೀದಿಗೆ ತಂದಿರುವುದನ್ನು ಖಚಿತಪಡಿಸಿಕೊಂಡು ಶೀಘ್ರವೇ ಅವರಿಗೆ ಹಣ ವಾಪಸ್‌ ನೀಡಲಾಗುವುದು. ಸಂತೆ ವಹಿವಾಟಿಗೆ ತೊಂದರೆಯಾಗದಂತೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸುವೆ ಕೆ.ಎಂ. ಜಾನಕಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT