ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ಹೆಬ್ಬಳ್ಳಿ–ಜಕನೂರ ರಸ್ತೆ: ವಿದ್ಯಾರ್ಥಿಗಳ ಪರದಾಟ

Published 18 ಡಿಸೆಂಬರ್ 2023, 5:44 IST
Last Updated 18 ಡಿಸೆಂಬರ್ 2023, 5:44 IST
ಅಕ್ಷರ ಗಾತ್ರ

ಕುಳಗೇರಿ ಕ್ರಾಸ್: ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಪಟ್ಟಣವನ್ನು ತಲುಪಲು ಹೆಬ್ಬಳ್ಳಿ ಹಾಗೂ ಸುತ್ತಮುತ್ತಲಿನ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಬಹಳ ಮಹತ್ವದ ವ್ಯಾಪಾರಿ ಕೇಂದ್ರವನ್ನು ಸಂಪರ್ಕಿಸುವ ಬಾದಾಮಿ ತಾಲೂಕಿನ ಹೆಬ್ಬಳ್ಳಿ-ಜಕನೂರ ಮಾರ್ಗವಾಗಿ ಹದಗೆಟ್ಟಿದೆ.

ಪ್ರತಿ ಹತ್ತು ಅಡಿಗೆ ಒಂದು ತಗ್ಗು ನಿರ್ಮಾಣವಾಗಿದ್ದು, ಅನೇಕ ತಿಂಗಳುಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.  ‘ಪಟ್ಟಣದಿಂದ ಸುತ್ತುಮುತ್ತಲಿನ 25 ಕಿಮೀ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ರೈತರು ಬೆಳೆದ ಬೆಳೆಗಳ ಫಸಲನ್ನು ಈ ಮಾರುಕಟ್ಟೆಗೆ ಸಾಗಿಸಿ ವ್ಯಾಪಾರ ವಹಿವಾಟು ಮಾಡುವ ಒಂದು ಬೃಹತ್ ವ್ಯಾಪಾರಿ ಕೇಂದ್ರವಾಗಿದ್ದು, ರೈತರು ಬೆಳೆದ ಫಸಲನ್ನು ಟ್ರ್ಯಾಕ್ಟರ್ ಮೂಲಕ ಸಾಗಿಸುವ ವೇಳೆ ಈ ಬೃಹತ್ ತಗ್ಗು-ಗುಂಡಿಗಳಿಂದ ಟ್ರ್ಯಾಕ್ಟರ ಉರುಳಿ ಅವಘಡಗಳು ಸಂಭವಿಸಿ ರೈತರ ಫಸಲು ನೆಲಕಚ್ಚಿ ಹೋಗಿದ್ದು ಹಾಗೂ ಪ್ರಾಣವನ್ನು ಕಳೆದುಕೊಂಡಿದ್ದು ಇದೆ’ ಎಂದು ಗೋವನಕೊಪ್ಪ ಗ್ರಾಮದ ಪ್ರವೀಣ ಮೇಟಿ, ಲಕ್ಷ್ಮಣ ಹರಿಜನ ತಿಳಿಸಿದರು.

ಹೆಬ್ಬಳ್ಳಿ-ಜಕನೂರ ಮಾರ್ಗದಲ್ಲಿ ಆರು ಕಡೆಗಳಲ್ಲಿ ಮರಳು ಗಣಿಗಾರಿಕೆಗೆ ಪರವಾನಿಗೆ ನೀಡಲಾಗಿದೆ. ಈ ಭಾಗದ ರೈತರು ಹಾಗೂ ಪ್ರಯಾಣಿಕರು ಪ್ರಯಾಣಿಸುವುದು ಸವಾಲಾಗಿ ಪರಿಣಮಿಸಿದೆ. ಈ ರಸ್ತೆಯಲ್ಲಿ ಅಪಾರ ಪ್ರಮಾಣದ ಮರಳಿನ ಭಾರ ಹೊತ್ತ ಲಾರಿಗಳ ಓಡಾಟದಿಂದಾಗಿಯೇ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಕೆಲವು ರೈತರಿಗೆ ಈ ರಸ್ತೆಯಲ್ಲಿ ಪ್ರಯಾಣಿಸದೆ ಬೇರೆ ಮಾರ್ಗವಿಲ್ಲದ ಸ್ಥಿತಿ ಇದೆ.

ಜಕನೂರ-ಮುಮ್ಮರಡ್ಡಿಕೊಪ್ಪ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ ವ್ಯವಸ್ಥೆಯಿಲ್ಲದೆ ಇರುವುದು, ವಿದ್ಯಾರ್ಥಿಗಳ ಪಾಲಕರು ಪ್ರತಿದಿನ ತಮ್ಮ ಮಕ್ಕಳನ್ನು ಬೈಕ್‌ ಮೂಲಕ ಕಾಲೇಜಿಗೆ ತಂದು ಬಿಡುವ ಪರಿಸ್ಥಿತಿಯೂ ಈ ಭಾಗದ ಜನರದ್ದಾಗಿದೆ.

ಹೆಬ್ಬಳಿ ಗ್ರಾಮದಿಂದ ಜಕನೂರ ಗ್ರಾಮಕ್ಕೆ ಆಟೊ ಮೂಲಕವೇ ಗ್ರಾಮಗಳನ್ನು ತಲುಪುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಕನೂರ ಗ್ರಾಮದ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರೌಢಶಾಲೆ-ಕಾಲೇಜುಗಳಿಗೆ ತೆರಳಲು ಆಟೊಗೆ ಹಣ ಕೊಟ್ಟು ಪ್ರಯಾಣಿಸುತ್ತಿದ್ದಾರೆ.

ಈ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಿದಂತೆ ಆಟೊ ಚಾಲಕರು ಬಸ್ ಚಾಲಕರೊಂದಿಗೆ ಗಲಾಟೆ ನಡೆಸಿದ ಪ್ರಸಂಗಗಳು ಈ ಹಿಂದೆ ನಡೆದಿದೆ.

ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶಗಳ ಬಹುತೇಕ ಗ್ರಾಮಗಳ ರಸ್ತೆಗಳು ಹೆಚ್ಚಾಗಿ ಮರಳು ಗಣಿಗಾರಿಕೆಯಿಂದಲೇ ಹಾಳಾಗಿವೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಶಿವಾನಂದ ದುರೆ, ಬಸವರಾಜ ಜುನ್ನಾಳ, ಶಿವಾನಂದ ಕೊಪ್ಪದ, ಹನುಮಂತ ದೊಡ್ಡಮನಿ ಒತ್ತಾಯಿಸಿದರು.

ಸರ್ಕಾರದಿಂದ ಡಿಎಂಎಫ್‌ ಫಂಡ್ ಬಿಡುಗಡೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು ಫಂಡ್ ಬಂದ ತಕ್ಷಣವೇ ಅಥವಾ ಸರ್ಕಾರದಿಂದ ಯಾವುದಾದರೂ ಅನುದಾನ ಬಂದ ಕೂಡಲೇ ಆದ್ಯತೆಯಿಂದ ರಸ್ತೆ ಕೆಲಸ ಮಾಡಲಾಗುವುದು
ಎ.ಎಸ್.ತೋಪಲಕಟ್ಟಿ ಜಿಪಂ ಎಇಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT