ಬಾಗಲಕೋಟೆ: 7ನೇ ತರಗತಿ ಪರೀಕ್ಷೆಯಲ್ಲೂ ಸಾಮೂಹಿಕ ನಕಲು!

ಶುಕ್ರವಾರ, ಏಪ್ರಿಲ್ 26, 2019
34 °C

ಬಾಗಲಕೋಟೆ: 7ನೇ ತರಗತಿ ಪರೀಕ್ಷೆಯಲ್ಲೂ ಸಾಮೂಹಿಕ ನಕಲು!

Published:
Updated:

ಬಾಗಲಕೋಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಾತ್ರವಲ್ಲ; ಏಳನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲೂ ಜಿಲ್ಲೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದೆ!

ಬಾದಾಮಿ ತಾಲ್ಲೂಕಿನ ಹಳಗೇರಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಮಾರ್ಚ್ 29ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ದಿಢೀರನೆ ಭೇಟಿ ನೀಡಿದಾಗ ಈ ಸಂಗತಿ ಬಯಲಾಗಿದೆ.

ಆಯುಕ್ತರ ಭೇಟಿ ವೇಳೆ ಏಳನೇ ತರಗತಿ ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ನಡೆದಿದ್ದು, ಮಕ್ಕಳ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದಾಗ ಎಲ್ಲರೂ ಸರಿಯಾದ ಉತ್ತರವನ್ನೇ ಬರೆದಿರುವುದು ಕಂಡುಬಂದಿದೆ.

ಉತ್ತರ ಪತ್ರಿಕೆ ಪಡೆದುಕೊಂಡ ನಂತರ ಅದೇ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದಾಗ ಯಾರೂ ಉತ್ತರಿಸಿಲ್ಲ. ಹಾಗಿದ್ದರೆ ಪರೀಕ್ಷೆಯಲ್ಲಿ ಉತ್ತರ ಹೇಗೆ ಬರೆದಿರಿ ಎಂದು ಮಕ್ಕಳನ್ನು ಪ್ರಶ್ನಿಸಿದ್ದಾರೆ. ಆಗ ಶಿಕ್ಷಕರೇ ಹೇಳಿಕೊಟ್ಟಿರುವುದನ್ನು ಮಕ್ಕಳು ಬಹಿರಂಗಪಡಿಸಿದ್ದಾರೆ.

‘ಇದರಿಂದ ಶಿಕ್ಷಕರು ಸಾಮೂಹಿಕ ನಕಲು ಮಾಡಿಸಿ ಉತ್ತರಗಳನ್ನು ಬರೆಸಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಈ ರೀತಿ ಪರೀಕ್ಷೆ ಬರೆಸುವುದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಲಿದೆ’ ಎಂದು ಹಿರೇಮಠ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸುವಲ್ಲಿನ ಶಿಕ್ಷಕರ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿತನವನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ಶಾಲೆಯ ಮುಖ್ಯ ಶಿಕ್ಷಕಿ ಸೇರಿದಂತೆ ಆರು ಮಂದಿ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ಸಂಸದರು ಯಾರೆಂದು ಗೊತ್ತಿಲ್ಲ!: ಮಕ್ಕಳ ಕಲಿಕಾ ಮಟ್ಟ ಪರಿಶೀಲಿಸಿದಾಗ ಏಳನೇ ತರಗತಿ ಮಕ್ಕಳಿಗೆ ಬಾಗಲಕೋಟೆ ಕ್ಷೇತ್ರದ ಸಂಸದರು ಯಾರು ಎಂಬುದೇ ಗೊತ್ತಿಲ್ಲ. ಗಣಿತ ವಿಷಯದಲ್ಲಿ 3/5+3/4=? ಈ ಭಿನ್ನರಾಶಿಯ ಲೆಕ್ಕ ತಪ್ಪಾಗಿ ಬಿಡಿಸಿದ್ದಾರೆ. ಕನ್ನಡದಲ್ಲಿ, ಕ್ರಿಯಾ ವಿಶೇಷಣ ಹಾಗೂ ಸರ್ವನಾಮಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೂ ಉತ್ತರಿಸಿಲ್ಲ. ಇಂಗ್ಲಿಷ್‌ ವ್ಯಾಕರಣದ ಜ್ಞಾನವೂ ಇಲ್ಲ ಎಂದಿದ್ದಾರೆ.

ಶಿಕ್ಷಕರ ಸಾಮರ್ಥ್ಯ ತಪಾಸಣೆ: ‘ರಾಜ್ಯಸಭೆ ಎಂದರೇನು? ಲೋಕಸಭೆಯಲ್ಲಿ ಗರಿಷ್ಠ ಎಷ್ಟು ಸೀಟುಗಳಿವೆ, ಮೌಂಟ್‌ ಎವರೆಸ್ಟ್ ಎಲ್ಲಿದೆ ಎಂಬ ಪ್ರಶ್ನೆಗಳನ್ನು ಶಾಲೆಯ ಸಮಾಜ ವಿಜ್ಞಾನ ಹಾಗೂ ಗಣಿತ ಶಿಕ್ಷಕರಿಗೆ ಕೇಳಲಾಗಿ ಅವರು ಬಹುತೇಕ ತಪ್ಪಾಗಿ ಉತ್ತರಿಸಿದ್ದಾರೆ’ ಎಂಬುದು ಆಯುಕ್ತರ ವರದಿಯಲ್ಲಿ ಉಲ್ಲೇಖವಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !