ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಪತ್ಯ ಬದುಕಿಗೆ ಮಾಜಿ ದೇವದಾಸಿಯರ ಮಕ್ಕಳು

ಎಮ್ಮವರು ಬೆಸಗೊಂಡ ಶುಭ ಲಗ್ನಕ್ಕೆ ಸಾಕ್ಷಿಯಾದ ಡಾ.ಕೆ.ರತ್ನಪ್ರಭಾ
Last Updated 12 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಶತಮಾನಗಳ ಅಪಮಾನ ಮೀರಿ, ಅನಿಷ್ಟ ಆಚರಣೆಯ ಸಂಕೋಲೆ ಕಡಿದುಕೊಂಡು ಗುರುವಾರ ಇಲ್ಲಿ ಎಮ್ಮವರು ಬೆಸಗೊಂಡರು. ಈ ಶುಭ ಲಗ್ನದಲ್ಲಿ ಮಾಜಿ ದೇವದಾಸಿಯ ಮಕ್ಕಳು ಸೇರಿ 10 ಜೋಡಿ ದಾಂಪತ್ಯ ಬದುಕಿಗೆ ಕಾಲಿಟ್ಟರು.

ರಾಶಿಕೂಟ ಗಣ ಸಂಬಂಧ, ಚಂದ್ರಬಲ ತಾರಾಬಲ ಉಂಟೆಂದು ಹೇಳಿ ಸ್ವತಃ ಬಾಗಲಕೋಟೆ ಜಿಲ್ಲಾಡಳಿತ ಮದುವೆಯ ಪೌರೋಹಿತ್ಯ ವಹಿಸಿತ್ತು ! ಈ ಸ್ಮರಣೀಯ ಕಾರ್ಯಕ್ಕೆ ಪೂರಕವಾಗಿ ನವನಗರದ ಕಲಾಭವನ ಮದುವೆ ಮಂಟಪವಾಗಿ ಬದಲಾಗಿತ್ತು. ರಾಜ್ಯ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆಯೂ ಆದ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ.ಕೆ.ರತ್ನಪ್ರಭಾ ವಧು–ವರರಿಗೆ ಅರಿಶಿನ ಶಾಸ್ತ್ರ ಮಾಡಿ ಧಾರೆ ಎರೆದುಕೊಟ್ಟರು. ಸಭಾಂಗಣದಲ್ಲಿ ನೆರೆದಿದ್ದ ನಾಲ್ಕು ಸಾವಿರಕ್ಕೂ ಹೆಚ್ಚು ಮಾಜಿ ದೇವದಾಸಿಯರು ಅಕ್ಷತೆ ಹಾಕಿ ನವಜೋಡಿಯ ಬದುಕು ಹಸನಾಗಲು ಹರಸಿದರು.

ಅಮ್ಮನ ಆಸೆ ಈಡೇರಿಸಿದೆ:

ಈ ಜೋಡಿಗಳ ಪೈಕಿ ಉಡುಪಿ ಜಿಲ್ಲೆ ಕಟಪಾಡಿಯ ಕಿಶೋರಕುಮಾರ ಎಸ್.ಅಮೀನ್ ಹಾಗೂ ಕಾಪು ತಾಲ್ಲೂಕು ಮಜೂರಿನ ಲಕ್ಷ್ಮೀಶ ಹರಿದಾಸ ಭಟ್ ಗಮನ ಸೆಳೆದರು. ಮುಂಬೈನಲ್ಲಿ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡುವ ಕಿಶೋರ, ಬೀಳಗಿ ತಾಲ್ಲೂಕಿನ ಬೂದಿಹಾಳದ ಸೀಮಾ ರೇಣುಕಾ ಅವರ ಕೈಹಿಡಿದರು.

’ನಮ್ಮ ತಾಯಿ ಸತ್ಯವ್ವ ಜಮಖಂಡಿ ತಾಲ್ಲೂಕಿನ ಹಿರೇಪಡಸಲಗಿಯವರು. 30 ವರ್ಷಗಳ ಹಿಂದೆ ಮುಂಬೈಗೆ ದುಡಿಯಲು ಬಂದಿದ್ದವರು ಅಲ್ಲಿ ಅಪ್ಪ ಸುಂದರ ಅಮೀನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ತಮ್ಮೂರ ಕಡೆಯ ಹುಡುಗಿಯನ್ನೇ ಮದುವೆ ಆಗಬೇಕು ಎಂಬದು ಆಕೆಯ ಆಸೆಯಾಗಿತ್ತು. ಅದನ್ನೀಗ ಈಡೇರಿಸಿರುವೆ‘ ಎಂದು ಹೇಳಿದರು. ’ಮುಂಬೈ ಹೆಸರು ಕೇಳಿದ್ದೆನು. ಊರು ನೋಡಿರಲಿಲ್ಲ. ಈಗ ಅಲ್ಲಿಯೇ ಹೊಸ ಬದುಕಿನ ಗೂಡು ಕಟ್ಟಿಕೊಳ್ಳಬೇಕಿದೆ‘ ಎನ್ನುತ್ತಾ ಸೀಮಾ ರೇಣುಕಾ ನಾಚಿದರು.

ಬಾಗಲಕೋಟೆಯ ಹೀರಾ ಶಶಿಕಲಾ ನಾಯಕ್ ಅವರನ್ನು ಲಕ್ಷ್ಮೀಶ ವರಿಸಿದರು. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿಲು ದಂಪತಿ ನಿರಾಕರಿಸಿದರು. ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೆಂದ್ರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ ಧಾರೆ ಶಾಸ್ತ್ರದ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT