ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಿಂಗಪುರ | ಆಧಾರ್ ನೋಂದಣಿಗೆ ನೂಕುನುಗ್ಗಲು

Published 31 ಆಗಸ್ಟ್ 2023, 3:30 IST
Last Updated 31 ಆಗಸ್ಟ್ 2023, 3:30 IST
ಅಕ್ಷರ ಗಾತ್ರ

ಮಹೇಶ ಮನ್ನಯ್ಯನವರಮಠ

ಮಹಾಲಿಂಗಪುರ: ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಅಂಚೆ ಕಚೇರಿಯಲ್ಲಿ ಪ್ರತಿನಿತ್ಯ ನೂಕುನುಗ್ಗಲು ಉಂಟಾಗುತ್ತಿದೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಇದೊಂದೇ ಕೇಂದ್ರವಾಗಿದೆ. ಬಿಎಸ್ಎನ್ಎಲ್‌ ಕಚೇರಿಯಲ್ಲಿರುವ ಆಧಾರ್ ಸೇವಾ ಕೇಂದ್ರದಲ್ಲಿ ಆಧಾರ್ ನೋಂದಣಿ ಮಾತ್ರ ಚಾಲನೆಯಲ್ಲಿದ್ದು, ತಿದ್ದುಪಡಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಹೀಗಾಗಿ, ಅಂಚೆ ಕಚೇರಿ ಮಾತ್ರ ಆಧಾರ್ ಸೇವಾ ಕೇಂದ್ರವಾಗಿರುವುದರಿಂದ ಸಹಜವಾಗಿ ದಟ್ಟಣೆ ಕಂಡುಬರುತ್ತಿದೆ.

ಮೊದಲೇ ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಅಂಚೆ ಕಚೇರಿಯಲ್ಲಿ ದೈನಂದಿನ ವ್ಯವಹಾರ ನಡೆಸುವುದೇ ದುಸ್ತರವಾಗಿದೆ. ಈಗ ಆಧಾರ್ ನೋಂದಣಿ ಹಾಗೂ ತಿದ್ದುಪಡಿಯನ್ನು ನಿರ್ವಹಣೆ ಮಾಡಬೇಕಿದೆ. ಅಂಚೆ ಸಹಾಯಕ ಸಿಬ್ಬಂದಿಯೊಬ್ಬರನ್ನು ಇದಕ್ಕೆ ನೇಮಿಸಲಾಗಿದೆ. ನಿತ್ಯ ನೂರಾರು ಜನರು ಅರ್ಜಿ ಹಾಕಲು ಬರುವುದರಿಂದ ನೂಕುನುಗ್ಗಲು ಉಂಟಾಗುತ್ತಿದೆ. ಆದರೆ, ಇಲ್ಲಿ ನಿತ್ಯ 25 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತಿದೆ. ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆಯಾದಂತಾಗಿದೆ. ಆಧಾರ್ ನೋಂದಣಿ ಇಲ್ಲವೆ ತಿದ್ದುಪಡಿಗೆ ಬರುವ ಜನರಿಗೆ ಆ ಕುರಿತು ಮಾಹಿತಿ ಹೇಳಲು ಸಹ ಸಿಬ್ಬಂದಿ ಇಲ್ಲದಂತಾಗಿದೆ.

ಆಧಾರ್ ನೋಂದಣಿ ಇಲ್ಲವೆ ತಿದ್ದುಪಡಿಗೆ ಪೂರ್ಣ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಸಿಬ್ಬಂದಿ ಕೊರತೆ ಇರುವ ಕುರಿತು ಮೇಲಧಿಕಾರಿಗೆ ತಿಳಿಸಿದ್ದೇನೆ.
ಎಸ್.ಎಚ್. ಶಿರೋಳ, ಪೋಸ್ಟ್ ಮಾಸ್ಟರ್ ಅಂಚೆ ಕಚೇರಿ, ಮಹಾಲಿಂಗಪುರ

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ 1 ಲಕ್ಷ ಜನಸಂಖ್ಯೆ ಇದೆ. ನಿತ್ಯವೂ ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಜನರು ಅಂಚೆ ಕಚೇರಿಗೆ ಅಲೆಯುತ್ತಿದ್ದಾರೆ. ದೈನಂದಿನ ಕೆಲಸಗಳನ್ನೆಲ್ಲ ಬಿಟ್ಟು, ಇದೇ ಕೆಲಸವನ್ನು ಮಾಡುವ ಸ್ಥಿತಿ ಬಂದೊದಗಿದೆ. ಅಂಚೆ ಕಚೇರಿಯವರು ಸೂಚಿಸಿದ ದಿನವೇ ನೋಂದಣಿ ಅಥವಾ ತಿದ್ದುಪಡಿಗೆ ಹಾಜರಾಗಬೇಕಿದೆ. ಮಕ್ಕಳ ವ್ಯಾಸಂಗ ಹಾಗೂ ವಿದ್ಯಾರ್ಥಿ ವೇತನಕ್ಕೂ ಆಧಾರ್ ಕಡ್ಡಾಯವಾಗಿದೆ. ಹೀಗಾಗಿ ಪಾಲಕರು ಮಕ್ಕಳ ಜತೆಯಲ್ಲೇ ಕೇಂದ್ರಕ್ಕೆ ಬರುವಂತಾಗಿದೆ.

ಆಧಾರ್ ಸೇವೆಯ ದಟ್ಟಣೆಯಿಂದಾಗಿ ಅಂಚೆ ಕಚೇರಿಗೆ ಬೇರೆ ಸೌಲಭ್ಯಕ್ಕೆ ಬರುವ ಜನರಿಗೆ ತೊಂದರೆಯಾಗುತ್ತಿದೆ. ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ಸ್ಥಗಿತಗೊಂಡಿರುವ ತಿದ್ದುಪಡಿ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ. ಹೆಚ್ಚುವರಿಯಾಗಿ ಆಧಾರ್ ಕಾರ್ಡ್ ಸೇವಾ ಕೇಂದ್ರ ತೆರೆದು ಜನರಿಗೆ ಆಗುತ್ತಿರುವ ಸಮಸ್ಯೆ ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಹಿಸಿದ್ದಾರೆ.

ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಹೊರತುಪಡಿಸಿ ಮೂಡಲಗಿ, ಸುಲ್ತಾನಪುರ, ಅವರಾದಿ, ಹಂದಿಗುಂದ, ಕಂಕಣವಾಡಿ ಸೇರಿದಂತೆ ಹಲವು ಗ್ರಾಮಗಳ ಜನರು ಆಧಾರ್ ನೋಂದಣಿಗಾಗಿ ಇಲ್ಲಿಗೆ ಬರುತ್ತಿದ್ದಾರೆ. ಅಲ್ಲದೇ, ರನ್ನಬೆಳಗಲಿಯ ಶಾಲೆಯಿಂದ 630 ವಿದ್ಯಾರ್ಥಿಗಳ ಆಧಾರ್ ತಿದ್ದುಪಡಿಗೆ ಪಟ್ಟಿ ನೀಡಲಾಗಿದೆ. ಹೀಗಾಗಿ, ಆಧಾರ್ ಸೇವೆ ಒದಗಿಸಲು ಅಂಚೆ ಕಚೇರಿ ಕೇಂದ್ರದ ಸಿಬ್ಬಂದಿ ಹೆಣಗಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT